Homeಕರ್ನಾಟಕ'ಐಕ್ಯತೆಯೇ ದೈವ; ಛಿದ್ರತೆಯೇ ದೆವ್ವ' ಎಂಬ ನುಡಿ ಮಂಡ್ಯದ ಸುಪ್ತ ಪ್ರಜ್ಞೆಯಲ್ಲೇ ಇದೆ: ದೇವನೂರ ಮಹಾದೇವ

‘ಐಕ್ಯತೆಯೇ ದೈವ; ಛಿದ್ರತೆಯೇ ದೆವ್ವ’ ಎಂಬ ನುಡಿ ಮಂಡ್ಯದ ಸುಪ್ತ ಪ್ರಜ್ಞೆಯಲ್ಲೇ ಇದೆ: ದೇವನೂರ ಮಹಾದೇವ

- Advertisement -
- Advertisement -

‘ಅಪ್ರತಿಮ ದೇಶಪ್ರೇಮಿ, ಕ್ರಾಂತಿಕಾರಿ ಆಡಳಿತಗಾರ ಟಿಪ್ಪು ಸುಲ್ತಾನ್ ವಿರುದ್ಧ ಚೇಷ್ಟೆಯ ಕಟ್ಟುಕತೆ ಉರಿಗೌಡ ನಂಜೇಗೌಡರನ್ನು ಛೂ ಬಿಟ್ಟಾಗ ಅವು ನೆಗೆದುಬಿದ್ದವು. ನಮ್ಮ ಸಂತರು ಹೇಳುವ ‘ಐಕ್ಯತೆಯೇ ದೈವ; ಛಿದ್ರತೆಯೇ ದೆವ್ವ’ ಎಂಬ ಈ ನುಡಿ ಮಂಡ್ಯದ ಸುಪ್ತ ಪ್ರಜ್ಞೆಯಲ್ಲೇ ಇದೆ ಎಂದು ನನಗನ್ನಿಸುತ್ತಿದೆ’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.

ಮಂಡ್ಯದಲ್ಲಿ ಹಿಂದುತ್ವ ಕೋಮುವಾದಿ ಸಂಘಪರಿವಾರ, ಬಿಜೆಪಿ ಹಾಗೂ ಜೆಡಿಎಸ್‌ ತಮ್ಮ ರಾಜಕೀಯಕ್ಕಾಗಿ ಸೃಷ್ಟಿಸಿದ ಧ್ವಜ ವಿವಾದದ ವಿರುದ್ಧ ಗುರುವಾರ ನಡೆದ ‘ಮಂಡ್ಯ ಜಿಲ್ಲೆಯ ಉಳುಮೆ ಸಂಸ್ಕೃತಿಯ ಉಳಿವಿಗಾಗಿ ಶಾಂತಿ, ಸೌಹಾರ್ದತೆ, ಸಹಬಾಳ್ವೆಗಾಗಿ ಪ್ರತಿಭಟನಾ ಧರಣಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಳೆ-ಬೆಳೆ ಇಲ್ಲದ ನಮ್ಮ ಕಡೆಯ ಜನರು ಮಂಡ್ಯ ಜಿಲ್ಲೆಯ ಗದ್ದೆಸೀಮೆಗೆ ಕಟಾವು ಟೈಮಲ್ಲಿ ಕೂಲಿನಾಲಿಗೆ ಹೋಗಿ ಬರುತ್ತಿದ್ದರು. ಅವರು ಮಂಡ್ಯ ಜಿಲ್ಲೆಯಲ್ಲಿ ಎಲ್ಲೆಲ್ಲು ಹಸಿರಾಗಿರುವ ಪರಿ, ನೀರು ಹರಿಯುವ ವೈಭೋಗ ವರ್ಣಿಸುತ್ತಿದ್ದರು. ನಾನು ಮಂಡ್ಯದ ಅಳಿಯನಾದ ಮೇಲೆ, ಗೆಳೆಯ ಕೆ.ಎಸ್.ಪುಟ್ಟಣ್ಣಯ್ಯ ಅವರ ಜೊತೆ ‘ಸರ್ವೋದಯ ಕರ್ನಾಟಕ’ ಪಕ್ಷ ಕಟ್ಟಿ ಇಲ್ಲಿ ಹೆಚ್ಚು ಓಡಾಡಿದ ಮೇಲೆ ನನಗೆ ತಿಳೀತು. ಇವರಿಗೂ ಇವರದೇ ಆದ ಕಷ್ಟ ಸುಖ, ದುಃಖ ದುಮ್ಮಾನಗಳು ಇವೆ ಅಂತ. ಈಗ ನಾನು ಮಾತಾಡಬೇಕಾಗಿರುವುದು ಇದಲ್ಲ; ಇಲ್ಲಿ ಹೆಚ್ಚಾಗಿ ನೀರು ಮಾತ್ರ ಹರಿಯುತ್ತಿಲ್ಲ. ಈ ನೆಲದಲ್ಲಿ ಕಣ್ಣಿಗೆ ಕಾಣದ ಒಳಿತಿನ ಅಂತರಲವೂ ಹರಿಯುತ್ತಿದೆ’ ಎಂದರು.

‘ಇದಕ್ಕೆ ಒಂದೆರಡು ಉದಾಹರಣೆ; ಇಸವಿ 1939, ಸ್ಥಳ: ಕೆರೆಗೋಡು ಪಕ್ಕದ ಹೊನಗಾನಹಳ್ಳಿ, ಅಲ್ಲೊಬ್ಬರು ಪ್ರಜ್ಞೆ ಇರುವ ವ್ಯಕ್ತಿ ಪುಟ್ಟಣ್ಣ ಅಂತ. ಇವರು ತಮ್ಮ ಊರ ಕೆರೆಯಲ್ಲಿ ಅಸ್ಪೃಶ್ಯರೂ ನೀರು ಬಳಸುವಂತೆ ಮಾಡುತ್ತಾರೆ. ಆ ಊರಿನ ಜಾತಿ ಮೂಢಾತ್ಮರು ಪುಟ್ಟಣ್ಣನವರಿಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಅಂದು ಪುಟ್ಟಣ್ಣ ‘ಮನುಷ್ಯರಿಲ್ಲದ ಈ ಊರಲ್ಲಿ ನಾನು ಇರಲ್ಲ’ ಅಂತ ನಿರ್ಧರಿಸಿ ಹೇಮಗಿರಿಬೆಟ್ಟದಲ್ಲಿ ನೆಲೆಸುತ್ತಾರೆ. ಅಲ್ಲೊಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸುತ್ತಾರೆ; ಇದು ಮಂಡ್ಯ ಮಣ್ಣೆಳಗೆ ಹರಿಯುತ್ತಿರುವ ಐಕ್ಯತೆಯ ಚೈತನ್ಯ’ ಎಂದರು.

‘ಇನ್ನೊಂದು, ಇಸವಿ 1931ರ ರಾಜರ ಆಳ್ವಿಕೆಯ ಕಾಲ; ಸ್ಥಳ ಸೋಮನಹಳ್ಳಿ, ಇಲ್ಲೊಂದು ಧೀರೋದಾತ್ತ ಹೃದಯವಂತಿಕೆಯ ಚಿಲುಮೆ ಇದೇ ನೆಲದಿಂದ ಉಕ್ಕುತ್ತದೆ. ಇದಕ್ಕೆ ಕಾರಣರು ಎಸ್.ಸಿ.ಮಲ್ಲಯ್ಯ. ಇವರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರೂ ಆಗಿದ್ದರು. ಇವರು ‘ಒಕ್ಕಲಿಗರ ವಸತಿ ನಿಲಯ’ ಸ್ಥಾಪಿಸಿ, ಅಲ್ಲಿ ಅಸ್ಪೃಶ್ಯ ಮಕ್ಕಳನ್ನೂ ಜೊತೆಗೆ ಸೇರಿಸಿ ಅವರ ವಿದ್ಯಾಭ್ಯಾಸವನ್ನೂ ನೋಡಿಕೊಂಡಿದ್ದರು. ಅಷ್ಟೇ ಅಲ್ಲ, ಊರಾಚೆ ಇದ್ದ ಅಸ್ಪೃಶ್ಯರನ್ನು ತಮ್ಮ ಮನೆ ಎದುರಿಗಿನ ತಮ್ಮದೇ ಜಾಗ ನೀಡಿ ಸಹಬಾಳ್ವೆಯಿಂದ ಸಮಾನವಾಗಿ ವಾಸಿಸುವಂತೆ ಮಾಡಿದ್ದರು. ಗಾಂಧಿ ಈ ಊರಿಗೆ ಭೇಟಿ ನೀಡಿ ಬೆರಗಾಗುತ್ತಾರೆ. ಪಂಚಮರ ಪ್ರತ್ಯೇಕ ಶಾಲೆಯು ಕಷ್ಟಪಟ್ಟು ನಡೆಯುತ್ತಿದ್ದ ಆ ಕಾಲದಲ್ಲಿ ಬೆರೆತು ಒಳಗೊಳ್ಳುವ ಈ ಚೋದ್ಯ ಈ ಊರಲ್ಲಿ ಸಂಭವಿಸಿದೆ.
ಮತ್ತೊಂದು.. ಕೋಡಳ್ಳಿ ಶಿವರಾಂ ಉಜ್ಜನಿಯ ಚೌಡೇಶ್ವರಿ ದೇವಸ್ಥಾನದಲ್ಲಿ ಕೊಂಡ ಹಾಯುವುದನ್ನು ನೋಡಲು ಕರೆದೊಯ್ದಿದ್ದರು. ದಾರಿಯಲ್ಲಿ ಒಂದು ಸೇತುವೆ ಬಳಿ ಕಾರು ಗಕ್ಕನೆ ನಿಂತಿತು; ಕೆಳಕ್ಕೆ ಇಳಿದೆವು. ಶಿವರಾಂ ಹೇಳಿದರು.. ಈ ಸೇತುವೆ ಕಟ್ಟಿದ ಕಂಟ್ರಾಕ್ಟರ್ ಸ್ವಾತಂತ್ರ್ಯ ಪೂರ್ವದ ನಿಡುಘಟ್ಟದ ಅಣ್ಣೆಗೌಡ. ಆ ಸೇತುವೆಯಲ್ಲಿ ಹುಳುಕು ಹುಡುಕಿ ಮೇಲಿನವರು ಒಂದಾಣೆ ದಂಡ ಹಾಕಿದಾಗ ಅವಮಾನ ತಾಳಲಾರದೆ ಸ್ವಾಭಿಮಾನಿ ಅಣ್ಣೆಗೌಡ ಆ ಸೇತುವೆಯಿಂದಲೇ ಕೆಳಕ್ಕೆ ಬಿದ್ದು ಪ್ರಾಣ ತ್ಯಜಿಸುತ್ತಾರೆ. ನಾನು ಸುಸ್ತಾಗಿ ಗಟ್ಟಿಮುಟ್ಟಾಗಿದ್ದ ಆ ಸೇತುವೆ ಮೇಲೆ ಕುಳಿತುಕೊಂಡೆ. ಒಂದೆರಡು ಸಿಗರೇಟು ಸೇದಿದೆ. ಇಂತವು ಎಷ್ಟೊ ಇನ್ನೆಷ್ಟೋ ಈ ನೆಲದೊಳಗೆ ಉಸಿರಾಡುತ್ತ ಕುಳಿತಿವೆ’ ಎಂದು ಹಳೆ ಘಟನೆಗಳನ್ನು ಸಭೆಯ ಮುಂದಿಟ್ಟರು.

‘ಜೊತೆಗೇ, ನಾವು ಕಂಡಂತೆ ಸಾಂಸ್ಕೃತಿಕ ನಾಯಕರಾಗಿದ್ದ ಕೆ.ವಿ.ಶಂಕರೇಗೌಡರು ರಾಜಕಾರಣಿಯೂ ಆಗಿದ್ದರು. ಸಚಿವರಾಗಿ ನ್ಯಾಯವಂತಿಕೆಯ ಆಡಳಿತ ನಡೆಸಿದ್ದನ್ನು ಕಂಡಿದ್ದೇವೆ. ರಾಜ್ಯದ ಜನಪರ ಹೋರಾಟಗಳಿಗೆ ನಾಯಕತ್ವ ಕೊಟ್ಟ ಕೆ.ಎಸ್.ಪುಟ್ಟಣ್ಣಯ್ಯನವರ ಹೃದಯ ಬಡಿತಗಳೂ ಈ ನೆಲದಲ್ಲಿದೆ. ಹೀಗೆಲ್ಲಾ ಚೈತನ್ಯದ ಅಂತರಲ ಈ ಭೂಮಿಯಲ್ಲಿ ಹರಿಯುತ್ತಿದ್ದುದರಿಂದಲೇ, ಅಪ್ರತಿಮ ದೇಶಪ್ರೇಮಿ, ಕ್ರಾಂತಿಕಾರಿ ಆಡಳಿತಗಾರ ಟಿಪ್ಪು ಸುಲ್ತಾನ್ ವಿರುದ್ಧ ಚೇಷ್ಟೆಯ ಕಟ್ಟುಕತೆ ಉರಿಗೌಡ ನಂಜೇಗೌಡರನ್ನು ಛೂ ಬಿಟ್ಟಾಗ ಅವು ನೆಗೆದುಬಿದ್ದವು. ನಮ್ಮ ಸಂತರು ಹೇಳುವ ‘ಐಕ್ಯತೆಯೇ ದೈವ; ಛಿದ್ರತೆಯೇ ದೆವ್ವ’ ಎಂಬ ಈ ನುಡಿ ಮಂಡ್ಯದ ಸುಪ್ತ ಪ್ರಜ್ಞೆಯಲ್ಲೇ ಇದೆ ಎಂದು ನನಗನ್ನಿಸುತ್ತಿದೆ’ ಎಂದು ಬಣ್ಣಿಸಿದರು.

‘ಇಂತಹ ನೆಲದಲ್ಲಿ, 1938ರಲ್ಲಿ ಶಿವಪುರ ಸ್ವಾತಂತ್ರ್ಯ ಧ್ವಜಸ್ಮಾರಕಕ್ಕೆ ನಾಕಾರು ಎಕರೆ ಭೂಮಿ ನೀಡಿದ ಈಡಿಗ ಸಮುದಾಯದ ಉದಾರ ವ್ಯಕ್ತಿ ಜೀವಿಸಿದ್ದ ಈ ಮಣ್ಣಲ್ಲಿ, ಧ್ವಜಾರೋಹಣ ಸಂದರ್ಭದಲ್ಲಿ ಮೊದಲ ಏಟುತಿಂದ ಧೀಮಂತ ಮಹಿಳೆಯ ಈ ನೆಲದಲ್ಲಿ ಇತ್ತೀಚೆಗೆ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಬಂದು ಊರನ್ನು ಛಿದ್ರಗೊಳಿಸಿದೆ. ದೇವರು, ಧರ್ಮ, ಧ್ವಜ, ಬಣ್ಣ ಇವುಗಳನ್ನು ಹಣ ಮಾಡುವುದಕ್ಕೆ, ಅಧಿಕಾರ ಹಿಡಿಯುವುದಕ್ಕೆ ನಿಜಭಕ್ತಿ ಇಲ್ಲದ ಕೆಲವರು ದುರುಪಯೋಗಪಡಿಸಿಕೊಂಡ ಪರಿಣಾಮ ಇದು. ಛಿದ್ರತೆ, ಭಿನ್ನಬಾವ ಹೆಚ್ಚುತ್ತಿದೆ. ಅಂದರೆ, ಯಾಕೋ ದೆವ್ವ, ಪಿಶಾಚಿಗಳು ಅಲ್ಲಿಗೆ ಎಂಟ್ರಿ ಕೊಟ್ಟಿವೆ ಅಂತಲೇ ಅರ್ಥ; ಮಂಡ್ಯ ನೆಲದಲ್ಲಿ ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ’ ಎಂದರು.

‘ನನಗೆ ಅನಿಸುವಂತೆ, ಇಗಾಗಲೆ ಜನತಾದಳ (ಜಾತ್ಯಾತೀತ) ಪಕ್ಷವು ಜಾತ್ಯಾತೀತವನ್ನು ತುಳಿದು, ‘ಚಾತುತ್ವರ್ಣ ಸಮಾಜವನ್ನೇ ತನ್ನ ದೇವರು’ ಅಂದುಕೊಂಡ ಆರ್‌ಎಸ್‌ಎಸ್‌ನ ಬಿಜೆಪಿ ಪಕ್ಷವನ್ನು ಆಲಂಗಿಸಿಕೊಂಡಿದ್ದು ಕಾರಣ; ಆ ಗಳಿಗೆಯಲ್ಲಿ ಅದರ ನೈತಿಕತೆ ಪತನವಾಯ್ತು. ಕೇವಲ ತಮ್ಮ ಹತ್ತು ತಿಂಗಳ ಪ್ರಧಾನಮಂತ್ರಿ ಅವಧಿಯಲ್ಲಿ ನೆನಪಲ್ಲಿಡುವಂತಹ ಕಾರ್ಯ ನಿರ್ವಹಿಸಿದಂತಹ ಮುತ್ಸದ್ಧಿ ಹೆಚ್.ಡಿ.ದೇವೇಗೌಡರ ಪಕ್ಷಕ್ಕೆ ಈ ಅವನತಿ ಬರಬಾರದಿತ್ತು. ಈಗ ಜನತಾದಳದ ಬೆನ್ನ ಮೇಲೆ, ತಲೆ ಮೇಲೆ ಸಂಘ ಪರಿವಾರದ ಬಿಜೆಪಿಯ ಛಿದ್ರಕಾರಿ ಶಕ್ತಿಗಳು ಸವಾರಿ ಮಾಡುತ್ತಿವೆ; ಆದ್ದರಿಂದ, ಕೆರಗೋಡು ಪ್ರಕರಣ ಉಂಟಾಗಿದೆ’ ಎಂದು ಜೆಡಿಎಸ್ ನಾಯಕರ ನಡೆಯನ್ನು ಖಂಡಿಸಿದರು.

‘ಈ ಕೆರಗೋಡು ಪ್ರಕರಣಕ್ಕೆ ನನಗೆ ಅನ್ನಿಸುವುದಿಷ್ಟೇ.. ಅದನ್ನು ನೋಡುವುದು ಬೇಡ, ನಮ್ಮನ್ನು ನಾವು ನೋಡಿಕೊಳ್ಳೋಣ. ನನ್ನನ್ನೂ ಸೇರಿ ನಾವೆಲ್ಲರೂ ಏನೇನೋ ಮಾಡಬೇಕಿತ್ತೊ, ಎಷ್ಟೆಷ್ಟೋ ಮಾಡಬೇಕಿತ್ತೊ ಅವುಗಳನ್ನು ಮಾಡಲಿಲ್ಲ. ಅದಕ್ಕೆ ಕೆರಗೋಡು ಪ್ರಕರಣ ನಡೆದಿದೆ. ಅವರು ಪಂಜು ಹಿಡಿದುಕೊಂಡು ಸಮಾಜದಲ್ಲಿ ಬೆಂಕಿ ಹಂಚಲು ಬಂದರೆ, ನಾವು ಮನೆಮನೆಗಳಲ್ಲಿ ಸಹಬಾಳ್ವೆಯ ಹಣತೆಯ ಬೆಳಕು ಬೆಳಗಿಸೋಣ’ ಎಂದು ಸಲಹೆ ನೀಡಿದರು.

‘ಹಾಗೆ ಇನ್ನೊಂದು ಮಾತು.. ನಂನಮ್ಮ ಸಂಘಟನೆಗಳು ಹೋರಾಡುವುದು, ಬೇಡಿಕೆ ಇಡುವುದು ಎಲ್ಲವೂ ತಾವು ಪ್ರತಿನಿಧಿಸುವ ಸಮುದಾಯಗಳದು ಮಾತ್ರ. ಇದರಾಚೆಗೆ ನಾವು ನೋಡಿದ್ದೀವಾ? ಹಾಗಾದರೆ, ಹೇಳುವವರು.. ಕೇಳುವವರು ಯಾರೂ ಇಲ್ಲದವರಿಗೆ ಯಾರೂ ಇಲ್ಲವಾ? ಉದಾಹರಣೆಗೆ, ನಮ್ಮೆಲ್ಲರಿಗೂ ಮಾತಾಪಿತೃಗಳಾದ ಬುಡಕಟ್ಟು ಆದಿವಾಸಿಗಳಿಗೆ ವಿಧಾನಸಭೆಯಲ್ಲಿ ಹಾಗೂ ಜನಪ್ರತಿನಿಧಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ. ಜೊತೆಗೆ ಒಂದು ನಿಗಮವಾದರೂ ಕನಿಷ್ಠ ಇರಬೇಕಿತ್ತಲ್ಲವೆ? ಹೀಗೆಯೇ ಅಲೆಮಾರಿ, ಪೌರಕಾರ್ಮಿಕ, ದೇವದಾಸಿ ಹಿನ್ನೆಲೆಯ ಸಮುದಾಯಗಳಿಗೂ ಕೂಡ. ಇವರ ಸಮಸ್ಯೆ ನಮ್ಮ ಸಮಸ್ಯೆಯೂ ಆಗಬೇಕು. ಆಗ ನಾವು ಸಂವೇದನಾಶೀಲತೆ ಪಡೆದುಕೊಳ್ಳುತ್ತೇವೆ. ಇವು ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತದೆ. ನಮ್ಮ ಸೈದ್ಧಾಂತಿಕತೆಯ ಬುಡ ಭದ್ರವಾಗುತ್ತದೆ. ಅದಕ್ಕಾಗಿ ನಮ್ಮ ಮೊದಲ ಆದ್ಯತೆಯ ಡಿಮ್ಯಾಂಡ್‌ಗಳು ಇವಾಗಿ, ತದನಂತರ ನಮ್ಮವು ಎಂಬ ಅಂತಃಕರಣ ನಮ್ಮದಾಗಬೇಕಿದೆ’ ಎಂದರು.

‘ನಮ್ಮ ಸಮಸ್ಯೆಗಳ ಸರಮಾಲೆಗಳ ಜೊತೆಗೆ ಮುಂದೆ ಕೆಲವೇ ದಿನಗಳಲ್ಲಿ 2024ರ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಆರ್‌ಎಸ್‌ಎಸ್‌ನ ಗುರು ಶ್ರೀ ಗೋಳ್ವಾಲ್ಕರ್ “ಚಾತುರ್ವಣ್ರ ಸಮಾಜವೇ ದೇವರು” ಎಂದು ಹೇಳುತ್ತಾರೆ. ಇದನ್ನೆ ಸಾವರ್ಕರ್ ‘ಹಿಂದುತ್ವ’ ಅನ್ನುತ್ತಾರೆ. ಕೇಂದ್ರ ಸರ್ಕಾರ ಇದನ್ನೆ ಅನುಷ್ಠಾನ ಮಾಡಲು ಹೊರಟಿರುವುದು. ಒಟ್ಟಿನಲ್ಲಿ ಒಕ್ಕಲುತನದ ಶೂದ್ರರು ಅನ್ನಿಸಿಕೊಂಡವರು, ದುಡಿಯುವ ಜನರು ಮೇಲಿನವರಿಗೆ ಸೇವಕರಾಗಿರಬೇಕು, ಕಾಲಾಳುಗಳಾಗಿರಬೇಕು ಎಂಬುದೇ ಇವರ ಮರ್ಮ. ಇದನ್ನು ನಾವು ಎಲ್ಲರಿಗೂ ಮನದಟ್ಟು ಮಾಡಬೇಕಿದೆ’ ಎಂದರು ಹೇಳಿದರು.

‘ಜೊತೆಗೆ, ಇಂತಹ ಆರ್‌ಎಸ್ಎಸ್‌ನ ಬಿಜೆಪಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಮೊದಲು ಜನ ಸಮುದಾಯಗಳಿಗೆ ದನಿ ಕೊಡುವ, ಆಸರೆಯಾಗುವ ಜನಾಂದೋಲನಗಳ ಕಾಲು ಕತ್ತರಿಸಲಾಗುತ್ತದೆ. ಈಗಾಗಲೇ ಕುಂಟುತ್ತ ನಡೆಯುತ್ತಿರುವ ಮಾಧ್ಯಮಗಳು ತೆವಳುತ್ತ ನಡೆಯುವಂತೆ ಮಾಡಲಾಗುತ್ತದೆ. ಆಡಿದ್ದೇ ಆಟ ನಡೆದಿದ್ದೇ ದಾರಿ ಎಂಬಂತೆ ಒಂಟಿ ಸಲಗನಂತೆ ತುಳಿದುಕೊಂಡು ಓಡಾಡುತ್ತಿರುವ ಈ ಆರ್‌ಎಸ್‌ಎಸ್ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಉಳಿಗಾಲ ಉಂಟೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೊನೆಯದಾಗಿ.. ಮಂಡ್ಯಕ್ಕೆ ಒಂದು ಕಿವಿಮಾತು; ಹೊನಗಾನಹಳ್ಳಿಯ ಅತಂತ್ರ ಮಹಾತ್ಮ ಪುಟ್ಟಣ್ಣ ಊರು ಬಿಟ್ಟು ಬೆಟ್ಟ ಸೇರಿಕೊಂಡರಲ್ಲಾ, ಅಂತಹದೇ ವ್ಯಕ್ತಿತ್ವದ ವ್ಯಕ್ತಿಯೊಬ್ಬ ಈಗ ಕೋಲಾರದ ತೇರಹಳ್ಳಿ ಬೆಟ್ಟದಿಂದ ಮೇಲುಕೋಟೆ ಬೆಟ್ಟಕ್ಕೆ ಬಂದು ಸೇರಿಕೊಂಡಿದ್ದಾನೆ. ಇವನ ಹೆಸರು ಕೆ. ರಾಮಯ್ಯ. ಇವನು ಇನ್ನೊಂದು ಬೆಟ್ಟಕ್ಕೆ ಜಿಗಿಯುವ ಮುನ್ನ, ಬಲೆ ಹಾಕಿ ಬಂಧಿಸಿಟ್ಟುಕೊಳ್ಳಿರಿ. ಇವಗೆ ನೆಲಕ್ಕೆ ಕಿವಿಗೊಟ್ಟು ಆಲಿಸಿ ಆ ಸ್ಪಂದನಗಳಿಗೆ ಆಕಾರ ಕೊಡುವ ಸಿದ್ದಿ ಇರುವಂತಿದೆ. ಇವನಿಂದ ಮಂಡ್ಯದ ನೆಲದಲ್ಲಿ ಅಂತರಗಂಗೆಯಾಗಿ ಹರಿಯುತ್ತಿರುವ ಚೈತನ್ಯಗಳ ಜೀವಂತ ಕತೆಗಳು ಮಕ್ಕಳ ಪುಸ್ತಿಕೆಗಳಾಗಿ ಮೂಡಿ ಬರಲಿ, ಈ ತುತ್ತು ಕೊಟ್ಟು ಮಕ್ಕಳನ್ನು ಬೆಳೆಸಿದರೆ ನಾಳೆ ಮಂಡ್ಯ ಬೆಳಗುತ್ತದೆ’ ಎಂದು ದೇವನೂರ ಮಹಾದೇವ ತಮ್ಮ ಭಾಷಣ ಮುಗಿಸಿದರು.

ಇದನ್ನೂ ಓದಿ; ತಮಿಳುನಾಡು: ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ‘ಮಲಯಾಳಿ ಬುಡಕಟ್ಟು’ ಮಹಿಳೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಪರೇಷನ್ ಡೆಮಾಲಿಶ್‌ಮೆಂಟ್ ಅಡಿಯಲ್ಲಿ 200ಕ್ಕೂ ಹೆಚ್ಚು ನಕ್ಸಲ್ ಸ್ಮಾರಕಗಳನ್ನು ನೆಲಸಮಗೊಳಿಸಿದ ಭದ್ರತಾ ಪಡೆಗಳು 

ನವದೆಹಲಿ: ನಕ್ಸಲ್ ಚಟುವಟಿಕೆಗಳ ವಿರುದ್ಧ ತೀವ್ರಗೊಂಡ ಕಾರ್ಯಾಚರಣೆ ನಿರ್ಣಾಯಕ ಹಂತವನ್ನು ಪ್ರವೇಶಿಸಿರುವುದಾಗಿ ಭದ್ರತಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.  ಆಪರೇಷನ್ ಡೆಮಾಲಿಶ್‌ಮೆಂಟ್ ಎಂದು ಕರೆಯಲ್ಪಡುವ ಇತ್ತೀಚಿನ ಕಾರ್ಯಾಚರಣೆಯ ಅಡಿಯಲ್ಲಿ ನಕ್ಸಲ್ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ಮರಿಸಲು ಮತ್ತು...

ಮುಸ್ಲಿಮರಿಗೆ ನೀಡಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಗೆ ಅರ್ಜಿ 

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ 5% ಮೀಸಲಾತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಮುಂಬೈ ಮೂಲದ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಕೀಲ ಸೈಯದ್ ಎಜಾಜ್ ಅಬ್ಬಾಸ್ ನಖ್ವಿ ಅವರು ವಕೀಲ...

ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ನಿಂದ ಸ್ಪರ್ಧಿಸುವ ಬಯಕೆಯನ್ನು ಪುನರುಚ್ಚರಿಸಿದ ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ 

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ನೇಮಮ್ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ಇಚ್ಛೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಭಾನುವಾರ ಪುನರುಚ್ಚರಿಸಿದ್ದಾರೆ. ನೇಮಮ್‌ನಲ್ಲಿ ಬಿಜೆಪಿಯ ಚುನಾವಣಾ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ...

ಯುವತಿಯನ್ನು ಬಂಧಿಸಿಟ್ಟು ಚಿತ್ರಹಿಂಸೆ : ಆರೋಪಿಯ ಬಂಧನ

ಯುವಕನೋರ್ವ ತನ್ನ ಲಿವ್-ಇನ್ ಸಂಗಾತಿಯಾದ 19 ವರ್ಷದ ಯುವತಿಯನ್ನು ಕೊಠಡಿಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಗುರುಗಾಂವ್‌ನ ಸೆಕ್ಟರ್ 69ರಲ್ಲಿ ನಡೆದಿದೆ. ಆರೋಪಿಯನ್ನು ದೆಹಲಿಯ ನರೇಲಾ ನಿವಾಸಿ 19 ವರ್ಷದ ಶಿವಂ ಎಂದು ಗುರುತಿಸಲಾಗಿದೆ....

ಕೋಝಿಕ್ಕೋಡ್‌: ಆಹಾರ ಸೇವಿಸಿ, ಬಿಲ್ ಪಾವತಿಸಲು ನಿರಾಕರಿಸಿದ ಮೂವರ ತಂಡದಿಂದ ರೆಸ್ಟೋರೆಂಟ್ ಧ್ವಂಸ

ಕೋಝಿಕ್ಕೋಡ್ (ಕೇರಳ): ಆಹಾರ ಸೇವಿಸಿ, ಹಣ ನೀಡಲು ನಿರಾಕರಿಸಿದ ಮೂವರು ಸದಸ್ಯರ ಗುಂಪೊಂದು ಬಿಲ್ ಕೇಳಿದ್ದಕ್ಕೆ ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು,...

ಲೈಂಗಿಕ ದೌರ್ಜನ್ಯ ಆರೋಪ : ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜ್ಯೋತಿಷ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ವಿಶೇಷ ಪೋಕ್ಸೋ ನ್ಯಾಯಾಲಯ...

ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಶಿಕ್ಷಕಿಯಿಂದ ಹಲ್ಲೆ

ಶಾಲಾ ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿ, ಆಕೆಯ ಹೆಸರನ್ನು ದಾಖಲಾತಿಯಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯ...

ಚಿಕ್ಕಮಗಳೂರಿನಲ್ಲಿ ಒಂದೇ ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು; ಆನೆ ಸೆರೆ; ಸರ್ಕಾರದ ವಿರುದ್ಧ ಸ್ಥಳೀಯರ ಪ್ರತಿಭಟನೆ

ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದಾಗ ಹೊಸಪೇಟೆ ಮೂಲದ ಬೋರಮ್ಮ(34), ಕಾಡಾನೆ...

ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಭಾನುವಾರ (ಫೆ.22) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೋರಾ ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ...

ದೆಹಲಿಯಲ್ಲಿ ಭಯೋತ್ಪಾದನಾ ಸಂಚು ಆರೋಪ: ಬಾಂಗ್ಲಾದೇಶಿ ಪ್ರಜೆಗಳು ಸೇರಿ ಎಂಟು ಮಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಸೂಚನೆಯ ಮೇರೆಗೆ ದೆಹಲಿಯಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್...