ಕೊವಾಕ್ಸಿನ್

ಕೊರೊನ ವಾರಿಯರ್‌ಗಳಿಗೆ ಕೊವಾಕ್ಸಿನ್ ಚುಚ್ಚುಮದ್ದು ನೀಡುವ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ. ಅದರಂತೆ ತುಮಕೂರು ನಗರದಲ್ಲೂ ವಾಕ್ಸಿನ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ(ಡಿಎಚ್ಒ) ನಾಗೇಂದ್ರಪ್ಪ ಮತ್ತು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಜನಿ ಅವರು ಫೋಟೋ ಸೆಷನ್‌ಗೆ ಫೋಜು ನೀಡಿ ಕೊವಾಕ್ಸಿನ್ ತೆಗೆದುಕೊಂಡಂತೆ ನಾಟಕ ಮಾಡಿದರು. ಈ ದೃಶ್ಯವು ವೀಡಿಯೋದಲ್ಲಿ ದಾಖಲಾಗಿದೆ.

ಕೊವಾಕ್ಸಿನ್ ಚುಚ್ಚುಮದ್ದು ತೆಗೆದುಕೊಂಡು ಇತರೆ ಕೊರೊನಾ ವಾರಿಯರ್‌ಗಳಿಗೆ ಸ್ಪೂರ್ತಿ, ಉತ್ಸಾಹ ತುಂಬ ಬೇಕಾಗಿದ್ದ ಡಿಎಚ್ಒ ನಾಗೇಂದ್ರಪ್ಪ ವಾಕ್ಸಿನ್ ತೆಗೆದುಕೊಳ್ಳುತ್ತಿರುವಂತೆ ಪೋಸ್ ನೀಡಿದರೇ ಹೊರತು ಸೂಜಿ ಸುಚ್ಚಿಸಿಕೊಳ್ಳಲೇ ಇಲ್ಲ. ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಗೂ ಕೂಡ ವಾಕ್ಸಿನ್ ಕೊಡುತ್ತಿರುವಂತೆ ನಟಿಸಲಾಗಿದೆ. ಈ ವಿಡಿಯೋ ನಾನುಗೌರಿ.ಕಾಮ್‌ಗೆ ಲಭ್ಯವಿದ್ದು ಚುಚ್ಚುಮದ್ದು ಕೊಟ್ಟಂತೆ ಮಾಡಿದ ಮೇಲೆ ಚಪ್ಪಾಳೆ ತಟ್ಟಲಾಗಿದೆ.

ವಿಡಿಯೋ ನೋಡಿ►►

ಇದನ್ನೂ ಓದಿ: ಲಸಿಕೆ ಪಡೆದುಕೊಳ್ಳಲು ಹಿಂಜರಿಯುತ್ತಿರುವ ರಾಜ್ಯದ ವೈದ್ಯ ಸಮೂಹ! – ಕಾರಣ ಏನು?

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಅವರು ವಾಕ್ಸಿನ್ ತೆಗೆದುಕೊಂಡು ಇತರರಿಗೂ ವಾಕ್ಸಿನ್ ಪಡೆಯಬಹುದೆಂಬ ಮಾಹಿತಿ ರವಾನಿಸಿದ್ದಾರೆ. ಇವರ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಡಿಎಚ್‌ಒ ನಾಗೇಂದ್ರಪ್ಪ ಮತ್ತು ಪ್ರಾಂಶುಪಾಲೆ ವಾಕ್ಸಿನ್ ಪಡೆದಂತೆ ನಾಟಕ ಮಾಡಿರುವ ವಿಡಿಯೋ ಹರಿದಾಡುತ್ತಿದೆ. ಉನ್ನತ ಅಧಿಕಾರಿಗಳೇ ಹೀಗೆ ನಾಟಕ ಮಾಡಿ, ವಾಕ್ಸಿನ್ ತೆಗೆದುಕೊಳ್ಳಲು ಹಿಂಜರಿಕೆ ಮಾಡಿದರೆ ಕೆಳಹಂತದ ಕೊರೊನ ವಾರಿಯರ್ ಸಿಬ್ಬಂದಿಗಳು ತೆಗೆದುಕೊಳ್ಳುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.

ನಗರದಲ್ಲಿ ಪೌರಕಾರ್ಮಿಕರು ಕೊರೊನ ವ್ಯಾಪಿಸಿರುವ ಪ್ರದೇಶಗಳಲ್ಲಿ ನಿತ್ಯವೂ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ವಾಕ್ಸಿನ್ ಪ್ರಯೋಗ ಮಾಡಲಾಗುತ್ತಿದೆಯೇ ಹೊರತು ಆರೋಗ್ಯ ಅಧಿಕಾರಿಗಳಿಗೆ ವಾಕ್ಸಿನ್ ನೀಡಿಲ್ಲ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಧಿಕಾರಿಗಳು ತಾವು ಮೊದಲು ತೆಗೆದುಕೊಂಡು ಇತರರಲ್ಲಿ ಧೈರ್ಯ ತುಂಬಬೇಕಾಗಿತ್ತು. ಆದರೆ ಆ ಕೆಲಸವನ್ನು ಮಾಡಿಲ್ಲ. ಕೊವಾಕ್ಸಿನ್ ಬಗ್ಗೆ ವೈದ್ಯಲೋಕದಲ್ಲೇ ಅಭಿಪ್ರಾಯ ಬೇಧಗಳು ಇದೆ. ಅಂತಹ ಸಂದರ್ಭದಲ್ಲಿ ಕೊರೊನ ವಾರಿಯರ್‌ಗಳ ಮೇಲೆ ಅದೂ ಕೆಳಹಂತದಲ್ಲಿ ಕೆಲಸ ಮಾಡುವವ ಮೇಲೆ ವಾಕ್ಸಿನ್ ಪ್ರಯೋಗ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಅಧಿಕಾರಿ ವರ್ಗ ಉತ್ತರ ನೀಡಿಲ್ಲ.

ಆರೋಗ್ಯ ಅಧಿಕಾರಿಗಳು ವಾಕ್ಸಿನ್ ತೆಗೆದುಕೊಂಡು ಇತರರಿಗೂ ಮಾದರಿಯಾಗಬೇಕಿತ್ತು. ಕೊವಾಕ್ಸಿನ್ ವಾಕ್ಸಿನ್ ತೆಗೆದುಕೊಂಡರೆ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲವೆಂಬ ಬಗ್ಗೆ ಮಾನಸಿಕ ಸ್ಥೈರ್ಯ ತುಂಬುವಂತಹ ಕೆಲಸ ಮಾಡಬೇಕಿತ್ತು. ಅದು ಮಾಡದೇ ಪೋಟೋಗಳಿಗೆ ಪೋಸ್ ನೀಡಿದರೆ ಅದು ಸೂಕ್ತ ಪರಿಹಾರವಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.

ಆದರೆ ಈ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ, “ಈ ಹಿಂದೆ ಖುದ್ದಾಗಿ ಲಸಿಕೆ ಹಾಕಿಸಿಕೊಳ್ಳಲಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ದಾಖಲಾತಿಯು ತಾಂತ್ರಿಕ ಅಂಶಗಳಿಂದ ಅಪ್‌ಲೋಡ್ ಆಗಿರುವುದಿಲ್ಲ. ಹಾಗಾಗಿ ಈ ರೀತಿ ಮಾಡಬೆಕಾಯಿತು” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಕೋವಿಡ್ ಲಸಿಕೆ ಮೋದಿಯವರೇ ತೆಗೆದುಕೊಳ್ಳಲಿ, ನಂತರ ನಮಗೆ: ತೇಜ್ ಪ್ರತಾಪ್ ಯಾದವ್

LEAVE A REPLY

Please enter your comment!
Please enter your name here