ಬೆಂಗಳೂರಿನ ಹೂಡಿಯಿಂದ ಅಯ್ಯಪ್ಪನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ನೀರು ಸರಬರಾಜು ಪೈಪಿನ ರಿಪೇರಿ ಕಾರಣಕ್ಕೆ ಯಾರೋ ಬೃಹತ್ ಹೊಂಡ ತೆಗೆದು ಅದನ್ನು ಮುಚ್ಚದೆ ಪರಾರಿಯಾಗಿರುವ ಘಟನೆ ಜರುಗಿದೆ. ಇದರಿಂದ ವಾಹನ ಸಂಚರಕ್ಕೆ ತೀವ್ರ ಅಡಚಣೆಯಾದ ಕಾರಣ ಕೆ.ಆರ್ ಪುರ ಸಂಚಾರಿ ಪೊಲೀಸರು ರಸ್ತೆ ಗುಂಡಿ ಮುಚ್ಚಲು ಹರಸಾಹಸಪಟ್ಟ ಘಟನೆಗೆ ಬೆಂಗಳೂರು ನಗರ ಸಾಕ್ಷಿಯಾಗಿದೆ. ಇದು BBMPಯ ಕಳಪೆ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂಬ ಟೀಕೆಗಳು ಜಾಲತಾಣಗಳಲ್ಲಿ ವ್ಯಕ್ತವಾಗಿವೆ.
ಇಂದು ಬೆಳಿಗ್ಗೆಯೇ ಕೆ.ಆರ್ ಪುರ ಸಂಚಾರಿ ಪೊಲೀಸರು ಟ್ವೀಟ್ ಮಾಡಿ, “ಹೂಡಿಯಿಂದ ಅಯ್ಯಪ್ಪನಗರಕ್ಕೆ ಹೋಗುವ ರಸ್ತೆಯನ್ನು ಬಳಸಬೇಡಿ. ಯಾರೋ ನಮ್ಮ ಅನುಮತಿಯಿಲ್ಲದೆ ರಸ್ತೆಯಲ್ಲಿ ಹೊಂಡ ತೆಗೆದು ಈ ಸ್ಥಿತಿಯಲ್ಲಿ ಬಿಟ್ಟುಹೋಗಿದ್ದಾರೆ. ನಾವು ಇದನ್ನು ಮುಚ್ಚುತ್ತಿದ್ದು, ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ” ಎಂದು ಮನವಿ ಮಾಡಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ಅದರ ಫೋಟೊಗಳನ್ನು ಸಹ ಲಗತ್ತಿಸಿದ್ದರು.
Pls avoid hoodi to ayyappanagar road. Someone have dig the road without permission and they have left it like this. We are closing it and it will take some time. pic.twitter.com/HicCxHbSe9
— K.R.PURA TRAFFIC POLICE.BENGALURU. (@KRPURATRAFFIC) November 24, 2022
ಮತ್ತೊಂದು ಟ್ವೀಟ್‌ನಲ್ಲಿ “ನಮ್ಮ ಕರೆಗಳಿಗೆ ಬಿಬಿಎಂಪಿಯ ಯಾವ ಅಧಿಕಾರಿಗಳು ಸಹ ಸ್ಪಂದಿಸುತ್ತಿಲ್ಲ. ದಯವಿಟ್ಟು ಈ ರಸ್ತೆ ಗುಂಡಿ ಮುಚ್ಚಿಸಲು ಯಾರನ್ನಾದರೂ ಕಳಿಸಿಕೊಡಿ ಸರ್” ಎಂದು ಕೆ.ಆರ್ ಪುರ ಸಂಚಾರಿ ಪೊಲೀಸರು ಅವಲತ್ತು ಕೊಂಡಿದ್ದಾರೆ. ಆ ಟ್ವೀಟ್‌ಗೆ BBMP ಆಯುಕ್ತರಾದ ತುಷಾರ್ ಗಿರಿನಾಥ್‌ರವರನ್ನು ಸಹ ಟ್ಯಾಗ್ ಮಾಡಲಾಗಿದೆ.
Nobody from bbmp responding to our call. Pls send someone to close this pit sir pic.twitter.com/GWcCzoBNZS
— K.R.PURA TRAFFIC POLICE.BENGALURU. (@KRPURATRAFFIC) November 24, 2022
ಕೊನೆಯ ಟ್ವೀಟ್‌ನಲ್ಲಿ “ಹೇಗೊ ತಾತ್ಕಾಲಿಕವಾಗಿ ಮಣ್ಣಿನ ಮೂಲಕ ರಸ್ತೆ ಗುಂಡಿಯನ್ನು ಮುಚ್ಚಿದ್ದೇವೆ. ಆದರೆ ಇದನ್ನು ಶಾಶ್ವತವಾಗಿ ಮುಚ್ಚಲು ಕಾಂಕ್ರೀಟ್ ಅವಶ್ಯಕತೆಯಿದೆ” ಎಂದು ಬರೆಯುವ ಮೂಲಕ ರಸ್ತೆ ಹೊಂಡ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿರುವ ಫೋಟೊವನ್ನು ಪೊಲೀಸರು ಹಂಚಿಕೊಂಡಿದ್ದಾರೆ.
Somehow we have manage to close the pit temporary by filling it with mud. It requires some concrete to fix the pit completely and permanently. pic.twitter.com/BYEyl0xz8I
— K.R.PURA TRAFFIC POLICE.BENGALURU. (@KRPURATRAFFIC) November 24, 2022
ಯಾರಾದರೂ ಹೀಗೆ ಅಗೆದು ಹೇಗೆ ಬಿಟ್ಟು ಹೋಗುತ್ತಾರೆ? ಇದು ಇಡೀ ಪ್ರದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸಿದೆ… ಇದನ್ನು ಮಾಡಿದವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶಾಂತ್ ಎಂಬುವವರು ಪ್ರಶ್ನಿಸಿದರೆ, ಜನರ ಆಸ್ತಿಯಾದ ರಸ್ತೆಯನ್ನು ಹಾಳು ಮಾಡಿ, ಓಡಾಡುವ ಜನರ ಜೀವಕ್ಕೆ ಸಂಚಕಾರ ತಂದವರ ಮೇಲೆ ಬೆಂಗಳೂರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕ್ರುಶಿಕ ಎ.ವಿಯವರು ಒತ್ತಾಯಿಸಿದ್ದರು.
ಇದಕ್ಕೆ ಟ್ವೀಟ್ ಮೂಲಕವೇ ಉತ್ತರಿಸಿರುವ ಕೆ.ಆರ್ ಪುರ ಸಂಚಾರೀ ಪೊಲೀಸರು, “ಇದು bbmp, bwssb ಅಥವಾ bescom ಆಗಿರಬಹುದು, ನಮಗೆ ಖಚಿತ ಮಾಹಿತಿಯಿಲ್ಲ. ನಾವು ಅದನ್ನು ಕಂಡುಕೊಳ್ಳುತ್ತೇವೆ” ಎಂದಿದ್ದಾರೆ.
ನಮ್ಮಲ್ಲಿಯೂ ಇದೇ ಪರಿಸ್ಥಿತಿ ಇದೆ. ವೈಟ್‌ಫೀಲ್ಡ್, ಮಹದೇವಪುರ ಮತ್ತು ಮಾರತಹಳ್ಳಿಗೆ ಸಂಪರ್ಕ ಕಲ್ಪಿಸುವ ಚಿನ್ನಪನಹಳ್ಳಿ ರಸ್ತೆಯಲ್ಲಿಯೂ ಯಾರೋ ಅಗೆದು ಬಿಟ್ಟಿದ್ದಾರೆ. ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆದರೂ ಯಾರೂ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ದಯವಿಟ್ಟು ಪರಿಶೀಲಿಸಬಹುದೇ? ಎಂದು ಸತೀಶ್ ಕುಮಾರ್ ಎಂಬುವವರು ದೂರಿದ್ದಾರೆ.
ದಯನೀಯ ಆಡಳಿತದ ಸ್ಥಿತಿಯಿದು – ಪ್ರಿಯಾಂಕ್ ಖರ್ಗೆ
“ಬೆಂಗಳೂರು ಟ್ರಾಫಿಕ್ ಪೊಲೀಸರ ಈ ಟ್ವೀಟ್‌ಗಳು ಕರ್ನಾಟಕದ ದಯನೀಯ ಆಡಳಿತದ ಸ್ಥಿತಿಯನ್ನು ಚೆನ್ನಾಗಿ ಪ್ರತಿಫಲಿಸುತ್ತಿವೆ” ಎಂದು ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
The pathetic state of governance in Karnataka is well reflected in these tweets by Bengaluru traffic police.
Dear @CMofKarnataka BBMP doesn’t even respond to other Govt agencies, forget citizens. pic.twitter.com/CHyU4VrtxI
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 24, 2022
ಕೆ.ಆರ್ ಸಂಚಾರಿ ಪೊಲೀಸರ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ಅವರು, “ಪ್ರಿಯ ಮುಖ್ಯಮಂತ್ರಿಗಳೆ ಬಿಬಿಎಂಪಿಯು ನಾಗರಿಕರಿಗೆ ಮಾತ್ರವಲ್ಲ ಇತರ ಸರ್ಕಾರಿ ಸಂಸ್ಥೆಗಳಿಗೆ ಸ್ಪಂದಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಇಲಾಖೆಗಳ, ಸಚಿವರ, ಅಧಿಕಾರಿಗಳ ಮದ್ಯೆ ಸಮನ್ವಯತೆ, ಸಾಮರಸ್ಯ ಇಲ್ಲವೆನ್ನಲು ಟ್ರಾಫಿಕ್ ಪೊಲೀಸರು ಬಿಬಿಎಂಪಿ ವಿರುದ್ಧ ವ್ಯಕ್ತಪಡಿಸಿದ ಈ ಆಕ್ರೋಶವೇ ನಿದರ್ಶನ. ರಸ್ತೆ ಗುಂಡಿ ಮುಚ್ಚಲು ಪೊಲೀಸರು ಕೇಳಿದರೂ BBMP ಸ್ಪಂದಿಸಿಲ್ಲ. ರಾಜ್ಯ ನಡೆಸುವುದರಲ್ಲಷ್ಟೇ ಅಲ್ಲ, ತಮ್ಮ ನಗರಾಭಿವೃದ್ಧಿ ಇಲಾಖೆ ನಿರ್ವಹಣೆಯಲ್ಲೂ ಬಸವರಾಜ ಬೊಮ್ಮಾಯಿಯವರು ಸೋತಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ಸಚಿವ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ನ್ಯಾಯಾಲಯ


