Homeಮುಖಪುಟಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

ಹಳತು-ವಿವೇಕ; ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-2

- Advertisement -
- Advertisement -

ಮುಂದುವರಿದ ದೇಶಗಳ ಉತ್ಪಾದನೆ ಪ್ರಮಾಣ ಮತ್ತು ಸಬ್ಸಿಡಿ ಪ್ರಮಾಣ

1997ರ ವರದಿಯ ಪ್ರಕಾರ 2004ರೊಳಗಾಗಿ ಯುರೋಪು ಒಕ್ಕೂಟದ ರಾಷ್ಟ್ರಗಳ ಗೋಧಿ ಉತ್ಪಾದನೆ 27 ಮೆಟ್ರಿಕ್ ಟನ್‌ನಿಂದ 450 ಲಕ್ಷ ಮೆಟ್ರಿಕ್ ಟನ್‌ಗಳಿಗೇರಲಿದೆ. ಮತ್ತು ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ 580 ಲಕ್ಷ ಮೆಟ್ರಿಕ್ ಟನ್‌ಗಳಿಗೇರಲಿದೆ. ಹಾಗೆಯೇ, ಅಮೆರಿಕದ ಪ್ರತಿ ಮೂರು ಎಕರೆಗಳಲ್ಲಿ ಒಂದು ಎಕರೆಯಲ್ಲಾಗುವ ಬೆಳೆ ರಫ್ತಿಗಾಗಿಯೇ ಮೀಸಲಾಗಿದೆ. ಹೀಗಾಗಿ, ಹೆಚ್ಚುತ್ತಿರುವ ಈ ಬೆಳೆಗಳಿಗೆ ಅವರು ಹೊಸ ಮಾರುಕಟ್ಟೆಗಳನ್ನು ಹುಡುಕಲೇಬೇಕಾಗಿದೆ.

ಈ ಹೆಚ್ಚುತ್ತಿರುವ ಬೆಳೆಗಳನ್ನು ಕಡಿಮೆ ಬೆಲೆಗಳಲ್ಲಿ ಮಾರಿ ನಮ್ಮಂತಹ ದೇಶಗಳ ಕೃಷಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಈ ಮುಂದುವರಿದ ದೇಶಗಳು ಬಹಳ ದೊಡ್ಡ ಪ್ರಮಾಣದ ಹಣವನ್ನು ಕೃಷಿ ಸಹಾಯಧನವಾಗಿ ಖರ್ಚು ಮಾಡುತ್ತಿವೆ. “ಒಇಸಿಡಿ” (OECD) ಎಂದು ಕರೆಯಲ್ಪಡುವ ರಾಷ್ಟ್ರಗಳಾದ ಈ ದೇಶಗಳ ಒಟ್ಟು ಕೃಷಿ ಸಹಾಯಧನದ ಮೊತ್ತ 1995ರಲ್ಲಿ 1,82,000 ಕೋಟಿ ಡಾಲರ್ (ಅಥವಾ 80,00,000 ಕೋಟಿ ರೂಪಾಯಿ) ಗಳಿದ್ದದ್ದು, 1997ಕ್ಕೆ 2,80,000 ಕೋಟಿ ಡಾಲರ್ (ಅಥವಾ 2,23,20,000 ಕೋಟಿ ರೂಪಾಯಿ) ಗಳಿಗೇರಿತ್ತು. ಇದರಲ್ಲಿ ಯುರೋಪ್ ಒಕ್ಕೂಟ ಮತ್ತು ಆಮೆರಿಕ ದೇಶಗಳದೇ ದೊಡ್ಡ ಪಾಲು.

ಈ ಕಾರಣವೇ, ಈಗಾಗಲೇ ಈ ದೇಶಗಳ ಕೃಷಿ ಹೆಚ್ಚುವರಿಯೆಲ್ಲ ನಮ್ಮಂತಹ ದೇಶಗಳ ಮಾರುಕಟ್ಟೆಯೊಳಕ್ಕೆ ನುಗ್ಗಿ ನಾವು ಬೆಳೆದ ಬೆಳೆಗಳಿಗೆ ನ್ಯಾಯಬೆಲೆ ದೊರಕದ ಸ್ಥಿತಿ ನಿರ್ಮಾಣವಾಗುತ್ತಿರುವುದು.

ಜೊತೆಗೆ, ಆಗಿನ ಬಿಜೆಪಿ ಸರ್ಕಾರ, ಬೇರೆ ದೇಶಗಳ ಆಮದುಗಳಿಗೆ ಹಿಂದೆ ಇದ್ದ ಪ್ರಮಾಣದ ನಿಯಂತ್ರಣವನ್ನು ರದ್ದುಮಾಡಿದೆ. ಇದರಿಂದಾಗಿ ಹೊರದೇಶದಿಂದ ಕೃಷಿ ವಸ್ತುಗಳು ಯಾವುದೇ ಪ್ರಮಾಣದಲ್ಲಿ ಬೇಕಾದರೂ ನಮ್ಮ ಕೃಷಿ ಮಾರುಕಟ್ಟೆ ಪ್ರವೇಶ ಮಾಡಬಹುದು.

ನಮ್ಮ ದೇಶದ ರೈತರಿಗೆ ಹೊರದೇಶದ ಮಾರುಕಟ್ಟೆಗೆ ರಫ್ತು ಮಾಡಲು ಅವಕಾಶವಿದೆಯೇ?

ಮೇಲ್ಕಂಡ ಸಬ್ಸಿಡಿ ಮತ್ತು ಮಾರುಕಟ್ಟೆ ಕುತಂತ್ರದ ಜೊತೆಗೇ, ಈ ಮುಂದುವರಿದ ರಾಷ್ಟ್ರಗಳು ತಮ್ಮ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಕುತಂತ್ರದ ನಿಯಮಗಳನ್ನು ಈ ವಿಶ್ವವ್ಯಾಪಾರಿ ಸಂಸ್ಥೆಯ ಒಪ್ಪಂದದೊಳಗೆ ಸೇರಿಸಿವೆ. ಇದನ್ನು “ಆರೋಗ್ಯ ನಿಯಮಗಳು” ಎಂದು ಕರೆಯಲಾಗಿದೆ. ತಮಗಿಚ್ಛೆ ಬಂದಂತೆ, ತಮ್ಮ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು, ಯಾವುದೇ ದೇಶದ ಬೆಳೆಯನ್ನು ಮಾನವ ಅಥವಾ ಪ್ರಾಣಿಗಳ ಆರೋಗ್ಯಕ್ಕೆ ಯೋಗ್ಯವಲ್ಲವೆಂದು ತಿರಸ್ಕರಿಸಬಹುದಾದ ನಿಯಮ ಇದಾಗಿದೆ.

ಉದಾಹರಣೆಗೆ, ಈ ನಿಯಮಗಳು ಪೈಪೋಟಿಯಲ್ಲಿರುವ ಅಮೆರಿಕಾ ಮತ್ತು ಯುರೋಪ ದೇಶಗಳ ನಡುವೆಯೇ ಚಾಲ್ತಿಗೆ ಬಂದವು. ಹಾರ್ಮೋನುಗಳ ಮೂಲಕ ತಯಾರಾದ ಅಮೆರಿಕದ ದನದ ಮಾಂಸವನ್ನು ಮತ್ತು ಅಲ್ಲಿನ ವಂಶವಾಹಿ ವಿಕೃತ ಸೋಯಾ ಅವರೆಯನ್ನು ಯೂರೋಪು ಒಕ್ಕೂಟ ದೇಶಗಳು ಸಾರ್ವಜನಿಕ ಆರೋಗ್ಯ ಸುರಕ್ಷತೆಯ ಕಾರಣಕೊಟ್ಟು ನಿಷೇಧಿಸಿದ ಕಾರಣ, ಅಮೆರಿಕ ತನ್ನ ಸಬ್ಸಿಡಿಗಳನ್ನು ಹೆಚ್ಚಿಸುವ ಮೂಲಕ ಯೂರೋಪಿನ ಮಾರುಕಟ್ಟೆಯನ್ನೇ ನಾಶಮಾಡುವ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದೆ. ಹೀಗಿರುವಾಗ, ನಮ್ಮ ದೇಶಗಳ ರಫ್ತಿನ ಗತಿಯೇನಾಗಬಹುದು ಎನ್ನುವುದು ಸ್ಪಷ್ಟ.

ನಮ್ಮ ದೇಶದ ರೈತರಿಗೆ ಒಕ್ಕಲುತನದಲ್ಲಾದರೂ ಸ್ವಾತಂತ್ರ್ಯ ಉಳಿಯುತ್ತದೆಯೇ?

1965ರಿಂದೀಚೆಗೆ, “ಅಧಿಕ ಇಳುವರಿ ಮಿಶ್ರತಳಿ”ಗಳ ಮೂಲಕ ಉತ್ಪಾದನೆ ಹೆಚ್ಚಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಹುಚ್ಚಿನಿಂದಾಗಿ ಈಗಾಗಲೇ ನಾವು ಹಿಂದಿನಿಂದ ಕಾಪಾಡಿಕೊಂಡಿದ್ದ “ಬೀಜ ಸ್ವಾತಂತ್ರ್ಯ” ಮತ್ತು ಆ ಮೂಲಕ “ಒಕ್ಕಲುತನದ ಸ್ವಾತಂತ್ರ್ಯ”ವನ್ನು ಕಳೆದುಕೊಂಡಿದ್ದೇವೆ. ರೋಗಗಳೊಂದಿಗೆ ತಯಾರಿಸಿದ ಕಂಪೆನಿ ಬೀಜಗಳು ಮತ್ತು ಈ ರೋಗಗಳ ನಿವಾರಣೆಗೆ ಬೇಕಾದ ಕೀಟನಾಶಕ ರಸಾಯನಿಕಗಳಿಗೆ ಈಗಾಗಲೇ ಸಾಕಷ್ಟು ಗುಲಾಮರಾಗಿದ್ದೇವೆ. ಈ ನಡುವೆ, ನಮ್ಮ ದೇಶೀಯ ತಳಿಗಳನ್ನು ಬಿತ್ತದೆಯೇ ನೂರಾರು ತಳಿಗಳನ್ನು ಕಳೆದುಕೊಂಡಿದ್ದೇವೆ.

ಹೀಗಿದ್ದರೂ, ಈ ಮಿಶ್ರತಳಿಗಳನ್ನು ರೈತರು ಮತ್ತೆ ಬಿತ್ತುವ ಅವಕಾಶ ಇದ್ದದ್ದರ ಜೊತೆಗೆ ದೇಶೀಯ ತಳಿಗಳನ್ನು ಬಿತ್ತುವ ಸ್ವಾತಂತ್ರ್ಯವಾದರೂ ಇತ್ತು. ಈ ಅವಕಾಶಗಳಿಗೂ ಕೊಡಲಿ ಪೆಟ್ಟು ಹಾಕಿ ರೈತರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುವ ನಿಯಮಗಳೂ ಈ ವಿಶ್ವವಾಣಿಜ್ಯ ಸಂಸ್ಥೆ ನಿಯಮಗಳಲ್ಲಿ ಸೇರ್ಪಡೆಯಾಗಿವೆ. ಇವುಗಳನ್ನು “ಬೌದ್ಧಿಕ ಹಕ್ಕುಗಳ ನಿಯಮಗಳು” ಎಂದು ಕರೆಯಲಾಗಿದೆ.

ಇವುಗಳ ಪ್ರಕಾರ, ಇನ್ನು ಮುಂದೆ ಬೀಜದ ಕಂಪೆನಿಗಳು ತಾವು ತಯಾರಿಸಿದ ಬಿತ್ತನೆ ಬೀಜಗಳಿಗೆ ಬೌದ್ಧಿಕ ಹಕ್ಕು (ಪೇಟೆಂಟ್) ಪಡೆಯುತ್ತವೆ. ಇದರಿಂದಾಗಿ, ರೈತರು ಮತ್ತೆ ಈ ಬೀಜಗಳನ್ನು ಮುಂದಿನ ಬೆಳೆಗೆ ಬಳಸುವಂತಿಲ್ಲ. ಬಳಸಿದರೆ, ದಂಡ ತೆರಬೇಕಾಗುತ್ತದೆ. ಕಂಪೆನಿ ಬೀಜದ ಸೋಂಕು ರೈತರ ತಳಿಯ ಬೆಳೆಗಳಲ್ಲಿ ಕಂಡಾಗಲೂ ಕಂಪನಿಗಳು ದಂಡಹಾಕಿದ ನಿದರ್ಶನಗಳು ಈಗಾಗಲೇ ಬೇರೆ ದೇಶಗಳಲ್ಲಿ ನಡೆದಿವೆ. ಪ್ರತಿ ಬೆಳೆಗೂ ಕಂಪೆನಿ ಬೀಜಗಳಿಗೆ ಮೊರೆಹೋಗುವ ದುಃಸ್ಥಿತಿ ಬರುತ್ತದೆ.

ಜೊತೆಗೆ, ರೈತರ ತಳಿಗಳಿಂದ ಕಂಪೆನಿ ಬೀಜದ ಬೆಳೆಗಳಿಗೆ ಸೋಂಕು ತಗಲಬಾರದೆಂಬ ಕಾನೂನುಗಳು ಆಗಲಿವೆ. ರೈತರ ತಳಿಗಳನ್ನು ಈಗಾಗಲೇ ಜರ್ಮನಿಯಲ್ಲಿ ನಿಷೇಧಿಸಲಾಗಿದೆ. ರೈತರೇ ತಯಾರು ಮಾಡಿಕೊಂಡ ಬೀಜಗಳಿಗೆ ಫ್ರಾನ್ಸ್ ದೇಶದಲ್ಲಿ ತೆರಿಗೆ ಹಾಕಲಾಗಿದೆ.

ಇದಲ್ಲದೆ, ನಮ್ಮ ದೇಶೀಯ ತಳಿಗಳನ್ನೇ ಅಲ್ಪಸ್ವಲ್ಪ ಬದಲಾಯಿಸಿ ಪರಂಗಿ ಕಂಪೆನಿಗಳು ’ಪೇಟೆಂಟ್ ತೆಗೆದುಕೊಳ್ಳುತ್ತಿವೆ. ಈಗಾಗಲೇ, ಬಾಸುಮತಿ ಅಕ್ಕಿ, ಬೇವು, ಅರಿಸಿನ, ಬದನೆಕಾಯಿ, ಹಾಗಲಕಾಯಿ, ನೇರಳೆಹಣ್ಣು ಇತ್ಯಾದಿಗಳ ಮೇಲೆ ’ಪೇಟೆಂಟ್ ಪ್ರಯತ್ನ’ ನಡೆದಿದೆ. ಹೀಗೆಯೇ ಮುಂದುವರಿಯಲು ಬಿಟ್ಟರೆ ನಮ್ಮ ದೇಶೀಯ ತಳಿಗಳ ಮೇಲೆ ನಮಗೇ ಹಕ್ಕಿಲ್ಲದ ಪರಿಸ್ಥಿತಿ ಬರುತ್ತದೆ.

“ಜೈವಿಕ ತಂತ್ರಜ್ಞಾನ” (BIO-TECHNOLOGY) ಎಂಬ ದೊಡ್ಡ ಗಂಡಾಂತರ

ಮೇಲ್ಕಂಡ ಎಲ್ಲ ಕುತಂತ್ರಗಳಿಗಿಂತ ಘೋರ ಪರಿಣಾಮವುಳ್ಳ ಮತ್ತೊಂದು ಹೊಸ ತಂತ್ರಜ್ಞಾನವನ್ನು ನಮ್ಮಂತಹ ದೇಶದೊಳಕ್ಕೆ ತರುವ ದೊಡ್ಡ ಪ್ರಯತ್ನ ನಡೆದಿದೆ. ಇದನ್ನು “ಜೈವಿಕ ತಂತ್ರಜ್ಞಾನ” ಎನ್ನುತ್ತಾರೆ. ಎಂದರೆ, ಬೇರೆಬೇರೆ ಜಾತಿಯ ತಳಿಗಳ ವಂಶವಾಹಿಯನ್ನು ಬೆರೆಸಿ ಅಧಿಕ ಆಹಾರ ಉತ್ಪಾದನೆ ಮಾಡಬಹುದೆಂದು ಹೇಳಿಕೊಳ್ಳುವ ತಂತ್ರಜ್ಞಾನ. ಕೆಲವು ಬಾರಿ ಬೇರೆಬೇರೆ ಕುಲಗಳಿಗೆ ಸೇರಿದ ಸಸ್ಯಗಳ ವಂಶವಾಹಿಯ ಬೆರಕೆ ಮತ್ತು ಕೆಲವು ಬಾರಿ ಸಸ್ಯಗಳಿಗೆ ಪ್ರಾಣಿಗಳ ವಂಶವಾಹಿ ಬೆರೆಸುವ ತಂತ್ರಜ್ಞಾನ ಇದು. ಇವುಗಳನ್ನು “ಕುಲಾಂತರಿ” ಬೀಜಗಳೆಂದು ಕರೆಯುತ್ತಾರೆ.

ತಕ್ಷಣಕ್ಕೆ, ಬೀಜದ ಕಂಪೆನಿಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಎರಡು ಗುಣಗಳಿರುವ ಕುಲಾಂತರಿ ಬೀಜಗಳನ್ನು. ಅವುಗಳು 1) ಕೀಟ ನಿರೋಧಕ ತಳಿಗಳು ಮತ್ತು 2) ಕಳೆ ನಿರೋಧಕ ತಳಿಗಳು.

ಪ್ರೊ. ಎಂ ಡಿ ನಂಜುಂಡಸ್ವಾಮಿ

(ಇದು ಪ್ರೊ. ಎಂಡಿಎನ್ ಅವರ ಒಂದು ಹಳೆಯ ಲೇಖನದ ಎರಡನೇ ಭಾಗ. ಭಾರತದ ಕೃಷಿ ಸಮಸ್ಯೆಗಳಿಗೆ ಅಂತಾರಾಷ್ಟ್ರೀಯ ಒಪ್ಪಂದಗಳು ಹೇಗೆ ಕಾರಣವಾದವು ಮತ್ತು ಆ ಸಮಸ್ಯೆ ಇಂದಿಗೂ ಹೇಗೆ ಮುಂದುವರೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕರಿಸುವ ಈ ಲೇಖನದ ಉಳಿದ ಭಾಗಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು. ಮುಂದಿನ ವಾರ: ಜೈವಿಕ ತಂತ್ರಜ್ಞಾನದ ತಳಿಗಳಿಂದ ಆಗುವ ಹಾನಿ)


ಇದನ್ನೂ ಓದಿ: ರೈತ ಚಳವಳಿ ಎದುರಿಸಬೇಕಾಗಿರುವ ಸಮಸ್ಯೆಗಳು; ವಿಶ್ವ ವ್ಯಾಪಾರಿ ಸಂಸ್ಥೆ ಮತ್ತು ಹುನ್ನಾರಗಳು: ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...