ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಶಾಝಿಯಾ ಇಲ್ಮಿ ಮತ್ತು ಇಂಡಿಯಾ ಟುಡೇ ಪತ್ರಕರ್ತನ ನಡುವಿನ ವಾಗ್ವಾದದ ವಿಡಿಯೋ ಅಪ್ಲೋಡ್ ಮಾಡಿದ ಬಳಕೆದಾರರ ಮೂಲ ಚಂದಾದಾರರ ಮಾಹಿತಿಯನ್ನು (ಬಿಎಸ್‌ಐ) ಒದಗಿಸುವಂತೆ ನೀಡಿದ್ದ ನಿರ್ದೇಶನವನ್ನು ಮಾರ್ಪಡಿಸುವಂತೆ ಕೋರಿ ಎಕ್ಸ್ ಕಾರ್ಪ್ (ಟ್ವಿಟರ್) ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ (ಮೇ.8) ತಿರಸ್ಕರಿಸಿದೆ.
ಇಂಡಿಯಾ ಟುಡೇ ಪತ್ರಕರ್ತರ ಜೊತೆಗಿನ ಚರ್ಚೆಯಿಂದ ಇಲ್ಮಿ ಹಿಂದೆ ಸರಿದ ನಂತರ ರೆಕಾರ್ಡ್ ಮಾಡಲಾದ 18 ಸೆಕೆಂಡುಗಳ ಈ ವಿಡಿಯೋ ತುಣುಕನ್ನು ತೆಗೆದು ಹಾಕಲು ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು.
ಏಪ್ರಿಲ್ 4ರ ಆದೇಶದಲ್ಲಿ, ಅಂತಹ ವಿಡಿಯೋ ರೆಕಾರ್ಡಿಂಗ್ ಇಲ್ಮಿಯ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಹಾಗಾಗಿ, ಅದನ್ನು ಆನ್‌ಲೈನ್‌ನಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿತ್ತು.
ನಂತರ, ಏಪ್ರಿಲ್ 9ರಂದು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಆ ವಿಡಿಯೋ ಕ್ಲಿಪ್ ಅನ್ನು ಅಪ್ಲೋಡ್ ಮಾಡಿದ್ದ ಎಕ್ಸ್ ಬಳಕೆದಾರರಿಗೆ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು.
ಅಂತಹ ವ್ಯಕ್ತಿಗಳ ಬಿಎಸ್‌ಐ ವಿವರಗಳನ್ನು ಹಂಚಿಕೊಳ್ಳಲು ಎಕ್ಸ್‌ಗೆ ನಿರ್ದೇಶನ ನೀಡಿತ್ತು. ಬಿಎಸ್‌ಐ ವಿವರಗಳನ್ನು ಹಂಚಿಕೊಳ್ಳುವಂತೆ ನೀಡಿರುವ ನಿರ್ದೇಶನವನ್ನು ಮಾರ್ಪಡಿಸುವಂತೆ ಕೋರಿ ಎಕ್ಸ್ ಅರ್ಜಿ ಸಲ್ಲಿಸಿತ್ತು.
ಗುರುವಾರ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರು ಈ ಅರ್ಜಿಯನ್ನು ತಿರಸ್ಕರಿಸಿದ್ದು, 36 ಗಂಟೆಗಳ ಒಳಗೆ ಬಿಎಸ್ಐ ವಿವರಗಳನ್ನು ಒದಗಿಸುವಂತೆ ಎಕ್ಸ್ ಕಾರ್ಪ್‌ಗೆ ಸೂಚನೆ ನೀಡಿದ್ದಾರೆ.
“ಏಪ್ರಿಲ್ 9ರ ಆದೇಶದ ಪ್ರಕಾರ ಅರ್ಜಿದಾರರು (ಎಕ್ಸ್ ಕಾರ್ಪ್) 36 ಗಂಟೆಗಳ ಒಳಗೆ ಬಿಎಸ್ಐ ವಿವರಗಳನ್ನು ಒದಗಿಸಬೇಕು. ಪೋಸ್ಟ್‌ಗಳನ್ನು ತೆಗೆದುಹಾಕುವ ನಿರ್ದೇಶನವನ್ನು ಈಗಾಗಲೇ ಪಾಲಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ವಿಡಿಯೋ ತೆಗೆದು ಹಾಕುವಂತೆ ಏಪ್ರಿಲ್ 4ರಂದು ನೀಡಿರುವ ಆದೇಶವನ್ನು ಎಕ್ಸ್ ಬಳಕೆದಾರರು ಪದೇ ಪದೇ ಉಲ್ಲಂಘಿಸುತ್ತಿರುವುದಕ್ಕೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.
“ವಿಡಿಯೋ ತೆಗೆದು ಹಾಕಬೇಕೆಂಬ ನ್ಯಾಯಾಲಯದ ತೀರ್ಪು ಮತ್ತು ವಿಡಿಯೋವನ್ನು ಜನರು ಒಟ್ಟಿಗೆ ಬಳಸುತ್ತಿರುವುದು ನ್ಯಾಯಾಂಗದ ಅಣಕ” ಎಂದು ಕೋರ್ಟ್ ಹೇಳಿದೆ.
ಎಕ್ಸ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ರಾಜಶೇಖರ್ ರಾವ್ ಅವರು, “ಬಳಕೆದಾರರ ಬಿಎಸ್ಐ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ನ್ಯಾಯಾಲಯ ಕೋರಿದ ಕೆಲವು ಮಾಹಿತಿಗಳು ಸಾರ್ವಜನಿಕ ವಲಯದಲ್ಲಿಯೂ ಇಲ್ಲ ಎಂದು ಅವರು ಹೇಳಿದ್ದಾರೆ. ಅಂತಹ ವಿವರಗಳನ್ನು ಮರೆಮಾಚಬೇಕೆಂದು ಅವರು ವಿನಂತಿಸಿದ್ದಾರೆ.
“ಎಕ್ಸ್ ಕಾರ್ಪ್ ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ಮಾಡಿರುವ ಮನವಿಯನ್ನು ಸೂಕ್ತ ಪ್ರಕ್ರಿಯೆಗಳಲ್ಲಿ ನಿರ್ಧರಿಸಲು ಕಾಯ್ದಿರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 29ಕ್ಕೆ ನಿಗದಿ ಮಾಡಿದೆ.
ಏನಿದು ಪ್ರಕರಣ?
ಈ ಪ್ರಕರಣವು, “ಕಾರ್ಗಿಲ್ ವಿಜಯ್ ದಿವಸದ ರಾಜಕೀಯ, ಅಗ್ನಿವೀರ್ ಮತ್ತು ರಕ್ಷಣಾ ಪಡೆಗಳ ರಾಜಕೀಯೀಕರಣ” ಕುರಿತು ಇಂಡಿಯಾ ಟುಡೆಯಲ್ಲಿ ರಾಜ್‌ದೀಪ್ ಸರ್ದೇಸಾಯಿ ಅವರು ಜುಲೈ 26, 2024ರಂದು ನಡೆಸಿದ್ದ ಚರ್ಚೆಗೆ ಸಂಬಂಧಿಸಿದೆ.
ಚರ್ಚೆಯಲ್ಲಿ ಮೇಜರ್ ಜನರಲ್ (ನಿವೃತ್ತ) ಯಶ್ ಮೋರ್ ಅವರು ಅಗ್ನಿವೀರ್ ಯೋಜನೆಯಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದರು. ಈ ವೇಳೆ ಬಿಜೆಪಿ ವಕ್ತಾರೆ ಇಲ್ಮಿ ಮಧ್ಯ ಪ್ರವೇಶಿಸಿದ್ದರು. ಆಗ ಇಲ್ಮಿ ಮತ್ತು ಸರ್ದೇಸಾಯಿ ನಡುವೆ ವಾಗ್ವಾದ ನಡೆದಿತ್ತು. ಮಾಜಿ ಜನರಲ್ “ಕಠಿಣ ಸಂಗತಿಗಳನ್ನು ಮುಂದಿಡುತ್ತಿದ್ದಾರೆ” ಎಂದು ಸರ್ದೇಸಾಯಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇಲ್ಮಿ, “ನಮಗೆ ಉಪದೇಶ ಕೊಡಬೇಡಿ” ಎಂದಿದ್ದರು.
ಸರ್ದೇಸಾಯಿ ಮತ್ತು ಇಲ್ಮಿ ನಡುವೆ ವಾಗ್ವಾದ ತಾರಕಕ್ಕೇರಿ, ಇಲ್ಮಿ ಕಾರ್ಯಕ್ರಮದಿಂದ ಹೊರ ನಡೆದಿದ್ದರು. ಅದೇ ದಿನ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಇಲ್ಮಿ “ಸರ್ದೇಸಾಯಿ ಶೋನಲ್ಲಿ ನನ್ನ ಧ್ವನಿ ಅಡಗಿಸಿದ್ದಾರೆ” ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿದ್ದ ಸರ್ದೇಸಾಯಿ ಮರುದಿನ ಬೆಳಿಗ್ಗೆ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಇಲ್ಮಿ ಅವರು ತಮ್ಮ ಮನೆಯಲ್ಲಿ ಇಂಡಿಯಾ ಟುಡೇಯ ವಿಡಿಯೋ ಪತ್ರಕರ್ತನನ್ನು ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.
ಸರ್ದೇಸಾಯಿ ಅವರ ಪೋಸ್ಟ್‌ಗೆ ಸಂಬಂಧಿಸಿದಂತೆ ಎಕ್ಸ್‌ನಲ್ಲೇ ಪ್ರತಿಕ್ರಿಯೆ ನೀಡಿದ್ದ ಇಲ್ಮಿ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. ಅದರಂತೆ, ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಪ್ರಕರಣದಲ್ಲಿ ಸತ್ಯ ಮುಚ್ಚಿಟ್ಟಿದ್ದಕ್ಕಾಗಿ ದೆಹಲಿ ಹೈಕೋರ್ಟ್ 2025ರ ಏಪ್ರಿಲ್ 4 ಶಾಝಿಯಾ ಇಲ್ಮಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇಲ್ಮಿ ಸಲ್ಲಿಸಿದ್ದ ಮಾನನಷ್ಟ ಅರ್ಜಿಯನ್ನು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಭಾಗಶಃ ಮಾನ್ಯ ಮಾಡಿದ್ದಾರೆ. ಆದರೆ, ಅರ್ಜಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎರಡು ಎಕ್ಸ್ ಪೋಸ್ಟ್‌ಗಳನ್ನು ಇಲ್ಮಿ ಮುಚ್ಚಿಟ್ಟಿರುವುದು ಕಂಡು ಬಂದಿದೆ ಎಂದ ನ್ಯಾಯಾಲಯ ದಂಡ ವಿಧಿಸಿದೆ ಎಂದು ವರದಿಯಾಗಿದೆ.


