ಅಮೆರಿಕದಿಂದ ಭಾರತೀಯ ವಲಸಿಗರನ್ನು ಗಡಿಪಾರು ಮಾಡಿರುವ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಸದಸ್ಯರು ಪಟ್ಟು ಹಿಡಿದ ಕಾರಣ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿಕೆ ಮಾಡಲಾಗಿದೆ.
ಇಂದು (ಫೆ.6) ಬೆಳಿಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು, ವಿಶೇಷವಾಗಿ ಕಾಂಗ್ರೆಸ್ ಸದಸ್ಯರು ಗಡಿಪಾರು ವಿಷಯವನ್ನು ಪ್ರಸ್ತಾಪಿಸಿ ಚರ್ಚೆಗೆ ಅಗ್ರಹಿಸಿದರು. ಸರ್ಕಾರದ ವಿರುದ್ದ ಪ್ರತಿಭಟನೆ ವ್ಯಕ್ತಪಡಿಸಿದರು.
ಸರ್ಕಾರವು ಅವರ ಕಳವಳಗಳನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳುವ ಮೂಲಕ ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
“ಇದು ವಿದೇಶಾಂಗ ನೀತಿಯ ವಿಷಯ. ವಿದೇಶಕ್ಕೂ ತನ್ನದೇ ಆದ ನಿಯಮಗಳು ಮತ್ತು ನಿಬಂಧನೆಗಳಿವೆ. ನೀವು ಮಧ್ಯಾಹ್ನ ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದು. ಪ್ರಶ್ನೋತ್ತರ ಅವಧಿಯನ್ನು ಸುಗಮವಾಗಿ ನಡೆಸಲು ಅವಕಾಶ ನೀಡಬೇಕು” ಎಂದು ಸ್ಪೀಕರ್ ಮನವಿ ಮಾಡಿದರು.
ಆದರೆ, ಪ್ರತಿಭಟನಾ ನಿರತ ಸದಸ್ಯರು ಸ್ಪೀಕರ್ ಮನವಿಯನ್ನು ನಿರ್ಲಕ್ಷಿಸಿ ಪ್ರತಿಭಟನೆ ಮುಂದುವರೆಸಿದರು. ನಂತರ ಸ್ಪೀಕರ್ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ನಂತರ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.
ರಾಜ್ಯಸಭೆಯ ವಿರೋಧ ಪಕ್ಷದ ಸದಸ್ಯರು ನಿಯಮ 267 ರ ಅಡಿಯಲ್ಲಿ ನೋಟಿಸ್‌ಗಳನ್ನು ನೀಡಿದರು. ಪಟ್ಟಿ ಮಾಡಲಾದ ದಿನದ ವ್ಯವಹಾರಗಳನ್ನು ಬದಿಗಿಟ್ಟು ಗಡಿಪಾರು ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳುವಂತೆ ಆಗ್ರಹಿಸಿದರು. ಆದರೆ, ಸಭಾಧ್ಯಕ್ಷ ಮನವಿಯನ್ನು ತಿರಸ್ಕರಿಸಿದರು. ನಂತರ, ಸದಸ್ಯರು ತಮ್ಮ ಸ್ಥಳಗಳಲ್ಲಿ ನಿಂತು ವಿಷಯವನ್ನು ಪ್ರಸ್ತಾಪಿಸಿದರು.
ಅಮೆರಿಕವು ಭಾರತೀಯ ವಲಸಿಗರನ್ನು ಮಿಲಿಟರಿ ವಿಮಾನದಲ್ಲಿ ಅತ್ಯಂತ ಅಮಾನವೀಯ ರೀತಿಯಲ್ಲಿ ಗಡಿಪಾರು ಮಾಡಿದೆ. ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ನಮಗೆ ಅವಕಾಶ ನೀಡುತ್ತಿಲ್ಲ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.
ಸಭಾಧ್ಯಕ್ಷರ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಹರಿವಂಶ್ ಅವರು ವಿರೋಧ ಪಕ್ಷದ ಸಂಸದರ ಹೇಳಿಕೆಗಳನ್ನು ದಾಖಲಿಸಬಾರದು ಎಂದು ಮೊದಲು ಆದೇಶಿಸಿದರು. ಸಂಸದರು ಚರ್ಚೆಗೆ ಪಟ್ಟು ಹಿಡಿದಾಗ ಮಧ್ಯಾಹ್ನ 12 ಗಂಟೆಯವರೆಗೆ ಕಲಾಪವನ್ನು ಮುಂದೂಡಿದರು.
104 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಬುಧವಾರ ಪಂಜಾಬ್‌ನ ಅಮೃತಸರಕ್ಕೆ ಬಂದಿಳಿದಿದೆ. ಅಕ್ರಮ ವಲಸಿಗರ ವಿರುದ್ಧದ ಕ್ರಮದ ಭಾಗವಾಗಿ ಡೊನಾಲ್ಡ್ ಟ್ರಂಪ್ ಸರ್ಕಾರವು ಗಡಿಪಾರು ಮಾಡಿದ ಭಾರತೀಯರ ಮೊದಲ ಬ್ಯಾಚ್ ಇದಾಗಿದೆ.
ಮೊದಲ ಬ್ಯಾಚ್‌ನಲ್ಲಿ ತಲಾ 33 ಜನರು ಹರಿಯಾಣ ಮತ್ತು ಗುಜರಾತ್‌ನವರು, 30 ಜನರು ಪಂಜಾಬ್‌ನವರು, ತಲಾ ಮೂವರು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದವರು ಮತ್ತು ಇಬ್ಬರು ಚಂಡೀಗಢದವರು ಇದ್ದರು.
“ಕೈಗೆ ಬೇಡಿ, ಕಾಲಿಗೆ ಸಂಕೋಲೆ ಹಾಕಲಾಗಿತ್ತು”…ಅಮೆರಿಕದಿಂದ ಗಡಿಪಾರಾದ ಭಾರತೀಯರ ಅಳಲು


