ಬೆಂಗಳೂರು: ಜು.2ರಂದು ನಂದಿಬೆಟ್ಟದಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದೇವನಹಳ್ಳಿಯ 1777 ಎಕರೆ ಭೂಮಿಯನ್ನು ಕೆಐಎಡಿಬಿಗಾಗಿ ಭೂಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಯನ್ನು ರದ್ದುಮಾಡುವ ತೀರ್ಮಾನ ಕೈಗೊಳ್ಳಲೇ ಬೇಕು. ಈ ಕುರಿತು ಬಹಳಷ್ಟು ನಿರೀಕ್ಷೆಗಳಿವೆ. ಜುಲೈ 4ರ ದಿನವನ್ನು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯ ಜನರು ಕಣ್ಣಲ್ಲಿ ನಿದ್ದೆಯಿಲ್ಲದೆ ಕಾಯುತ್ತಿದ್ದಾರೆ. ಅವರು ಮಾತ್ರವಲ್ಲದೆ ದೇವನಹಳ್ಳಿ ಕಡೆ ಮತ್ತು ಸರಕಾರದ ಕಡೆ ಕರ್ನಾಟಕದ ಎಲ್ಲಾ ಜನರು ಕೂಡ ನೋಡುತ್ತಿದ್ದಾರೆ. ಹಾಗಾಗಿ ಜುಲೈ 4 ಸಮಕಾಲೀನ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿ ದಾಖಲಾಗಲಿದೆ ಎಂದು ಜನಶಕ್ತಿಯ ನೂರ್ ಶ್ರೀಧರ್ ಹೇಳಿದರು.
ದೇವನಹಳ್ಳಿ ಚಲೋದ ಮುಂದುವರಿದ ಭಾಗವಾಗಿ ಪ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ‘ಭೂಮಿ ಸತ್ಯಾಗ್ರಹ’ದ ಸ್ಥಳದಲ್ಲಿ ಇಂದು (ಜೂ.29) ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಜನಚಳವಳಿಗಳಿಗೆ ಚಾರಿತ್ರಿಕ ಹೊಣೆಗಾರಿಕೆಯ ಜವಾಬ್ದಾರಿಯಿದೆ. ಸರಕಾರ ಈ ರೀತಿಯ ಒಂದು ಪರೀಕ್ಷೆಯಲ್ಲಿ ಪಾಸಾಗುತ್ತದೆಯೇ, ಪೇಲ್ ಆಗುತ್ತದೆಯೇ ಎಂಬ ಪ್ರಶ್ನೆಯಿದೆ. ಅದೇ ರೀತಿಯಲ್ಲಿ ನಾವೆಲ್ಲಾ ಚನಚಳುವಳಿಗಳು ನಮ್ಮ ನೈತಿಕ ಹೊಣೆಗಾರಿಕೆಯನ್ನು ನಾವು ಪೂರ್ಣಗೊಳಿಸುತ್ತೇವೆಯೋ ಇಲ್ಲವೋ ಎಂಬ ಸವಾಲು ನಮ್ಮ ಮುಂದೆ ಇದೆ. ಕಾಲ ನಮ್ಮ ಜನಚಳುವಳಿಗಳ ಮುಂದೆ ಮತ್ತು ಸರಕಾರದ ಮುಂದೆ ದೊಡ್ಡ ಸವಾಲನ್ನು ಮುಂದಿಟ್ಟಿದೆ. ಅ ಸವಾಲು ಪರೀಕ್ಷೆಯಾಗುವ ದಿನ ಜುಲೈ 4 ಆಗಿದೆ. ಅಂದು ಎರಡು ಅಲೋಚನೆಗಳು ಮುಖಾಮುಖಿಯಾಗುವ ಸಭೆಯಿದೆ ಎಂದರು.
ಈಗಂತೂ ಎರಡು ತದ್ವಿರುದ್ದ ದಿಕ್ಕಿನ ಸ್ಥಿತಿಯಿದೆ. ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರು ವಿನಾಶಕಾರಿ ಅಭಿವೃದ್ಧಿ ಮಾದರಿಯನ್ನು ಮುಂದುವರಿಸುತ್ತಾ 13 ಹಳ್ಳಿಗಳ ಭವಿಷ್ಯವನ್ನೇ ನಿರ್ನಾಮಮಾಡುವಂತಹ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಾ ಅದನ್ನು ಮಾಡಿಯೇ ತಿರುತ್ತೇವೆ ಎಂದು ಅವರು ಹೊರಟಿದ್ದಾರೆ. ಇನ್ನೊಂದು ಕಡೆ ಅದೇ 13 ಹಳ್ಳಿಯ ಜನರು ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲವೆಂದು ಸತತ 1180 ದಿನಗಳ ಕಾಲ ತಪ್ಪಸು ಮಾಡುತ್ತಾ ಕುಳಿತಿದ್ದಾರೆ. ಈ ದೇವನಹಳ್ಳಿಯ ರೈತ ಹೋರಾಟಗಾರರನ್ನು ನಾವು ತಪಸ್ವಿಗಳು ಎಂದು ಕರೆದರೆ ಯಾವ ತಪ್ಪು ಆಗುವುದಿಲ್ಲ. ನಿಜವಾಗಲೂ ಅವರು ಮೂರುವರೆ ವರ್ಷಗಳ ತಪ್ಪಸ್ಸೇ ಮಾಡಿದ್ದಾರೆ. ಅ ತಪ್ಪಸ್ಸಿನ ಫಲ ಸಿಗುತ್ತದೆಯೋ ಇಲ್ಲವೋ ಎಂಬುದು ತೀರ್ಮಾನವಾಗುವುದು ಜುಲೈ 4 ಆಗಿದೆ ಎಂದು ಅವರು ತಿಳಿಸಿದರು.
ನಮ್ಮೆಲ್ಲರಿಗೂ ಇರುವ ಆತಂಕವೆಂದರೆ ಆ ಜುಲೈ 4ರ ನಿರ್ಣಾಯಕದ ದಿನದಂದು ತಗೆದುಕೊಳ್ಳಬೇಕಾದ ದಿಟ್ಟ ನಿರ್ಣಯಗಳನ್ನು ತಗೆದುಕೊಳ್ಳದೇ ಸರಕಾರ ಅಡ್ಡಗೋಡೆಯ ಮೇಲೆ ದೀಪ ಇಡುವ ತೀರ್ಮಾನವನ್ನು ತಗೆದುಕೊಳ್ಳಬಹುದೆಂಬ ಆತಂಕವಿದೆ. ಈ ರೀತಿ ಏನಾದರೂ ಆಯಿತು ಎಂದರೆ ಇದು ತೀವ್ರತರನಾದ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಸರಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸುವ ತೀರ್ಮಾನ ಮಾಡಿದರೆ ಅದು ದೊಡ್ಡ ದುರಂತ. ಹೀಗಲ್ಲದೆ ಭೂಸ್ವಾಧೀನವನ್ನು ರದ್ದುಮಾಡುವ ತೀರ್ಮಾನ ತಗೆದುಕೊಂಡರೆ ಅದು ದೊಡ್ಡ ಸಂಭ್ರಮದ ದಿನ. ಸರಕಾರ ಮರುಚಿಂತನೆ ಮಾಡುತ್ತದೆ ಎಂದು ನಮಗೆಲ್ಲರಿಗೂ ಅಪಾರ ಸಂತೋಷ ಕೊಡುವ ದಿನವಾಗುತ್ತದೆ. ಅಂದು ದುರಂತ ದಿನವೂ ಆಗಬಹುದು ಇಲ್ಲವೇ ಸಂತಸದ ದಿನವೂ ಆಗಬಹುದು ಎಂದು ಭವಿಷ್ಯ ನುಡಿದರು.
ಇವೆರಡೂ ಅಲ್ಲದೇ ಸರಕಾರ ಮೂರನೆಯ ಪ್ರಯತ್ನವೊಂದನ್ನು ಮಾಡಬಹುದು. ಒಂದು ತಾಂತ್ರಿಕ ಕಾರಣವನ್ನು ಕೊಟ್ಟು ಮುಂದೂಡುವಂತಹ ತೀರ್ಮಾನವನ್ನು ಸರಕಾರ ಮಾಡಬಹುದು. ಅಂದರೆ ಏನೂ ಸ್ಪಷ್ಟನೆ ಕೊಡದೇ ಮುಂದೂಡುವಂತಹದ್ದು. ಇದಕ್ಕೆ ಸರಕಾರ ತಾಂತ್ರಿಕ ಕಾರಣವನ್ನು ಕೊಡಬಹುದು. ಟೆಕ್ನಿಕಲ್ ಪಾಯಿಂಟ್. ಅಂತಿಮ ಅದಿಸೂಚನೆಯನ್ನು ಹೊರಡಿಸಲಾಗಿದೆ, ಈ ಕಾರಣಕ್ಕಾಗಿ ಈ ಅಂತಿಮ ಅಧಿಸೂಚನೆಯನ್ನು ವಾಪಸ್ ಪಡೆಯುವುದು ಕಷ್ಟ. ಸಾಕಷ್ಟು ಸಮಸ್ಯೆಗಳಿವೆ, ಈ ಕಾರಣಕ್ಕಾಗಿ ಕಾನೂನು ಪ್ರಕ್ರಿಯೆಯನ್ನು ಎದುರಿಸಬೇಕಾಗಿದೆ, ಸಮಿತಿಯನ್ನು ರಚಿಸಬೇಕು, ಅದು ತನ್ನದೇ ಆದ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ, ಇದಕ್ಕಾಗಿ ಅಖಿಲ ಭಾರತ ಮಟ್ಟದ ಸಮಿತಿಗಳನ್ನು ಸಂಪರ್ಕಿಸಬೇಕಾಗುತ್ತದೆ, ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಬಹುದು ಎಂದರು.
ಜು.4ರಂದು ಏನೇ ಕಾರಣಕೊಟ್ಟರೂ ಸರಕಾರ ತನ್ನ ಸ್ಪಷ್ಟ ತೀರ್ಮಾನವನ್ನು ಹೇಳಬೇಕು. ತಾಂತ್ರಿಕ ಪ್ರಕ್ರಿಯೆಗಾಗಿ ಸಮಯವನ್ನು ಸರಕಾರ ತಗೆದುಕೊಳ್ಳಲಿ, ಅದರೆ ಅಂದು ತಗೆದುಕೊಳ್ಳುವ ತೀರ್ಮಾನ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುತ್ತೇವೆ ಎಂಬುದೇ ಆಗಿರಬೇಕು. ಅಂದರೆ ಸರಕಾರದ ತೀರ್ಮಾನ ರದ್ದು ಎಂದು ಆಗಬೇಕು. ಇದು ಸ್ಪಷ್ಟವಾಗಬೇಕು. ಇದು ಆಗದೇ ತೀರ್ಮಾನ ತಗೆದುಕೊಳ್ಳುವುದಕ್ಕೆ ಸಮಯ ಬೇಕಾಗುತ್ತದೆ ಎಂದರೆ ಅದು ನ್ಯಾಯದ ನಿರಾಕರಣೆಯಾಗುತ್ತದೆ. ಜನತೆಗೆ ಕೊಟ್ಟಿರುವ ಭರವಸೆಗೆ ಮೋಸವಾಗುತ್ತದೆ. ಅದು ವಿಶ್ವಾಸ ದ್ರೋಹವಾಗುತ್ತದೆ. ಅದರ ಪರಿಣಾಮಗಳು ಬಹಳ ಗಂಭೀರವಾಗಿರುತ್ತದೆ. ಇಷ್ಟು ಮಾತ್ರ ಹೇಳಲಿಕ್ಕೆ ಸಾಧ್ಯ. ಆ ಗಂಭೀರತೆಯನ್ನು ನಾನು ಇಲ್ಲಿ ತೋರಿಸುವುದಕ್ಕೆ ಹೋಗುವುದಿಲ್ಲ. ಖಂಡಿತವಾಗಿಯೂ ಅದು ಗಂಭೀರವಾಗಲಿದೆ. ಹಾಗಾಗಿ ಸರಕಾರವು ನೈತಿಕ ಕಾಳಜಿಯಿಂದ, ಸಾಮಾಜಿಕ ಕಾಳಜಿಯಿಂದ ಇದನ್ನು ನಿರ್ವಹಿಸಬೇಕು. ಈ ಹೋರಾಟದಲ್ಲಿ ರಾಜ್ಯದ ಸಮಸ್ತವೆಂದರೆ ಸಮಸ್ತ ಸಂಘಟನೆಗಳು ಪಾಲ್ಗೊಂಡಿವೆ. ಈ ಸಂಘಟನೆಗಳ ನಾಯಕರಿಗೆ ವೇದಿಕೆಯಲ್ಲಿ ಕುರ್ಚಿಯನ್ನು ಹಾಕಿದರೆ ಸಾಕಾಗುವುದಿಲ್ಲ. ಅಷ್ಟು ಸಂಘಟನೆಗಳು ಈ ಹೋರಾಟದಲ್ಲಿವೆ. ಅಷ್ಟು ಸಂಘಟನೆಗಳು ತಗೆದುಕೊಂಡಿರುವ ಏಕಮತದ ತೀರ್ಮಾನ, ಹಾಗೆಯೇ 13 ಹಳ್ಳಿಗಳ ಜನರ ಏಕಮತದ ತೀರ್ಮಾನ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಿ ಎಂಬುದೇ ಆಗಿದೆ. ನೀವು 10, 3 ಎಂದು ಒಡೆಯಲು ಹೋಗಬೇಡಿ. ನೀವು 1777 ಎಕರೆಯಲ್ಲಿ 500 ಎಕರೆ ಜಮೀನನ್ನು ಬಿಡುತ್ತೇವೆಂದು ಹೇಳುತ್ತಿರುವ ಹಳ್ಳಿಯ ಜನರು ಕೂಡ ಈ ಹೋರಾಟದಲ್ಲಿ ಇದ್ದಾರೆ. 13 ಹಳ್ಳಿಯ ಜನರು ಒಂದೇ ಕುಟುಂಬವಾಗಿ ಹೋರಾಟ ಮಾಡುತ್ತಿದ್ದಾರೆ. ಕರ್ನಾಟಕದ ಸಮಸ್ತ ಸಂಘಟನೆಗಳು ಒಂದೇ ಸಂಘಟನೆಯಡಿ, ಒಂದೇ ಶಕ್ತಿಯಾಗಿ ನಿಂತುಕೊಂಡಿವೆ. ಈ ಎರಡು ಶಕ್ತಿಗಳು ಅಂದರೆ ದೇವನಹಳ್ಳಿ ಜನ ಮತ್ತು ಕರ್ನಾಟಕದ ಸಮಸ್ತ ಸಂಘಟನೆಗಳ ಜನರು ನ್ಯಾಯ ಸಿಗಲಿ ಎಂದು ಬಯಸುತ್ತಿದ್ದಾರೆ. ಇದನ್ನೆಲ್ಲಾ ಸರಕಾರ ಅರ್ಥಮಾಡಿಕೊಳ್ಳಬೇಕು. ತಾಂತ್ರಿಕ ಕಾರಣವನ್ನು ಕೊಡುವುದನ್ನು ಮಾಡಬಾರದು ಎಂದು ಅವರು ಮನವಿ ಮಾಡಿದರು.
ನಾವು ಇಲ್ಲಿ ಇಡುತ್ತಿರುವಂತಹ ವಾದದಲ್ಲಿ ಹೋರಾಟಕ್ಕೆ ಬಂದಿರುವ ಮಕ್ಕಳ ಭವಿಷ್ಯ ಆಡಗಿದೆ. ಅವರ ಭವಿಷ್ಯವನ್ನು ಕಾಪಾಡುವಂತಹ ನಮ್ಮಗಳ ಕರ್ತವ್ಯವಾಗಿದೆ. ನಿಜವಾಗಿಯೂ ಹೇಳುತ್ತೇನೆ ನಮ್ಮ ರಾಜಕಾರಣಿಗಳಿಗೆ ಯಾರಿಗೂ ರೈತರ ಕಷ್ಟ ಅರ್ಥವಾಗಿಲ್ಲ. ಇಂದಿಗೂ ಕೂಡ ಅದನ್ನು ಹಣಕಾಸಿನ ವ್ಯವಹಾರವೆಂದುಕೊಂಡಿದೆ. ಈ ಜಮೀನನ್ನು ಸರಕಾರಕ್ಕೆ ಕೊಟ್ಟರೆ ಕಡಿಮೆ ಪರಿಹಾರ ಕೊಡಬಹುದು ಎಂಬ ಇಂತಹ ಏನೋ ಒಂದು ಲೆಕ್ಕಾಚಾರದಲ್ಲಿ ಅವರು ಇದ್ದಾರೆ. ಜನರ ನೈತಿಕತೆಯ ಕೂಗು ಅವರಿಗೆ ಅರ್ಥವೇ ಆಗುತ್ತಿಲ್ಲ. ಅದರ ಬೆಲೆ ಜನರಿಗೆ ಗೊತ್ತಿಲ್ಲವೆಂಬ ಕಾರಣಕ್ಕಾಗಿ ಅಲ್ಲ, ನಮಗೆ ಜಾಸ್ತಿ ಬೆಲೆ ಕೊಡಿ ಎಂಬುದು ಈ ರೈತರ ಬೇಡಿಕೆಯಲ್ಲ. ಈಗ ಸರಕಾರ ನಿಗದಿ ಮಾಡಿರುವ ಪರಿಹಾರದ ಮೊತ್ತವನ್ನು ಮೂರುಪಟ್ಟು ಜಾಸ್ತಿ ಮಾಡಿದರೂ ರೈತರು ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಈ ಹೋರಾಟ ಪೂರ್ತಿಯಾಗಿ ಕೃಷಿ ಮತ್ತು ಗ್ರಾಮೀಣ ಬದುಕನ್ನು ಸಂರಕ್ಷಣೆ ಮಾಡಿಕೊಳ್ಳಲು ಮಾಡುತ್ತಿರುವ ಹೋರಾಟವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ತಮ್ಮ ಅಕ್ಕಪಕ್ಕದ ಹಳ್ಳಿಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ಈ 13 ಹಳ್ಳಿಯ ಜನರು ಕಣ್ಣಾರೆ ನೋಡಿದ್ದಾರೆ. ಅವರಂತೆ ತಮ್ಮ ಬದುಕು ಆಗಬಾರದೆಂದು ಇವರು ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಕೊನೆ ಬಾರಿಗೆ ಸರಕಾರಕ್ಕೆ ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ, ಎಂ.ಬಿ.ಪಾಟೀಲ್ ಅವರಿಗೂ ಮನವಿ ಮಾಡಿಕೊಳ್ಳುತ್ತೇವೆ, ಸಚಿವ ಸಂಪುಟದ ಪ್ರತಿಯೊಬ್ಬ ಸಚಿವರು ಮನವಿ ಮಾಡಿಕೊಳ್ಳುತ್ತೇವೆ, ಕಾಂಗ್ರೆಸ್ಸಿನ ಪ್ರತಿಯೊಬ್ಬ ಶಾಸಕರಿಗೂ ಮನವಿ ಮಾಡಿಕೊಳ್ಳುತ್ತೇವೆ. ಜು.2ರಂದು ನಂದಿಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಬಹಳ ಬಹಳ ಮುಖ್ಯವಾಗಿದೆ. ಅಲ್ಲಿ ವಿಶೇಷ ಸಂಪುಟ ಸಭೆಯನ್ನು ಮಾಡುತ್ತಿದ್ದೀರಿ. ಈ ನಂದಿಬೆಟ್ಟಕ್ಕೆ ಹೋಗಬೇಕಾದರೆ ದೇವನಹಳ್ಳಿಯನ್ನು ಹಾದು ಹೋಗಬೇಕು ಹಾಗೆಯೇ ದೇವನಹಳ್ಳಿಯ ಮೂಲಕವೇ ಹಿಂದುರುಗಿ ಬರಬೇಕು. ದೇವನಹಳ್ಳಿಯ ಜನರಿಗೆ ಪರಿಹಾರ ಕೊಡದೆ ನಂದಿಬೆಟ್ಟದಿಂದ ಹಿಂದಿರುಗಿ ಬಂದರೆ ಅದು ಬಹಳ ಚಾರಿತ್ರಿಕ ಅನ್ಯಾಯವಾಗುತ್ತದೆ. ನಿಮ್ಮ ಮೇಲೆ ಬಹಳ ದೊಡ್ಡ ಚಾರಿತ್ರಿಕ ಹೊಣೆಗಾರಿಕೆ ಇದೆ. ದಯವಿಟ್ಟು ಈ ಚಾರಿತ್ರಿಕ ಹೊಣೆಗಾರಿಕೆಯನ್ನು ನಿರ್ವಹಿಸಿ ಎಂದು ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ವರಲಕ್ಷ್ಮೀ, ಡಿ.ಹೆಚ್.ಪೂಜಾರ್, ವಿ.ನಾಗರಾಜ್, ಕಾಂ.ನಿರ್ಮಲ, ಕುಮಾರ್ ಸಮತಳ, ನಿರ್ವಾಣಪ್ಪ, ಕಾಂ.ನಿರ್ಮಲ, ಪಿ.ವಿ.ಲೋಕೇಶ್, ಯು.ಬಸವರಾಜ್, ದೇವಿ, ಚಾಮರಸ ಮಾಲಿಪಾಟೀಲ್, ಶ್ರೀನಿವಾಸ್ ಕಾರಹಳ್ಳಿ, ಪ್ರಭಾ ಬೆಳವಂಗಲ, ಕೆ.ವಿ. ಭಟ್, ನಿರ್ಮಲ, ಶಿವಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.