Homeಅಂಕಣಗಳುಮಾರಿ ಸೆಲ್ವರಾಜ್‍ರ ನೂತನ ಭಾರತದಲ್ಲಿ ಈಗ ಧನುಷ್ ’ಕರ್ಣ’

ಮಾರಿ ಸೆಲ್ವರಾಜ್‍ರ ನೂತನ ಭಾರತದಲ್ಲಿ ಈಗ ಧನುಷ್ ’ಕರ್ಣ’

- Advertisement -
- Advertisement -

‘ಭಾರತೀಯ ಚಿತ್ರರಂಗವನ್ನು ರಾಮಾಯಣ ಮತ್ತು ಮಹಾಭಾರತದ ಆಚೆಗೆ ನಿಂತು ನೋಡಲು ಸಾದ್ಯವಿಲ್ಲ’ ಎನ್ನುವ, ನಿರ್ದೇಶಕ ಮಣಿರತ್ನಂ ಅವರ ಮಾತು ಒಂದು ಮಟ್ಟಕ್ಕೆ ನಿಜ ಕೂಡ.

ನಮ್ಮಲ್ಲಿ ಮಹಾಭಾರತ ಮತ್ತು ರಾಮಾಯಣದ ಕಥೆ ಅಥವಾ ಆ ಕಾವ್ಯಗಳ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಬಂದ ಹಲವಾರು ಚಿತ್ರಗಳು ಯಶಸ್ವಿಯಾಗಿದೆ. ಕೆಲವು ಚಿತ್ರಗಳು ಈ ಕಥೆ/ಪಾತ್ರಗಳನ್ನು ಯಥಾವತ್ತಾಗಿ(ಪೌರಾಣಿಕವಾಗಿ) ಚಿತ್ರಿಸಿದ್ದರೆ, ಮತ್ತೆ ಕೆಲವು ಚಿತ್ರಗಳು ಅವುಗಳಿಂದ ಸ್ಪೂರ್ತಿ ಪಡೆದು, ಕಾಲಕ್ಕೆ ತಕ್ಕಂತೆ (ಆಧುನಿಕ)ವಿಶ್ಲೇಷಣಾತ್ಮಕವಾಗಿ ಚಿತ್ರಿಸಿವೆ.

ಮಹಾಭಾರತವನ್ನು ಆಧಾರವಾಗಿಟ್ಟುಕೊಂಡ ಸುಮಾರು 91 ಚಿತ್ರಗಳು, ರಾಮಾಯಣವನ್ನು ಆಧಾರವಾಗಿಟ್ಟುಕೊಂಡ ಸುಮಾರು 47 ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ, ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ.

ಮಹಾಭಾರತದಲ್ಲಿ ಅತ್ಯಂತ ಪ್ರಮುಖ ಮತ್ತು ದುರಂತ ನಾಯಕ ಎನಿಸಿಕೊಂಡ ಕರ್ಣನ ಪಾತ್ರವು ಹಲವು ನಿರ್ದೇಶಕರುಗಳಿಗೆ ಸ್ಪೂರ್ತಿಯಾಗಿದೆ. ‘ಕರ್ಣರಸಾಯನಮಲ್ತೆ ಭಾರತಂ’ ಎನ್ನುವ ಕುಮಾರವ್ಯಾಸನ ಮಾತಿನಂತೆ, ಮಹಾಭಾರತವೆಂದರೆ ಕರ್ಣ-ಕರ್ಣನೆಂದರೆ ಮಹಾಭಾರತ ಎನ್ನಬಹುದೇನೋ?

ಕರ್ಣನ ಹುಟ್ಟು, ಬೆಳವಣಿಗೆ, ಬೆಳೆದ ಮನೆತನದ ಜಾತಿಯ ಕಾರಣದಿಂದ ಅನುಭವಿಸಿದ ಅವಮಾನ, ಆತನ ಸ್ನೇಹಪರತೆ, ದಾನ, ಸತ್ಯ, ಪ್ರಾಮಾಣಿಕತೆ, ಧೈರ್ಯ, ನೈತಿಕತೆ ಮುಂತಾದ ಗುಣಗಳೆಲ್ಲವೂ ಆ ಪಾತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಈ ಕಾರಣಕ್ಕಾಗಿಯೇ ಕರ್ಣನ ಪಾತ್ರವನ್ನಿಟ್ಟುಕೊಂಡು ಹಲವು ಚಿತ್ರಗಳು ಬಿಡುಗಡೆಯಾಗಿವೆ. ಇನ್ನೂ ಮತ್ತಷ್ಟು ಚಿತ್ರಗಳು ಸೆಟ್ಟೇರಿವೆ.

ಅವುಗಳಲ್ಲಿ, ತಮಿಳಿನ ಯಶಸ್ವಿ ಯುವ ನಿರ್ದೇಶಕರಲ್ಲಿ ಒಬ್ಬರಾದ ಮಾರಿ ಸೆಲ್ವರಾಜ್ ನಿರ್ದೇಶನದಲ್ಲಿ ಇನ್ನೂ ಚಿತ್ರೀಕರಣ ಹಂತದಲ್ಲಿರುವ ತಮಿಳು ಚಿತ್ರ “ಕರ್ಣನ್” ಸದ್ಯ ಹೆಚ್ಚು ಚರ್ಚಿಸಲ್ಪಡುತ್ತಿರುವ ಚಿತ್ರವಾಗಿದೆ.

ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಮಾರಿ ಸೆಲ್ವರಾಜ್ ಈ ಹಿಂದೆ ತಮ್ಮ ಚೊಚ್ಚಲ ಸಿನಿಮಾ ‘ಪರಿಯೇರುಂ ಪೆರುಮಾಳ್’ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದರಲ್ಲದೆ ಆ ಸಿನೆಮಾಗ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಸಬ್-ಆಲ್ಟರ್ನ್ ಪರಿದೃಷ್ಟಿಯಿಂದ ಜಾತಿವ್ಯವಸ್ಥೆ ಮತ್ತು ಅದರ ಕಬಂದ ಬಾಹುಗಳ ಸಮಸ್ಯೆ ಮತ್ತು ಪರಿಣಾಮಗಳನ್ನು ಸಂವೇದನಾಶೀಲವಾಗಿ ದಾಟಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದರು. ಮುಖ್ಯವಾಹಿನಿಯ ಚಿತ್ರದಂತೆಯೇ ಮನರಂಜನೆ ಮತ್ತು ಹಣಗಳಿಕೆಯ ದೃಷ್ಟಿಯಲ್ಲೂ ‘ಪರಿಯೇರುಂ ಪೆರುಮಾಳ್’ ಯಶಸ್ವಿಯಾಗಿತ್ತು.

ಎರಡನೆಯದಾಗಿ, ಈಗ ಸೆಟ್ಟೇರಿರುವ ಸಿನಿಮಾದ ನಾಯಕನಾಗಿ ಅಭಿನಯಿಸುತ್ತಿರುವ ಧನುಷ್ ಕೂಡ ಈ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಧನುಷ್ ಮುಖ್ಯಪಾತ್ರದಲ್ಲಿ ನಟಿಸಿದ್ದ ವೆಟ್ರಿಮಾರನ್ ನಿರ್ದೇಶನದ ’ಅಸುರನ್’ ಚಿತ್ರ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ಅದೂ ಅಲ್ಲದೆ ಧನುಷ್ ಅವರ ‘ವಂಡರ್ ಬಾರ್’ ಬ್ಯಾನರ್ ಅಡಿಯಲ್ಲಿ ಅತ್ಯುತ್ತಮ ಚಿತ್ರಗಳ ನಿರ್ಮಾಣವಾಗುತ್ತಿದೆ. ಅವುಗಳೆಲ್ಲವೂ ಬಹುತೇಕ ಜಾತಿ ವ್ಯವಸ್ಥೆ ತಳಸಮುದಾಯಗಳನ್ನು ಶೋಷಿಸುವ ವಸ್ತು-ವಿಷಯಗಳನ್ನು ಹೊಂದಿರುವಂತವು.

ಕೆಲವು ದಿನಗಳ ಹಿಂದೆ ಈ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಮೇಕಿಂಗ್‍ನಲ್ಲಿ ಚಿತ್ರಕ್ಕಾಗಿ ಒಂದು ಹಳ್ಳಿಯನ್ನೇ ನಿರ್ಮಿಸುತ್ತಿರುವ ವಿಷಯ ಹೆಚ್ಚು ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಮೂರನೆಯದಾಗಿ, ಅದರ ಶೀರ್ಷಿಕೆಯಿಂದಲೇ ಮತ್ತಷ್ಟು ಕುತೂಹಲವನ್ನು ಹುಟ್ಟಿಸಿದೆ. ಕರ್ಣನ ಪಾತ್ರವನ್ನು ಅಥವಾ ಅದರ ಸ್ಪೂರ್ತಿಯಿಂದ ಮೂಡಿರುವ ಪಾತ್ರವನ್ನು ತಮಿಳಿನ ದಿಗ್ಗಜ ನಟರುಗಳು ಈ ಹಿಂದೆ ಅಭಿನಯಿಸಿದ್ದಾರೆ. ಈಗ ಇದು ಧನುಷ್ ಅವರ ಸರದಿಗೆ ಬಂದಿದೆ.

1964 ರಲ್ಲಿ ಬಿಡುಗಡೆಯಾಗಿದ್ದ ತಮಿಳು ಪೌರಾಣಿಕ ಚಿತ್ರ ‘ಕರ್ಣನ್’ ಭಾರತೀಯ ಮತ್ತು ತಮಿಳು ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗಿತ್ತು. ಈ ಚಿತ್ರದ ನಾಯಕ ಶಿವಾಜಿ ಗಣೇಶನ್ ಅವರ ನಟನೆ ತಮಿಳಯನಾಡಿನ ಜನರಲ್ಲಿ ಇಂದಿಗೂ ನೆನಪಿನಲ್ಲುಳಿದಿದೆ. ಬಿ ಆರ್ ಪಂತುಲು ನಿರ್ದೇಶಿಸಿದ್ದ ಈ ಚಿತ್ರ, 11ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (ಮೂರನೇ ಅತ್ಯುತ್ತಮ ಚಿತ್ರ) ಪಡೆದುಕೊಂಡಿತ್ತು. ಇಷ್ಟೇ ಅಲ್ಲದೇ ಎನ್. ಟಿ. ರಾಮಾರಾವ್ ಅವರಿಂದ ಹಿಡಿದು ಸಾವಿತ್ರಿ, ಮುತ್ತುರಾಮನ್, ಎಂ. ವಿ. ರಾಜಮ್ಮ ಮುಂತಾದವರ ದೊಡ್ಡ ತಾರಾಬಳಗವೇ ಇತ್ತು. ಕರ್ಣನ ಪಾತ್ರವನ್ನು ತಮ್ಮ ಅದ್ಭುತ ಅಭಿನಯದ ಮೂಲಕ ಶಿವಾಜಿ ಗಣೇಶನ್ ಕಟ್ಟಿಕೊಟ್ಟಿದ್ದರು.

1991ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಬಿಡುಗಡೆಯಾದ ಮತ್ತೊಂದು ಯಶಸ್ವಿ ತಮಿಳು ಚಿತ್ರ ‘ದಳಪತಿ’. ಮಹಾಭಾರತವನ್ನು ಅಳವಡಿಸಿಕೊಂಡಿದ್ದ ಈ ಸಮಕಾಲೀನ ಕಥೆಯಲ್ಲಿ ರಜನಿಕಾಂತ್ ಕರ್ಣನಿಂದ ಸ್ಪೂರ್ತಿ ಪಡೆದ ಪಾತ್ರವನ್ನು ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ನಿರ್ದೇಶಕ ಕರ್ಣನ ಪಾತ್ರವನ್ನು ಈ ಚಿತ್ರದಲ್ಲಿ ಹೆಚ್ಚು ಸಮಕಾಲೀನಗೊಳಿಸಿದ್ದಾರೆ.

ಹುಟ್ಟಿದಾಗಲೇ ತಾಯಿಂದ ಬೇರೆಯಾಗುವ ಮಗು(ಸೂರ್ಯ/ಕರ್ಣ) ಬೆಳೆಯುತ್ತಾ ದೇವರಾಜ್ (ದುರ್ಯೋಧನ) ಎನ್ನುವ ರೌಡಿಯ ಸ್ನೇಹವನ್ನು ಮಾಡುತ್ತಾನೆ. ಸುಬ್ಬಲಕ್ಷ್ಮಿ ಎನ್ನುವ ಬ್ರಾಹ್ಮಣ ಹುಡುಗಿಯನ್ನು ಪ್ರೀತಿಸಿ, ತನ್ನ ಹುಟ್ಟಿನ ಕಾರಣಕ್ಕೆ, ಸ್ನೇಹದ ಕಾರಣಕ್ಕೆ ಆಕೆಯ ತಂದೆಯಿಂದಲೇ ಅವಮಾನಿತನಾಗುತ್ತಾನೆ. ಅದೇ ಊರಿಗೆ ಡಿ.ಸಿಯಾಗಿ ಬರುವ ತನ್ನ ತಮ್ಮ ಅರವಿಂದಸಾಮಿ (ಅರ್ಜುನ) ಸೂರ್ಯ ಮತ್ತು ದೇವರಾಜ್‌ನನ್ನು ಮಟ್ಟಹಾಕಲು ಯತ್ನಿಸುತ್ತಾನೆ. ಇದರ ನಡುವೆ ತಾಯಿ (ಕುಂತಿ) ಪ್ರೀತಿಯ ಸಂಘರ್ಷವನ್ನೂ ಸಿನೆಮಾ ಒಳಗೊಂಡಿದೆ.

ಹೀಗೆ ಮಹಾಭಾರತದ ಕಥೆಯ ಹಿನ್ನಲೆಯಲ್ಲಿ ಕರ್ಣನ ಪಾತ್ರದಿಂದ ಸ್ಪೂರ್ತಿಗೊಂಡ ಈ ಚಿತ್ರ ರಜನಿಕಾಂತ್, ಮಣಿರತ್ನಂ ಮತ್ತು ತಮಿಳು ಚಿತ್ರರಂಗಕ್ಕೆ ಒಂದು ಮೈಲಿಗಲ್ಲಾಯಿತು.

ಪ್ರಸ್ತುತ ಧನುಷ್ ಈಗ ಕರ್ಣನಾಗಲಿದ್ದಾರೆ. ಆದರೆ ಇದು ಪೌರಾಣಿಕ ಚಿತ್ರವಲ್ಲ. ಬದಲಿಗೆ ನಿರ್ದೇಶಕರ ಹಿನ್ನೆಲೆಯಿಂದ ನೋಡುವುದಾದರೆ, ಪಕ್ಕಾ ತಳಸಮುದಾಯದ ಪರವಾದ ದನಿಯಿರುವ ಚಿತ್ರ ಇದು ಎನ್ನುವುದರಲ್ಲಿ ಅನುಮಾನವಿಲ್ಲ.

ನಿರ್ದೇಶಕನ ಮಾತುಗಳಲ್ಲೇ ಹೇಳುವುದಾದರೆ ”ಇದು ನನ್ನ ಎರಡನೇ ಚಿತ್ರ. ವಾಸ್ತವದಲ್ಲಿ ಇದೇ ಮೊದಲ ಚಿತ್ರವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ‘ಪರಿಯೇರುಂ ಪೆರುಮಾಳ್’ ಚಿತ್ರ ಮೊದಲು ಬರಬೇಕಾಯಿತು. ನನ್ನ ಸಿದ್ಧಾಂತವನ್ನು ಈ ಚಿತ್ರದಲ್ಲಿಯೇ ವ್ಯಕ್ತಪಡಿಸಿದ್ದೆ. ಇದರಲ್ಲಿ ನಾಯಕ ತಾನಾಯಿತು ತನ್ನ ಪಾಡಾಯಿತು ಎಂದು ಬದುಕುತ್ತಿರುತ್ತಾನೆ. ಆದರೂ ಆತನನ್ನು ಬಿಡದೇ ಕಾಡುವ ಜಾತಿ ವ್ಯವಸ್ಥೆಯ ಅನಿಷ್ಟಗಳನ್ನು ಸೂಕ್ಷ್ಮವಾಗಿ ತೊರಿಸುವಲ್ಲಿ ಯಶಸ್ವಿಯಾಗಿದ್ದೆ ಎಂದು ನಂಬಿದ್ದೇನೆ.

ಆದರೆ ‘ಕರ್ಣನ್’ ಚಿತ್ರದಲ್ಲಿ ನಾಯಕ ಅನ್ಯಾಯವನ್ನು ಸಹಿಸದ, ತನ್ನ(ತಳಸಮುದಾಯದ) ಜನಗಳಿಗಾಗಿ, ನ್ಯಾಯಕ್ಕಾಗಿ ಏನನ್ನು ಬೇಕಾದರೂ ಮಾಡುವ ಛಲವುಳ್ಳವನಾಗಿರುತ್ತಾನೆ. ಮಹಾಭಾರತದ ಕರ್ಣನ ತ್ಯಾಗ ಮತ್ತು ಧೈರ್ಯವನ್ನು ಈ ಚಿತ್ರದ ನಾಯಕನಲ್ಲಿ ಕಾಣಬಹುದು. ಪೌರಾಣಿಕ ಕರ್ಣನಿಗಿಂತ ವಿಭಿನ್ನವಾಗಿ ಹೋರಾಟ ಮಾಡಿ ತನ್ನ ಹಕ್ಕನ್ನು ಪಡೆಯುತ್ತಾನೆ’’ ಎನ್ನುತ್ತಾರೆ ಮಾರಿ ಸೆಲ್ವರಾಜ್.

ಶಿವಾಜಿ ಗಣೇಶನ್ ಮತ್ತು ರಜನಿಕಾಂತ್ ಕರ್ಣನಾಗಿ ನಟಿಸಿದ್ದ ಚಿತ್ರಗಳು ಉಂಟುಮಾಡಿದ ಸಂಚಲನವನ್ನು ಈ ಚಿತ್ರವು ಇನ್ನೂ ವಿಭಿನ್ನವಾಗಿ ಉಂಟುಮಾಡಬಹುದೆಂಬ ನಿರೀಕ್ಷೆಯನ್ನು ಚಿತ್ರಪ್ರೇಮಿಗಳಿಗೆ ಹುಟ್ಟಿಸಿದೆ. ತುದಿಗಾಲಿನಲ್ಲಿ ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ.

– ಪ್ರತಾಪ್ ಹುಣಸೂರು


ಇದನ್ನು ಓದಿ: ಕೀಲಾರ ಟೆಂಟ್ ಹೌಸ್-4: ಮನುಷ್ಯನ ಆಳದ ಮಾನವೀಯ ತಂತುಗಳನ್ನು ಶೋಧಿಸುವ ಕೀಸ್ಲೋಸ್ಕಿ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....