ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ಮಾಧ್ಯಮ ವರದಿಗಳನ್ನು ದೆಹಲಿ ಪೊಲೀಸರು ಬುಧವಾರ ತಳ್ಳಿಹಾಕಿದ್ದಾರೆ.
ಸಾಕ್ಷ್ಯಾಧಾರಗಳಿಲ್ಲ ಎಂಬದು ಸುಳ್ಳು ಸುದ್ದಿಯಾಗಿದೆ. ಇದು ಸೂಕ್ಷ್ಮ ಪ್ರಕರಣವಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ದೆಹಲಿ ಪೊಲೀಸರು ಹೇಳಿಕೆಯಲ್ಲಿ ”ಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ದೆಹಲಿ ಪೊಲೀಸರಿಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ ಎಂದು ಹಲವಾರು ಮಾಧ್ಯಮ ಚಾನೆಲ್‌ಗಳು ಸುದ್ದಿ ಪ್ರಕಟಿಸಿವೆ. ಆದರೆ ಈ ಸುದ್ದಿ “ಸುಳ್ಳು” ಮತ್ತು ಈ ಸೂಕ್ಷ್ಮ ಪ್ರಕರಣದ ತನಿಖೆಯು ಎಲ್ಲಾ ಸೂಕ್ಷ್ಮತೆಯೊಂದಿಗೆ ಪ್ರಗತಿಯಲ್ಲಿದೆ. ಈ ವಿಷಯದ ಕುರಿತು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ANI , ”ಅಪ್ರಾಪ್ತರು ಸೇರಿದಂತೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ಬಂಧಿಸಲು ಸಾಧ್ಯವಿಲ್ಲ” ಎಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
”ಇಲ್ಲಿಯವರೆಗೆ, ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಲು ನಮಗೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ. 15 ದಿನಗಳಲ್ಲಿ ನಾವು ನಮ್ಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಅದು ಚಾರ್ಜ್‌ಶೀಟ್ ಅಥವಾ ಅಂತಿಮ ವರದಿಯ ರೂಪದಲ್ಲಿರಬಹುದು. ಸಾಬೀತುಪಡಿಸಲು ಯಾವುದೇ ಪೂರಕ ಸಾಕ್ಷ್ಯಗಳಿಲ್ಲ” ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ: ಆರೋಪಿ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ
ತಾನು ನಿರಪರಾಧಿ ಎಂದು ಪುನರುಚ್ಚರಿಸಿದ ಬ್ರಿಜ್‌ಭೂಷಣ್ ಸಿಂಗ್
ತಾನು ನಿರಪರಾಧಿ ಎಂದು ಬ್ರಿಜ್ ಭೂಷಣ್ ಸಿಂಗ್ ಅವರು ಬುಧವಾರ ಪುನರುಚ್ಚರಿಸಿದ್ದಾರೆ. ಕುಸ್ತಿಪಟುಗಳ ಬಳಿ ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿದ್ದರೆ, ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ನಾನು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ಸಿದ್ಧ ಎಂದು ಹೇಳಿದ್ದಾರೆ.
“ನಿಮ್ಮಲ್ಲಿ (ಕುಸ್ತಿಪಟುಗಳು) ಯಾವುದೇ ಸಾಕ್ಷ್ಯಾಧಾರಗಳಿದ್ದರೆ, ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ … ನಾಲ್ಕು ತಿಂಗಳಾದರೂ ಸರ್ಕಾರ ನನ್ನನ್ನು ಗಲ್ಲಿಗೇರಿಸುತ್ತಿಲ್ಲ, ಅವರು ಈಗ ತಮ್ಮ ಪದಕಗಳನ್ನು ಮುಳುಗಿಸಲು ಗಂಗಾನದಿಯ ಮೊರೆ ಹೋಗುತ್ತಿದ್ದಾರೆ. ಪದಕಗಳನ್ನು ಮುಳುಗಿಸುವುದರಿಂದ ನನಗೆ ಗಲ್ಲಿಗೇರಿಸಲಾಗುವುದಿಲ್ಲ, ಇದು ಕೇವಲ ಭಾವನಾತ್ಮಕ ನಾಟಕವಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಒಂದು ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳಾ ‘ಮಹಾಪಂಚಾಯತ್’ ಅನ್ನು ಹೊಸ ಸಂಸತ್ತಿನ ಕಟ್ಟಡಕ್ಕೆ ಕರೆದೊಯ್ಯುತ್ತಿದ್ದಾಗ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದ ನಂತರ ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಜಂತರ್ ಮಂತರ್‌ನಲ್ಲಿ ಕ್ರೀಡಾಪಟುಗಳಿಗೆ ಪ್ರತಿಭಟನೆ ನಡೆಸದಂತೆ ನಿರ್ಬಂಧ ಹೇರಲಾಯಿತು.
ಮಂಗಳವಾರ, ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರನ್ನೊಳಗೊಂಡ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸುವುದಾಗಿ ಘೋಷಿಸಿದರು. ಕುಸ್ತಿಪಟುಗಳು ಸಂಜೆ ಹರಿದ್ವಾರವನ್ನು ತಲುಪಿದರು ಆದರೆ ರೈತ ಮುಖಂಡ ನರೇಶ್ ಟಿಕಾಯತ್ ಮಧ್ಯಪ್ರವೇಶಿಸಿದ ನಂತರ, ಕುಸ್ತಿಪಟುಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದರು.


