ಎಂಥದ್ದೆ ಪರಿಸ್ಥಿತಿ ಬಂದರೂ ಸಹ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸಾರಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಡಿ.16ರಿಂದ ಕೋಲ್ಕತ್ತಾದಿಂದ ಆರಂಭಿಸಿ ಬಂಗಾಳದಾದ್ಯಂತ ಬೃಹತ್ ಸರಣಿ ರ್‍ಯಾಲಿಗಳನ್ನು ಆಯೋಜಿಸುವುದಾಗಿ ಘೋಷಿಸಿದ್ದಾರೆ.
ಈ ಮಸೂದೆಯನ್ನು ಧರ್ಮದ ಆಧಾರದಲ್ಲಿ ಭಾರತವನ್ನು ವಿಭಜಿಸುತ್ತದೆ. ನಾವು ಅಧಿಕಾರದಲ್ಲಿರುವವರೆಗೂ ಬಂಗಾಳದ ನೆಲದಿಂದ ಒಬ್ಬರನ್ನು ಸಹ ಧರ್ಮದ ಆಧಾರದಲ್ಲಿ ಹೊರಹಾಕಲು ಬಿಡುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
“ಈ ಮಸೂದೆಗೆ ಹೆದರಬೇಡಿ. ನಾವು ನಿಮ್ಮೊಂದಿಗಿದ್ದೇವೆ, ಮತ್ತು ನಾವು ಇಲ್ಲಿ ಇರುವವರೆಗೂ ಯಾರೂ ನಿಮ್ಮ ಮೇಲೆ ಏನನ್ನೂ ಹೇರಲು ಸಾಧ್ಯವಿಲ್ಲ” ಎಂದು ಅವರು ಖರಗ್‌ಪುರದಲ್ಲಿ ನಡೆದ ಸಭೆಯಲ್ಲಿ ಹೇಳಿದ್ದರು.
ಡಿಸೆಂಬರ್ 16ರಂದು ಕೋಲ್ಕತ್ತಾದಲ್ಲಿ ನಡೆಯುವ ಮಹಾರ್‍ಯಾಲಿಯು ಡಾ.ಅಂಬೇಡ್ಕರ್ ಪುತ್ಥಳಿಯಿಂದ ಆರಂಭಗೊಂಡು ಜೊರಾಸಾಂಕೊವರೆಗೂ ನಡೆಯಲಿದ್ದು ಸ್ವತಃ ಮಮತಾ ಬ್ಯಾನರ್ಜಿ ಸಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ಟಿಎಂಸಿ ಟ್ವಿಟ್ಟರ್ ಅಕೌಂಟ್‌ನಲ್ಲಿ ಘೋಷಿಸಲಾಗಿದೆ.
#BREAKING @MamataOfficial announces mega rally against #CitizenshipAmendmentBill2019 on December 16 in #Kolkata. The rally will begin near the statue of Dr BR Ambedkar and end at Jorasanko. Didi will walk in the rally
— All India Trinamool Congress (@AITCofficial) December 13, 2019
ತದನಂತರ ಡಿ.17ರಂದು ಸಹ ಜಾಧವ್‌ಪುರದಲ್ಲಿ ರ್‍ಯಾಲಿ ನಡೆಯಲಿದ್ದು ಮಹಾತ್ಮಗಾಂಧಿ ಪ್ರತಿಮೆವರೆಗೂ ಮೆರವಣಿಗೆ ಇರುತ್ತದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.
ಬಂಗಾಳದ ಪ್ರತಿ ಜಿಲ್ಲೆಯಲ್ಲಿಯೂ ಸಹ ಬೃಹತ್ ಕಾರ್ಯಕ್ರಮಗಳ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಯ ಕರಾಳ ಮುಖಗಳನ್ನು ಬಯಲಿಗೆಳೆದು ಜನರಿಗೆ ಅರಿವು ಮೂಡಿಸಲಿದ್ದೇವೆ ಎಂದಿದ್ದಾರೆ.


