ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಆರಂಭಿಕ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತರೂಢ ಎಎಪಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಕಳೆದ ಬಾರಿಯ ಶೂನ್ಯ ಸಾಧನೆಯಿಂದ ಕೊಂಚ ಮೇಲೆ ಎದ್ದಂತೆ ಕಾಣುತ್ತಿದೆ.
ಬೆಳಿಗ್ಗೆ 9.30ರ ಹೊತ್ತಿಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅಂಕಿ ಅಂಶಗಳ ಪ್ರಕಾರ, ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 48ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಮ್ಯಾಜಿಕ್ ನಂಬರ್ 37 ನ್ನು ದಾಟಿ ಮುನ್ನುಗ್ಗುತ್ತಿದೆ.
ಆಡಳಿತರೂಢ ಎಎಪಿ ಸುಮಾರು 21 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಹಿಂದಿನ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಈ ಬಾರಿ ಕೇವಲ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಘಟಾನುಘಟಿಗಳಿಗೆ ಹಿನ್ನಡೆ
ಮತ ಎಣಿಕೆಯ ಆರಂಭದಿಂದಲೂ ಎಎಪಿ ಮತ್ತು ಕಾಂಗ್ರೆಸ್‌ನ ಘಟಾನುಘಟಿ ಅಭ್ಯರ್ಥಿಗಳು ಹಿನ್ನಡೆ ಅನುಭವಿಸಿದ್ದಾರೆ. ನವದೆಹಲಿ ಕ್ಷೇತ್ರದಲ್ಲಿ ಎಎಪಿ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸತತ ಹಿನ್ನಡೆಯಲ್ಲಿದ್ದಾರೆ. ಎಣಿಕೆಯ ಆರಂಭದಿಂದಲೂ ಒಮ್ಮೆಯೂ ಅವರು ಮುನ್ನಡೆ ಸಾಧಿಸಿಲ್ಲ.
ಕಲ್ಕಾಜಿ ಕ್ಷೇತ್ರದಲ್ಲಿ ಹಾಲಿ ಸಿಎಂ, ಎಎಪಿ ನಾಯಕಿ ಅತಿಶಿ ಮರ್ಲೇನಾ ಅವರಿಗೂ ತೀವ್ರ ಹಿನ್ನಡೆಯಾಗಿದೆ. ಕಲ್ಕಾಜಿಯ ಕಾಂಗ್ರೆಸ್ ಅಭ್ಯರ್ಥಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರೂ ಹಿನ್ನಡೆ ಅನುಭವಿಸಿದ್ದಾರೆ.


