ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವೀರೇಂದ್ರ ಅವರನ್ನು ವರ್ಗಾವಣೆ ಮಾಡಿ, ಬದಲಿಗೆ ಪಿ.ನೀರಜ್‌ನಯನ್ ಅವರನ್ನು ನೇಮಕ ಮಾಡಲು ಚುನಾವಣಾ ಆಯೋಗ ಮಾರ್ಚ್ 9 ರ ಮಂಗಳವಾರ ಆದೇಶ ನೀಡಿದೆ.
1987 ರ ಐಪಿಎಸ್ ಬ್ಯಾಚ್‌ನ ಪಿ.ನೀರಜ್‌ನಯನ್ ಅವರು ಮಹಾನಿರ್ದೇಶಕರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪಾತ್ರವನ್ನು ವಹಿಸಲಿದ್ದು, ರಾಜ್ಯ ಸರ್ಕಾರ ಆದೇಶ ಜಾರಿಗೊಳಿಸಿದ ಬಗ್ಗೆ ಬುಧವಾರ ಆಯೋಗಕ್ಕೆ ಮಾಹಿತಿ ನೀಡುವಂತೆ ಆದೇಶಿಸಿದೆ.
ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ನೀಡಿರುವ ಆದೇಶದಲ್ಲಿ ’1985 ರ ಐಪಿಎಸ್ ಬ್ಯಾಚ್ ವೀರೇಂದ್ರ ಅವರಿಗೆ “ನೇರವಾಗಿ ಅಥವಾ ಪರೋಕ್ಷವಾಗಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಕರ್ತವ್ಯ ವಹಿಸಬಾರದು ಎಂದು” ತಿಳಿಸಲಾಗಿದೆ.
ಇದನ್ನೂ ಓದಿ: ಬಂಗಾಳದ ಎಲ್ಲೆಡೆ ಬಾಂಬ್ ಫ್ಯಾಕ್ಟರಿ: ಅಮಿತ್ ಶಾ ಸುಳ್ಳು ಬಯಲು ಮಾಡಿದ ಆರ್‌ಟಿಐ ಕಾರ್ಯಕರ್ತ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ ಪರ ಡಿಜಿಪಿ ವೀರೇಂದ್ರ ಪಕ್ಷಪಾತ ಧೋರಣೆ ಹೊಂದಿದ್ದಾರೆಂದು ರಾಜಕೀಯ ಪಕ್ಷಗಳು, ವಿಶೇಷವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹಲವಾರು ಬಾರಿ ಆರೋಪಿಸಿದೆ.
ಇತ್ತೀಚೆಗೆ, ಜಾವೇದ್ ಶಮೀಮ್ ಅವರನ್ನು ಚುನಾವಣಾ ಆಯೋಗ ಹೆಚ್ಚುವರಿ ಡೈರೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಯಿಂದ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ ಹುದ್ದೆಗೆ ಫೆಬ್ರವರಿ 27 ರಂದು ವರ್ಗಾಯಿಸಿತ್ತು. ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕರಾಗಿದ್ದ, ಜಗ್ ಮೋಹನ್, ಶಮೀಮ್ ಅವರ ಸ್ಥಾನ (ಕಾನೂನು ಮತ್ತು ಸುವ್ಯವಸ್ಥೆ) ಎಡಿಜಿಯಾದರು.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಸುಧೀರ್ಘ ಎಂಟು ಹಂತಗಳಲ್ಲಿ ನಡೆಯಲಿದ್ದು, ನಂತರ ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಆಯೋಗದ ಸುನೀಲ್ ಅರೋರಾ , ಈ ಚುನಾವಣೆ ರಾಜ್ಯದಲ್ಲಿಯೇ ಮೊದಲ ಬಾರಿ ಇಷ್ಟು ಸುಧೀರ್ಘ ಸಮಯದ್ದಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಮೌಲ್ಯಮಾಪನಗಳನ್ನು ಆಧರಿಸಿ ಚುನಾವಣೆ ನಡೆಸುತ್ತೇವೆ ಎಂದಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಗೆ ಈಗಾಗಲೇ ಇಬ್ಬರು ವಿಶೇಷ ವೀಕ್ಷಕರನ್ನು ಆಯೋಗ ನೇಮಿಸಿದೆ, ಭದ್ರತಾ ಪರಿಸ್ಥಿತಿಗೆ ಅನುಗುಣವಾಗಿ ಮೂರನೇ ವೀಕ್ಷಕರನ್ನು ಅಗತ್ಯವಿದ್ದಾಗ ಕಳುಹಿಸಬಹುದು ಎಂದು ಅರೋರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ: ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಬಂಧನದ ವಾರೆಂಟ್ ತಡೆ ಹಿಡಿದ ಸುಪ್ರೀಂ


