‘ಮತಗಳ್ಳತನದ’ ಆರೋಪಗಳಿಗೆ ಚುನಾವಣಾ ಆಯೋಗ ನೀಡಿರುವ ಪ್ರತಿಕ್ರಿಯೆಯನ್ನು ಭಾನುವಾರ ತೀವ್ರವಾಗಿ ಟೀಕಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೈಶಿ, “ಚುನಾವಣಾ ಆಯೋಗ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ‘ಆಕ್ಷೇಪಾರ್ಹ ಮತ್ತು ಆಕ್ರಮಣಕಾರಿ’ ಭಾಷೆಯಲ್ಲಿ ಕಿರುಚಾಡುವ ಬದಲು, ಅವರ ಆರೋಪಗಳ ಕುರಿತು ತನಿಖೆಗೆ ಆದೇಶಿಸಬೇಕಾಗಿತ್ತು ಎಂದು ಹೇಳಿದ್ದಾರೆ.
ಮತಗಳ್ಳತನದ ಕುರಿತು ಹೈಡ್ರೋಜನ್ ಬಾಂಬ್ ಶೀಘ್ರದಲ್ಲೇ ಬರಲಿದೆ ಎಂಬ ರಾಹುಲ್ ಗಾಂಧಿಯ ಹೇಳಿಕೆ, ಅದೊಂದು ‘ರಾಜಕೀಯ ವಾಕ್ಚಾತುರ್ಯ’. ಆದರೆ, ಅವರು ಮಾಡಿರುವ ಆರೋಪಗಳು ಗಂಭೀರವಾದದ್ದು. ಅವುಗಳ ಬಗ್ಗೆ ಸೂಕ್ತವಾದ ತನಿಖೆಯ ನಡೆಯಬೇಕು ಎಂದು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಖುರೈಶಿ ತಿಳಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ನಡೆಸಿದ ವಿಧಾನದ ಬಗ್ಗೆ ಖುರೈಶಿ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದು, ಅದು (ಚು. ಆಯೋಗ) ‘ಪಂಡೋರಾ ಪೆಟ್ಟಿಗೆ’ಯನ್ನು ತೆರೆಯುತ್ತಿದೆ. ಮಾತ್ರವಲ್ಲದೆ, ‘ಕಣಜದ ಗೂಡಿಗೆ’ ಕೈ ಹಾಕಿದೆ. ಈ ಪ್ರಕ್ರಿಯೆ ಅದಕ್ಕೇ (ಚು. ಆಯೋಗಕ್ಕೆ) ಹಾನಿ ಮಾಡಲಿದೆ ಎಂದು ಹೇಳಿದ್ದಾರೆ.
“ಚುನಾವಣಾ ಆಯೋಗವನ್ನು ಟೀಕಿಸುವುದು ನೋಡುವಾಗ ನನಗೆ ತುಂಬಾ ನೋವುಂಟಾಗುತ್ತದೆ. ಏಕೆಂದರೆ, ನಾನೊಬ್ಬ ಭಾರತ ನಾಗರಿಕನಾಗಿ, ಮುಖ್ಯ ಚುನಾವಣಾ ಆಯುಕ್ತನಾಗಿ ಆ ಸಂಸ್ಥೆಯ ಉನ್ನತಿಗಾಗಿ ಒಂದೆರಡು ಇಟ್ಟಿಗೆಗಳನ್ನು ಇಟ್ಟಿದ್ದೇನೆ ಎಂದು ಜಗ್ಗರ್ನಾಟ್ ಬುಕ್ಸ್ ಪ್ರಕಟಿಸಿದ ತಮ್ಮ ಹೊಸ ಪುಸ್ತಕ ‘ಡೆಮಾಕ್ರಸೀಸ್ ಹಾರ್ಟ್‌ಲ್ಯಾಂಡ್’ ಬಿಡುಗಡೆಗೆ ಮುಂಚಿತವಾಗಿ ಖುರೈಶಿ ಪಿಟಿಐಗೆ ತಿಳಿಸಿದ್ದಾರೆ.
“ಚುನಾವಣಾ ಆಯೋಗ ದಾಳಿಗೆ ಒಳಗಾಗುವುದು ಅಥವಾ ಯಾವುದೇ ರೀತಿಯಲ್ಲಿ ದುರ್ಬಲಗೊಂಡಿರುವುದನ್ನು ನೋಡಿದಾಗ ನನಗೆ ಕಳವಳವಾಗುತ್ತದೆ. ಈ ಬಗ್ಗೆ ಆಯೋಗ ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಬೇಕು. ತನ್ನ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಎಲ್ಲಾ ಶಕ್ತಿಗಳು ಮತ್ತು ಒತ್ತಡಗಳನ್ನು ಎದುರಿಸುವುದು ಆಯೋಗದ ಜವಾಬ್ದಾರಿಯಾಗಿದೆ” ಎಂದು 2010 ಮತ್ತು 2012 ರ ನಡುವೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಖುರೈಶಿ ಹೇಳಿದ್ದಾರೆ.
“ಆಯೋಗವು ಜನರ ವಿಶ್ವಾಸವನ್ನು ಗೆಲ್ಲಬೇಕು. ವಿರೋಧ ಪಕ್ಷಗಳ ವಿಶ್ವಾಸವೂ ಬೇಕು. ನಾನು ಯಾವಗಲೂ ವಿರೋಧ ಪಕ್ಷಗಳಿಗೆ ಆದ್ಯತೆ ನೀಡುತ್ತಿದ್ದೆ. ಏಕೆಂದರೆ, ಅವರು ದುರ್ಬಲರು. ವಿರೋಧ ಪಕ್ಷವು ಅಧಿಕಾರದಿಂದ ಹೊರಗುಳಿದಿರುವುದರಿಂದ ಅಧಿಕಾರದಲ್ಲಿರುವ ಪಕ್ಷಕ್ಕೆ ಅದರಷ್ಟು ಮುದ್ದು ಅಗತ್ಯವಿಲ್ಲ ಎಂದು ಖುರೈಶಿ ಅಭಿಪ್ರಾಯಪಟ್ಟಿದ್ದಾರೆ.
“ನಾನು ಮುಖ್ಯ ಚುನಾವಣಾ ಆಯುಕ್ತ ಆಗಿದ್ದಾಗ ವಿರೋಧ ಪಕ್ಷಗಳಿಗೆ ಆಯೋಗದ ಬಾಗಿಲು ತೆರೆದಿಡಿ. ಅವರಿಗೆ ತಕ್ಷಣ ಅಪಾಯಿಂಟ್‌ಮೆಂಟ್ ಕೊಡಿ. ಅವರ ಮಾತನ್ನು ಆಲಿಸಿ, ಅವರೊಂದಿಗೆ ಮಾತನಾಡಿ, ಅವರಿಗೆ ಏನಾದರು ಸಣ್ಣ ಸಹಾಯ ಬೇಕಾದರೆ, ಬೇರೆಯವರಿಗೆ ಹಾನಿಯಾಗದಿದ್ದರೆ ಅದನ್ನು ಮಾಡಿ” ಎಂದು ನನ್ನ ಸಿಬ್ಬಂದಿಗೆ ಸೂಚಿಸಿದ್ದೆ” ಎಂದು ಖುರೈಶಿ ಹೇಳಿದ್ದಾರೆ.
ಇಲ್ಲಿ ವಿರೋಧ ಪಕ್ಷಗಳು ಆಗಾಗ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ವಾಸ್ತವವಾಗಿ, 23 ಪಕ್ಷಗಳು ತಮಗೆ ಅಪಾಯಿಂಟ್‌ಮೆಂಟ್ ಸಿಗುತ್ತಿಲ್ಲ ಮತ್ತು ಯಾರೂ ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಹೇಳಬೇಕಾಗಿ ಬಂದಿದೆ. ರಾಹುಲ್ ಗಾಂಧಿಯವರ ಆರೋಪಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೇಳುವ ಬದಲು, ಚುನಾವಣಾ ಆಯೋಗ ತನಿಖೆಗೆ ಆದೇಶಿಸಬೇಕಿತ್ತು ಎಂದಿದ್ದಾರೆ.
“ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ, ಬೀದಿಯಲ್ಲಿ ಹೋಗುವ ವ್ಯಕ್ತಿಯಲ್ಲ. ಅವರ ಆರೋಪಗಳ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಬೇಕು. ಬದಲಾಗಿ, ಅವರ ವಿರುದ್ದವೇ ಕಿರುಚಾಡುವುದಲ್ಲ. ಚುನಾವಣಾ ಆಯೋಗ ನಡೆದುಕೊಳ್ಳುವ ರೀತಿ ಇದಲ್ಲ” ಎಂದು ಖುರೈಶಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಲಕ್ಷಾಂತರ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಲಕ್ಷಾಂತರ ಜನರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂತಹ ವ್ಯಕ್ತಿಗೆ ಅಫಿಡವಿಟ್ ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದ ರೀತಿ, ಬಳಸಿದ ಭಾಷೆ ‘ಆಕ್ಷೇಪಾರ್ಹ ಮತ್ತು ಆಕ್ರಮಣಕಾರಿಯಾಗಿದೆ’ ಎಂದು ಖುರೈಶಿ ಹೇಳಿದ್ದಾರೆ.
ನೇಪಾಳದ ಪ್ರತಿಭಟನೆಗಳ ಕುರಿತು ವಿಡಿಯೋ: ಕಂಟೆಂಟ್ ಕ್ರಿಯೇಟರ್ ವಿರುದ್ಧ ‘ದೇಶದ್ರೋಹ’ ಪ್ರಕರಣ ದಾಖಲಿಸಿದ ಯುಪಿ ಪೊಲೀಸರು


