ಗುಂಪು ಹಿಂಸಾಚಾರ ಮತ್ತು ಗುಂಪು ಥಳಿತ ಘಟನೆಗಳ ಬಗ್ಗೆ, ನಿರ್ದಿಷ್ಟವಾಗಿ ಗೋವುಗಳನ್ನು ಕಳ್ಳಸಾಗಣೆ ಮತ್ತು ಹತ್ಯೆಯಿಂದ ರಕ್ಷಿಸುವ ಹೆಸರಿನಲ್ಲಿ “ಗೋ ರಕ್ಷಕರು” ನಡೆಸುವ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ. ದೆಹಲಿಯಲ್ಲಿ ಕುಳಿತಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ನಿರ್ವಹಿಸುವುದು ಪ್ರಾಯೋಗಿಕವಲ್ಲ ಎಂದು ವಾದಿಸಿದ್ದು, ಅಂತಹ ಘಟನೆಗಳಿಗೆ ಕಾರಣವಾಗುವ ಅಂಶಗಳು ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿರಬಹುದು ಎಂದು ಹೇಳಿದೆ. ದೆಹಲಿಯಲ್ಲಿ ಕುಳಿತು
“ಧ್ವಂಸಗೊಳಿಸುವ ವಿಷಯದಲ್ಲಿಯೂ ಸಹ (ಕ್ರಿಮಿನಲ್ ಅಪರಾಧಗಳೆಂದು ಶಂಕಿಸಲಾಗಿರುವವರ ಆಸ್ತಿಗಳನ್ನು ಧ್ವಂಸಗೊಳಿಸುವುದರ ವಿರುದ್ಧದ ಅರ್ಜಿಗಳು ಕಾನೂನುಬಾಹಿರ ಶಿಕ್ಷೆಯ ಕ್ರಮವಾಗಿ), ನಾವು ಅರ್ಜಿದಾರರಿಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ತೆರಳಲು ಸ್ವಾತಂತ್ರ್ಯ ನೀಡಿದ್ದೇವೆ.. ಪ್ರತಿ ರಾಜ್ಯವು ವಿಭಿನ್ನ ಪರಿಸ್ಥಿತಿಯನ್ನು ಹೊಂದಿರುತ್ತದೆ… ಕೆಲವು ರಾಜ್ಯಗಳಲ್ಲಿ, ಗೋಮಾಂಸ (ಸೇವನೆ) ನಿಯಮಿತ ರೀತಿಯದ್ದಾಗಿದೆ…,” ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತೆಹ್ಸೀನ್ ಪೂನವಾಲ ಪ್ರಕರಣದಲ್ಲಿ ಗುಂಪು ಥಳಿತದ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ವಿವರವಾದ ನಿರ್ದೇಶನಗಳನ್ನು ನೀಡಲಾಗಿದೆ ಎಂದು ನ್ಯಾಯಾಲಯವು ಹೇಳಿದೆ. ಈ ನಿರ್ದೇಶನಗಳು ಎಲ್ಲಾ ಅಧಿಕಾರಿಗಳ ಮೇಲೆ ಬದ್ಧವಾಗಿವೆ ಎಂದು ನ್ಯಾಯಾಲಯ ಒತ್ತಿ ಹೇಳಿದ್ದು, ಅಂತಹ ಯಾವುದೇ ನಿರ್ದೇಶನವನ್ನು ಉಲ್ಲಂಘಿಸಿದರೆ, ಸಂತ್ರಸ್ತ ವ್ಯಕ್ತಿಗೆ ಕಾನೂನು ಪರಿಹಾರಗಳಿವೆ ಎಂದು ಅದು ಹೇಳಿದೆ. ದೆಹಲಿಯಲ್ಲಿ ಕುಳಿತು
“ಆದಾಗ್ಯೂ, ದೆಹಲಿಯಲ್ಲಿ ಕುಳಿತುಕೊಂಡು, ದೇಶದ ವಿವಿಧ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ನಾವು ಮೇಲ್ವಿಚಾರಣೆ ಮಾಡಲು ಸಾಧ್ಯವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಈ ನ್ಯಾಯಾಲಯದಿಂದ ಅಂತಹ ಸೂಕ್ಷ್ಮ ನಿರ್ವಹಣೆ ಕಾರ್ಯಸಾಧ್ಯವಲ್ಲ. ಯಾವುದೇ ವ್ಯಕ್ತಿ ನೊಂದಿದ್ದರೆ, ಕಾನೂನಿನ ಪ್ರಕಾರ ಸಮರ್ಥ ನ್ಯಾಯಾಲಯವನ್ನು ಸಂಪರ್ಕಿಸಬಹುದು” ಎಂದು ನ್ಯಾಯಾಲಯದ ಆದೇಶ ಹೇಳಿದೆ.
ಇದೇ ರೀತಿಯ ಕಾರಣಗಳಿಗಾಗಿ, ವಿವಿಧ ರಾಜ್ಯಗಳಲ್ಲಿ ಪರಿಚಯಿಸಲಾದ ಗೋಸಂರಕ್ಷಣಾ ಕಾನೂನುಗಳ ಸಿಂಧುತ್ವವನ್ನು ಪರಿಶೀಲಿಸಲು ನ್ಯಾಯಾಲಯವು ನಿರಾಕರಿಸಿತು. ಅಂತಹ ವಿಷಯಗಳ ಬಗ್ಗೆ ಸಂಬಂಧಪಟ್ಟ ರಾಜ್ಯದ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿದೆ.
“ಸಾಮಾನ್ಯ ಅರ್ಜಿಯಲ್ಲಿ, 13 ವಿಭಿನ್ನ ರಾಜ್ಯ ಕಾನೂನುಗಳ ಸಿಂಧುತ್ವವನ್ನು ಈ ನ್ಯಾಯಾಲಯವು ಪರೀಕ್ಷಿಸುವುದು ಸರಿಯಲ್ಲ. ಹೀಗಾಗಿ, ನಿರ್ದಿಷ್ಟ ಹೈಕೋರ್ಟ್ ಅನ್ನು ಸಂಪರ್ಕಿಸಬೇಕಾಗಿದೆ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಗುಂಪು ಹತ್ಯೆ ಘಟನೆಗಳ ವಿಷಯದ ಕುರಿತು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟವು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯವು ಆಲಿಸುತ್ತಿತ್ತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ನಿಜಾಮುದ್ದೀನ್ ಪಾಷಾ, ಇಂತಹ ಘಟನೆಗಳ ವಿರುದ್ಧ ನ್ಯಾಯಾಲಯವು ನೀಡಿದ ಹಿಂದಿನ ನಿರ್ದೇಶನಗಳನ್ನು ನಿರ್ಲಜ್ಜವಾಗಿ ಉಲ್ಲಂಘಿಸಲಾಗುತ್ತಿದೆ. ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ಗೋ ಸಂರಕ್ಷಣಾ ಕಾನೂನುಗಳನ್ನು ಪರಿಚಯಿಸುವುದರಿಂದ ‘ಗೋ ರಕ್ಷಕರು’ ಗುಂಪು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
“ಖಾಸಗಿ ವ್ಯಕ್ತಿಗಳಿಗೆ ವಾಹನಗಳನ್ನು ವಶಪಡಿಸಿಕೊಳ್ಳಲು ಮತ್ತು ದನಗಳ ಕಳ್ಳಸಾಗಣೆಗಾಗಿ ಜನರನ್ನು ಬಂಧಿಸಲು ಪೊಲೀಸ್ ಅಧಿಕಾರವನ್ನು ನೀಡಿದಾಗ… ಖಾಸಗಿ ಸಂಸ್ಥೆಗಳಿಗೆ ಪೊಲೀಸ್ ಅಧಿಕಾರವನ್ನು ಹೀಗೆ ನೀಡಲಾಗುತ್ತದೆ. ಈ ವಿಚಾರದಲ್ಲಿ ಆಡಳಿತ ಯಂತ್ರದ ಮನೋಭಾವವನ್ನು ನೋಡಬೇಕಿದ್ದು ಮತ್ತು ಅದು ಎಷ್ಟು ನಿರ್ಲಜ್ಜವಾಗಿದೆ ಎಂಬುದನ್ನು ನೋಡಬೇಕು. ಈ ನ್ಯಾಯಾಲಯವು ಕೆಲವು ರೀತಿಯ ಮೇಲ್ವಿಚಾರಣೆಗೆ ಸಹಾಯ ಮಾಡಿದರೆ, ಹದಿಮೂರು ರಾಜ್ಯಗಳು ಈ ನಿಯಮವನ್ನು ಅನುಸರಿಸುತ್ತವೆ” ಎಂದು ಪಾಷಾ ವಾದಿಸಿದ್ದಾರೆ.
ಅಂತಹ ಕಾನೂನುಗಳನ್ನು ಪ್ರತಿ ರಾಜ್ಯದಲ್ಲಿ ಸೂಕ್ತ ನ್ಯಾಯಾಲಯದ ಮುಂದೆ ಪ್ರಶ್ನಿಸಬಹುದು ಎಂದು ನ್ಯಾಯಾಲಯವು ಹೇಳಿದೆ. “ಅಂತಿಮವಾಗಿ, ಇವೆಲ್ಲವೂ ಕ್ರಿಮಿನಲ್ ಕೃತ್ಯಗಳಾಗಿರುವ ಘಟನೆಗಳು. ಅದು ಸಂಭವಿಸದಂತೆ ನೋಡಿಕೊಳ್ಳುವುದು ಮತ್ತು ವಿಚಾರಣೆ ನಡೆಸುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ನ್ಯಾಯಾಲಯವು ವೈಯಕ್ತಿಕ ಪ್ರಕರಣಗಳನ್ನು ನೋಡುಲು ಸಾಧ್ಯವೆ?” ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ರಾಜ್ಯದ ಅಧಿಕಾರಿಗಳು ಸ್ವತಃ ಅಂತಹ ಕೃತ್ಯಗಳ ಅಪರಾಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ನೋಂದಾಯಿಸಲು ನಿರಾಕರಿಸುತ್ತಾರೆ ಎಂದು ಪಾಷಾ ಉತ್ತರಿಸಿದರು. “ಸರ್ಕಾರಗಳು ಎಫ್‌ಐಆರ್‌ಗಳನ್ನು ದಾಖಲಿಸದಿದ್ದಾಗ … ರಾಜ್ಯಗಳಾದ್ಯಂತ ಇಂತಹದ್ದೆ ಮಾದರಿಯ ಘಟನೆಗಳು ವರದಿಯಾಗುತ್ತದೆ ” ಎಂದು ಅವರು ಹೇಳಿದ್ದಾರೆ.
“ನಾವು ಈಗ ಮಾದರಿಗಳ ಆಧಾರದ ಮೇಲೆ ನಿರ್ಧರಿಸಬೇಕೇ? ನೀವು ಯಾವುದೇ ಸಂತ್ರಸ್ತರ ಪರವಾಗಿ ಹಾಜರಾಗುತ್ತಿದ್ದೀರಾ?” ನ್ಯಾಯಮೂರ್ತಿ ಗವಾಯಿ ಪ್ರತಿಕ್ರಿಯಿಸಿದರು.
ಈ ಮಧ್ಯೆ, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರವು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಗುಂಪು ಹತ್ಯೆಯನ್ನು ಶಿಕ್ಷಿಸುವ ಕಾನೂನು ಪರಿಚಯಿಸಿದೆ ಎಂದು ಹೇಳಿದ್ದಾರೆ.
ಗುಂಪು ಹತ್ಯೆ ಘಟನೆಗಳ ಬಲಿಪಶುಗಳಿಗೆ ಪರಿಹಾರವನ್ನು ನೀಡಲು ಯಾವುದೇ ಏಕರೂಪದ ಮಾನದಂಡಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿದ ನಂತರ ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯಗೊಳಿಸಿದ್ದು, ಇದು ಪ್ರಕರಣದಿಂದ ಪ್ರಕರಣಕ್ಕೆ ನಿರ್ಧರಿಸಬೇಕಾದ ವಿಷಯವಾಗಿದೆ ಎಂದು ಹೇಳಿದೆ.
“ಗುಂಪು ಹತ್ಯೆ ಪ್ರಕರಣಗಳಲ್ಲಿ ಸಮರ್ಪಕ ಪರಿಹಾರ ಎಷ್ಟಿರಬೇಕು ಎಂಬುದು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರುತ್ತದೆ ಮತ್ತು ಯಾವುದೇ ಏಕರೂಪದ ನಿರ್ದೇಶನಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಹಾಗೆ ಮಾಡುವುದರಿಂದ ಅಧಿಕಾರಿಗಳು ಅಥವಾ ನ್ಯಾಯಾಲಯಗಳಿಗೆ ಲಭ್ಯವಿರುವ ವಿವೇಚನೆಯನ್ನು ರದ್ದುಗೊಳಿಸಲಾಗುತ್ತದೆ. ಒಬ್ಬ ವ್ಯಕ್ತಿಗೆ ಸರಳವಾದ ಗಾಯವಾಗಿದ್ದರೆ ಮತ್ತು ಇನ್ನೊಬ್ಬರಿಗೆ ಗಂಭೀರವಾದ ಗಾಯವಾಗಿದ್ದರೆ, ಏಕರೂಪದ ಪರಿಹಾರ ನಿರ್ದೇಶನವು ಅನ್ಯಾಯವಾಗುತ್ತದೆ. ಆದ್ದರಿಂದ ಅಂತಹ ಸರ್ವವ್ಯಾಪಿ ಪರಿಹಾರವನ್ನು ಕೋರುವ ಅರ್ಜಿಯು ಸಂತ್ರಸ್ತರ ಪರವಾಗಿರುವ ಹಿತಾಸಕ್ತಿಯಲ್ಲ” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂಓದಿ: ಟಿವಿ ಕಾರ್ಯಕ್ರಮದಲ್ಲಿ ಮಣಿಪುರ ರಾಜಕೀಯದ ಬಗ್ಗೆ ಮಾತನಾಡಿದ್ದ ಹಿರಿಯ ಪತ್ರಕರ್ತನ ಅಪಹರಣ
ಟಿವಿ ಕಾರ್ಯಕ್ರಮದಲ್ಲಿ ಮಣಿಪುರ ರಾಜಕೀಯದ ಬಗ್ಗೆ ಮಾತನಾಡಿದ್ದ ಹಿರಿಯ ಪತ್ರಕರ್ತನ ಅಪಹರಣ


