ಭಾರತೀಯ ಜನತಾ ಪಕ್ಷದ ಮುಖಂಡರೊಬ್ಬರು ಟ್ವೀಟ್ ಮಾಡಿದ್ದ ತಿರುಚಿದ ವಿಡಿಯೊ ಕ್ಲಿಪ್ ಮತ್ತು ಅದನ್ನು ಪ್ರಸಾರ ಮಾಡಿದ ಸುದ್ದಿ ವಾಹಿನಿಗಳ ವಿಡಿಯೊಗಳನ್ನು ಅವಲಂಬಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹೋರಾಟಗಾರ ಉಮರ್ ಖಾಲಿದ್ ಪರ ವಕೀಲರು ಸೋಮವಾರ ದೆಹಲಿ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದಾರೆ.
ದೆಹಲಿ ಗಲಭೆ, ಹಿಂಸಾಚಾರ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿ ದಾಖಲಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಉಮರ್ ಖಾಲಿದ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗವಾಗಿದೆ.
“ರಿಪಬ್ಲಿಕ್ ಟಿವಿ ಮತ್ತು ನ್ಯೂಸ್ 18 ವಿಡಿಯೋ ಹೊರತುಪಡಿಸಿ ಸ್ಪಷ್ಟವಾಗಿ ದೆಹಲಿ ಪೊಲೀಸರ ಬಳಿ ಏನೂ ಇಲ್ಲ” ಎಂದು ಖಾಲಿದ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ತ್ರಿದೀಪ್ ಪೈಸ್ ವಾದಿಸಿದ್ದಾರೆ.
“ಚಾನೆಲ್‌ಗಳಲ್ಲಿ ಪ್ರಸಾರ ಮಾಡಿದ ಉಮರ್ ಖಾಲಿದ್ ಭಾಷಣದ ಒರಿಜಿನಲ್ ತುಣುಕನ್ನು ಕೋರಿ ನ್ಯೂಸ್ 18 ಮತ್ತು ರಿಪಬ್ಲಿಕ್ ಟಿವಿಗೆ ಬರೆದಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ, ನ್ಯೂಸ್ 18 ತನ್ನಲ್ಲಿ ಭಾಷಣದ ಒರಿಜಿನಲ್ ತುಣುಕುಗಳು ಇಲ್ಲ. ವಿಡಿಯೊ ಭಾರತೀಯ ಜನತಾ ಪಕ್ಷದ ನಾಯಕನ ಟ್ವೀಟ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ” ಎಂದು ವಕೀಲ ತ್ರಿದೀಪ್ ಪೈಸ್ ಹೇಳಿದ್ದಾರೆ.
ಇದನ್ನೂ ಓದಿ: ಯುಎಪಿಎ ಅಡಿಯಲ್ಲಿ ಬಂಧಿತ ಹೋರಾಟಗಾರ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ
ಇನ್ನು ರಿಪಬ್ಲಿಕ್ ಟಿವಿ, ಈ ವಿಡಿಯೋ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಟ್ವೀಟ್‌ನಿಂದ ಪಡೆದಿದ್ದು ಎಂದು ರಿಪಬ್ಲಿಕ್ ಟಿವಿ ಹೇಳಿದೆ ಎಂದು ಪೈಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎರಡು ಸುದ್ದಿ ವಾಹಿನಿಗಳು ರಾಜಕಾರಣಿಗಳ ಟ್ವೀಟ್‌ಗಳಿಂದ ವಿಡಿಯೋ ತೆಗೆದುಕೊಂಡು ತಮ್ಮ ಸುದ್ದಿ ಮಾಡಿವೆ ಎಂದು ವಾದಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ವಕೀಲ ತ್ರಿದೀಪ್ ಪೈಸ್, ಉಮರ್ ಖಾಲಿದ್ ಅವರ ಇಡೀ ಭಾಷಣವನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದು, ಖಾಲಿದ್ ಹಿಂಸೆಗೆ ಕರೆ ನೀಡಿಲ್ಲ. ಅವರು ದೇಶದ ಪರವಾಗಿ ಮಾತನಾಡಿದ್ದಾರೆ. ಪೊಲೀಸರು ಸಂಪೂರ್ಣವಾಗಿ ಭಾಷಣವನ್ನು ಕೇಳಿಲ್ಲ. ಆದರೆ ತಿರುಚಿದ, ಬೇರೆ ಸಂದರ್ಭದ ಹೇಳಿಕೆ ಆಧರಿಸಿ FIR ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಉಮರ್ ಖಾಲಿದ್ ಅವರನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ. ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಖಾಲಿದ್‌ಗೆ ಜಾಮೀನು ನೀಡಲಾಗಿದೆ. ಪ್ರಸ್ತುತ ಪ್ರಕರಣದ ಉಮರ್ ಖಾಲಿದ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಲಾಗಿದೆ.
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 24, 2020 ರಂದು ಗಲಭೆ ಭುಗಿಲೆದ್ದಿತು. ಇದರಲ್ಲಿ ಕನಿಷ್ಠ 53 ಸಾವನ್ನಪ್ಪಿದ್ದರು. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು 750 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. 250 ಕ್ಕೂ ಅಧಿಕ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದ್ದಾರೆ.


