ಡಿಜಿಟಲ್ ಲೋಕ ವ್ಯಾಪಿಸಿಕೊಂಡಿರುವ ಬಗೆ ವಿಸ್ಮಯವಾಗೇನು ಉಳಿದಿಲ್ಲ. ಬೆಳಗಿನ ಅಲಾರಂ ಗಡಿಯಾರದ ಬದಲು ಮೊಬೈಲ್‍ನಲ್ಲಿ ಸದ್ದು ಮಾಡುತ್ತದೆ. ಅಲ್ಲಿಂದ ಶುರುವಾದದ್ದು ಬದುಕಿನ ಎಲ್ಲ ಸಣ್ಣ ಪುಟ್ಟ ಸಂಗತಿಗಳಲ್ಲೂ ಹಾಸುಹೊಕ್ಕಾಗಿದೆ. ಹೀಗೆ ಸಮಾಜ, ಸಂಸ್ಕೃತಿಗಳಲ್ಲಿ ಬೆರೆತು ಹೋಗಿರುವ ತಂತ್ರಜ್ಞಾನ ಕನ್ನಡದ ಅಕ್ಷರಲೋಕದಲ್ಲಿ ಬೆರೆಯುವುದಕ್ಕೆ ಬಹಳ ಕಾಲವನ್ನೇ ತೆಗೆದುಕೊಂಡಿತು.
ಇದಕ್ಕೆ ಕಾರಣ ತಂತ್ರಜ್ಞಾನದ ಬಗ್ಗೆ ನಮ್ಮೊಳಗೆ ಇದ್ದ ಅವ್ಯಕ್ತ ಭಯ. ತಂತ್ರಜ್ಞಾನ ಅಸ್ತಿತ್ವದಲ್ಲಿರುವ ಮಾದರಿಗಳನ್ನು, ವಿನ್ಯಾಸಗಳನ್ನು ಒಡೆದುಬಿಡುವ ಆತಂಕ, ಡಿಜಿಟಲ್ ಅವತಾರದಲ್ಲಿ ಕನ್ನಡ ಕಾಣಿಸಿಕೊಳ್ಳುವುದನ್ನ ತಡವಾಗಿಸಿದೆ. ನೆರೆಯ ಪ್ರಾದೇಶಿಕ ಭಾಷೆಗಳು ಡಿಜಿಟಲ್ ಲೋಕದಲ್ಲಿ ತಮ್ಮ ಭಾಷೆಗಳನ್ನು ಮೆರೆಸಲಾರಂಭಿಸಿದ ಮೇಲೆ ಕನ್ನಡ ಡಿಜಿಟಲ್ ಪ್ರಯೋಗಕ್ಕೆ ತೆರೆದುಕೊಳ್ಳುವ ಧೈರ್ಯ ಮಾಡಿತು ಎನ್ನಬಹುದು.
ಮೇಲೆ ಹೇಳಿದ ಭಯ ಮತ್ತು ಧೈರ್ಯಕ್ಕೆ ಒಂದು ಉತ್ತಮ ಉದಾಹರಣೆ ಕನ್ನಡ ಪುಸ್ತಕೋದ್ಯಮ. ದಶಕಗಳಿಂದ ಡಿಜಿಟಲ್ ಪುಸ್ತಕ ಅಥವಾ ಇ ಬುಕ್ ಕುರಿತು ಚರ್ಚೆಗಳು ನಡೆಯುತ್ತಿವೆ. ನೆರೆಯ ಭಾಷೆಗಳ ಸಾಹಿತ್ಯ ಇ ಬುಕ್‍ಗಳ ರೂಪದಲ್ಲಿ ಹೊರಬರಲಾರಂಭಿಸಿ ವರ್ಷಗಳಾಗಿವೆ.
ಆದರೆ ಕನ್ನಡದಲ್ಲಿ ಇ ಬುಕ್‍ನ ಅಲೆ ಏಳುವುದಕ್ಕೆ ತುಂಬಾ ಸಮಯವೇ ಬೇಕಾಯಿತು. ಒಂದು ತಂತ್ರಜ್ಞಾನ, ಇನ್ನೊಂದೆಡೆ ಪ್ರಕಾಶಕರ ತೆರೆದ ಮನಸ್ಸು, ಎರಡರ ಅಲಭ್ಯತೆ ಕಾರಣದಿಂದ ತಡವಾಯಿತು. ದಶಕದ ಹಿಂದೆ ಕ್ವಿಲ್ ಬುಕ್ಸ್ ಅದಾಗಲೇ ಮುದ್ರಣಗೊಂಡಿದ್ದ ಕನ್ನಡದ ಪುಸ್ತಕಗಳನ್ನು ಇ ಬುಕ್ ರೂಪದಲ್ಲಿ ನೀಡುವ ಪ್ರಯತ್ನ ಮಾಡಿದರೂ, ಯಶಸ್ಸು ಕಾಣಲಿಲ್ಲ.
ಇವರ ಬೆನ್ನ ಹಿಂದೆಯೇ ಡೈಲಿಹಂಟ್ (ಮೊದಲು ನ್ಯೂಸ್‍ಹಂಟ್) ದೊಡ್ಡ ಪ್ರಮಾಣದಲ್ಲಿ ಕನ್ನಡದ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ನೀಡುವ ಸಾಹಸಕ್ಕೆ ಕೈಹಾಕಿತು. ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಸುದ್ದಿ ಹಂಚುವ ಕೆಲಸ ಮಾಡುತ್ತಿದ್ದ ಡೈಲಿಹಂಟ್, ಪುಸ್ತಕಗಳ ಮೂಲಕ ಮತ್ತೊಂದು ಮಾರುಕಟ್ಟೆಯನ್ನು ಅನ್ವೇಷಿಸುವ ಉಮೇದಿನಲ್ಲಿತ್ತು. ಆದರೆ ಅದೂ ಯಶ ಕಾಣಲಿಲ್ಲ. ಈ ಎರಡೂ ಸಂಸ್ಥೆಗಳ ಸೋಲಿನ ಹಿಂದೆ ಇದ್ದಿದ್ದು ತಂತ್ರಜ್ಞಾನ.

ಮೊಬೈಲ್ ಅಪ್ಲಿಕೇಷನ್ಸ್ ಮೂಲಕ ಪುಸ್ತಕ ಓದುವುದು ಹೇಗೆ ಎಂಬುದು ಅನೇಕರಿಗೆ ತಿಳಿದಿರಲಿಲ್ಲ. ಇಂದು ಸುಲಭದ ದರಕ್ಕೆ ಸಿಕ್ಕುವ ಸ್ಮಾರ್ಟ್‍ಫೋನ್‍ಗಳು ಆಗಿರಲಿಲ್ಲ. ಇಂಟರ್‌ನೆಟ್ ಅಗ್ಗವಿರಲಿಲ್ಲ. ಆನ್‍ಲೈನ್ ಹಣ ಪಾವತಿ ಇಂದಿನಷ್ಟು ಸುಲಭವಾಗಿರಲಿಲ್ಲ. ಇನ್ನೊಂದೆಡೆ ಪ್ರಕಾಶಕರು ನಮ್ಮ ಓದುಗರನ್ನು ಕಸಿದುಕೊಳ್ಳುವ ಹುನ್ನಾರವೆಂದೇ ತಿಳಿದು, ಪುಸ್ತಕಗಳನ್ನು ನೀಡುವುದಕ್ಕಾಗಿ, ತಮ್ಮ ಲೇಖಕರು ಪುಸ್ತಕದ ಹಕ್ಕುಗಳನ್ನು ನೀಡುವುದಕ್ಕಾಗಲಿ ಅವಕಾಶ ಮಾಡಿಕೊಡಲಿಲ್ಲ. ಒಂದು ಉದ್ಯಮವಾಗಿ ಬೆಳೆಯುವ ಕನಸು ಕಂಡಿದ್ದ ಇ-ಬುಕ್ ಪುಸ್ತಕೋದ್ಯಮ ಮೊದಲ ಹೆಜ್ಜೆಯಲ್ಲೇ ಎಡವಿತ್ತು. ಆದರೆ ನಾಲ್ಕೈದು ವರ್ಷಗಳಲ್ಲಿ ಚಿತ್ರಣ ಬದಲಾಗಲಾರಂಭಿಸಿತು.
ಉತ್ಸಾಹಿ ತರುಣರ ಸಾಹಸ
2015ರಲ್ಲಿ ಆರಂಭವಾದ ಧಾರವಾಡದ ವಿವಿಡ್‍ಲಿಪಿ ಕನ್ನಡದ ವಿವಿಧ ಪ್ರಕಾಶನ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡದ 500ಕ್ಕೂ ಹೆಚ್ಚು ಕೃತಿಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಿದೆ. “ಹಣ ಮಾಡುವುದಕ್ಕೆಂದೇ ಶುರುಮಾಡಿದ್ದಲ್ಲ. ಹಳೆಯ ಮತ್ತು ಹೊಸ ತಲೆಮಾರನ್ನು ಬೆಸೆಯುವುದು ನಮ್ಮ ಉದ್ದೇಶವಾಗಿತ್ತು. ಇದನ್ನು ಗಮನದಲ್ಲಿರಿಸಿಕೊಂಡು ಇ ಬುಕ್ ಪ್ರಕಟಿಸುವುದಕ್ಕೆ ಹೊರಟೆವು” ಎಂದು ವಿವಿಡ್‍ಲಿಪಿಯ ನೇತೃತ್ವ ವಹಿಸಿಕೊಂಡಿರುವ ವಿಜಯ್‍ಕುಮಾರ್ ಆರಂಭದ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಾರೆ.

ಧಾರವಾಡದ ಮನೋಹರ ಗ್ರಂಥಮಾಲ, ಅಕ್ಷರ ಪ್ರಕಾಶನದಂತಹ ಮುಖ್ಯ ಪ್ರಕಾಶಕರ ಪುಸ್ತಕಗಳನ್ನು ಮೊದಲು ಡಿಜಿಟಲ್ ರೂಪದಲ್ಲಿ ಪ್ರಕಟಿಸಿದ ವಿವಿಡ್‍ಲಿಪಿ, ಅವುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನವೀನ ಪ್ರಯತ್ನಗಳನ್ನ ನಡೆಸಿತು. ಬ್ಲಾಗ್ ಪ್ರಕಟಿಸುವುದು, ಸಾಹಿತ್ಯಿಕ ಕಾರ್ಯಕ್ರಮಗಳ ವಿಡಿಯೋ ಪ್ರಸಾರ ಮುಂತಾದ ಚಟುವಟಿಕೆಗಳನ್ನು ಕೂಡ ನಡೆಸಿದೆ.
“ಪ್ರಕಾಶಕರು ಮತ್ತು ಲೇಖಕರಿಗೆ ಭೌತಿಕವಾಗಿ ಪ್ರಕಟವಾಗುತ್ತಿದ್ದ ಪುಸ್ತಕ ಕೊಂಡು ಓದುವ ಮೇಲಿದ್ದ ವ್ಯಾಮೋಹವನ್ನು ಅಷ್ಟು ಸುಲಭವಾಗಿ ಬದಲಿಸಲು ಸಾಧ್ಯವಿರಲಿಲ್ಲ. ಮೂರು ವರ್ಷಗಳ ಕಾಲ ಇಂಥದ್ದೇ ಪ್ರಯೋಗಗಳನ್ನು ಮಾಡುತ್ತಿದ್ದೆವು. ಪ್ರಚಾರ ನಡೆಸಿದ್ದರಿಂದ ಹೊರ ದೇಶಗಳಿಂದ ಬೇಡಿಕೆ ಬರಲಾರಂಭಿಸಿತು. ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹ ಸಿಗಲಾರಂಭಿಸಿತು” ಎನ್ನುತ್ತಾರೆ ವಿಜಯ್‍ಕುಮಾರ್.
ಹಲವು ಲೇಖಕರು ಈಗ ವಿವಿಡ್‍ಲಿಪಿಯ ಮೂಲಕ ಡಿಜಿಟಲ್ ಪುಸ್ತಕಗಳನ್ನೇ ಪ್ರಕಟಿಸುವ ಆಸಕ್ತಿ ತೋರುತ್ತಿದ್ದಾರೆ. ವಿವಿಡ್‍ಲಿಪಿ ಆಪ್ ಮತ್ತು ವೆಬ್‍ಸೈಟ್ ಹೊಂದಿದ್ದು, ಇವುಗಳ ಮೂಲಕ ಪ್ರತಿ ತಿಂಗಳು ಕನಿಷ್ಠ 400 ಇ ಬುಕ್ ಮಾರಾಟವಾಗುತ್ತಿವೆ.
ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಆರಂಭವಾದ ಮೈಲಾಂಗ್ ಬುಕ್ಸ್ ಕನ್ನಡದ ಡಿಜಿಟಲ್ ಬುಕ್ ಲೋಕಕ್ಕೆ ಹೊಸ ಹುರುಪು ತುಂಬಿದ ಪ್ರಯತ್ನ. ಪವಮಾನ್ ಪ್ರಸಾದ್ ಸಂಸ್ಥಾಪಿಸಿದ ಈ ಸಂಸ್ಥೆಯ ಮಾರ್ಕೆಟಿಂಗ್ ಹೊಣೆ ಹೊತ್ತಿರುವ ವಸಂತ ಶೆಟ್ಟಿ ಹೇಳುವಂತೆ, “ಡಿಜಿಟಲ್ ಪುಸ್ತಕಗಳ ವಿಷಯದಲ್ಲಿ ಕನ್ನಡದಲ್ಲಿ ಇದ್ದಿದ್ದು ಬೇಡಿಕೆಯ ಕೊರತೆ ಮತ್ತು ಪೂರೈಕೆಯಲ್ಲಿದ್ದ ಸಮಸ್ಯೆ. ನಾವು ಮೈಲ್ಯಾಂಗ್ ಬುಕ್ಸ್ ಆರಂಭಿಸುವಾಗ ಅರ್ಥಮಾಡಿಕೊಂಡ ಮೂಲಭೂತ ಸಂಗತಿ ಇದು” ಎಂದು ಕನ್ನಡದಲ್ಲಿ ಡಿಜಿಟಲ್ ಪುಸ್ತಕೋದ್ಯಮಕ್ಕೆ ತೊಡಕಾದ ಸಂಗತಿಯನ್ನು ಬಿಚ್ಚಿಟ್ಟರು.

ಲೇಖನದ ಆರಂಭದಲ್ಲೇ ಹೇಳಿದಂತೆ ಕನ್ನಡದ ಪ್ರಕಾಶಕರು ಸುಲಭದ ಮಾರ್ಗವೊಂದರಲ್ಲೇ ತೃಪ್ತರಾಗಿದ್ದರು. ಸಾವಿರ ಪ್ರತಿಗಳನ್ನು ಪ್ರಕಟಿಸಿ, ಗ್ರಂಥಾಲಯಕ್ಕೊಂದಿಷ್ಟು ಪ್ರತಿಗಳನ್ನು ದಾಟಿಸಿ, ಉಳಿದವು ಮಾರಾಟವಾದರೆ ಸಾಕೆಂಬ ಧೋರಣೆ ಅವರದ್ದಾಗಿತ್ತು ಎಂಬ ವಿಚಾರದ ಮೇಲೆ ಬೆಳಕು ಚೆಲ್ಲುವ ವಸಂತ ಶೆಟ್ಟಿಯವರ ಮಾತುಗಳು, ಅವಕಾಶಗಳಿದ್ದೂ ಯಾರೂ ಹೊಸ ಪ್ರಯೋಗಕ್ಕೆ ಧೈರ್ಯ ಮಾಡಲಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ.
ಪ್ರಕಾಶಕ, ಲೇಖಕರ ನಡುವೆ ಅತ್ಯಂತ ಪಾರದರ್ಶಕವಾದ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪುಸ್ತಕಗಳ ಪ್ರಕಟಣೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ ಎಂದು ಹೇಳಬಹುದು. ಕಳೆದ ಏಳು ತಿಂಗಳ ಅವಧಿಯಲ್ಲಿ 400 ಶೀರ್ಷಿಕೆಗಳನ್ನು ಹೊರತಂದಿದೆ. ಡಿಜಿಟಲ್ ಪುಸ್ತಕಗಳ ಖರೀದಿಗೆ ವಿನೂತನ ಪ್ರಯೋಗಗಳನ್ನು ಮಾಡುತ್ತಿದ್ದು, ಈ ಮೂಲಕ ಡಿಜಿಟಲ್ ಪುಸ್ತಕಗಳನ್ನು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ.
75 ಸಾವಿರ ಮೈಲಾಂಗ್ ಬುಕ್ಸ್ ಮೊಬೈಲ್ ಅಪ್ಲಿಕೇಷನ್‍ಗಳು ಡೌನ್‍ಲೋಡ್ ಆಗಿದ್ದು, ಕಳೆದ ಏಳು ತಿಂಗಳಲ್ಲಿ ಸಾಂಪ್ರದಾಯಿಕ ಪ್ರಕಾಶನ ಸಂಸ್ಥೆಗಳೆಲ್ಲ ಕೂಡಿ ಮಾಡಿರಬಹುದಾದ ಒಟ್ಟು ವಹಿವಾಟನ್ನು ತಾವೊಬ್ಬರೇ ಮಾಡಿರುವುದಾಗಿ ವಸಂತ ಶೆಟ್ಟಿ ಹೇಳುತ್ತಾರೆ. ಅಂದರೆ ಕನ್ನಡದ ಡಿಜಿಟಲ್ ಮಾರ್ಕೆಟ್ ಎಂದೋ ಹಸಿದು ಕೂತಿತ್ತು. ಅದರ ಹಸಿವು ಇಂಗಿಸುವ ಶಕ್ತರು ಇರಲಿಲ್ಲ ಎಂದೆನಿಸುತ್ತದೆ.
ಸರಾಸರಿ 3 ಪುಸ್ತಕಗಳನ್ನು ಖರೀದಿಸುವ ಬಳಕೆದಾರರಿದ್ದು 50 ರಿಂದ 70 ಇ ಬುಕ್‍ಗಳನ್ನು ಖರೀದಿಸಿದ ಓದುಗರಿದ್ದಾರೆ ಎಂದು ಹೇಳುವ ಮೈಲ್ಯಾಂಗ್ ಬುಕ್ಸ್ ಅಂಕಿ ಅಂಶಗಳು ಕನ್ನಡದ ಇ-ಬುಕ್ ಮಾರುಕಟ್ಟೆ ಹೊಸ ಸಾಧ್ಯತೆಯನ್ನು ಅನಾವರಣ ಮಾಡಿತು. ಸಾಂಪ್ರದಾಯಿಕ ಪ್ರಕಾಶನ ಸಂಸ್ಥೆಗಳ ಒಂದು ಆತಂಕವನ್ನು ಸುಳ್ಳು ಮಾಡಿತು; ಅದೇನೆಂದರೆ ತನ್ನ ಓದುಗರನ್ನು ಅಂದರೆ ಮುದ್ರಿತ ಕೃತಿಗಳ ಓದುಗರನ್ನು ಡಿಜಿಟಲ್ ಪುಸ್ತಕಗಳು ಕಸಿದುಕೊಳ್ಳುತ್ತವೆ ಎಂಬ ಭಯವಿತ್ತು. ಆದರೆ ಡಿಜಿಟಲ್ ಪುಸ್ತಕ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿತು. ಕನ್ನಡದ ಹಿರಿಯ ಪ್ರಕಾಶನ ಸಂಸ್ಥೆಗಳ ಒಂದಾದ ನವಕರ್ನಾಟಕ ಈ ಹೊಸ ಬೆಳವಣಿಗೆಯ ಭಾಗವಾಗಿದ್ದೇ ಅದಕ್ಕೆ ಸಾಕ್ಷಿ.
ಕೊರೊನಾ ಸೋಂಕು ಜಗತ್ತಿನ ಎಲ್ಲ ವ್ಯಾಪಾರಗಳನ್ನು ನೆಲಕಚ್ಚುವಂತೆ ಮಾಡಿತು. ಅದಕ್ಕೆ ಪುಸ್ತಕೋದ್ಯಮ ಹೊರತಲ್ಲ. ಮಳಿಗೆಗೆ ಭೇಟಿನೀಡಿ ಪುಸ್ತಕ ಕೊಳ್ಳುವುದು ಸಂಪೂರ್ಣ ನಿಂತು ಹೋಯಿತು. ಇದೇ ವ್ಯವಹಾರದ ಮಾದರಿಯನ್ನು ನಂಬಿದ್ದ ಪ್ರಕಾಶಕರು ನೆಲಕಚ್ಚಿದರು. ಆಗ ಅವರಿಗೆ ಸಿಕ್ಕ ಏಕೈಕ ಮಾರ್ಗ ಇ ಬುಕ್ ಪ್ರಕಟಣೆ. ನವಕರ್ನಾಟಕ ಈ ಹೊಸ ಸಾಧ್ಯತೆಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಹಳೆಯ ಓದುಗರ ಜೊತೆಗೆ, ಹೊಸ ಓದುಗ ಮಾರುಕಟ್ಟೆಯನ್ನು ಪಡೆದುಕೊಂಡಿತು ಎನ್ನುತ್ತಾರೆ ಪ್ರಕಾಶನ ಸಂಸ್ಥೆ ವ್ಯವಸ್ಥಾಪಕರಾದ ರಮೇಶ್ ಉಡುಪ. ಇನ್ನು ಕೆಲವೇ ದಿನಗಳಲ್ಲಿ ಇವರ 75 ಕೃತಿಗಳು ಇ ಬುಕ್ ರೂಪದಲ್ಲಿ ಹೊರಬರುತ್ತಿವೆ.
ಹೀಗೆ ಹೊಸ ತಲೆಮಾರಿನ ಓದುಗರನ್ನು ಸೆಳೆಯುವ ಮೂಲಕ ಇ ಬುಕ್‍ಗಳು ಪುಸ್ತಕ ಮಾರುಕಟ್ಟೆಯನ್ನು ವಿಸ್ತರಿಸುತ್ತಿವೆ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದು ಕೆಲವೇ ಕೆಲವು ಬೆರಳೆಣಿಕೆಯ ಸಂಸ್ಥೆಗಳು. ಪ್ರಕಾಶನ ಸಂಸ್ಥೆಗಳು ಧೈರ್ಯ ಮಾಡುತ್ತಿರುವುದೇನೊ ನಿಜ. ಆದರೆ ಇ ಬುಕ್‍ಗಳು ನಿಜಕ್ಕೂ ಓದುಗ ಮತ್ತು ಲೇಖಕರ ನಡುವಿನ ಬಂಧವನ್ನು ಅಷ್ಟೇ ಜೈವಿಕವಾಗಿ ಉಳಿಸಿವೆಯೇ? ಅಂತಹ ಅತಂಕವೇನಾದರೂ ಕನ್ನಡದ ಇ ಬುಕ್ ಪ್ರಕಟಣೆಗೆ ತೊಡಕಾಗಿತ್ತೆ ಎಂಬ ಅನುಮಾನ ಕಾಡುತ್ತದೆ. ಆದರೆ ಹಾಗೇನೂ ಇಲ್ಲ ಎನ್ನುತ್ತಾರೆ ಲೇಖಕ-ಪ್ರಕಾಶಕ ಗಿರಿಮನೆ ಶ್ಯಾಮರಾವ್.
ಶ್ಯಾಮರಾವ್ ಇದುವರೆಗೂ 25ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಕೃತಿಗಳು ಈಗ ಡಿಜಿಟಲ್ ರೂಪದಲ್ಲೂ ಲಭ್ಯವಾಗುತ್ತಿವೆ. “ಮುದ್ರಿತ ಪ್ರತಿಗಳ ಓದುಗ ವಲಯವೇ ಬೇರೆ. ಡಿಜಿಟಲ್ ರೂಪದ ಪುಸ್ತಕಗಳನ್ನು ಓದುವವರೆ ಬೇರೆ. ಎರಡನ್ನೂ ಓದುವ ವರ್ಗವೂ ಇದೆ. ಹಾಗಾಗಿ ನನಗೆ ಹೊಸ ಓದುಗರು ಸಿಕ್ಕಿದ್ದಾರೆಯೇ ಹೊರತು, ಕಳೆದುಕೊಂಡಿಲ್ಲ” ಎನ್ನುತ್ತಾರೆ ಶ್ಯಾಮರಾವ್. “ಮುದ್ರಿತ ಪ್ರತಿಗಳನ್ನು ಓದುತ್ತಿದ್ದವರು, ಅದರಲ್ಲಿಯೇ ಇದ್ದ ನನ್ನ ನಂಬರಿಗೆ ಕೂಡಲೇ ಕರೆ ಮಾಡಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ಡಿಜಿಟಲ್ ಪುಸ್ತಕ ಓದುವವರು ಕರೆ ಮಾಡುತ್ತಾರೆ. ಅವರ ಸಂಖ್ಯೆ ಕಡಿಮೆ” ಎನ್ನುತ್ತಾರೆ.
ಋತುಮಾನ ಕನ್ನಡದ ಇನ್ನೊಂದು ಸಾಹಿತ್ಯಕ ಪ್ರಕಾಶನದಲ್ಲಿ ಭಿನ್ನ ನೆಲೆಯನ್ನು ಅನುಸರಿಸುತ್ತಿರುವ ತಂಡ. ಸಾಹಿತ್ಯಕ ತಾಣವೊಂದನ್ನು ನಡೆಸುತ್ತಿರುವ ಈ ತಂಡ, ಇ ಪುಸ್ತಕಗಳನ್ನು ಹೊರತರುತ್ತಿದೆ. “ಆಯ್ದ, ಗಂಭೀರ ಬರವಣಿಗೆಗಳನ್ನು ಪ್ರಕಟಿಸುತ್ತಿರುವ ಈ ಸಂಸ್ಥೆ, ಕನ್ನಡಿಗರ ಹೊಸ ಓದಿನ ಅನುಭವ ಹಿಗ್ಗಿಸುವ ಪ್ರಯತ್ನ ಮಾಡುತ್ತಿದೆ” ಎಂದು ಹೇಳುತ್ತಾರೆ ಋತುಮಾನದ ಕುಂಟಾಡಿ ನಿತೇಶ್.

ಲೇಖಕರು-ಪ್ರಕಾಶಕರು ಈ ಡಿಜಿಟಲ್ ಅವತರಣಿಕೆಗೆ ಒಗ್ಗಿಕೊಂಡಿರುವುದೇ ಓದುಗರಿದ್ದಾರೆ ಎಂಬ ಧೈರ್ಯದಿಂದ. ಆದರೆ ನಿಜಕ್ಕೂ ಇ ಬುಕ್‍ಗಳನ್ನು ಆಸ್ವಾದಿಸುವ ಓದುಗರಿದ್ದಾರೆ. ಅವರ ಅನುಭವ ಎಂತಹದ್ದು ಎಂಬ ಕುತೂಹಲವಂತು ಇತ್ತು. ಹಾಗೇ ಸಿಕ್ಕವರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ, ಪದ್ಮಶ್ರೀ ಹೆಗಡೆ. ‘”ಈಗ ನನ್ನ ಮೊಬೈಲ್‍ನಲ್ಲಿ 75 ಪುಸ್ತಕಗಳಿವೆ. ಅವುಗಳಲ್ಲಿ 10-12 ಪುಸ್ತಕಗಳನ್ನು ಓದಿದ್ದೇನೆ. ನಿಧಾನವಾಗಿ ಓದುತ್ತೇನೆ” ಎಂದು ತಮ್ಮ ಇಬುಕ್ ಪ್ರೀತಿಯನ್ನು ಬಿಚ್ಚಿಟ್ಟರು.
“ನನ್ನಂತಹವರಿಗೆ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟದ ಕೆಲಸ. ಒಂದೆಡೆಯಿಂದ ಮತ್ತೊಂದೆಡೆ ಜಾಗ ಬದಲಿಸುವಾಗ ಪುಸ್ತಕಗಳನ್ನು ಸ್ಥಳಾಂತರಿಸುವುದೇ ಸವಾಲು. ಬೇಕೆಂದಲ್ಲಿ, ಬೇಕೆಂದಾಗ ತೆರೆದು ಓದುವ ಸೌಲಭ್ಯವೇ ಇ ಬುಕ್‍ಗಳ ಮೇಲೆ ಪ್ರೀತಿ ಹುಟ್ಟಿಸುತ್ತದೆ” ಎನ್ನುತ್ತಾರೆ ಪದ್ಮಶ್ರೀ ಅವರು.
ನಗರದ ಜೀವನದಲ್ಲಿರುವ ಹೊಸ ತಲೆಮಾರಿನ ಓದು ಪ್ರಿಯರಿಗೆ, ಮಳಿಗೆಗಳಿಗೆ ಭೇಟಿ ನೀಡುವುದು, ಖರೀದಿಸುವುದು ಸಮಯ ಹೊಂದಿಸುವ ಸವಾಲಿನ ವಿಷಯ. ಆದರೆ ಅಂಗೈಯಲ್ಲಿ ಡೌನ್‍ಲೋಡ್ ಮಾಡಿಕೊಳ್ಳುವ ಈ ಹೊಸ ಅವಕಾಶ ಪುಸ್ತಕಗಳಿಂದ ದೂರವಾಗುತ್ತಿದ್ದ ಹೊಸ ತಲೆಮಾರಿನ ಓದುಗರನ್ನು ಆಕರ್ಷಿಸಲಾರಂಭಿಸಿದೆ.
ಪುಟಗಳನ್ನು ತಿರುವುತ್ತಾ, ಅವುಗಳ ಗಂಧವನ್ನು ಆಘ್ರಾಣಿಸುತ್ತಾ ಓದನ್ನು ಆಸ್ವಾದಿಸುವ ವರ್ಗವೇನೂ ಇ ಬುಕ್‍ಗಳಿಂದ ಮಾಯವಾಗಿಲ್ಲ. ಅವರಿಗಿಂತ ಕಿರಿಯರಾದವರು ಓದಿನ ಸ್ವರೂಪ ಇ ಬುಕ್‍ಗೆ ಬದಲಿಸಿಕೊಂಡಿದ್ದಾರೆ. ಆದರೆ ಅತ್ತ ಪುಸ್ತಕಗಳ ಮೇಲೆ ವ್ಯಾಮೋಹಕ್ಕೆ ಕೊಂಡುಕೊಳ್ಳುವ ಜನರೇ, ಮೆಟ್ರೋದ ಕಿಕ್ಕಿರದ ಜನಸಂದಣಿಯಲ್ಲಿ ಮೊಬೈಲ್ ಸ್ಕ್ರೀನ್‍ನಲ್ಲಿ ಪುಸ್ತಕವನ್ನು ಓದುವ ಪ್ರವೃತ್ತಿಯನ್ನೂ ನೋಡುತ್ತಿದ್ದೇವೆ.


