ನೂರಾರು ಪೌರಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 8 ದಿನಗಳಿಂದ ಧಾರವಾಡ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ನೇರ ನೇಮಕಾತಿ ಮತ್ತು ನೇರ ಪಾವತಿಗೆ ರಾಜ್ಯಸರ್ಕಾರ ಆದೇಶ ನೀಡಿದ್ದಾಗ್ಯೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈ ಆದೇಶವನ್ನು ಪಾಲಿಸದೆ ಪೌರಕಾರ್ಮಿಕರಿಗೆ ವಂಚನೆ ಮಾಡುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ನಾನುಗೌರಿ.ಕಾಂ ನೊಂದಿಗೆ ಮಾತನಾಡಿದ ಹೋರಾಟಗಾರರಾದ ವಿಜಯ್ ಗುಂತ್ರಾಲ್, “2017ರಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನೇರ ನೇಮಕಾತಿ ಮತ್ತು ನೇರ ಪಾವತಿಗೆಂದು ಆದೇಶ ಹೊರಡಿಸಿ 4 ವರ್ಷಗಳು ಕಳೆದರೂ ಇನ್ನೂ ಜಾರಿಗೆ ಬಂದಿಲ್ಲ. ಹಾಗಾಗಿ ಇದನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಆಗಿನಿಂದಲೂ ಪ್ರತಿಭಟಿಸುತ್ತಲೇ ಇದ್ದೇವೆ. ಈಗ ಕಳೆದ 8 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿ:ಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ: ಕಾಳಜಿ ವಹಿಸದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ
“ನೇರ ವೇತನ ಪಾವತಿ ಮಾಡುವುದಕ್ಕೆ 2018ರಲ್ಲಿ ಜಿಲ್ಲಾಧಿಕಾರಿಗಳು ಅನುಮೋದನೆ ಕೊಟ್ಟಿದ್ದಾರೆ. ಆದರೆ ಇಲ್ಲಿಯವರೆಗೂ ಇದು ಅನುಷ್ಠಾನಗೊಂಡಿಲ್ಲ. ಇಷ್ಟೇ ಅಲ್ಲದೇ, ಕನಿಷ್ಟ ವೇತನ ವೇತನ ಬಾಕಿ 9 ಕೋಟಿ, ಪಿಎಫ್ ವಂಚನೆಗೆ ಸಂಬಂಧಿಸಿದಂತೆ 3 ಕೋಟಿ, ತುಟ್ಟಿ ಭತ್ಯೆಯ ಬಾಕಿ 2 ಕೋಟಿ, 868 ಮಹಿಳಾ ಪೌರ ಕಾರ್ಮಿಕರಿಗೆ ನೀಡಬೇಕಾದ ವೈದ್ಯಕೀಯ ಬೋನಸ್ ಹಣ 21.70 ಲಕ್ಷ ಸೇರಿದಂತೆ ಸುಮಾರು 14 ಕೋಟಿಯ 21 ಲಕ್ಷದ 70ಸಾವಿರ ರೂ.ಗಳು ಮಹಾನಗರ ಪಾಲಿಕೆಯಿಂದ ಬಾಕಿ ಹಣ ಬರಬೇಕಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶ ಹೊರಬಿದ್ದಿದ್ದರೂ ಸಹ ನಮಗೆ ಇನ್ನೂ ಹಣ ಪಾವತಿಯಾಗಿಲ್ಲ” ಎಂದು ನೋವು ತೋಡಿಕೊಂಡರು.
ಪೌರ ಕಾರ್ಮಿಕರ ಪ್ರತಿಭಟನೆಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
“ಕಸ ತುಂಬಿಕೊಂಡು ಹೋಗುವ ಆಟೋ ಟಿಪ್ಪರ್ ವಾಹನ ಚಾಲಕರು, ತಮಗೆ 3 ತಿಂಗಳಿನಿಂದ ಬರಬೇಕಾಗಿರುವ ಸಂಬಳ ನೀಡಲು ಒತ್ತಾಯಿಸಿದ್ದಕ್ಕಾಗಿ, ಮಹಾನಗರ ಪಾಲಿಕೆಯ ಆಯುಕ್ತರು ಯಾವುದೇ ನೋಟೀಸ್ ನೀಡದೇ, 51 ಜನ ಚಾಲಕರನ್ನು ಕಾನೂನುಬಾಹಿರವಾಗಿ ಕೆಲಸದಿಂದ ತೆಗೆದಿದ್ದಾರೆ. ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು, ಸಂಬಳ ಬಾಕಿ ಉಳಿಸಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೇ ಆದೇಶ ಹೊರಡಿಸಿದ್ದರೂ ಪಾಲಿಕೆಯು ಇಂತಹ ಕೃತ್ಯವೆಸಗಿದೆ. ಪಾಲಿಕೆಯ ಆಯುಕ್ತರು ಮತ್ತು ಗುತ್ತಿಗೆದಾರರಾದ ಆದರ್ಶ್ ಎಂಟರ್‌ಪ್ರೈಸಸ್ ಸೇರಿಕೊಂಡು, 1948ರ ಕನಿಷ್ಠ ವೇತನ ಕಾಯ್ದೆಯ ಉಲ್ಲಂಘನೆ, 1936ರ ವೇತನ ಪಾವತಿ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ, ಈ ಗುತ್ತಿಗೆ ದಾರರು ಪರವಾನಗಿಯೇ ಇಲ್ಲದೇ ಕಳೆದ 16 ವರ್ಷಗಳಿಂದ ಪಾಲಿಕೆಯ ಟೆಂಡರ್ ಪಡೆದುಕೊಳ್ಳುತ್ತಿದ್ದು, 1970ರ ಕಾಂಟ್ರಾಕ್ಟ್ ಲೇಬರ್ ಕಾಯ್ದೆಯನ್ನೂ ಉಲ್ಲಂಘಿಸಿದ್ದಾರೆ. ಈ ಕಾನೂನಬಾಹಿರ ಗುತ್ತಿಗೆದಾರರಿಗೆ 14.60 ಕೋಟಿ ಮೌಲ್ಯದ 146 ವಾಹನಗಳನ್ನ ನಿತ್ಯ ನಿರ್ವಹಣೆಗೆ ನೀಡಲಾಗಿದೆ” ಎಂದು ವಿವರಿಸಿದರು.

ಇದನ್ನೂ ಓದಿ: ಕೊರೊನಾ ನಡುವೆಯೂ ಕೆಲಸ: ಮಾಸ್ಕ್ ಕೊಡದ ಪಾಲಿಕೆ – ಆತಂಕದಲ್ಲಿ ಪೌರಕಾರ್ಮಿಕರು
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರು ಕಳೆದ 8 ದಿನಗಳಿಂದ ಅಹೋರಾತ್ರಿ ಅನಿರ್ಧಿಷ್ಟಾವದಿ ಪ್ರತಿಭಟನೆಯನ್ನು ಮಾಡುತ್ತಿದ್ದು, ಇದುವರೆಗೂ ಸಹ ಯಾವುದೇ ಜನಪ್ರತಿನಿಧಿಗಳು ಇವರನ್ನು ಭೇಟಿಯಾಗಿ ಇವರ ಸಮಸ್ಯೆಗಳನ್ನು ಆಲಿಸಿರುವುದಿಲ್ಲ. ಆದರೂ ಕೆಲವು ಪೌರ ಕಾರ್ಮಿಕರು ತಮ್ಮ ಕೆಲಸವನ್ನು ಮುಗಿಸಿಕೊಂಡು ನಂತರ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಕರ್ತವ್ಯನಿಷ್ಠೆಯನ್ನು ಮೆರೆದಿದ್ದಾರೆ ಎಂದರು.
ಇದನ್ನೂ ಓದಿ:ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…
ಇದನ್ನೂ ಓದಿ: ಪೌರಕಾರ್ಮಿಕರನ್ನು ಪರಿಸರದ ಡಾಕ್ಟರುಗಳನ್ನಾಗಿಸಿದ ಶಿಕ್ಷಕ ನಾಗರಾಜ ಬಂಜಾರ


