Homeಮುಖಪುಟಬೇಡಿಕೆ ಕುಸಿತ - ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ - ಐ.ವಿ.ಗೌಲ್

ಬೇಡಿಕೆ ಕುಸಿತ – ಹಾಗೆಂದರೇನು? ’ಸುದ್ದಿಯೇನೇ, ಮನೋಲ್ಲಾಸಿನಿ’ – ಐ.ವಿ.ಗೌಲ್

- Advertisement -
- Advertisement -

ಮೊನ್ನೆ ಬಂದ ಮೂರು ಸಿನಿಮಾಗಳು ತಲಾ 120 ಕೋಟಿ ರೂಪಾಯಿ ಗಳಿಸಿವೆ. ಹೀಗಾಗಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಗೆ ಯಾವುದೇ ತೊಂದರೆ ಆಗಿಲ್ಲ.

ಯುವ ಜನರಿಗೆ ಹೊಸ ವಿನ್ಯಾಸದ ಬಟ್ಟೆಗಳು ಬೇಕಾಗಿವೆ ಆದ್ದರಿಂದ ಅವರು ಹೊಸ ಬಟ್ಟೆ ಖರೀದಿಸುತ್ತಿಲ್ಲ.
ಮಧ್ಯ ವಯಸ್ಕರು ಓಲಾ, ಊಬರ್‌ಗಳಲ್ಲಿ ಓಡಾಡುತ್ತಿರುವುದರಿಂದ ಕಾರು, ಬೈಕು, ಟ್ರಕ್ಕು, ಟ್ರ್ಯಾಕ್ಟರು ಮಾರಾಟವಾಗುತ್ತಿಲ್ಲ

ಜಿಎಸ್‍ಟಿ ಸರಿಯಿಲ್ಲ. ಅದರಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ತೆರಿಗೆ ಸಂಗ್ರಹ ಸರಿಯಾಗಬಹುದೆಂದು ಅಂದುಕೊಂಡಿದ್ದೆವು. ಆಗಲಿಲ್ಲ, ಸಾರಿ. ಆದರೆ ಏನು ಮಾಡುವುದು, ಅದು ದೇಶದ ಕಾನೂನು. ಪಾಲಿಸಲೇ ಬೇಕು.

ಇಂತಹ ಮುತ್ತಿನ ಹಾರದಂತಹ ಮಾತುಗಳು ನಮ್ಮ ಕಿವಿ ತುಂಬಿ ನಮಗೆ ಕರ್ಣಾನಂದವಾಗುತ್ತಿದೆ.
ಇವನ್ನು ಯಾರು ಯಾರಿಗೆ ಹೇಳಿದರು ಎನ್ನುವ ಪ್ರಶ್ನೆಗಳಿಗೆ ಪಾಸಿಂಗ್ ಮಾರ್ಕೂ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

ಒಟ್ಟಿನಲ್ಲಿ ಈಗ ಇಡೀ ದೇಶದ ತುಂಬ ಆರ್ಥಿಕ ಪರಿಸ್ಥಿತಿಯ ಸುದ್ದಿ. ಅರ್ಥದ ಸುದ್ದಿ ಹಾಗೂ ಅದರ ಅರ್ಥದ ಸುದ್ದಿ.
ಬರೀ ಅರ್ಥಾರ್ಥದ ಮಾತು.
ಯಾಕೆ?
ಹಿಗ್ಸ – ಬಾಸಾನ್ ಎಂಬ ಪರಮಾಣು ಭಾಗವನ್ನು, ದೇವ ಕಣ ಎಂದು ಕನ್ನಡ ಪತ್ರಿಕೆಗಳ ಭಾಷಾಂತರಕಾರರಿಂದ ಕರೆಯಲ್ಪಟ್ಟ ಅಣುವಿನ ತುಂಡಿನ ಬಗ್ಗೆ ಸಂಶೋಧಿಸಿದ ವಿಜ್ಞಾನಿ ಹಿಗ್ಸ ಅವರನ್ನು ಬ್ರಿಟಿಷ್ ಟಿವಿ ಚಾನಲ್ ಒಂದು ಮಾತಾಡಿಸಿತು.

ಈ ದೇವಕಣದ ಬಗ್ಗೆ ನೀವು ಸರಳ ಭಾಷೆಯಲ್ಲಿ 30 ಸೆಕೆಂಡುಗಳಲ್ಲಿ ಎಲ್ಲರೂ ತಿಳಿಯುವಂತೆ ಹೇಳಬಲ್ಲಿರಾ ಎಂದು ಸಂದರ್ಶಕ ಕೇಳಿದ.

`ಇಲ್ಲ. ಸಾಧ್ಯವಿಲ್ಲ` ಎಂದು ಅವರು ಹೇಳಿದರು. ಇಬ್ಬರೂ ನಕ್ಕರು.
ಈಗ ಭಾರತದ ಆರ್ಥಿಕ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಯನ್ನು ಸರಳವಾಗಿ, ಎಲ್ಲರಿಗೂ ತಿಳಿಯುಂತೆ, ಕೆಲವೇ ಶಬ್ದಗಳಲ್ಲಿ ತಿಳಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಆರ್ಥಿಕ ತಜ್ಞರು ಇಲ್ಲ, ಸಾಧ್ಯವೇ ಇಲ್ಲ ಅಂತ ಹೇಳಬಹುದೇನೋ. ಪ್ರಶ್ನೆ ಕೇಳಿದವರು, ಉತ್ತರ ಕೊಟ್ಟವರು, ಇಬ್ಬರೂ ನಗಲಾರದೇ ಮಾತು ಮುಗಿಸಬಹುದೇನೋ.

ನಮ್ಮ ವಾರ್ಷಿಕ ಬೆಳವಣಿಗೆಯ ದರ ಕಡಿಮೆ ಆಗಿರುವುದಕ್ಕೂ, ನಿರುದ್ಯೋಗ ಬೆಳೆಯುತ್ತಿರುವುದಕ್ಕೂ, ಸಾಲ ಹೆಚ್ಚಾಗಿ, ಉತ್ಪನ್ನ ಕಡಿಮೆಯಾಗಿ ಷೇರು ಮಾರುಕಟ್ಟೆ ನಷ್ಟ ಅನುಭವಿಸುತ್ತಿರುವುದಕ್ಕೂ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲು ನಮ್ಮ ರಫ್ತು ಭಾಗೀದಾರಿಕೆ ಕಡಿಮೆ ಆಗುತ್ತಿರುವುದಕ್ಕೂ ಅನೇಕ ಕಾರಣಗಳಿರಬಹುದು.
ತಿಳಿದವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿರಬಹುದು. ತಮ್ಮ ವಾದವನ್ನು ಬೆಂಬಲಿಸಲು ಅವರು ತಮ್ಮದೇ ಆದ ಸಿದ್ಧಾಂತಗಳನ್ನು ನೆಚ್ಚಿಕೊಂಡಿರಬಹುದು.

ಅಂತಹ ಅನೇಕ ವಾದಗಳಲ್ಲಿ ಒಂದು `ಡಿಮಾಂಡ್ ಸ್ಲಂಪ್` ಅಥವಾ `ಬೇಡಿಕೆ ಕುಸಿತದ` ಸಿದ್ಧಾಂತ.
ಅದು ಸರಿಯೋ ತಪ್ಪೋ ಎನ್ನುವ ಮಾತಿಗೆ ಹೋಗದೇ ಇಲ್ಲಿ ನೋಡೋಣ.

ಇದರ ಸರಳಾರ್ಥವೆಂದರೆ ಜನರ ದುಡ್ಡು ಮಾರುಕಟ್ಟೆಯಲ್ಲಿ ಖರ್ಚಾಗುತ್ತಿಲ್ಲ. ಜನ ಖರೀದಿ ಮಾಡುತ್ತಿಲ್ಲ. ಇರಲಾರದವರಿಗೆ ದುಡ್ಡು ಹುಟ್ಟುತ್ತಿಲ್ಲ, ಇದ್ದವರಿಗೆ ಮುಂದೇನಾಗಬಹುದೋ ಎಂಬ ಆತಂಕದಿಂದ ಸುಮ್ಮನಿದ್ದಾರೆ. ಒಂದರಿಂದ ಶುರುವಾದ ಸೋಂಕು ಇನ್ನೊಂದಕ್ಕೆ ಹರಡುವಂತೆ, ಒಂದು ಕ್ಷೇತ್ರದ ಹಿಂಜರಿತ ಇನ್ನೊಂದು ಕ್ಷೇತ್ರಕ್ಕೆ ಹರಡಿ ಇಡೀ ದೇಶವನ್ನು ಆವರಿಸಿಕೊಂಡಿದೆ ಎನ್ನುವರಿದ್ದಾರೆ.
ಅವರ ಪ್ರಕಾರ ಇದರ ಮೂಲ ಕಾರಣಗಳು ಇವು.

ಮೊದಲನೇಯದಾಗಿ ದುಡಿಯುವ ಜನರ ಕೈಗೆ ಕೆಲಸ ಕೊಟ್ಟು ಸಂಪತ್ತು ಸೃಷ್ಟಿಸುವುದನ್ನು ಬಿಟ್ಟು ಬಂಡವಾಳ ಮೂಲಗಳು ನೌಕರರ ಸಂಖ್ಯೆಯನ್ನು ಕಮ್ಮಿ ಮಾಡಿ ಹೂಡಿಕೆದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಏಕೈಕ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಸೃಷ್ಟಿಸಿದ್ದು.

ವಿಶ್ವವನ್ನೇ ಒಂದು ಮಾರುಕಟ್ಟೆ ಮಾಡುವ ಉದ್ದೇಶದಿಂದ ಸೃಜಿಸಲಾದ ವಿಶ್ವ ಬ್ಯಾಂಕು, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಪ್ರದೇಶವಾರು ಮಾರುಕಟ್ಟೆ ಒಪ್ಪಂದಗಳು, ಇವೆಲ್ಲ ಸೇರಿ ಯಾವುದೇ ದೇಶಕ್ಕೆ ಆರ್ಥಿಕ ಸ್ವಾತಂತ್ರ್ಯ ಇಲ್ಲದೇ ಹೋದದ್ದು. ಈ ಗುಂಪುಗಳ ಕೆಲವು ಸದಸ್ಯರಾಷ್ಟ್ರಗಳ ಬಲಹೀನತೆಗಳು ಎಲ್ಲ ಸದಸ್ಯರನ್ನೂ, ಸದಸ್ಯರಲ್ಲದವರನ್ನೂ ಕಾಡಲು ಆರಂಭಿಸಿದ್ದು.

ಬ್ಯಾಂಕಿಂಗ್, ವಿಮೆ, ಗೃಹೋಪಯೋಗಿ ವಸ್ತುಗಳ ಉತ್ಪಾದನೆ ಇತ್ಯಾದಿ ಕೆಲ ಕ್ಷೇತ್ರಗಳ ಸಂಸ್ಥೆಗಳ ಅತಿ ಮೌಲ್ಯೀಕರಣ ಓವರ್ ವ್ಯಾಲುಏಷನ್. ಇವುಗಳಿಗೆ ತಾವು ಅರಗಿಸಿಕೊಳ್ಳಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ಬಂಡವಾಳ ಹರಿದು ಬಂದು, ನಿರೀಕ್ಷಿತ ಲಾಭ ಅಥವಾ ಉತ್ಪನ್ನ ಬರದೇ ಹೋದದ್ದು
ಕೊಳ್ಳುಬಾಕುತನ ಅತಿಯಾಗಿ ಜನ ಖರೀದಿಸಲು ಸಾಧ್ಯವಿದ್ದಕ್ಕಿಂತ ಹೆಚ್ಚು ಉತ್ಪಾದನೆ ಆಗಿ ಸಾಮಾನುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗದೇ ಉಳಿದಿರುವುದು
ಇತ್ಯಾದಿ

ಇದರ ಉಪಾಯಗಳೇನು?
ಅರ್ಥಶಾಸ್ತ್ರಜ್ಞೆ ಜಯಂತಿ ಘೋಷ್, ಶ್ರೀನಿವಾಸ್ ರಾಘವನ್ ಮತ್ತು ಇತರರು ಮೊನ್ನೆ ಒಂದು ವಿಚಾರ ಸಂಕಿರಣದಲ್ಲಿ ಹೇಳಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕ ಕ್ಷೇತ್ರದಲ್ಲಿ ಖರ್ಚನ್ನು ಹೆಚ್ಚಿಸಿ, ಸರಕಾರಿ ಉದ್ದಿಮೆಗಳನ್ನು ಚುರುಕಾಗಿಸಿ, ಉದ್ಯೋಗ ಖಾತ್ರಿ ಯಂತಹ ಯೋಜನೆಗಳಿಂದ ಹಳ್ಳಿಗಳ ಜನರ ಕೈಯಲ್ಲಿ ಹೆಚ್ಚಿನ ಹಣ ಹರಿಯುವಂತೆ ಮಾಡುವುದು, ಒಂದು ಉಪಾಯ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಸೃಷ್ಟಿ ಮುಂತಾದ ಕ್ಷೇತ್ರಗಳಲ್ಲಿ ಸರಕಾರಿ ಖರ್ಚನ್ನು ಹೆಚ್ಚಿಸುವುದು ಇನ್ನೊಂದು ಉಪಾಯ
ಭಾರತೀಯ ಅರ್ಥವ್ಯವಸ್ಥೆ ತೇಜಿ ಇರುವ ಚುರುಕಾದ, ಲಾಭ ಗಳಿಸಿಕೊಳ್ಳಬಲ್ಲಂತಹ ವ್ಯವಸ್ಥೆ ಎಂದು ಹೂಡಿಕೆದಾರರಿರಗೆ ಮನವರಿಕೆ ಮಾಡಿಕೊಡುವಂತಹ ಆತ್ಮ ವಿಶ್ವಾಸ ಹೆಚ್ಚಿಸುವ ಕ್ರಮ ಕೈಗೊಳ್ಳುವುದು ಇತ್ಯಾದಿ.

ಈ ನೆಲದ ಅರ್ಥಶಾಸ್ತ್ರಜ್ಞ ಡಾ. ಡಿ. ಎಂ ನಂಜುಂಡಪ್ಪ ನವರ ಮಾತಿನಂತೆ ಭಾರತದ ಎಲ್ಲಾ ಸಮಸ್ಯೆಗಳಿಗೆ ಇರುವ ಉಪಾಯಗಳು ಸರಳ. ಜನರ ದುಡಿಮೆಗೆ ತಕ್ಕ ಪ್ರತಿಫಲ ದೊರಕಬೇಕು, ಅವರು ಹೆಚ್ಚಿನ ಹಣ ಉಳಿಸಬೇಕು, ಹಾಗೂ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಕುಗ್ಗದಂತೆ ನೋಡುವುದು ಎಂಬ ಅವರ ಮಾತು ನಮ್ಮನ್ನು ಉಳಿಸೀತು.

ವಿಶ್ವ ಕಂಡ ಅತ್ಯಂತ ದೊಡ್ಡ ಆರ್ಥಿಕ ಹಿಂಜರಿತ ವೆನ್ನಲಾಗುವ ಗ್ರೇಟ್ ಡಿಪ್ರೆಷನ್ ಅಮೇರಿಕೆ ಯನ್ನು 1930ರ ದಶಕದಲ್ಲಿ ಕಾಡಿತು. ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡ ದೇಶ ಇತರರ ಕಣ್ಣಲ್ಲಿ ಸಣ್ಣವರಾಗಬೇಕಾಗಿ ಬಂತು.
ಅದನ್ನು ನಿಭಾಯಿಸಿ ಅಮೇರಿಕೆಯ ಆರ್ಥಿಕತೆಯನ್ನೂ ಹಾಗೂ ಅದರೊಟ್ಟಿಗೆ ವಿಶ್ವದ ಆರ್ಥಿಕತೆಯನ್ನು ಸಂಭಾಳಿಸಿದ ನಾಯಕ ಎಂದು ಅಮೇರಿಕೆಯ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸವೆಲ್ಟ್ ನನ್ನು ಗುರುತಿಸಲಾಗುತ್ತದೆ.
ಅವನ ಒಂದು ಮಾತು ಇಲ್ಲಿ ನೆನಪಾಗುತ್ತದೆ.

ರೂಸವೆಲ್ಟ್ ಅವರು ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡುತ್ತಾ ಅಮೇರಿಕನ್ನರು ಖರೀದಿ ಮಾಡಬೇಕು. ಅವರ ಖರೀದಿ ಯೊಂದೇ ನಮ್ಮನ್ನು ಉಳಿಸಲು ಸಾಧ್ಯ ಎಂದರು. ಆಗ ಲಿಂಡಾ ಜೇಮ್ಸ್ ಎಂಬ ಪತ್ರಕರ್ತರೊಬ್ಬರು ಏನನ್ನು ಖರೀದಿಸಬೇಕು ಎಂದು ಕೇಳಿದರಂತೆ. `ಏನಾದರೂ ಆಗಬಹುದು` ಅಂತ ಅಧ್ಯಕ್ಷರು ಉತ್ತರಿಸಿದರಂತೆ. ಮರುದಿನ ಪತ್ರಿಕೆಗಳಲ್ಲಿ `ಬೈ ಎನಿಥಿಂಗ್. ದ್ಯಾಟ್ ಈಸ್ ದ ನ್ಯೂ ಡೀಲ್’ (`ಏನನ್ನಾದರೂ ಖರೀದಿಸಿ. ಅದೊಂದೇ ಉಪಾಯ`) ಎಂಬ ಶೀರ್ಷಿಕೆ ರಾರಾಜಿಸಿತ್ತಂತೆ.

ಅವರ ಈ ಮಾತಿನಿಂದಲೇ ಕೊಳ್ಳುಬಾಕತನದ ಪರಿ ಆರಂಭವಾಯಿತು ಎನ್ನುವವರೂ ಇದ್ದಾರೆ.

ಇಂದಿನ ಭಾರತದ ವಿಷಯಕ್ಕೆ ಬಂದರೆ ಏನಾದರೂ ಆಗಿ ಮಾರುಕಟ್ಟೆ ಚೇತರಿಸಿಕೊಂಡರೆ ಸಾಕು. ಏನಾದರೂ ಆಗಲಿ ಅನ್ನುವವರಿದ್ದಾರೆ. ಅಷ್ಟೊಂದು ಪರಾಕಾಷ್ಟೆ ಬೇಡ.

ಚೇತರಿಕೆ ಆಗಲಿ, ಅದರೊಂದಿಗೆ ಸ್ವಲ್ಪ ಕೂಳುಬಾಕತನ ಕಮ್ಮಿಯಾಗಲಿ ಅಂತಲೂ ಅನ್ನಿಸುತ್ತದೆ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...