ಕೊರೊನಾ ದಿನೇ ದಿನೇ ಉಲ್ಭಣಿಸುತ್ತಿರುವುದರ ಹಿನ್ನೆಲೆಯಲ್ಲಿ ಕಿರ್ಗಿಸ್ತಾನ್ ನಲ್ಲಿ ಸಿಕ್ಕಿಕೊಂಡಿರುವ 700 ತಮಿಳು ವಿದ್ಯಾರ್ಥಿಗಳು ಚೆನ್ನೈಗೆ ನೇರ ವಿಮಾನ ಸೇವೆ ಕಲ್ಪಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.
ಕಿರ್ಗಿಸ್ತಾನ್ ಸರ್ಕಾರವು, ಕೊರೊನಾ ಕಾರಣದಿಂದ ನಾವು ನಮ್ಮ ಸ್ವಂತನೆಲಕ್ಕೆ ತೆರಳುವಂತೆ ತಮಿಳುನಾಡಿನ 700 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೇಳಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಚೆನ್ನೈಗೆ ನೇರ ವಿಮಾನಗಳಿಲ್ಲದ ಕಾರಣ, ವಿದ್ಯಾರ್ಥಿಗಳು ತಮಿಳುನಾಡಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮಿಳುನಾಡಿಗೆ ವಿಶೇಷ ವಿಮಾನಯಾನ ವ್ಯವಸ್ಥೆ ಮಾಡುವಂತೆ ಅವರು ಕೇಂದ್ರ ಸರ್ಕಾರ ಮತ್ತು ತಮಿಳುನಾಡು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
62 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕಿರ್ಗಿಸ್ತಾನ್‌ನಲ್ಲಿ 8,141 ಕೊರೊನಾ ಸೋಂಕಿತರಿದ್ದಾರೆ. ಇದರಲ್ಲಿ 6,366 ಪ್ರಕರಣಗಳು ಬಿಷ್ಕೆಕ್ ನಲ್ಲಿ ಕೇಂದ್ರೀಕೃತವಾಗಿವೆ. ಅಲ್ಲಿಯೇ ತಮಿಳುನಾಡಿನ ವೈದ್ಯಕೀಯ ವಿದ್ಯಾರ್ಥಿಗಳು ಸಿಕ್ಕಿಕೊಂಡಿದ್ದಾರೆ. ಹಾಗಾಗಿ ಅವರು ಆದಷ್ಟು ಬೇಗ ತಾವು ತಮಿಳುನಾಡಿಗೆ ಮರಳಬೇಕೆಂದು ಮನವಿ ಮಾಡಿದ್ದಾರೆ.
ಸುಮಾರು 300 ವಿದ್ಯಾರ್ಥಿಗಳು ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತವನ್ನು ತಲುಪುವಲ್ಲಿ ಯಶಸ್ವಿಯಾದರು. ಆದರೆ ನೇರ ವಿಮಾನಗಳ ಕೊರತೆಯಿಂದಾಗಿ ಇತರೆ ಸುಮಾರು 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. “ಸರ್ಕಾರವು ನೇರ ವಿಮಾನಗಳನ್ನು ಒದಗಿಸದಿದ್ದರೆ, ನಮ್ಮ ಆಯ್ಕೆ ದೆಹಲಿಗೆ ಹೋಗಿ 7 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಉಳಿಯುವುದು. ನಂತರ ನಾವು ತಮಿಳುನಾಡಿಗೆ ತೆರಳಬೇಕು. ತಮಿಳುನಾಡಿಗೆ ನೇರ ವಿಮಾನಗಳ ಕೊರತೆಯಿಂದ ನಮಗೆ ಕಷ್ಟವಾಗುತ್ತಿದೆ. ಟಿಕೆಟ್ ದರವೂ ಹೆಚ್ಚಾಗಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಕೆಲವು ಸಂಸ್ಥೆಗಳು ಖಾಸಗಿ ವಿಮಾನಯಾನ ವ್ಯವಸ್ಥೆ ಮಾಡಿವೆ. ಆದರೆ ಅನೇಕರು ಸಹಾಯ ಸಿಗದೇ ಇಲ್ಲಿ ಉಳಿದಿದ್ದಾರೆ” ಎಂದು ಕಿರ್ಗಿಸ್ತಾನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿ ಸಂಸುದ್ದೀನ್ ಶಬೀರ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಮಾನ ಕಾರ್ಯಾಚರಣೆಯನ್ನು ತಮಿಳುನಾಡು ಸರ್ಕಾರ ನಿರ್ಬಂಧಿಸಿದೆ ಎಂದು ಕೇಂದ್ರ ಹೇಳಿದೆ.
ಜೂನ್ 29 ರಂದು ಡಿಎಂಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ”ತಮಿಳುನಾಡು ಸರ್ಕಾರದ ಕೋರಿಕೆಯ ಆಧಾರದ ಮೇಲೆ ರಾಜ್ಯಕ್ಕೆ ಕಡಿಮೆ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ನಡೆಸಲಾಗುತ್ತಿದೆ” ಎಂದು ಕೇಂದ್ರವು ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಕಿರ್ಗಿಸ್ತಾನ್‌ನಲ್ಲಿ ವಿದ್ಯಾರ್ಥಿಗಳ ಅವಸ್ಥೆ:
ಕಿರ್ಗಿಸ್ತಾನ್‌ನಲ್ಲಿ ಲಾಕ್‌ಡೌನ್ ಹೇರಿದಾಗಿನಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಹಾಯ ದೊರೆತಿಲ್ಲ. “ಚೆನ್ನೈಗೆ ಕೊನೆಯ ವಿಮಾನ ಜುಲೈ 4 ರಂದು ಇತ್ತು. ಮುಂದಿನ 15 ದಿನಗಳವರೆಗೆ ನಮಗೆ ವಿಮಾನಗಳಿಲ್ಲ. ಆದರೆ, ಕಿರ್ಗಿಸ್ತಾನ್ ಸರ್ಕಾರ ನಮ್ಮನ್ನು ಸ್ಥಳಾಂತರಗೊಳ್ಳಲು ಹೇಳಿದೆ. ಭಾರತೀಯ ವಿದ್ಯಾರ್ಥಿಗಳಿಗೆ ನಾವು ಜವಾಬ್ದಾರರಲ್ಲ ಎಂದು ಅವರು ನಮಗೆ ತಿಳಿಸಿದ್ದಾರೆ. ಆದ್ದರಿಂದ ನಾವು ಇಲ್ಲಿಂದ ಹೊರಡಲು ಬಯಸುತ್ತೇವೆ. ಇಲ್ಲಿಯವರೆಗೆ ಯಾವುದೇ ವಿದ್ಯಾರ್ಥಿ ಕೊರೊನಾ ಸೋಂಕಿಗೆ ಒಳಗಾಗಿಲ್ಲ ಎಂದು ಸಂಸುದ್ದೀನ್ ತಿಳಿಸಿದರು.
“ಪಾಕಿಸ್ತಾನ ಮತ್ತು ಭಾರತದಿಂದ ಅಕ್ಕಿ ಪೂರೈಕೆ ಕೂಡ ಸ್ಥಗಿತಗೊಂಡಿದ್ದು, ನಾವು ಅಗತ್ಯ ವಸ್ತುಗಳನ್ನು ಖರೀದಿಸುವುದು ಕಷ್ಟಕರವಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ : 16 ತಿಂಗಳಿಂದ ಬಾರದ ಶಿಷ್ಯವೇತನ: ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ 7ನೇ ದಿನಕ್ಕೆ
ವಿದ್ಯಾರ್ಥಿಗಳು ರಾಜಕಾರಣ ಮಾಡುವುದು ಸರಿಯೇ ತಪ್ಪೆ? ಇಲ್ಲಿದೆ ನೋಡಿ ಸ್ಪಷ್ಟ ಉತ್ತರ…


