ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸಮಗ್ರ ತನಿಖೆಗಾಗಿ “ಕೊಂದವರು ಯಾರು” (“Who Killed Women in Dharmasthala”) ಜನಾಂದೋಲನವು ರಾಜ್ಯ ಮಹಿಳಾ ಆಯೋಗಕ್ಕೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದೆ.
ಪ್ರಮುಖ ಬೇಡಿಕೆಗಳು: ಈ ಪತ್ರದಲ್ಲಿ ಆಂದೋಲನವು ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ:
- ಮಹಿಳೆಯರ ನಾಪತ್ತೆ ಮತ್ತು ಕೊಲೆ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡ (S.I.T) ಈ ಪ್ರಕರಣಗಳನ್ನು ತನಿಖೆಯ ಕೇಂದ್ರವನ್ನಾಗಿ ಇಟ್ಟುಕೊಳ್ಳಬೇಕು.
- ತನಿಖೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೆ ತಾರ್ಕಿಕ ಅಂತ್ಯ ಮುಟ್ಟುವವರೆಗೂ ಮುಂದುವರೆಯಬೇಕು. ಈ ಪ್ರಕ್ರಿಯೆಗೆ ಸರ್ಕಾರ ಅಥವಾ ಯಾವುದೇ ಪ್ರಭಾವಿ ಶಕ್ತಿಗಳಿಂದ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವ ಪ್ರಯತ್ನಗಳು ನಡೆಯಬಾರದು.
- ತನಿಖೆಗೆ ಅಡ್ಡಿಪಡಿಸುತ್ತಿರುವ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕೆಲವು ಮಾಧ್ಯಮಗಳಿಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಬೇಕು.
- ಮಹಿಳೆಯರ ಘನತೆ ಮತ್ತು ಸುರಕ್ಷತೆಯು ತನಿಖೆಯ ಪ್ರಮುಖ ಅಂಶವಾಗಿರಬೇಕು, ರಾಜಕೀಯ ಅಥವಾ ಧಾರ್ಮಿಕ ವಿಚಾರಗಳಲ್ಲ.
ಘಟನೆಗಳ ಉಲ್ಲೇಖ ಧರ್ಮಸ್ಥಳದಂತಹ ಪವಿತ್ರ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಅತ್ಯಾಚಾರ, ಕೊಲೆ ಮತ್ತು ಅಪಹರಣಗಳ ಘಟನೆಗಳು ವರದಿಯಾಗಿವೆ. ಅವುಗಳಲ್ಲಿ ಕೆಲವು ಪ್ರಮುಖ ಪ್ರಕರಣಗಳನ್ನು ಆಂದೋಲನ ಉಲ್ಲೇಖಿಸಿದೆ:
- 2012: ಸೌಜನ್ಯ ಅಪಹರಣ ಮತ್ತು ಕೊಲೆ.
- 2012: ಸೌಜನ್ಯ ಪ್ರಕರಣಕ್ಕೆ 20 ದಿನಗಳ ಮೊದಲು ಆನೆ ಮಾವುತ ನಾರಾಯಣರೊಂದಿಗೆ ಅವರ ತಂಗಿ ಯಮುನಾ ಕೊಲೆ.
- 1986: ಪದ್ಮಲತಾ ಅಪಹರಣ, ಅತ್ಯಾಚಾರ ಮತ್ತು ಹತ್ಯೆ.
- 1979: ಟೀಚರ್ ವೇದವಲ್ಲಿ ಮೇಲಿನ ದಾಳಿ, ಅತ್ಯಾಚಾರ ಮತ್ತು ಸುಟ್ಟು ಕೊಲೆ.
ಈ ಪ್ರಕರಣಗಳ ಜೊತೆಗೆ ಇನ್ನೂ ಹಲವು ಮಹಿಳೆಯರು ನಾಪತ್ತೆಯಾಗಿರುವುದು ಅಥವಾ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆಂದೋಲನ ಹೇಳಿದೆ. ಈ ಘಟನೆಗಳನ್ನು ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಪರಿಗಣಿಸದಿರುವುದು ಆಘಾತಕಾರಿ ಎಂದು ಆಂದೋಲನ ತಿಳಿಸಿದೆ.
ಹಾಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಕೆಲವು ಮಾಧ್ಯಮಗಳಲ್ಲಿ ʼಮೀಡಿಯಾ ಟ್ರಯಲ್ʼ ನಡೆಯುತ್ತಿದೆ ಮತ್ತು ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ಆಯೋಜಿಸುತ್ತಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ತನಿಖೆ ಮಹಿಳೆಯರ ಘನತೆ–ಸುರಕ್ಷತೆಯನ್ನು ಕೇಂದ್ರೀಕರಿಸಬೇಕು; ರಾಜಕೀಯ–ಧಾರ್ಮಿಕ ವಿಚಾರಗಳನ್ನಲ್ಲ” ಎಂದು ಕೊಂದವರು ಯಾರು ಆಂದೋಲನವು ಆಗ್ರಹಿಸಿದೆ.
ಈ ಹಿನ್ನೆಲೆಯಲ್ಲಿ, ಸಾಕ್ಷಿಗಳ ರಕ್ಷಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪೂರ್ವ ನಿರ್ಧರಿತ ಹೇಳಿಕೆಗಳನ್ನು ನೀಡುತ್ತಿರುವ ರಾಜಕೀಯ ನಾಯಕರನ್ನು ನಿಯಂತ್ರಿಸಬೇಕು ಎಂದು ಆಂದೋಲನವು ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಮಾಡಿದೆ.
ಮಹಿಳಾ ಆಯೋಗದ ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷೆ: ಈ ಗಂಭೀರ ಪ್ರಕರಣಗಳ ವಿಚಾರಣೆಗಾಗಿ ಎಸ್‌ಐಟಿ ರಚನೆಯಲ್ಲಿ ಮಹಿಳಾ ಆಯೋಗದ ಸಕಾರಾತ್ಮಕ ಪಾತ್ರವನ್ನು ಆಂದೋಲನ ಶ್ಲಾಘಿಸಿದೆ. ಪ್ರಸ್ತುತ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ಡಾ. ನಾಗಲಕ್ಷ್ಮಿ ಚೌಧರಿಯವರು ಈ ಪ್ರಕರಣದಲ್ಲೂ ನ್ಯಾಯದ ಪರವಾಗಿ ದನಿಯೆತ್ತುತ್ತಾರೆ ಎಂದು ಆಂದೋಲನದ ಪ್ರತಿನಿಧಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹೋರಾಟವು ಕೇವಲ ಆಯೋಗದ ಜವಾಬ್ದಾರಿಯಲ್ಲ, ಬದಲಾಗಿ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರಿಗೆ ನ್ಯಾಯವನ್ನು ಒದಗಿಸುವ ಚಾರಿತ್ರಿಕ ಜವಾಬ್ದಾರಿಯೂ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಂದೋಲನದಲ್ಲಿ ಭಾಗವಹಿಸಿದವರು: ಈ ಆಂದೋಲನದಲ್ಲಿ “ನಾವೆದ್ದು ನಿಲ್ಲದಿದ್ದರೆ” ಸಂಘಟನೆಯ ಮಮತಾ ಯಜಮಾನ್, ಮಧುಭೂಷಣ್, ಜನವಾದಿ ಮಹಿಳಾ ಸಂಘಟನೆಯ ಲಕ್ಷ್ಮಿ ಕೆ.ಎಸ್, ಮಾನಸ ಬಳಗದ ಚಂಪಾವತಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಗೌರಿ, ದಲಿತ ಮಹಿಳಾ ಸಂಘಟನೆಯ ನಾಗಮಣಿ, ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ, ಸಾಧನಾ ಮಹಿಳಾ ಗುಂಪಿನ ವಿನುತಾ, ಚಂದ್ರಶಿ, ಗೀತಾ, ಆಯೆಷಾ, ಹಸಿರು ದಳದ ಮೀನಾಕ್ಷಿ ಮತ್ತು ಶಶಿಕಲಾ ಸೇರಿದಂತೆ ಅನೇಕ ಮಹಿಳಾ ಹಕ್ಕುಗಳ ಹೋರಾಟಗಾರರು ಭಾಗವಹಿಸಿದ್ದರು.
ಪೊಲೀಸ್ ಮಹಾನಿರ್ದೇಶಕರ ಭೇಟಿ ಈ ಆಂದೋಲನದ ಪ್ರತಿನಿಧಿಗಳಾದ ಮಧುಭೂಷಣ್, ಮನು ಚೌಧರಿ, ವಿನಯ್ ಶ್ರೀನಿವಾಸ್, ಮೀನಾಕ್ಷಿ ಮತ್ತು ಪದ್ಮಾವತಿ ಅವರು ಆಗಸ್ಟ್ 28ರಂದು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ, ಸಾಕ್ಷಿಗಳ ಮೇಲೆ ಮಾಧ್ಯಮ ಟ್ರಯಲ್ ನಡೆಯುತ್ತಿರುವ ಬಗ್ಗೆ ಗಮನ ಸೆಳೆದರು ಮತ್ತು ಅದನ್ನು ತಡೆಗಟ್ಟುವಂತೆ ಆಗ್ರಹಿಸಿದರು.