Homeಅಂಕಣಗಳುಭಾರತದ ಆರ್‌ಸಿಇಪಿ ಸಂದಿಗ್ಧತೆ: ದಾರಿ ಇದೆಯೇ?

ಭಾರತದ ಆರ್‌ಸಿಇಪಿ ಸಂದಿಗ್ಧತೆ: ದಾರಿ ಇದೆಯೇ?

- Advertisement -
- Advertisement -

ಪ್ರಸ್ತುತ 16 ಏಷ್ಯಾ-ಪೆಸಿಫಿಕ್ ರಾಷ್ಟ್ರಗಳ ನಡುವೆ ಮಾತುಕತೆಯಲ್ಲಿರುವ ‘ಆರ್‌.ಸಿ.ಇ.ಪಿ – ಬೃಹತ್ ಪ್ರಾದೇಶಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ’ ಒಪ್ಪಿಗೆ ಸೂಚಿಸುವಲ್ಲಿ ಭಾರತದ ಮೀನಾಮೇಷದ ನಡೆಯು, ತನ್ನ ವ್ಯಾಪಾರ ನೀತಿಯಲ್ಲಿ ಮಾತ್ರವಲ್ಲದೆ ದೇಶೀಯ ಆರ್ಥಿಕತೆಯಲ್ಲೂ ಸಂಭವಿಸುತ್ತಿರುವ ಆಳವಾದ ಅಸ್ವಸ್ಥತೆಯನ್ನು ಪ್ರತಿಬಿಂಬಿಸುತ್ತದೆ.

ಆಡಳಿತಾರೂಡ  ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌.ಡಿ.ಎ) ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ದೃಢವಾದ ಹಿಡಿತ ಸಾಧಿಸುವ ಯಾವುದೇ ಸೂಚನೆಯಿಲ್ಲದೆ ಭಾರತೀಯ ಆರ್ಥಿಕತೆಯು ಅನಿಶ್ಚಿತ ಮತ್ತು ಅಸ್ಥಿರ ಸ್ಥಿತಿಯಲ್ಲಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB), ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ನಂತಹ ಸಂಸ್ಥೆಗಳು 2019-20ರ ಬೆಳವಣಿಗೆಯ ಮುನ್ಸೂಚನೆಯನ್ನು 5.9% ರಿಂದ 6.1 ರವರೆಗೆ ತೀವ್ರವಾಗಿ ಪರಿಷ್ಕರಿಸಿದೆ. ಇಳಿಮುಖವಾಗಿರುವ  ಬೆಳವಣಿಗೆಯ ಸೂಚ್ಯಂಕ ಮತ್ತು ನಿಶ್ಚಲಗೊಳ್ಳುತ್ತಿರುವ  ವ್ಯಾಪಾರವೂ ಜಾಗತಿಕ ಆರ್ಥಿಕತೆಯನ್ನು ಹೀನಾಯ ಸ್ಥಿತಿಗೆ ದೂಡಿವೆ. ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ಇತ್ತೀಚೆಗೆ 2019-20ರಲ್ಲಿ ವ್ಯಾಪಾರದ ಬೆಳವಣಿಗೆಯ ಮುನ್ಸೂಚನೆಯನ್ನು 2.6% ರಿಂದ 1.2% ವರೆಗೆ ಅರ್ಧಕ್ಕಿಂತ ಹೆಚ್ಚು ಇಳಿಸಿದೆ.

ಆರ್‌.ಸಿ.ಇ.ಪಿಯು ಇಲ್ಲಿಯವರೆಗೂ ಭಾರತ ಮಾತುಕತೆ ನಡೆಸಿದ ಅತ್ಯಂತ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದವಾಗಿದೆ (FTA). ಆಸಿಯಾನ್ (ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್) ಒಕ್ಕೂಟದ 10 ಸದಸ್ಯರನ್ನು ಸೇರಿದಂತೆ,  ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಭಾರತವನ್ನು ಆರ್‌.ಸಿ.ಇ.ಪಿ ಒಳಗೊಂಡಿದೆ. ಇತ್ತೀಚಿನ ಮಾಧ್ಯಮ ವರದಿಗಳು ಜಾಗತಿಕ ಮಟ್ಟದಲ್ಲಿ ಸಂಭವಿಸುತ್ತಿರುವ ಆರ್ಥಿಕ ಪಲ್ಲಟಗಳು ಮತ್ತು ನಿಧಾನಗತಿಯ ದೇಶೀಯ ಆರ್ಥಿಕತೆಯು ಭಾರತವನ್ನು ಇಲ್ಲಿಯವರೆಗೂ ಆರ್‌.ಸಿ.ಇ.ಪಿ ಒಪ್ಪಂದಕ್ಕೆ ಸಹಿ ಹಾಕದಂತೆ ತಡೆಹಿಡಿಯುವಲ್ಲಿ ಬಹುಮುಖ್ಯ  ಕಾರಣಗಳಾಗಿವೆ ಎಂಬುದನ್ನು ಸೂಚಿಸುತ್ತದೆ.

ಇದಾಗಲೇ, ರೈತ ಸಂಘಟನೆಗಳು, ಕಾರ್ಮಿಕ ಸಂಘಗಳು, ನಾಗರಿಕ ಸಮಾಜ ಗುಂಪುಗಳು ಮತ್ತು, ಹೈನೋದ್ಯಮ ಮತ್ತು ವಾಹನ ಉದ್ಯಮ ಒಳಗೊಂಡಂತೆ ಇತರೆ ದೇಶೀಯ ಕೈಗಾರಿಕಾ ಸಂಘಗಳನ್ನು ಪ್ರತಿನಿಧಿಸುವ ಗುಂಪುಗಳು ಆರ್‌.ಸಿ.ಇ.ಪಿ ನಿಬಂಧನೆಗಳ ಅಪಾಯಗಳ  ಬಗ್ಗೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಹಾಗು ಸಾರಾಸಗಟಾಗಿ ತಿರಸ್ಕರಿಸಲೇಬೇಕು ಎಂದು ಎಲ್ಲರೂ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ತಲೆದೋರಿರುವ  ಆರ್ಥಿಕ ಕುಸಿತ ಮತ್ತು ಹಲವಾರು ಕ್ಷೇತ್ರಗಳಲ್ಲಿನ ಉದ್ಯೋಗ ನಷ್ಟಗಳು ಈ ವ್ಯಾಪಾರ ಏಕೀಕರಣ ಮಾಡುವ ಒಪ್ಪಂದಗಳನ್ನು ನಿಧಾನವಾಗಿ ಒಪ್ಪಿಕೊಳ್ಳಲು ಮುಖ್ಯ ಕಾರಣಗಳಾಗಿದ್ದರೂ, ಆರ್‌.ಸಿ.ಇ.ಪಿ ಮತ್ತು ಮುಕ್ತ ವ್ಯಾಪಾರದ ಹಾದಿಯನ್ನು ತ್ಯಜಿಸಲು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇನ್ನೂ ಹೆಚ್ಚಿನ ಮೂಲಭೂತ ಕಾರಣಗಳಿವೆ.

ಇತ್ತೀಚಿನ ಹೊಸ ತಲೆಮಾರಿನ ಎಫ್‌.ಟಿ.ಎ ಗಳಂತೆ, ಆರ್‌.ಸಿ.ಇ.ಪಿ ನಿಯಮಗಳು ರಾಷ್ಟ್ರೀಯ ಗಡಿಗಳನ್ನು ಮೀರೀ ಮತ್ತು ಕೃಷಿಯಿಂದ ಹಿಡಿದು ಉತ್ಪಾದನೆ, ಬೌದ್ಧಿಕ ಆಸ್ತಿ, ಹೂಡಿಕೆ, ಮತ್ತು ಎಲೆಕ್ಟ್ರಾನಿಕ್ ಉದ್ದಿಮೆ ಕ್ಷೇತ್ರಗಳಲ್ಲಿನ  ನಿಯಮಗಳ ಆಳವಾದ ಏಕೀಕರಣ ಮತ್ತು ದಾರಿ ಸುಗಮ ಮಾಡಿ ಕೊಡುವ ಗುರಿಯಾಗಿರಿಸಿಕೊಳ್ಳುತ್ತವೆ. ಭಾರತಕ್ಕೆ ಸಂಬಂಧಿಸಿದಂತೆ ಕೃಷಿಯಂತಹ ಕ್ಷೇತ್ರಗಳಲ್ಲಿ ಇದು ಬಹಳ ಸಮಸ್ಯಾತ್ಮಕವಾಗಿದೆ, ಇಂದು ಕೃಷಿ ಹಿಂದೆಂದು ಕಾಣದ ಭೀಕರ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದರೂ ಸಹ ದೇಶದ ಅರ್ಧದಷ್ಟು ಜನಸಂಖ್ಯೆಗೆ  ಉದ್ಯೋಗವನ್ನು ಒದಗಿಸುತ್ತಿದೆ. ಕೃಷಿ ಆಮದಿನ ಮೇಲಿನ ಸುಂಕವನ್ನು ಸಮನ್ವಯಗೊಳಿಸುವುದು ಮತ್ತು ಅಂತಿಮವಾಗಿ ನಿರ್ಮೂಲನೆ ಮಾಡುವುದರಿಂದ ಸಣ್ಣ ಮತ್ತು ಅತಿಸಣ್ಣ ರೈತರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ( ದೇಶದ ಒಟ್ಟು ಕೃಷಿ ಹಿಡುವಳಿಗಳಲ್ಲಿ 90% ಕ್ಕಿಂತಲೂ ಹೆಚ್ಚು ಭಾಗವನ್ನು ಎರಡು ಹೆಕ್ಟೇರ್‌ಗಿಂತ ಕಡಿಮೆ ಇರುವ ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿದ್ದಾರೆ), ಮತ್ತು ಈಗಾಗಲೇ ತಲೆದೋರಿರುವ ಕೃಷಿ ಉತ್ಪನ್ನಗಳ ಬೆಲೆಗಳ ಕುಸಿತ ಅವರನ್ನು ಕಂಗಾಲಾಗಿಸಿದೆ. ಇದಾಗಲೇ ಆಸಿಯಾನ್ ಬಣದೊಂದಿಗೆ ಇರುವ ಎಫ್‌.ಟಿ.ಎಗಳ ಮೂಲಕ ಅಗ್ಗದ ಕೃಷಿಯುತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ಈ ಬೆಲೆಗಳ ಕುಸಿತಕ್ಕೆ ಒಂದು ಕಾರಣವಾಗಿದೆ.

ಹಲವಾರು ರೈತ ಸಂಘಟನೆಗಳು ಮತ್ತು ದಕ್ಷಿಣ ಭಾರತದ ಪ್ರಮುಖ ರೈತ ಸಂಘಟನೆ ‘ದಕ್ಷಿಣ ಭಾರತದ ರೈತ ಚಳವಳಿಗಳ ಸಮನ್ವಯ ಸಮಿತಿ’ ಈಗಾಗಲೇ 2010 ರ ಆಸಿಯಾನ್-ಇಂಡಿಯಾ ಎಫ್‌.ಟಿ.ಎ ನಂತರ ಮೆಣಸು, ಏಲಕ್ಕಿ, ರಬ್ಬರ್ ಮತ್ತು ತೆಂಗಿನಕಾಯಿ ಉತ್ಪನ್ನಗಳ ಅಗ್ಗದ ಆಮದು ಹೆಚ್ಚಿನ ಮಟ್ಟದಲ್ಲಿದೆ ಎಂದು ಎತ್ತಿ ತೋರಿಸಿದೆ. ಮತ್ತು ಆರ್‌.ಸಿ.ಇ.ಪಿ ಈ ಆಮದುಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

ವ್ಯಾಪಾರ ಅರ್ಥಶಾಸ್ತ್ರಜ್ಞ ಬಿಸ್ವಾಜಿತ್ ಧಾರ್ ಅವರ ಇತ್ತೀಚಿನ ಪ್ರಬಂಧವು, ವಾಣಿಜ್ಯ ಸಚಿವಾಲಯದ ವಾಣಿಜ್ಯ ಗುಪ್ತಚರ ಮತ್ತು ಅಂಕಿಅಂಶಗಳ ನಿರ್ದೇಶನಾಲಯದ (ಡಿ.ಜಿ.ಸಿ.ಐ.ಎಸ್) ವ್ಯಾಪಾರ ದತ್ತಾಂಶವನ್ನು ವಿಶ್ಲೇಷಿಸಿ  ಈ ಕಳವಳಗಳನ್ನು ದೃಡೀಕರಿಸುತ್ತದೆ. ಆರ್‌.ಸಿ.ಇ.ಪಿ ಭಾಗವಹಿಸುವ ಆರ್ಥಿಕತೆಗಳಾದ ಆಸಿಯಾನ್, ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ಭಾರತ ಎಫ್‌ಟಿಎಗಳಿಗೆ ಸಹಿ ಹಾಕಿದ ನಂತರ ಆಮದು ಸ್ಥಿರವಾಗಿ ಹೆಚ್ಚಾಗಿದೆ ಎಂದು ಧಾರ್ ಅವರ ಅಧ್ಯಯನ ಹೇಳುತ್ತದೆ. 2010-2017ರಲ್ಲಿ,  ಆಸಿಯಾನ್‌ ದೇಶಗಳಿಂದ ಬಂದ ಆಮದುಗಳಲ್ಲಿ 130% ಮತ್ತು,  ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಬಂದ ಆಮದುಗಳಲ್ಲಿ 50-60% ಹೆಚ್ಚಳವಾಗಿದೆ ಎಂದು ತೋರಿಸುತ್ತದೆ.

ಇನ್ನೊಂದು ಕಡೆ ಈ ಅವಧಿಯಲ್ಲಿ ಭಾರತೀಯ ರಫ್ತು ಸ್ವಲ್ಪ ಹೆಚ್ಚಾಗಿದೆ ಅಥವಾ ಸಂಪೂರ್ಣ ಕುಸಿತವನ್ನು ಕಂಡಿದೆ.

ಉತ್ಪಾದನಾ ಕ್ಷೇತ್ರಗಳಲ್ಲಿಯೂ ಕೂಡ ಆಮದುಗಳು ಗಣನೀಯವಾಗಿ ಏರಿಕೆಯಾಗಿರುವುದನ್ನ ಗಮನಿಸಬಹುದು. ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಸಚಿವಾಲಯಕ್ಕೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ, 10 ಕೇಂದ್ರ ಕಾರ್ಮಿಕ ಸಂಘಗಳು, ಉದ್ಯೋಗ-ತೀವ್ರ ವಲಯಗಳಾದ ಉಡುಪುಗಳು, ಚರ್ಮ, ರತ್ನಗಳು ಮತ್ತು ಆಭರಣಗಳ ಉದ್ದಿಮೆಗಳು ಈಗಾಗಲೇ ಆಮದಿನ ಹೆಚ್ಚಳದಿಂದ  ಪ್ರಭಾವಿತಗೊಂಡು ಉತ್ಪಾದನೆಯಲ್ಲಿ ಕುಸಿತ ಕಂಡಿವೆ ಎಂದು ಎತ್ತಿ ತೋರಿಸಿದೆ. ಇವೆಲ್ಲವೂ ಆರ್‌.ಸಿ.ಇ.ಪಿ ದೇಶಗಳೊಂದಿಗೆ  ೨೦೧೮-೧೯ರ ಸಾಲಿನ ಬೃಹತ್ ವ್ಯಾಪಾರ ಕೊರತೆಯನ್ನು 112 ಬಿಲಿಯನ್ನಷ್ಟು ಹೆಚ್ಚಿಸುತ್ತವೆ, ಇದು ಭಾರತದ ಒಟ್ಟಾರೆ ವ್ಯಾಪಾರ ಕೊರತೆಯ 61% ರಷ್ಟಿದೆ. ಪ್ರಸ್ತುತ ಚೀನಾದೊಂದಿಗೆ ಯಾವುದೇ ಮುಕ್ತ ವ್ಯಾಪಾರ ಒಪ್ಪಂದ ಇಲ್ಲದಿದ್ದರೂ ೨೦೧೮-೧೯ನೇ ಸಾಲಿನ  ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ 54 ಬಿಲಿಯನ್ನಷ್ಟಿದೆ.

ಆರ್‌.ಸಿ.ಇ.ಪಿ ಅಡಿಯಲ್ಲಿ ಇ-ಕಾಮರ್ಸ್‌ನ ನಿಯಮಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ವಿವಾದ ತಲೆದೋರಿದೆ.  ಅದರ ಇ-ಕಾಮರ್ಸ್ ಅಧ್ಯಾಯದ ಸೋರಿಕೆಯಾದ ಪಠ್ಯವನ್ನು ವಿಶ್ಲೇಷಿಸಿದಾಗ ಜಪಾನ್ನಂತ ದೇಶ  ಟ್ರಾನ್ಸ್-ಪೆಸಿಫಿಕ್ ಪಾಲುದಾರಿಕೆ (ಟಿ.ಪಿ.ಪಿ) ಗಾಗಿ ಮಾತುಕತೆ ವೇಳೆ ನಂತರದ ಬೇಡಿಕೆಗಳ ಭಾಗವಾಗಿದ್ದ ಯುಎಸ್ ಇ-ಕಾಮರ್ಸ್ ಮಾದರಿಯನ್ನು ಅಳವಡಿಸಿಕೊಳ್ಳಲು ಒತ್ತಾಯಿಸುತ್ತಿದೆ ಎಂದು ತೋರಿಸಿದೆ.  ಡಿಜಿಟಲ್ 2 ಡಜನ್(Digital 2 Dozen) ಎಂದು ಕರೆಯಲ್ಪಡುವ ಇವುಗಳಲ್ಲಿ ಉಚಿತ ಡೇಟಾ ಹರಿವುಗಳ ಮೇಲೆ ಕಟ್ಟುಪಾಡುಗಳನ್ನು ವಿಧಿಸಲಾಗುತ್ತದೆ, ಕಸ್ಟಮ್ಸ್ ಸುಂಕಗಳಿಲ್ಲದ, ದತ್ತಾಂಶ ಸ್ಥಳೀಕರಣವಿಲ್ಲದ, ತಂತ್ರಜ್ಞಾನ ವರ್ಗಾವಣೆಯ ಮೇಲೆ ಯಾವುದೇ ಕಟ್ಟುಪಾಡುಗಳಿಲ್ಲದ ಮತ್ತು ಡಿಜಿಟಲ್ ತಂತ್ರಜ್ಞಾನಗಳಿಗೆ ಅನ್ವಯಿಸುವಂಥ ಬಲವಾದ ಪೇಟೆಂಟ್‌ಗಳು ಸೇರಿವೆ – ಇವೆಲ್ಲವೂ ಅಂತರ್ಜಾಲ ಆರ್ಥಿಕತೆಯ ಮೇಲೆ ಪ್ರಸ್ತುತ ಯುಎಸ್ ಪ್ರಾಬಲ್ಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.

ವಿಶ್ವ ವ್ಯಾಪಾರ ಸಂಸ್ಥೆ (WTO) ಯಲ್ಲಿ, ಭಾರತ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಉದಯೋನ್ಮುಖ ಡಿಜಿಟಲ್ ಆರ್ಥಿಕತೆಯಲ್ಲಿ ಇಂತಹ ನಿಯಮಗಳನ್ನು ಸೇರಿಸಿದರೆ, ತಮ್ಮನ್ನು ಕೆಲವು ಮುಂದುವರಿದ ದೇಶಗಳ ಡಿಜಿಟಲ್ ವಸಾಹತುಶಾಹಿಯ ತೆಕ್ಕೆಯಲ್ಲಿ ಸಿಲುಕಿಸುತ್ತವೆ ಎನ್ನುವ ಬಗ್ಗೆ ಈಗಾಗಲೇ ಸಂಶಯ ವ್ಯಕ್ತಪಡಿಸಿವೆ.

ಬೌದ್ಧಿಕ ಆಸ್ತಿ ಹಕ್ಕುಗಳ (IPR), ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧಿತ ಅಂಶಗಳ ಒಪ್ಪಂದದ (TRIPS) ಅಡಿಯಲ್ಲಿ ಭಾರತವು ತನ್ನ ಡಬ್ಲ್ಯು.ಟಿ.ಒ ಕಟ್ಟುಪಾಡುಗಳನ್ನು ಮೀರಿದ ನಿಬಂಧನೆಗಳಿಗೆ ಬದ್ಧವಾಗಬೇಕೆಂದು ಜಪಾನ್ ಒತ್ತಾಯಿಸುತ್ತಿದೆ. ಇವುಗಳಲ್ಲಿ ‘ಡೇಟಾ ಎಕ್ಸ್‌ಕ್ಲೂಸಿವಿಟಿ’ ಮತ್ತು ‘ಪೇಟೆಂಟ್ ಟರ್ಮ್ ಎಕ್ಸ್ಟೆನ್ಶನ್ಸ್’ ಮತ್ತು ಪೇಟೆಂಟ್‌ಗಳ ಅನ್ವಯಿಸುವಿಕೆ ಮೇಲೆ ಹೆಚ್ಚು ಕಠಿಣವಾದ  ಬೇಡಿಕೆಗಳು ಸೇರಿವೆ. ದತ್ತಾಂಶ ಪ್ರತ್ಯೇಕತೆಯು, ಒಂದೇ ರೀತಿಯ ದತ್ತಾಂಶವನ್ನು ಹೊಂದಿರುವ ಔಷಧಿಗಳನ್ನು ನಿಷೇಧಿಸುವ ಮೂಲಕ, ಮಾರುಕಟ್ಟೆಯಲ್ಲಿ ಜೆನೆರಿಕ್ ಔಷಧಿಗಳ ಪ್ರವೇಶವನ್ನು ವಿಳಂಬಗೊಳಿಸುತ್ತದೆ, ಪೇಟೆಂಟ್ ಅವಧಿಯ ವಿಸ್ತರಣೆಗಳಿಂದ ದೊಡ್ಡ ಔಷಧೀಯ ಸಂಸ್ಥೆಗಳಿಗೆ ಪ್ರಸಕ್ತ 20 ವರ್ಷಗಳ ಅವಧಿಗಿಂತ ಹೆಚ್ಚಿನ ಸಮಯ ನೀಡಿ ಏಕಸ್ವಾಮ್ಯದ ಹಕ್ಕುಗಳನ್ನು ಒದಗಿಸುತ್ತದೆ. ಈ ಎರಡೂ ಆರ್‌ಸಿಇಪಿ ಬೇಡಿಕೆಗಳಿಗೆ ಮಣಿಯುವುದರಿಂದ ಭಾರತವು ತನ್ನ ಪ್ರಸ್ತುತ ಶಾಸನಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ, ಇದರಿಂದಾಗಿ ಔಷಧಿಗಳು ಕೈಗೆಟುಕುವ ಬೆಲೆಯಲ್ಲಿ ಸಿಗದಂತೆ ಮಾಡುತ್ತವೆ.

ಭಾರತ, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌ನಂತಹ ದೇಶಗಳ ಮೇಲೆ UPOV (ಅಂತರರಾಷ್ಟ್ರೀಯ ಸಸ್ಯತಳಿ ಸಂರಕ್ಷಣಾ ಸಭೆಯ ದಾಖಲೆ, UPOV- Union for the Protection of New Plant Varieties Convention)ಗೆ  ಸಹಿ ಹಾಕಬೇಕೆಂಬ ಹಾಗೂ ಅದಕ್ಕೆ ಬದ್ಧವಾಗಿರಬೇಕೆಂಬ ಒತ್ತಡ ಏರುತ್ತಿವೆ.ಇದರಿಂದ ಭಾರತದ ರೈತರಿಗೆ ತೀವ್ರ ಅಪಾಯ ಉಂಟಾಗುತ್ತದೆ. UPOV ಬೀಜಗಳನ್ನು ಪೇಟೆಂಟ್ ಮಾಡಿಕೊಳ್ಳುವ ಒಂದು ವ್ಯವಸ್ಥೆ. ಇದು ರೈತರಿಗೆ ಬೀಜಗಳನ್ನು ಉಳಿಸಲು, ಬೆಳೆಸಲು, ಮಾರಾಟ ಮಾಡಲು ಇರುವ ಹಕ್ಕುಗಳನ್ನು ನಿರಾಕರಿಸುತ್ತದೆ ಹಾಗು ಭಾರತದ  ಪ್ರಗತಿಪರ ದೇಶೀಯ ಶಾಸನವನ್ನು ಬದಲಾಯಿಸಲು ಒತ್ತಾಯಿಸಲಾಗುತ್ತದೆ  ಮತ್ತು ಈ ಮುಖಾಂತರ  ಕೃಷಿ ವ್ಯವಹಾರ ಕಂಪನಿಗಳಿಗೆ ಇರುವ ಏಕಸ್ವಾಮ್ಯತೆಯನ್ನು ಮತ್ತಷ್ಟು ಪ್ರಬಲಗೊಳಿಸುತ್ತವೆ ಹಾಗೂ ಖಾಸಗಿ ಸ್ವಾಮ್ಯದ ಕೃಷಿ ತಂತ್ರಜ್ಞಾನಗಳನ್ನು ಬೆಂಬಲಿಸುತ್ತವೆ.

ಈಗಾಗಲೇ ಇನ್ವೆಸ್ಟರ್ ಸ್ಟೇಟ್ ಡಿಸ್ಪ್ಯೂಟ್ ಸೆಟಲ್ಮೆಂಟ್ (ISDS) ಎಂದು ಕರೆಯಲ್ಪಡುವ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳಲ್ಲಿನ  (BITs) ವ್ಯವಸ್ಥೆಯನ್ನು ಬಳಸಿಕೊಂಡು ವಿದೇಶಿ ಹೂಡಿಕೆದಾರರು ಭಾರತ ಸರ್ಕಾರಕ್ಕೆ $ 12.3 ಬಿಲಿಯನ್ ಮೊತ್ತದ ಮೊಕದ್ದಮೆ ಹೂಡಿದ್ದಾರೆ. ಇಂತಹ ಪ್ರಕರಣಗಳ ನಂತರ, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಭಾರತ ಸೇರಿದಂತೆ ಅನೇಕ ದೇಶಗಳು ತಮ್ಮ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳಲ್ಲಿನ ‘ಐಎಸ್‌ಡಿಎಸ್’ ನಿಬಂಧನೆಯನ್ನು ತೆಗೆದುಹಾಕಲು ಪ್ರಯತ್ನಿಸಿವೆ. ಜಪಾನ್, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಂತಹ ದೇಶಗಳು ಆರ್‌ಸಿಇಪಿ ಹೂಡಿಕೆ ಅಧ್ಯಾಯದ ಮುಖಾಂತರ  ಹೂಡಿಕೆದಾರರಿಗೆ ಹೆಚ್ಚಿನ ಮಟ್ಟದ ರಕ್ಷಣೆ ನೀಡುವಂತೆ ಒತ್ತಾಯಿಸುತ್ತಿವೆ ಮತ್ತು ಮುಖ್ಯವಾಗಿ ವಿದೇಶಿ ಹೂಡಿಕೆದಾರರನ್ನು ರಕ್ಷಿಸುವ ನಿಯಮಗಳನ್ನು ಸೇರಿಸುವುದನ್ನು ಭಾರತ ವಿರೋಧಿಸಬಹುದೇ ಎಂದು ನೋಡಬೇಕಾಗಿದೆ.

ಆರ್‌.ಸಿ.ಇ.ಪಿ ಮಾತುಕತೆಗಳು 2013 ರಲ್ಲಿ ಪ್ರಾರಂಭವಾದವು ಮತ್ತು ಅಂದಿನಿಂದ 27 ಸುತ್ತಿನ ವ್ಯಾಪಾರ ಮಾತುಕತೆಗಳಲ್ಲಿ, ಭಾರತೀಯ ಸಮಾಲೋಚಕರು ಹೆಚ್ಚಾಗಿ ರಕ್ಷಣಾತ್ಮಕವಾಗಿದ್ದಾರೆ. ಪ್ರೋ.ಧಾರ್ ಅವರ ಪ್ರಬಂಧ ತೋರಿಸಿದಂತೆ, ಭಾರತವು ಈಗಾಗಲೇ ಅನೇಕ ಆರ್‌ಸಿಇಪಿ ದೇಶಗಳೊಂದಿಗೆ ಎಫ್‌ಟಿಎಗೆ ಸಹಿ ಹಾಕಿದ್ದರೂ, ಆ ದೇಶಗಳ  ಮಾರುಕಟ್ಟೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬದಲಾಗಿ, ದೇಶದಲ್ಲಿ ಹೆಚ್ಚುತ್ತಿರುವ ವ್ಯಾಪಾರ ಕೊರತೆ ತೋರಿಸಿದಂತೆ, ಆ ದೇಶಗಳಿಂದ ಭಾರತಕ್ಕೆ ಬರುವ ರಫ್ತು ಅನೇಕ ಪಟ್ಟು ಹೆಚ್ಚಾಗಿದೆ.

ಈಗಾಗಲೇ ಈ ದೇಶಗಳೊಂದಿಗೆ  ಪ್ರಸ್ತುತ ಇರುವ ಎಫ್‌ಟಿಎ ಮತ್ತು ಡಬ್ಲ್ಯುಟಿಒ ಬದ್ಧತೆಗಳನ್ನು ಮೀರಿ,ಆರ್‌ಸಿಇಪಿಯು ಕೃಷಿ ಮತ್ತು ಕೈಗಾರಿಕೆಗಳಲ್ಲಿನ ಲಕ್ಷಾಂತರ ಜೀವನೋಪಾಯಗಳನ್ನು ಕಸಿಯುವ ಮುಖಾಂತರ ಭಾರತದ ಓರೆಯಾದ ವ್ಯಾಪಾರ ಸಮತೋಲನವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಹಾಗಾದರೆ ಭಾರತದ ಮುಂದಿರುವ ದಾರಿ ಏನು?

ಮುಕ್ತ ವ್ಯಾಪಾರದ ಚೌಕಟ್ಟಿನ ಹೊರಗಿನ ಹೊಸ ಸಾಧ್ಯತೆಗಳು 

ಭಾರತ ಸರ್ಕಾರವು ವ್ಯಾಪಾರ ನೀತಿಗಳನ್ನು ಕಾರ್ಯರೂಪಕ್ಕೆ ತರುವ  ಪ್ರಕ್ರಿಯೆಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೀರಿ ಅಪಾರದರ್ಶಕತೆಯಿಂದ ಕೊಡಿವೆ .  ಯುಎಸ್, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಂತೆ, ಭಾರತವು ವ್ಯಾಪಾರ ಒಪ್ಪಂದಗಳನ್ನು ಸಂಸತ್ತಿನಲ್ಲಿ ಅಂಗೀಕರಿಸುವ  ಪ್ರಕ್ರಿಯೆಯನ್ನು ಅನುಸರಿಸುವುದಿಲ್ಲ. ಇನ್ನುಮುಂದಾದರೂ, ಡಬ್ಲ್ಯುಟಿಒ ಮತ್ತು ಆರ್‌ಸಿಇಪಿ ಯಂತಹ ಹೊಸ ತಲೆಮಾರಿನ ವ್ಯಾಪಾರ ಒಪ್ಪಂದಗಳಿಗೆ ಅನ್ವಯಿಸುವ ದೇಶೀಯ ನೀತಿ ಮಾಡಿಕೊಳ್ಳುವಾಗ, ಅಂತರರಾಷ್ಟ್ರೀಯ ಒಪ್ಪಂದಗಳ ಮಾತುಕತೆ ಮತ್ತು ಅವಕ್ಕೆ ಸಹಿ ಹಾಕುವಾಗ ಸಂಸತ್ತು, ರಾಜ್ಯಸರ್ಕಾರಗಳ ಜೊತೆ ಸಮರ್ಪಕವಾಗಿ ಸಮಾಲೋಚಿಸುವುದು ಒಳಿತು .

ಇದಲ್ಲದೆ, ಭಾರತದಲ್ಲಿನ ರಾಜ್ಯ ಸರ್ಕಾರಗಳು  ಕೃಷಿ, ಆರೋಗ್ಯ, ತೆರಿಗೆ ಮತ್ತು ಪರಿಸರ ಕಾನೂನುಗಳಂತಹ ವಿಷಯಗಳ ಮೇಲೆ ನೀತಿಗಳನ್ನ ರೂಪಿಸುವಲ್ಲಿ ಸಾಕಷ್ಟು ಸ್ವಾಯತ್ತತೆಯನ್ನು ಹೊಂದಿವೆ ಮತ್ತು ಆದ್ದರಿಂದ ರಾಜ್ಯಗಳನ್ನು ಈ  ಪ್ರಕ್ರಿಯೆಯಲ್ಲಿ ಅರ್ಥಪೂರ್ಣವಾಗಿ ಒಳಪಡಿಸುವುದು ಕಡ್ಡಾಯವಾಗಿದೆ. ಆರ್‌ಸಿಇಪಿ ವಿಷಯದಲ್ಲಿ, ಕೇರಳ ಸರ್ಕಾರವು ತನ್ನ ರಾಜ್ಯದ ರೈತರ ಹಿತಾಸಕ್ತಿಗಳು ಕೊಡ ಭಾರತ ಒಕ್ಕೂಟದಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳುವ ಮುಖಾಂತರ ನಿರಂತರವಾಗಿ ರಾಜ್ಯ ಸರ್ಕಾರಗಳೋಟ್ಟಿಗೆ  ಸಮಾಲೋಚನೆಗಳನ್ನು ಮಾಡಿ ಎಂದು ಕೇಳುತ್ತಿದೆ, ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.ಕೇಂದ್ರದಲ್ಲಿ ವಾಣಿಜ್ಯ ಸಚಿವಾಲಯ ಇದುವರೆಗೂ ಕೂಡ  ಕೃಷಿ, ಆರೋಗ್ಯ, ಪರಿಸರ ಮತ್ತು ಕಾರ್ಮಿಕ ಸಚಿವಾಲಯಗಳನ್ನ ವ್ಯಾಪಾರ ವಿಷಯಗಳ ನಿರ್ದಾರಗಳ ಬಗ್ಗೆ ಸಮಾಲೋಚನೆ ನಡೆಸಿಲ್ಲ ಎಂಬ ಆತಂಕವೂ ಇದೆ. ಸ್ಪಷ್ಟವಾಗಿ, ವಿಶಾಲವಾದ ಪ್ರಾದೇಶಿಕ ಅಸಮಾನತೆಗಳನ್ನು ಹೊಂದಿರುವ ಭಾರತದಂತಹ ದೇಶಕ್ಕೆ, ಈ ಪರಿಸ್ಥಿತಿಯು  ಅಸಮರ್ಥನೀಯವಾಗಿದೆ ಮತ್ತು ವಾಣಿಜ್ಯ ಸಚಿವಾಲಯದ ಪ್ರಸ್ತುತ ವ್ಯಾಪಾರ ನೀತಿ ನಿರೂಪಣೆಯು ಪ್ರಜಾಪ್ರಭುತ್ವ ವಿರೋಧಿ ಪ್ರಕ್ರಿಯೆಯ ಸಂಪೂರ್ಣ ಕೂಲಂಕಷ ಪರೀಕ್ಷೆಗೆ ಕರೆ ನೀಡುತ್ತದೆ.

ಜಾಗತಿಕವಾಗಿ, ಡಬ್ಲ್ಯು.ಟಿ.ಒ, ಬ್ರೆಕ್ಸಿಟ್, ಟಿ.ಪಿ.ಪಿ ಮತ್ತು ಟ್ರಾನ್ಸ್ ಅಟ್ಲಾಂಟಿಕ್ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಪಾರ್ಟ್‌ನರ್‌ಶಿಪ್ (ಟಿ.ಟಿ.ಐ.ಪಿ) ಯಿಂದ ಯುಎಸ್ ಹಿಂತೆಗೆದುಕೊಳ್ಳುವುದರೊಂದಿಗೆ, ಮುಕ್ತ ವ್ಯಾಪಾರವು ನ್ಯಾಯಸಮ್ಮತತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಹೊರತಾಗಿಯೂ, ನೀತಿ ನಿರೂಪಕರು ಮತ್ತು ವ್ಯಾಪಾರ ಸಮಾಲೋಚಕರು ನವ-ಉದಾರವಾದಿ ಸಿದ್ಧಾಂತದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಮತ್ತು ಆರ್‌ಸಿಇಪಿ ಯಂತಹ ವ್ಯಾಪಾರ ಮತ್ತು ಹೂಡಿಕೆ ಸಹಭಾಗಿತ್ವವನ್ನು ಮಾತುಕತೆ ನಡೆಸುವಾಗ ಕೂಡ ಅದೇ ಅಪಖ್ಯಾತ ಮುಕ್ತ ವ್ಯಾಪಾರ ಚೌಕಟ್ಟನ್ನು ಬಳಸುವುದನ್ನು ಮುಂದುವರಿಸುತ್ತಾರೆ. ಈ ರೀತಿಯಾಗಿರಬೇಕಾಗಿಲ್ಲ..

1995 ರಲ್ಲಿ ಡಬ್ಲ್ಯುಟಿಒ ರಚನೆಗೆ ಕಾರಣವಾದ ಉರುಗ್ವೆ ರೌಂಡ್ ಟ್ರೇಡ್ ಮಾತುಕತೆಗಳ (1986-1994) ಸಮಯದಲ್ಲಿ, ಬ್ರೆಜಿಲ್ ಮತ್ತು ಭಾರತದಂತಹ ದೇಶಗಳು ‘ಒಂದೆ ಅಳತೆ ಎಲ್ಲಾರಿಗೂ ಸರಿಹೊಂದುತ್ತದೆ/one size fits all’ವಿಧಾನದ ವಿರುದ್ಧ ವಾದಿಸಿತು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಮಾನದಂಡಗಳನ್ನು ಗುರುತಿಸುವಾಗ ಕೈಗಾರಿಕೀಕರಣಕ್ಕಾಗಿ ಅವರ ಅಭಿವೃದ್ಧಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳ ಆರಂಭಿಕ ಸೇವಾ ಕ್ಷೇತ್ರಗಳ ಬೆಳವಣಿಗೆ ಮತ್ತು ರೈತರ ರಕ್ಷಣೆಗೆ  ಹೆಚ್ಚಿನ ಆದ್ಯತೆಗಳು, ವಿಶೇಷ ಮತ್ತು ಭೇದಾತ್ಮಕ ಚಿಕಿತ್ಸೆ ಮತ್ತು ವಿಭಿನ್ನತೆಗಾಗಿ ಕರೆ ನೀಡಿತು. ವ್ಯಾಪಾರಕ್ಕೆ ಅಂತಹ ವಿಧಾನವು ಇಂದಿಗೂ ಪ್ರಸ್ತುತವಾಗಿದೆ. ಕೈಗಾರಿಕಾ ನೀತಿ, ಸಾರ್ವಜನಿಕ ಸೇವೆಗಳು ಮತ್ತು ಕೃಷಿ ಸಮುದಾಯದ ಅಗತ್ಯತೆಗಳನ್ನು ಕೇಂದ್ರೀಕರಿಸಿದ ಕೃಷಿ ನೀತಿಯ ಸುತ್ತಲಿನ ಚರ್ಚೆಗಳನ್ನು ನಾವು ಪುನರ್ ವಿಮರ್ಶಿಸಬೇಕಾಗಿದೆ.

ಪ್ರಸ್ತುತ ದೇಶೀಯ ಆರ್ಥಿಕತೆ, ರೈತರು ಮತ್ತು ಕಾರ್ಮಿಕರ ಅಗತ್ಯತೆಗಳನ್ನು ಒಳಗೊಳ್ಳುವ ನೀತಿಗಳಿಗೆ ಮೊದಲಿಗೆ ಪ್ರಾಮುಖ್ಯತೆ ನೀಡಿ ಅವುಗಳ ಅನುಸಾರ ನಮ್ಮ ವ್ಯಾಪಾರ ನೀತಿಗಳನ್ನು ರೊಪಿಸೆಕೊಳ್ಳಬೇಕಾಗಿದೆ. ಅರ್ಥಶಾಸ್ತ್ರಜ್ಞ ಕಾರ್ಲ್ ಪೋಲಾನಿಯಾ ಹೇಳುವಂತೆ , ನವ-ಉದಾರವಾದಿ ಸಿದ್ಧಾಂತ ಮತ್ತು ಮಾರುಕಟ್ಟೆಗಳಿಂದ ವ್ಯಾಪಾರ ನೀತಿಯನ್ನು ನಡೆಸುವ ಬದಲು, ದೇಶೀಯ ಆರ್ಥಿಕತೆ ಮತ್ತು ಸಮಾಜದ ಅಗತ್ಯತೆಗಳ ಅನುಸಾರ ವ್ಯಾಪಾರ ನೀತಿಗಳನ್ನೂ ರೂಪಿಸುವಲ್ಲಿ ಮರು-ಚಿಂತನೆ ನಡೆಸುವುದು ಇಂದಿನ ಅಗತ್ಯವಾಗಿದೆ.

ಕೃಪೆ : ನ್ಯೂಸ್‌ಕ್ಲಿಕ್‌

ಬೆನ್ನಿ ಕುರುವಿಲ್ಲ

ಕನ್ನಡಕ್ಕೆ: ನವಾಜ್ ಹೆಗ್ಗೆರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...