ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಕಾಯ್ದೆಗಾಗಿ ಸಮಿತಿ ರಚನೆ ಸೇರಿದಂತೆ ಒಕ್ಕೂಟ ಸರ್ಕಾರ ರೈತರಿಗೆ ನೀಡಿರುವ ಭರವಸೆಗಳ ಪ್ರಗತಿ ಪರಿಶೀಲನೆ ನಡೆಸಲು ಸೋಮವಾರ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ದೆಹಲಿಯಲ್ಲಿ ಸಭೆ ನಡೆಸಲಿದೆ.
ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಸಭೆ ನಡೆಯಲಿದ್ದು, ರೈತರಿಗೆ ನೀಡಲಾಗಿರುವ ಭರವಸೆಗಳ ಕುರಿತು ಈವರೆಗೆ ಒಕ್ಕೂಟ ಸರ್ಕಾರ ಮಾಡಿರುವ ಪ್ರಗತಿ ಪರಿಶೀಲನೆ, ಜೊತೆಗೆ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುತ್ತದೆ. ಸಭೆಯಲ್ಲಿ ಎಸ್‌ಕೆಎಂನ ಘಟಕಗಳಾಗಿರುವ ಎಲ್ಲಾ ರೈತ ಸಂಘಗಳ ಮುಖಂಡರು ಭಾಗವಹಿಸಲಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಒಕ್ಕೂಟ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷ ಐತಿಹಾಸಿಕ ರೈತ ಆಂದೋಲನವನ್ನು ಮುನ್ನಡೆಸಿತ್ತು. ಹೋರಾಟಕಕ್ಕೆ ಮಣಿದು ಕಳೆದ ವರ್ಷ ಡಿಸೆಂಬರ್ 9 ರಂದು ಸರ್ಕಾರ ವಿವಾದಾತ್ಮಕ ಕಾನೂನುಗಳನ್ನು ಹಿಂತೆಗೆದುಕೊಂಡಿತ್ತು. ಈ ವೇಳೆ ಹೋರಾಟದ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲೆ ಕಾನೂನು ಖಾತರಿ ಮತ್ತು ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಇತರ ಆರು ಬೇಡಿಕೆಗಳನ್ನು ಪರಿಗಣಿಸಲು ಸರ್ಕಾರ ಒಪ್ಪಿಕೊಂಡಿತ್ತು.
ಇದನ್ನೂ ಓದಿ: ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2
2021 ರ ಡಿಸೆಂಬರ್ 9 ರಂದು ಸರ್ಕಾರವು ಎಸ್‌ಕೆಎಂಗೆ ನೀಡಿದ ಭರವಸೆ ಪತ್ರದ ಪ್ರಗತಿಯನ್ನು ಪರಿಶೀಲಿಸುವುದು ಸಭೆಯ ಕಾರ್ಯಸೂಚಿಯಾಗಿದೆ. ಎಂಎಸ್‌ಪಿ ಸಮಸ್ಯೆ ಮತ್ತು ಲಖಿಂಪುರ್ ಖೇರಿ ಪ್ರಕರಣದಲ್ಲಿ ಕುರಿತು ಚರ್ಚಿಸಲಾಗುತ್ತದೆ ಎಂದು ಎಸ್‌ಕೆಎಂ ಮುಖಂಡರೊಬ್ಬರು ಹೇಳಿದ್ದಾರೆ.
“ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆದ ಹೋರಾಟದ ವೇಳೆ ಹುತಾತ್ಮರಾದ ರೈತರ ಸ್ಮಾರಕ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಕನಿಷ್ಠ ಬೆಂಬಲ ಬೆಲೆ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಕಾನೂನು ತರಲು ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರಲು ಮಾರ್ಗಸೂಚಿಯನ್ನು ನಿರ್ಧರಿಸಲಾಗುವುದು” ಎಂದು ತಿಳಿಸಿದ್ದಾರೆ.
ಇವುಗಳ ಜೊತೆಗೆ ಎಸ್‌ಕೆಎಂನ ಆಂತರಿಕ ಸಮಸ್ಯೆಗಳಾದ ನಿಯಮಗಳು ಮತ್ತು ನಿಬಂಧನೆಗಳು, ನಿಧಿಯ ಪ್ರಸ್ತುತ ಸ್ಥಿತಿ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ರೈತ ಸಂಘಗಳ ನಿರ್ಧಾರವನ್ನು ಸಹ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇನ್ನು, ಸರ್ಕಾರ ನೀಡಿದ ಭರವಸೆಗಳನ್ನು ಆದಷ್ಟು ಬೇಗ ಈಡೇರಿಸದಿದ್ದರೆ “ಆಂದೋಲನವನ್ನು ಪುನರಾರಂಭಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ” ಎಂದು ಎಸ್‌ಕೆಎಂ ಎಚ್ಚರಿಕೆ ನೀಡಿದೆ.


