ತನ್ನ ಮೃತ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಹಲವು ತಿಂಗಳ ಕಾಲ ಅತ್ಯಾಚಾರ ಎಸಗಿದ ಆರೋಪದ ಮೇಲೆ ದೆಹಲಿ ಸರಕಾರದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಾಲಕಿ ದೆಹಲಿಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದಳು. ಬಾಲಕಿಯ ತಂದೆಯ ನಿಧನದ ಬಳಿಕ ಆಕೆಯನ್ನು ನೋಡಿಕೊಳ್ಳುವುದಾಗಿ ಅಧಿಕಾರಿ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ.
2020 ಮತ್ತು 2021ರ ನಡುವೆ ಈ ಘಟನೆ ನಡೆದಿದೆ. ಈ ಕುರಿತು ಆರೋಪಿ ಅಧಿಕಾರಿಯ ವಿರುದ್ಧ ಬುರಾರಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಸೇರಿ ಐಪಿಸಿಯ ವಿವಿಧ ಸೆಕ್ಸನ್ ಗಳಡಿಯಲ್ಲಿ ಆ.13ರಂದು ಕೇಸ್ ದಾಖಲಾಗಿದೆ.
ಪೊಲೀಸರ ಪ್ರಕಾರ, ಸರ್ಕಾರಿ ಉದ್ಯೋಗಿಯಾಗಿದ್ದ ತಂದೆಯ ಮರಣದ ನಂತರ ಅಪ್ರಾಪ್ತ ಬಾಲಕಿಯು ಆರೋಪಿಯೊಂದಿಗೆ 2020ರಿಂದ ಬುರಾರಿಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು. ಆರೋಪಿಯು ಆಕೆಯ ಮೇಲೆ ಲೈಂಗಿಕ ಕಿರುಕುಳ, ದೈಹಿಕ ಕಿರುಕುಳ ನೀಡುತ್ತಿದ್ದರು. 2020 ಮತ್ತು 2021 ರ ನಡುವೆ ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.
ಬಾಲಕಿಯು ಆತಂಕಿತಳಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಬಳಿಕ ಆಕೆಯ ಜೊತೆ ಸಮಾಲೋಚನೆ ನಡೆಸಿದಾಗ ಸಂತ್ರಸ್ತೆ, ವೈದ್ಯರು, ಸಮಾಲೋಚಕರು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾರೆ.
ಬಾಲಕಿಯು ಗರ್ಭ ಧರಿಸಿದ್ದು ಆರೋಪಿ ಅಧಿಕಾರಿಯ ಪತ್ನಿಯು ಗರ್ಭಪಾತ ಮಾಡಲು ಬಲವಂತ ಮಾಡಿದ್ದರು ಎನ್ನುವುದನ್ನು ಪೊಲೀಸರು ತನಿಖೆಯ ವೇಳೆ ಪತ್ತೆ ಹಚ್ಚಿದ್ದಾರೆ.
ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:ಕೇಂದ್ರದ ಗೃಹ, ರೈಲ್ವೆ, ಬ್ಯಾಂಕ್ ಸಿಬ್ಬಂದಿಗಳ ಮೇಲೆ ಹೆಚ್ಚು ಭ್ರಷ್ಟಾಚಾರದ ದೂರು ದಾಖಲು:ಸಿವಿಸಿ ವರದಿ


