ಪದೇ ಪದೇ ರೈತ ವಿರೋಧಿ ಹೇಳಿಕೆಗಳನ್ನು ನೀಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ರೈತರು ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಪಂಜಾಬ್‌ನ ಕಿರಾತ್‌ಪುರ್‌ನಲ್ಲಿ ಸಂಭವಿಸಿದೆ.
ಸದಾ ಬಿಜೆಪಿ ಪರವಾಗಿ ವಾದಿಸುವ ಕಂಗನಾ ರಣಾವತ್‌ರವರು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದರು. ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ ನಂತರ ರೈತರನ್ನು ಖಲಿಸ್ತಾನಿಗಳು, ಭಯೋತ್ಪಾದಕರು, ಅವರನ್ನು ಕಾಲಡಿಯಲ್ಲಿ ಹೊಸಕಿ ಹಾಕಬೇಕೆಂಬ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಕುರಿತು ಅವರ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲಾಗಿದೆ.
ಇಂದು ಪಂಜಾಬ್‌ಗೆ ಅವರು ತೆರಳಿದ್ದ ವೇಳೆ ಘೇರಾವ್ ಹಾಕಿದ ರೈತರು ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ್ದಾರೆ. ಬಾವುಟಗಳನ್ನು ಪ್ರದರ್ಶಿಸಿ ಕಾರು ಮುಂದೆ ಹೋಗದಂತೆ ತಡೆದಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಂಗನಾ ನಾನು ಮಾಬ್‌ನಿಂದ ಸುತ್ತವರಿಯಲ್ಪಟ್ಟಿದ್ದೇನೆ. ಅವರು ನನ್ನನ್ನು ನಿಂದಿಸುತ್ತಿದ್ದಾರೆ, ಬೆದರಿಸುತ್ತಿದ್ದಾರೆ, ನನ್ನನ್ನು ಕೊಲ್ಲುತ್ತಾರೆ, ನನಗೆ ರಕ್ಷಣೆ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕರು ಸರ್ಕಾರದ ಕೈ ಹಿಂಡುತ್ತಿದ್ದಾರೆ. ಆದರೆ ನಾವು ಒಬ್ಬ ಮಹಿಳೆಯನ್ನು ಮರೆಯದಿರೋಣ. ಈ ಹಿಂದೆ ಆ ಒಬ್ಬ ಮಹಿಳೆ ಪ್ರಧಾನಿಯಾಗಿದ್ದಾಗ (ಇಂದಿರಾ ಗಾಂಧಿ) ತನ್ನ ಜೀವವನ್ನು ಲೆಕ್ಕಿಸದೆ ಇವರನ್ನು ಸೊಳ್ಳೆಗಳ ರೀತಿ ಹೊಸಕಿ ಹಾಕಿದ್ದರು. ಆ ಮಹಿಳೆ ದೇಶಕ್ಕೆ ಒಳ್ಳೆಯದು ಮಾಡದಿದ್ದರೂ ಸಹ ಇವರನ್ನು ತನ್ನ ಕಾಲಡಿಯಲ್ಲಿ ಹೊಸಕಿ ಹಾಕಿದ್ದರು ಮತ್ತು ದೇಶ ಇಬ್ಭಾಗವಾಗಲು ಬಿಡಲಿಲ್ಲ. ಈಗಲೂ ಆ ಮಹಿಳೆಯನ್ನು ಕಂಡರೆ ಇವರು ನಡುಗುತ್ತಾರೆ. ಇವರಿಗೆ ಅಂಥವರೆ ಬೇಕು” ಎಂದು ಕಂಗನಾ ರೈತರನ್ನು ಅವಮಾನಿಸಿ ನವೆಂಬರ್‌ನಲ್ಲಿ ಪೋಸ್ಟ್ ಹಾಕಿದ್ದರು.
‘1947 ರಲ್ಲಿ ಭಾರತಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆಯಾಗಿದೆ’ ಎಂಬ ಹೇಳಿಕೆ ನೀಡಿ ಕಂಗನಾ ತೀವ್ರ ಟೀಕೆಗೆ ಗುರಿಯಾಗಿದ್ದರು. ರೈತರ ವಿರುದ್ಧ ಈ ಹಿಂದೆಯೂ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶಗಳಿಗೆ ಪ್ರತಿಕ್ರಿಯೆಯಾಗಿ ಹಿಂಸಾಚಾರಕ್ಕೆ ಕರೆ ನೀಡುವ ಮತ್ತು ಅವಹೇಳನಕಾರಿ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಅವರು ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ಸಿಖ್ಖರ ಕುರಿತು ಅವಹೇಳನಕಾರಿ ಪೋಸ್ಟ್: ವಿಚಾರಣೆಗೆ ಹಾಜರಾಗುವಂತೆ ಕಂಗನಾಗೆ ದೆಹಲಿ ವಿಧಾನಸಭೆ ಪ್ಯಾನೆಲ್ ನೋಟೀಸ್


