ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಎಎಪಿ ನಾಯಕರ ಆರೋಪದ ಕುರಿತು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಶುಕ್ರವಾರ (ಫೆ.7) ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ತನಿಖೆಗೆ ಆದೇಶಿಸಿ ಗವರ್ನರ್ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ಬಂದಿದೆ.
ಫೆಬ್ರವರಿ 8ರಂದು ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುವ ಮುನ್ನ ಎಎಪಿಯ 16 ಅಭ್ಯರ್ಥಿಗಳನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಗುರುವಾರ (ಫೆ.6) ಆರೋಪಿಸಿದ್ದರು.
ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಸಚಿವ ಸ್ಥಾನ ಮತ್ತು ಪಕ್ಷ ಬದಲಾಯಿಸಿದರೆ ತಲಾ 15 ಕೋಟಿ ರೂಪಾಯಿಗಳ ಭರವಸೆ ಸಿಕ್ಕಿದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಇತರ ನಾಯಕರು ಕೂಡ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು.
ಯಾವುದೇ ಪುರಾವೆಗಳಿಲ್ಲದೆ ಎಎಪಿ ನಾಯಕರು ಮಾಡಿರುವ ಆರೋಪಗಳು ತನಿಖೆಯ ಅಗತ್ಯವಿರುವ ಗಂಭೀರ ವಿಷಯವಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್‌ಗೆ ಬರೆದ ಪತ್ರದಲ್ಲಿ ಬಿಜೆಪಿ ಕಾರ್ಯದರ್ಶಿ ವಿಷ್ಣು ಮಿತ್ತಲ್ ಹೇಳಿದ್ದರು.
ಎಎಪಿ ನಾಯಕರು ಇಂತಹ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡುವ ಮೂಲಕ ದೆಹಲಿಯಲ್ಲಿ ಭಯ ಮತ್ತು ಅಶಾಂತಿಯ ಪರಿಸ್ಥಿತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಒಟ್ಟು 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಬುಧವಾರ (ಫೆ.5) ಮತದಾನ ನಡೆದಿದೆ. ಶನಿವಾರ (ಫೆ.8) ಫಲಿತಾಂಶ ಪ್ರಕಟಗೊಳ್ಳಲಿದೆ. ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಈ ಬಾರಿಯ ಚುನಾವಣೆಗೆ 603 ಪುರುಷರು, 95 ಮಹಿಳೆಯರು ಮತ್ತು ಒಬ್ಬರು ತೃತೀಯ ಲಿಂಗಿ ಸೇರಿ 699 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಎಂಜಿನಿಯರ್ ರಶೀದ್ | ಅಧಿವೇಶನಕ್ಕೆ ಹಾಜರಾಗಲು ಕಸ್ಟಡಿ ಪೆರೋಲ್ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್


