ಸಂಪಾದಕೀಯ..
ಈ ವಾರ ನಾವು ಮಹಾದಾಯಿ ವಿಚಾರದ ಕುರಿತು ಆಗಿರುವ ಹೊಸ ಬೆಳವಣಿಗೆಗಳ ಕುರಿತು ಬರೆಯಬೇಕಿತ್ತು. ನೀರಿಗಾಗಿ ಬಾಯಾರಿ ಕೂತಿರುವ ಮುಂಬೈ ಕರ್ನಾಟಕದ ಕೆಲವು ಭಾಗಗಳ ರೈತರಿಗೆ ಅನುಕೂಲವೆಷ್ಟು? ವೋಟಿಗಾಗಿ ಬಾಯ್ದೆರೆದು ಕೂತಿರುವ ರಾಜಕಾರಣಿಗಳಿಗೆ ಲಾಭವೆಷ್ಟು ಎನ್ನುವುದನ್ನು ಬಿಡಿಸಿಡುವ ಕರ್ತವ್ಯ ನಮ್ಮ ಮೇಲಿತ್ತು. ಹಾಗೆಯೇ ಕೆಲವು ವಿವಾದಾಸ್ಪದ ತೀರ್ಮಾನಗಳನ್ನು ನೀಡುತ್ತಿರುವ ಸುಪ್ರೀಂಕೋರ್ಟು ಮಹಿಳೆಯರಿಗೆ ಸೇನಾ ಕಮ್ಯಾಂಡ್‌ಅನ್ನು ತೆರೆದಿಡುವ ಮಹತ್ವದ ಸಕಾರಾತ್ಮಕ ತೀರ್ಪು ನೀಡಿದೆ. ಇದರ ಕುರಿತು ಒಂದು ವರದಿ ನಮ್ಮಲ್ಲಿ ಬರಬೇಕಿತ್ತು. ಹಾಗೆಯೇ ಮೊನ್ನೆ ಮೊನ್ನೆ ತಾನೇ ದೆಹಲಿಯಲ್ಲಿ ಜನರ ಬಹುಮತದ ತೀರ್ಪಿನಿಂದ ಮತ್ತೆ ಗದ್ದುಗೆಗೇರಿದ ಕೇಜ್ರಿವಾಲ್, ಕೋಮುಗಲಭೆಯ ಸಂದರ್ಭದಲ್ಲಿ ನಿಷ್ಕಿçಯವಾಗಿದ್ದ ಕುರಿತು ಬರೆಯಬೇಕಿತ್ತು. ಯಾವ ಕಡೆಯೂ ‘ಪಕ್ಷಪಾತ’ (ಸತ್ಯದ ಕಡೆಯೂ!) ಮಾಡದೇ, ರಾಜ್‌ಘಾಟ್‌ನಲ್ಲಿ ಉಪವಾಸ ಕುಳಿತು ತಮ್ಮೆಲ್ಲಾ ಕಾರ್ಯಕರ್ತರು ಹೊಸ ಎಂಎಲ್‌ಎಗಳ ನೇತೃತ್ವದಲ್ಲಿ ಕೋಮು ಹಿಂಸೆ ತಡೆಯಲು ಮುಂದಾಗಬೇಕು ಎಂದೂ ಹೇಳಲಾಗದ ನಿಲುವಿನ ಕುರಿತು ಟಿಪ್ಪಣಿ ಬರೆಯುವ ಅಗತ್ಯವಿತ್ತು.
ಹಾಗೆಯೇ ದೆಹಲಿ ಹೈಕೋರ್ಟ್ನಲ್ಲಿ ಸಂವಿಧಾನ ಪಾಲಿಸಲು ಕಟಿಬದ್ಧರಾಗಿ ಕೂತಿರುವ ಮುರಳೀಧರ್ ‘ಹಿಂಸೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಕೊಂಡೊಯ್ಯುವ ಆಂಬುಲೆನ್ಸ್ಗಳಿಗೆ ರಕ್ಷಣೆ ನೀಡಿ’ ಎಂದು ದೆಹಲಿ ಪೊಲೀಸರಿಗೆ ತಾಕೀತು ಮಾಡಿದ್ದರು; ಅದರ ಮರುದಿನವೇ ಅವರನ್ನು ಪಂಜಾಬಿಗೆ ವರ್ಗಾವಣೆ ಮಾಡಿದ್ದುದರ ಕುರಿತು ವಿವರವಾಗಿ ದಾಖಲಿಸಬೇಕಿತ್ತು.
ಅದ್ಯಾವುದನ್ನೂ ಬರೆಯಲಾಗಿಲ್ಲ. ಏಕೆಂದರೆ ಈ ವಾರ ನಾಡಿನ ಸಾಕ್ಷಿಪ್ರಜ್ಞೆ, ಧೀಮಂತ ವ್ಯಕ್ತಿತ್ವದ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರನ್ನು ಕೀಳುಮಟ್ಟದಲ್ಲಿ ನಿಂದಿಸಲು ಒಬ್ಬ ಶಾಸಕನಿಂದ ಹಿಡಿದು ಒಂದಿಡೀ ಪರಿವಾರ ತೊಡೆ ತಟ್ಟಿ ನಿಂತಿತು. ಸ್ವತಃ ದೊರೆಸ್ವಾಮಿಯವರೇ ‘ನನ್ನ ವಿಚಾರ ಬಿಡಿ, ಜನರ ಸಮಸ್ಯೆಗಳನ್ನಿಟ್ಟುಕೊಂಡು ಬೀದಿಯಲ್ಲಿ ಹೋರಾಟ ಮಾಡಿ’ ಎಂದು ಕರೆ ನೀಡುವ ಔನ್ನತ್ಯ ಇರುವವರು. ಆದರೆ, ಈ ನೆಲದಲ್ಲಿ ಸ್ವತಂತ್ರ ನಾಗರಿಕರಾಗಿ ಬದುಕುತ್ತಿರುವ ಎಲ್ಲರೂ ಅವರ ಋಣದಲ್ಲಿದ್ದೇವೆ ಎಂಬುದನ್ನು ಮರೆಯಲಾದೀತೇ? ಸ್ವತಃ ಪತ್ರಕರ್ತರೂ ಆಗಿ ಬ್ರಿಟಿಷರಿಗೂ ಸೆಡ್ಡು ಹೊಡೆದಿದ್ದಲ್ಲದೇ, ತುರ್ತು ಪರಿಸ್ಥಿತಿಯಲ್ಲಿ ಸರ್ವಾಧಿಕಾರ ತೋರಿದ ಇಂದಿರಾಗಾಂಧಿಯವರಿಗೆ ನೇರ ಪತ್ರ ಬರೆದು ಕಾರ್ಯಕ್ರಮ ಸಂಘಟಿಸಿದವರು. ಅದಕ್ಕಾಗಿ ಜೈಲಿಗೆ ಹೋದವರು.

ಹಲವು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದವು; ಲಕ್ಷಾಂತರ ಅಭಿಮಾನಿಗಳು ಇದ್ದಾರೆ; ಸರ್ಕಾರ ನಡೆಸುವವರೂ ಇವರಿಗೆ ಸಹಾಯ ಮಾಡಲು ಹಾತೊರೆಯುತ್ತಾರೆ. ಆದರೆ ಇಂದಿಗೂ ಬಾಡಿಗೆ ಮನೆಯಲ್ಲಿರುವ, ತನ್ನ ಕನಿಷ್ಠ ಅಗತ್ಯಕ್ಕಿಂತ ಹೆಚ್ಚಿನ ಹಣ ಯಾವುದಾದರೂ ಪ್ರಶಸ್ತಿಯಿಂದ ಬಂದರೆ ಅದನ್ನು ಸಾಮಾನ್ಯ ಜನರ ಹೋರಾಟಕ್ಕೆ ನೀಡಿಬಿಡುವ ದೊರೆಸ್ವಾಮಿಯವರ ಮೇಲೆ ನೀಚ ಆರೋಪಗಳನ್ನು ಮಾಡಲಾಗುತ್ತಿದೆ. ಬಹುಶಃ ಇದು ಈ ಕಾಲಧರ್ಮವೇ ಇರಬಹುದು. ಸಾರ್ವಜನಿಕ ಜೀವನದಲ್ಲಿ ಘನತೆಯನ್ನು ಇಟ್ಟುಕೊಂಡಿದ್ದಾರೆ ಎಂದು ಭಾವಿಸಲಾದ ಸುರೇಶ್ ಕುಮಾರ್ ಅವರು ಸಜ್ಜನಿಕೆಯ ಸೋಗನ್ನು ಇಲ್ಲೂ ಪ್ರದರ್ಶಿಸಿ ಬೆತ್ತಲಾಗಿದ್ದಾರೆ. ಹಿಂಸೆ, ದ್ವೇಷ, ಅಧರ್ಮ ಮತ್ತು ಸುಳ್ಳಿನ ಬುನಾದಿಯ ಮೇಲೆ ನಿಂತಿರುವ ಸೌಧದ ನಿವಾಸಿಗಳೆಲ್ಲರೂ ಒಟ್ಟಾಗಿದ್ದಾರೆ.
ಇಂತಹವರು ಹರಿಬಿಡುವ ಸುಳ್ಳಿನ ಸರಮಾಲೆಗೆ ಉತ್ತರವಾಗಿ ದೊರೆಸ್ವಾಮಿಯವರ ಬಳಿ ‘ಜೈಲಿನಲ್ಲಿದ್ದಕ್ಕೆ ಪುರಾವೆ ಕೇಳಿ’ ಅದನ್ನು ಪ್ರಕಟಿಸುವ ಸ್ಥಿತಿಗೆ ಇಂದಿನ ಪತ್ರಿಕೋದ್ಯಮ ಇಳಿದಿದೆ. ಎರಡು ಟಿವಿ ಚಾನೆಲ್‌ಗಳು ಯತ್ನಾಳ್‌ಗಿಂತಲೂ ನೀಚ ಮಟ್ಟಕ್ಕೆ ಇಳಿದುಬಿಟ್ಟವು. ಯಾವುದಕ್ಕೂ ದಾಖಲೆಯಿಲ್ಲದ, ದಾಖಲೆ ಮಟ್ಟದ ಹಿಂಸೆ ಮತ್ತು ಸುಳ್ಳಿನ ಖ್ಯಾತಿ ಹೊಂದಿರುವ ಪ್ರಧಾನಿಯ ಆಡಳಿತದಲ್ಲಿ ದೊರೆಸ್ವಾಮಿಯವರೂ ದಾಖಲೆ ತೋರಿಸಬೇಕಾದ ಪರಿಸ್ಥಿತಿ ಬಂದಿದೆಯೆಂದರೆ ಅಲ್ಲಿಗೆ ಸಮಾಜ ಎಷ್ಟು ಕೊಳೆದಿದೆ ಎಂಬುದನ್ನು ಊಹಿಸಬಹುದು.
ಇಂತಹ ದುಸ್ಥಿತಿಯಲ್ಲೂ ನಮಗೆ ಆಶಾವಾದ ಹುಟ್ಟಿಸುವುದು ದೊರೆಸ್ವಾಮಿಯವರೇ. ಈ ಬೆಳವಣಿಗೆ ಸಂಭವಿಸಿದ ಹೊತ್ತಿನಲ್ಲೂ ತಮ್ಮ ವ್ಯಕ್ತಿತ್ವದ ಘನತೆಯನ್ನು ಉಳಿಸಿಕೊಂಡು ನಾಡಿನ ಬಗ್ಗೆ, ಜನಸಾಮಾನ್ಯರ ಬಗ್ಗೆ ಚಿಂತಿಸುವ ಅವರು ನಮಗೆ ಮಾದರಿ; ನಮ್ಮ ಪತ್ರಿಕೆಯಲ್ಲಿ ಅವರ ಅಂಕಣ ಪ್ರಕಟವಾಗುವುದು ನಮಗೆ ಹೆಮ್ಮೆಯ ಸಂಗತಿ.


