Homeಮುಖಪುಟ12 ಕೆಜಿ ಭಾರದ ಸಾಣೆಯಂತ್ರ ಹೊತ್ತು ಊರುರು ತಿರುಗುವ ಕತ್ತರಿ ಸಾಣೆಯ ಶರೀಫ್ ಕಾಕನ ಇಕನಾಮಿಕ್ಸ್..

12 ಕೆಜಿ ಭಾರದ ಸಾಣೆಯಂತ್ರ ಹೊತ್ತು ಊರುರು ತಿರುಗುವ ಕತ್ತರಿ ಸಾಣೆಯ ಶರೀಫ್ ಕಾಕನ ಇಕನಾಮಿಕ್ಸ್..

ಮಂಗಳೂರಿನಲ್ಲಿ ಬೀಡಿ ಉದ್ಯಮ ನೆಲಕಚ್ಚಿದಂದಿನಿಂದ ನಮ್ಮ ಬದುಕೂ ನೆಲಕಚ್ಚುತ್ತಾ ಹೋಗ್ತಿದೆ ಎನ್ನುತ್ತಾರೆ ಸಾಣೆ ಹಿಡಿಯುವ ಶರೀಫ್ ಕಾಕ.

- Advertisement -
- Advertisement -

ಅದೊಂದು ಭಾನುವಾರ. ಗಡ್ಡ ಟ್ರಿಮ್ ಮಾಡಲೆಂದು ಸೆಲೂನಿಗೆ ಹೊರಟಿದ್ದೆ. ಬೈಕ್ ಸ್ಟಾರ್ಟ್ ಮಾಡಿ ಗೇಟಿಂದ ಹೊರತೆಗೆಯುವಷ್ಟರಲ್ಲಿ ಬೇತಾಳನನ್ನು ಹೆಗಲ ಮೇಲೆ ಹೊತ್ತು ಕೊಂಡು ಕತೆ ಹೇಳಿಸಿಕೊಂಡು ನಡೆಯುತ್ತಿರುವ ವಿಕ್ರಮಾಧಿತ್ಯನಂತೆ ಹೆಗಲ ಮೇಲೆ ಬದುಕಿನ ಬಂಡಿಯನ್ನು ಹೊತ್ತುಕೊಂಡು ಶರೀಫ್ ಕಾಕ ಬರುತ್ತಿದ್ದರು. ಅಸ್ಸಲಾಮು ಅಲೈಕುಂ ಶರೀಫಾಕ ಎಂದೆ. ವ ಅಲೈಕುಂ ಸಲಾಂ ಎನ್ನುತ್ತಾ ಮೂವತ್ತೆರಡರಲ್ಲಿ ಅಳಿದುಳಿದ ಸುಮಾರು ಇಪ್ಪತ್ತು- ಇಪ್ಪತ್ತೆರಡರಷ್ಟಿರಬಹುದಾದ ಪಾಚಿಗಟ್ಟಿದ ಅಷ್ಟೂ ಹಲ್ಲುಗಳನ್ನು ತೋರಿಸುತ್ತಾ ನಗಾಡಿದರು. ಯಾವ ಕಡೆ ಹೊರಟಿಯಪ್ಪಾ ಎಂದು ಕೇಳಿದರು. ಇಲ್ಲೇ ಪದವಿಗೆ ಗಡ್ಡ ಮಾಡ್ಸೋಣ ಎಂದು ಹೊರಟೆ. ನೀವು..?

ಇವತ್ತು ತುಸು ಬೇಗ ಬಂದಿದ್ದೆ ಕಣಪ್ಪಾ.. ಇಲ್ಲಿ ಕೆಳಗಿನ ಮನೆಗಳದ್ದೆಲ್ಲಾ ಮುಗಿಸಿದೆ. ಇನ್ನು ಯಾವ ಕಡೆ..?
ಪದವು ಕಡೆ..

ಹಾಗಾದ್ರೆ ಬನ್ನಿ ಹತ್ಕೊಳ್ಳಿ ಎಂದು ಕರೆದೆ. ಇಲ್ಲಪ್ಪಾ ನೀನು ಹೋಗು.

ಬನ್ನಿ ಶರೀಫಾಕ..

ಏ ನಿಂಜೊತೆ ಬೈಕಲ್ಲಿ ಬಂದ್ರೆ ನನ್ನ ಹೊಟ್ಟೆ ತುಂಬುತ್ತಾ..?

ಅರೇ..ಶರೀಫಾಕ ಇದೇನು ನನ್ನಲ್ಲೂ ಈ ಮಾತು..? ಹಾಗೇನಿಲ್ಲ ಮಾರಾಯ..ನನ್ನ ದಿನದ ಪಡಿ ಈ ನಡೆತದಲ್ಲೇ ಸಿಗೋದಲ್ವಾ..?
ಹೂಂ.. ಹೌದಲ್ವಾ..
ಚಾ ಆಯ್ತೇನು ಶರೀಫಾಕ..
ಹೂಂ.. ಚಹಾ ಮೂರಾಯ್ತು.
ಆಗಲಿ ನಾಲ್ಕನೆಯದ್ದು ನನ್ನ ಜೊತೆಗಾಗಲಿ ಎನ್ನುತ್ತಾ ಇಗ್ನಿಶನ್ ಆಫ್ ಮಾಡಿ ಕೆಳಗಿಳಿದೆ. ಶರೀಫಾಕ ಗೇಟು ದಾಟಿ ಒಳಬಂದರು. ತನ್ನ ಹೆಗಲಿನ ಬೇತಾಳನಂತಹ ಕತ್ತರಿ ಸಾಣೆಯ ಯಂತ್ರವನ್ನು ಕೆಳಗಿಳಿಸಿ ನನ್ನ ಪಕ್ಕವೇ ಸಿಟೌಟಿನ ನೆಲದಲ್ಲಿ ಕೂತರು.

ಮಿಸ್ರಿಯಾಳನ್ನು ಕೂಗಿ ಕರೆದು ಎರಡು ಚಹಾ ಮಾಡಿ ಕೊಡೇ ಎಂದು ವಿನಂತಿಸಿದೆ.

ಮಾತಿಗಿಳಿಯುವ ಮುನ್ನ ಶರೀಫಾಕ ಜೇಬಿನಿಂದ ಬೀಡಿ ತೆಗೆದು ತುಟಿಗಳ ನಡುವಿಟ್ಟು ಕಡ್ಡಿ ಗೀರಿದರು. ಅದೂ ಇದೂ ಮಾತಾಡ್ತಾ ಕೆಲಸ ತುಂಬಾ ಕಡಿಮೆಯಾಗಿದೆ ಕಣಪ್ಪಾ ಎಂದರು.

ಯಾಕೆ..?

ಹಿಂದೆಲ್ಲಾ ಪದವಿನಿಂದ ಮುಂಜಾನೆ ಕೆಳಗಿಳಿದರೆ ಮತ್ತೆ ಪದವು ಏರುವಾಗ ಬಾನಲ್ಲಿ ಸೂರ್ಯ ಕರಗುತ್ತಿದ್ದ. ಈಗ ಒಂದು ಗಂಟೆಯಲ್ಲಿ ಕೆಲಸ ಮುಗಿಸಿ ಪದವು ಏರುತ್ತೇನೆ.
ಯಾಕೆ..?

ನಿನ್ನದೇ ಮನೆಯ ಉದಾಹರಣೆ ನೋಡು. ನೀನು ಚಿಕ್ಕವನಿದ್ದಾಗ ನಿನ್ನಮ್ಮನೂ ಬೀಡಿ ಕಟ್ಟುತ್ತಿದ್ದರು. ಈಗ ಕಟ್ತಾರಾ..? ಹಾಗೆ ಬಹುತೇಕ ಮನೆಗಳಲ್ಲಿ ಬೀಡಿಯ ಸೂಪು ಕಾಣೆಯಾಗಿದೆ.ಹೊಸ ತಲೆಮಾರಿನ ಹೆಣ್ಮಕ್ಕಳು ಕಲಿತು ಹೊರಗೆ ಉದ್ಯೋಗಕ್ಕೆ ಹೋಗ್ತಿದ್ದಾರೆ. ಕಲಿತವರು ಹೋಗ್ಲಿ ಬಿಡು, ಒಳ್ಳೆಯದೇ.. ಹತ್ತನೇ ಕ್ಲಾಸು ಓದಿದವರೂ ಹೀಗೆ ಹೆಗಲಿಗೆ ಬ್ಯಾಗ್ ಹಾಕಿ ಎಲ್ಲೋ ಅಂಗಡಿಯಲ್ಲಿ ಬೆಳಗ್ಗಿಂದ ಸಂಜೆ ತನಕ ನಿಂತು ಕಾಲು ನೋಯಿಸಿ ಫ್ಯಾನ್ಸಿ ಸಾಮಾನು, ರೆಡಿಮೇಡ್ ಅಂಗಡಿಯಲ್ಲಿ ಬಟ್ಟೆ ಮಾರುವ ಕೆಲಸಕ್ಕೆ ನಿಂತು ಮೂರೋ ನಾಲ್ಕೋ ಸಾವಿರ ತಿಂಗಳಿಗೆ ಪಡೆಯುವ ಕೆಲಸಕ್ಕೆ ಹೋಗ್ಬೇಕಾ..? ಮನೆಯಲ್ಲಿ ಕೂತು ಆರಾಮಾಗಿ ನೆಟ್ಟಗೆ ಬೀಡಿ ಕಟ್ಟಿದ್ರೆ ದಿನಕ್ಕೆ ಇನ್ನೂರು ರೂಪಾಯಿ ದುಡಿಯಬಹುದಲ್ವಾ..? ಬೇರೆ ಖರ್ಚೂ ಇರೋದಿಲ್ವಲ್ಲ. ಹೊರಗಡೆ ಕೆಲಸಕ್ಕೆ ಹೋದ್ರೆ ಬಸ್ಸಿನ ಖರ್ಚು ಕಳೆದು ಏನುಳಿಯುತ್ತೆ..? ಹಿಂದೆಲ್ಲಾ ಬೀಡಿ ಕಟ್ಟುತ್ತಿದ್ದ ಹುಡುಗಿಯರು ಮಜೂರಿ, ವರ್ಷದ ಬೋನಸ್ ಇವೆಲ್ಲಾ ಸೇರಿಸಿ ಪ್ರತೀ ವರ್ಷ ಒಂದಿಷ್ಟು ಚಿನ್ನದ ಒಡವೆ ಮಾಡಿಡುತ್ತಿದ್ದರು. ಈ ಫ್ಯಾನ್ಸಿ, ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುವ ಹುಡುಗೀರು ಒಂದು ತುಂಡು ಚಿನ್ನ ತಮ್ಮ ದುಡಿಮೆಯಿಂದ ಮಾಡಿದ್ದು ನೋಡಿದ್ಯಾ..?

ಅದಿರಲಿ ಶರೀಫಾಕ.. ಅದೆಲ್ಲಾ ಅವರವರ ಖುಷಿ, ನಿಮ್ಮ ವಹಿವಾಟು ಹೇಗಿದೆ..?

ಹಿಂದೆ ಕತ್ತರಿಯೊಂದರ ಸಾಣೆ ಮಾಡಿದ್ರೆ ಐದು ರೂಪಾಯಿ ಸಿಗುವ ಕಾಲದಲ್ಲಿ ದಿನಕ್ಕೆ ಐದು ನೂರು ರೂಪಾಯಿ ದುಡೀತಿದ್ದೆ. ಈಗ ಇಪ್ಪತ್ತೈದು ರೂಪಾಯಿಗೆ ಒಂದು ಕತ್ತರಿ ಸಾಣೆ ಮಾಡಿದ್ರೆ ಮುನ್ನೂರು- ಮುನ್ನೂರೈವತ್ತು ರೂಪಾಯಿ ದಿನದ ಕಮಾಯಿಯೂ ಆಗ್ತಿಲ್ಲ ಕಣಪ್ಪಾ..

ಆ ಕಾಲದಲ್ಲಿ ದುಡಿದು ಮನೆ ಕಟ್ಟಿಸಿದ್ರಿಂದ ಬದುಕಿದೆ. ಅಂದು ದುಡಿದು ಉಳಿತಾಯ ಮಾಡಿದ್ರಿಂದ ಇಬ್ಬರು ಹೆಣ್ಮಕ್ಕಳ ಮದುವೆ ಮಾಡಿದೆ. ಈಗಿನ ಬೆಲೆಯಲ್ಲಿ‌ ದಿನಕ್ಕೆ ಐನೂರು ದುಡಿದ್ರೂ ಮನೆ ಕಟ್ಟಿಸಲಿಕ್ಕೆ, ಇಬ್ರು ಹೆಣ್ಮಕ್ಕಳ ಮದುವೆ ಮಾಡೋದು ಸಾಧ್ಯನಾ..?

ಹೋಟ್ಲಲ್ಲಿ ಒಂದು ಊಟ ಮಾಡಲು ಐವತ್ತರುವತ್ತು ರೂಪಾಯಿ ಕೊಡ್ಬೇಕಪ್ಪ. ಹಿಂದೆ ಹತ್ತು ರೂಪಾಯಿಗೆ ಹೊಟ್ಟೆ ತುಂಬಾ ಊಟ, ಒಂದು ಮೀನು ಫ್ರೈ ಎಲ್ಲಾ ಸಿಗ್ತಿತ್ತು. ಹಿಂದೆ ನಿಮ್ಮಂತಹ ಹಳ್ಳಿಗಳಿಗೆ ಸಾಣೆಯಂತ್ರ ಎತ್ಕೊಂಡು ಬಂದರೆ ಊಟ, ಚಾ, ತಿಂಡಿ ಎಲ್ಲಾ ಮುಫತ್ತಾಗಿ ಸಿಗ್ತಿತ್ತು. ಈಗ ಊಟ ಚಾ ಬಿಡು.. ಬೆಂಕಿ‌ಪೊಟ್ಟಣ ಮುಗಿದ್ರೆ ಬೀಡಿ ಹೊತ್ತಿಸಲಿಕ್ಕೆ ಒಂದು‌ ಕಡ್ಡಿ ಕೇಳಿದ್ರೂ ಸಿಗುವುದು ಕಷ್ಜ. ಹಿಂದೆ ಮಧ್ಯಾಹ್ನದ ಹೊತ್ತು ಯಾವ ಮನೆಗೆ ಸಾಣೆಗೆ ಹೋಗ್ತಿದ್ದೆನೋ ಆ ಮನೆಯವರು ಊಟ ಮಾಡುವಾಗ ನನಗೂ ಊಟ ಬಡಿಸದೇ ಬಿಡುತ್ತಿರಲಿಲ್ಲ. ದಿನಕ್ಕೊಂದು ನಾಲ್ಕು ಚಹಾ ಸಾಣೆಗೆ ಹೋದ ಮನೆಗಳಲ್ಲೇ ಆಗ್ತಿತ್ತು. ಹಿಂದಿನಂತೆ ಕಷ್ಟ ಸುಖ ಹೇಳೋರು, ಪ್ರೀತಿಯಿಂದ ಮಾತಾಡ್ಸೋರು ಈಗ ಬಹಳ ಕಡಿಮೆ. ಕೆಲ್ಸ ಇದ್ರೆ ಏ ಕತ್ತರಿ ಸಾಣೆ ಎಂದು ಕರೆದು ಗೇಟಿನ ಹೊರಗೇ ನಿಲ್ಲಿಸಿ ಕತ್ತರಿ ತಂದು ಕೊಡ್ತಾರೆ. ಹಿಂದೆಲ್ಲಾ ಮನೆಯ ಜಗಲಿಗೆ ನಾನೇ ಹೋಗಿ ಕತ್ತರಿ ಸಾಣೆ ಮಾಡ್ತಿದ್ದೆ. ಹಿಂದೆ ಎಲ್ಲಾ ಮನೆಯ ನಾಯಿಗಳಿಗೂ ನನ್ನ ಪರಿಚಯವಿತ್ತು. ಈಗ ನಾಯಿ ಇರುವ ಮನೆಗಳ ಕಂಪೌಂಡಿನ ಸುತ್ತ ಸುಳಿಯುವುದೂ ಕಷ್ಟ. ಇಂತಹ ಹಳ್ಳಿಗಳಿಗೆ ಬರುವಾಗ ಕೈಯಲ್ಲೊಂದು ಕೋಲು ಬೇಕೇ ಬೇಕು ಮಾರಾಯ.
ಹಿಂದೆ ನಮ್ಮ ಕತ್ತರಿ ಸಾಣೆಯವರಲ್ಲೂ ಒಪ್ಪಂದವಿರುತ್ತಿತ್ತು. ನಾನು ಖಾಯಂ ಹೋಗುವ ಹಳ್ಳಿಗಳಿಗೆ ಇನ್ನೊಬ್ಬ ಬರಲಿಕ್ಕಿಲ್ಲ. ನಾವು ನಮ್ಮ ಏರಿಯಾ ಎಂದು ನಿರ್ಣಯಿಸಿ ಬಿಡುತ್ತಿದ್ದೆವು. ಈಗ ಹಾಗಲ್ಲ ಮಾರಾಯ.. ಬೈಕಿಗೆ ಡೀಸೆಲ್ ಸಾಣೆ ಮೋಟರ್ ಸಿಕ್ಕಿಸಿ ಅದರಿಂದ ಕೆಲಸ ಮಾಡ್ತಾರೆ.‌ ನನ್ನಂತಹ ಮುದುಕರು ನಾಲ್ಕು ಮನೆಗೆ ಹೋಗುವ ಹೊತ್ತಿಗೆ ಅವರು ನಲ್ವತ್ತು ಮನೆಗೆ ಹೋಗಿ ಕೆಲಸ ಮುಗಿಸಿ ಹೋಗುತ್ತಿದ್ದರು. ಹಳೇ ತಲೆಮಾರಿನ ಬೀಡಿ ಕಟ್ಟುವವರು, ಕೃಷಿಕರು ಮಾತ್ರ ಇಂದಿಗೂ ನನ್ನನ್ನೇ ಕಾದು ನನ್ನಲ್ಲಿ‌ ಕತ್ತರಿ, ಕತ್ತಿ, ಅಡಕತ್ತರಿ, ಸಾಣೆ ಮಾಡಿಸ್ತಾರೆ. ಬೀಡಿ ಉದ್ಯಮ ನೆಲಕಚ್ಚಿದಂದಿನಿಂದ ನಮ್ಮ ಬದುಕೂ ನೆಲಕಚ್ಚುತ್ತಾ ಹೋಗ್ತಿದೆ.

ಬೀಡಿ ಇಲ್ಲಾಂದ್ರೇನಾಯಿತು. ಕತ್ತಿ, ಅಡಕತ್ತರಿ, ಕಸಾಯಿಗಳ ಮಾಂಸ ಕಡಿಯುವ ಕತ್ತಿಗಳೆಲ್ಲಾ ಇವೆಯಲ್ವಾ ಶರೀಫಾಕ..?

ಏಯ್..ಅದೇನಪ್ಪಾ ಊರಿಗೆಷ್ಟು ಕಸಾಯಿಗಳಿದ್ದಾರಪ್ಪಾ..? ಎಷ್ಟು ಅಡಿಕೆ ಬೆಳೆಗಾರರಿದ್ದಾರೆ..? ಈ‌ ಕತ್ತಿಗಳನ್ನೆಲ್ಲಾ ಕೆಲವರು ವರ್ಷಕ್ಕೊಮ್ಮೆ ಸಾಣೆ ಹಿಡಿಸ್ತಾರೆ ಅಷ್ಟೇ. ಈಗ ಮೀನು ಮುರಿಯಲೂ ಮೆಟ್ಟುಗತ್ತಿ ಬಳಸೋರಿಲ್ಲ. ಅದಕ್ಕೂ ಕತ್ತರಿ ಬಂದಿದೆ. ಅದು ಸಾಣೆ ಹಿಡಿಯುವಂತಹ ಕತ್ತರಿಯಲ್ಲ. ಮೊಂಡಾದ್ರೆ ಎಸೆದು ಬೇರೆ ತರಬೇಕು. ಹಿಂದೆ ಚಾಕುಗಳಿಗೆಲ್ಲಾ ಸಾಣೆ ಹಿಡೀತಿದ್ರು. ಈಗ ನಲ್ವತ್ತೈವತ್ತಕ್ಕೆ ಸಿಗುವ ಚಾಕಿಗೆ ಇಪ್ಪತ್ತೈದು ರೂಪಾಯಿ ಕೊಟ್ಟು ಯಾರು ಸಾಣೆ ಹಿಡಿಸ್ತಾರೆ..? ಶರೀಫಾಕ ಹೀಗೆ ತನ್ನ ಇಕನಾಮಿಕ್ಸ್ ಮಾತನಾಡುತ್ತಿದ್ದಾಗ ಮಿಸ್ರಿಯಾ ಚಹಾ ಮತ್ತು ನಮ್ಮದೇ ಹಿತ್ತಲಲ್ಲಿ ನನ್ನಮ್ಮ ಬೆಳೆದಿದ್ದ ಬಾಳೆಹಣ್ಣುಗಳನ್ನು ಹಿಡ್ಕೊಂಡು ಬಂದಳು. ಚಹಾ ಸೇವಿಸುತ್ತಾ ಅದೇನೋ ಊರಲ್ಲಿ ಪೆಂಶನ್ ಕೆಲ್ಸ ಎಲ್ಲಾ ಮುಗೀತು ಎಂದಿದ್ದರಲ್ವಾ ಏನಾಯಿತು..? ಅದು ವೃದ್ದಾಪ್ಯ ವೇತನ ಕಣಪ್ಪಾ. ಜಗನ್ಮೋಹನ್ ರೆಡ್ಡಿ ಬಂದು ಎರಡು ಸಾವ್ರಕ್ಕೇರಿಸಿದ್ದಾನೆ. ನಂಗೂ ಬರ್ತಾ ಇದೆ. ಇನ್ನು ಸಾಣೆ ಯಂತ್ರ ಹೊತ್ತು ಹಳ್ಳಿ-ಗಲ್ಲಿ, ಬೆಟ್ಟ- ಗುಡ್ಡ‌ ಏರಿ‌ ಅಲೆದಾಡಿದ್ದು ಸಾಕು ಎಂದು ಮಕ್ಕಳು ಹೇಳ್ತಿದ್ದರು. ನನಗೂ ವಯಸ್ಸಾಯ್ತಲ್ವಾ.. ಎರಡು ಸಾವಿರ ರೂಪಾಯಿ ಪೆಂಶನ್ ಸಿಕ್ಕಿದ್ರೆ ನನ್ನ ಖರ್ಚಿಗೆ ಸಾಕು, ಮನೆ ಖರ್ಚು ಗಂಡು ಮಕ್ಕಳು ನೋಡ್ಕೋತಾರೆ ಎಂದು ಊರಿಗೆ ಹೋಗೋಣಾಂತಿದ್ದೆ. ಆದ್ರೆ ನನಗೆ ಕೆಲಸ ಬಿಡಲು ಆಗ್ತಿಲ್ಲ. ಮಂಗಳೂರಿಗೆ ಬಂದು ಐವತ್ತೈದು ವರ್ಷ ಆಯ್ತು. ಮಂಗಳೂರು ನನ್ನದೇ ಸ್ವಂತ ಊರಿನಂತಾಗಿ ಬಿಟ್ಟಿದೆ. ಊರಲ್ಲಿ ಹತ್ತಿರದ ಸಂಬಂಧಿಕರು ಬಿಟ್ಟರೆ ಯಾರಿಗೂ ನನ್ನ ಪರಿಚಯವಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೂ ಪರಿಚಿತರಿದ್ದಾರೆ, ನಿನ್ನಂತೆ ಎಲ್ಲಿ ಕಂಡರೂ ನಿಲ್ಲಿಸಿ ಕಷ್ಟ ಸುಖ ವಿಚಾರಿಸುವ ಸ್ನೇಹಿತರಿದ್ದಾರೆ. ಈ ಮಂಗಳೂರು ನನ್ನನ್ನು ಪೊರೆದಿದೆ, ಬದುಕು ಕೊಟ್ಟಿದೆ.. ಇಂತಹ ಮಂಗಳೂರು ಬಿಟ್ಟು ಹೇಗೆ ಹೋಗಲಿ..? ಕೈ ಕಾಲಲ್ಲಿ ಕಸುವಿದ್ದಷ್ಟು ದಿನ ದುಡಿಯುವೆ ಎನ್ನುತ್ತಾ ಮತ್ತೆ ಬೇತಾಳನನ್ನು ಹೆಗಲಿಗೇರಿಸಿ ಶರೀಫಾಕ ಹೊಟ್ಟೆಪಾಡು ಅರಸುತ್ತಾ ಹೊರಟರು.

********

ಈ ಶರೀಫಾಕನನ್ನು ನಾನು ನೋಡುತ್ತಿರುವುದು ಇಂದು‌ ನಿನ್ನೆಯಿಂದಲ್ಲ. ನಾನಿನ್ನೂ ಚಡ್ಡಿ ಹಾಕದೇ ಮೂಗಿನಿಂದ ಸುರಿಯುತ್ತಿದ್ದ ಗೊಣ್ಣೆಯನ್ನು ಅಂಗಿ ತೋಳಿಗೆ ಒರೆಸುತ್ತಾ ಆಟದಲ್ಲಿ ತಲ್ಲೀನನಾಗಿರುತ್ತಿದ್ದ ಕಾಲದಿಂದಲೂ ಅವರನ್ನು ನೋಡುತ್ತಿದ್ದೆ. ಚಿಕ್ಕಂದಿನಲ್ಲಿ ಇವರ ಕತ್ತರಿ ಸಾಣೆ ಯಂತ್ರದ ಪೆಡಲನ್ನು ಸೈಕಲ್ ತುಳಿದಂತೆ ಕುತೂಹಲದಿಂದ ತುಳಿಯುತ್ತಿದ್ದೆ. ಉಪಟಳ ಅತಿಯಾದಾಗ ಕತ್ತರಿ ತೋರಿಸಿ ಸುನ್ನತಿ ಮಾಡ್ತೇನೆ ಎಂದು ಹೆದರಿಸುತ್ತಿದ್ದರು.

ಶರೀಫಾಕನಿಗೆ ಈಗ ಎಪ್ಪತ್ತೆರಡು ವರ್ಷ ವಯಸ್ಸಂತೆ. ಆಂದ್ರ ಪ್ರದೇಶದ ಕಾಳಹಸ್ತಿಯಿಂದ ತನ್ನ ಅಣ್ಣನೊಂದಿಗೆ ಸುಮಾರು ಐವತ್ತೈದು ವರ್ಷಗಳ ಹಿಂದೆ ಮಂಗಳೂರಿನ ಹೊರವಲಯದ ತೊಕ್ಕೊಟ್ಟು ಒಳಪೇಟೆಗೆ ಬಂದು ಅಲ್ಲೊಂದು ಬಾಡಿಗೆ ಬಿಡಾರದಲ್ಲಿ ಹದಿನೆಂಟು ಜನ ಸಾನ್‌ವಾಲಾಗಳು ಒಟ್ಟೊಟ್ಟಿಗೆ ವಾಸಿಸುತ್ತಿದ್ದರು. ಹಾಗೆ ಬಂದವರು ಸುಮಾರು ಅರುವತ್ತು ಮಂದಿಯಿದ್ದರಂತೆ. ಮಂಗಳೂರಿನ ವಿವಿದೆಡೆ ಬಿಡಾರ ಹೂಡಿ ಪ್ರತಿನಿತ್ಯ ತಂತಮ್ಮ ಸಾಣೆಯಂತ್ರಗಳನ್ನು ಹೆಗಲ ಮೇಲೆ ಹೊತ್ಕೊಂಡು ಇಲ್ಲಿನ ಹಳ್ಳಿ- ಗಲ್ಲಿ, ಬೆಟ್ಟ-ಗುಡ್ಡಗಳಲ್ಲಿ ಮಂಗಳೂರಿನ ಜಡಿಮಳೆಯನ್ನೂ, ಬಿರು ಬಿಸಿಲನ್ನೂ ಲೆಕ್ಕಿಸದೇ ತಿರುಗಾಡಿ ಬದುಕಿನ ಬಂಡಿ ಎಳೆಯುತ್ತಿದ್ದರು.
ಈ ಐವತ್ತೈದು ವರ್ಷಗಳ ಅವಧಿಯಲ್ಲಿ ಶರೀಫಾಕನ ಅಣ್ಣನೂ ಸೇರಿದಂತೆ ಅನೇಕರು ಕಾಲವಾದರೆ ಕೆಲವರು ಹನ್ನೆರಡು ಕಿಲೋ ತೂಗುವ ಸಾಣೆಯಂತ್ರವನ್ನು ಬೇತಾಳನಂತೆ ಹೆಗಲಿಗೇರಿಸಿ ಊರೂರು, ಹಳ್ಳಿ ಗಲ್ಲಿ, ಬೆಟ್ಟ ಗುಡ್ಡ ಹತ್ತಿ ಇಳಿದು ಸುಸ್ತಾಗಿ ಇನ್ನು ಸಾಕು ಎಂದು ಊರು ಸೇರಿದರು. ಮತ್ತೆ ಕೆಲವರು ಊರು ಸೇರಿ ಬೇರೆ ವೃತ್ತಿ ಮಾಡ್ಕೊಂಡು ಬದುಕುತ್ತಿದ್ದಾರಂತೆ. ಮೊದಲ ಬ್ಯಾಚಿನ ಸಾನ್‌ವಾಲಾಗಳಲ್ಲಿ ಈಗಲೂ ಇಲ್ಲೇ ಉಳಿದು ಈ ವೃತ್ತಿಯನ್ನು ಮು‌ಂದುವರಿಸುತ್ತಿರುವವರು ಶರೀಫಾಕ ಒಬ್ಬರೇ. ಶರೀಫಾಕ ಶಾಲೆಯ ಮೆಟ್ಟಿಲು ತುಳಿದೇ ಇಲ್ಲ. ಆಗ ಅವರ ಊರಿನ ಸಾನ್‌ವಾಲಾ ಸಮುದಾಯದಲ್ಲಿ ಶಾಲೆಗೆ ಹೋಗುವುದೆಂಬ ಪರಿಕಲ್ಪನೆಯೂ ಇರಲಿಲ್ಲ ಎಂದು ಶರೀಫಾಕ ಹೇಳುತ್ತಾರೆ.

ಆದರೆ ಶರೀಫಾಕ ಬಹುಭಾಷಾ ಪ್ರವೀಣ. ತೆಲುಗು, ಉರ್ದು, ಕನ್ನಡ, ತುಳು, ಬ್ಯಾರಿ, ಮಲಾಮೆ ಇವಿಷ್ಟು ಭಾಷೆಗಳನ್ನು ಅವರ ಮಾತೃಭಾಷೆಯೆಂಬಷ್ಟು ಚೆನ್ನಾಗಿ ಮಾತನಾಡಬಲ್ಲರು. ಕೊಂಕಣಿ ಮತ್ತು ಮಲಯಾಳಂ ಭಾಷೆಯನ್ನು ಅರ್ಥೈಸಬಲ್ಲರು ಮತ್ತು ತನ್ನ ವೃತ್ತಿಗೆ ಬೇಕಾದಷ್ಟು ಮಾತನಾಡಬಲ್ಲರು.
ಅವರಿಗೆ ಮಂಗಳೂರು ತಾಲೂಕಿನ ಬಹುತೇಕ ಎಲ್ಲಾ ಹಳ್ಳಿಗಳ ಓಣಿ- ಒರುಕುಗಳೆಲ್ಲಾ ಗೊತ್ತು. ಮತ್ತು ಪಕ್ಕದ ಬಂಟ್ವಾಳ ತಾಲೂಕಿನ ಅನೇಕ ಊರುಗಳ ಗಲ್ಲಿ ಗಲ್ಲಿಗಳೂ ಗೊತ್ತು.‌ ಯಾವ ಮನೆಯಲ್ಲಿ ಇಂದಿಗೂ ಬೀಡಿ ಕಟ್ಟುತ್ತಾರೆಂದು ಗೊತ್ತು. ನಮ್ಮ ಕನ್ನಡದ ಪ್ರಸಿದ್ಧ ಜಾನಪದ ಹಾಡು “ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ” ಹಾಡಿನಂತೆ ಪಕ್ಕದ ಹಳ್ಳಿಯಿಂದ ಮದುವೆಯಾಗಿ ಬಂದ ಸೊಸೆಯಂದಿರು ತನ್ನವ್ವನ, ತನ್ನತ್ತಿಗೆಯ ಕತ್ತರಿಗೆ ಸಾಣೆ ಹಿಡಿಯಲಿದೆಯೆಂದು ಶರೀಫಾಕನನ್ನು ಕಳುಹಿಸುವುದೂ ಇದೆ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಕಸುಬಿನಲ್ಲಿ ಕಳೆದ ಐವತ್ತೈದು ವರ್ಷಗಳಲ್ಲಿ ಆದ ಪ್ರತೀ ಏರಿಳಿತ, ಕಷ್ಟ, ನಷ್ಟ ಇವೆಲ್ಲವೂ ಶರೀಫಾಕನಿಗೆ ಗೊತ್ತಿದೆ. ಯಾಕೆಂದರೆ ಅವರ ಬದುಕು ಅಷ್ಟರ ಮಟ್ಟಿಗೆ ಬೀಡಿ ಕಸುಬಿನ ಮೇಲೆ ಅವಲಂಬಿತವಾಗಿದೆ. ಅವರ ಕತ್ತರಿ ಸಾಣೆ ಕಸುಬು ಇಂದು ಲಾಭದಾಯಕವಾಗಿ ನಡೆಯುತ್ತಿಲ್ಲ. ತನಗೆ ಬದುಕು ಕೊಟ್ಟ ಮಂಗಳೂರನ್ನು ತ್ಯಜಿಸಲು ಅವರ ಈ ನೆಲದೊಂದಿಗಿನ ಭಾವನಾತ್ಮಕ ನಂಟು ಬಿಡುತ್ತಿಲ್ಲ. ಮಂಗಳೂರಿನಲ್ಲಿ ಎಷ್ಟೇ ಕೋಮು ಸಂಘರ್ಷಗಳು ನಡೆದರೂ, ಎಂತಹದ್ದೇ ವ್ಯಾಪಾರ ಬಹಿಷ್ಕಾರಗಳು ನಡೆದರೂ ಮನೆ ಮನೆಗೆ ಸಾಣೆಯ ಯಂತ್ರ ಹೊತ್ತು ನಡೆಯುವ ಶರೀಫಾಕನನ್ನು ಯಾವುದೂ ಬಾಧಿಸಿಲ್ಲ. ಯಾರೂ ಬಹಿಷ್ಕರಿಸಿಲ್ಲ. ಬೀಡಿ ಕಸುಬು ಹಂತ ಹಂತವಾಗಿ ಕ್ಷೀಣಿಸುತ್ತಿರುವುದರಿಂದ ಮತ್ತು ಆಧುನಿಕತೆಗೆ ಒಗ್ಗಿಕೊಂಡು ಬೈಕು ಓಡಿಸುವುದು ಅವರಿಗೆ ಒಗ್ಗುತ್ತಿಲ್ಲವಾದ್ದರಿಂದ ಮಾತ್ರ ಅವರ ಆದಾಯ ಕಡಿಮೆಯಾಗುತ್ತಾ ಬಂದಿದೆ. ಆದರೂ ಸಾಧ್ಯವಾದಷ್ಟು ದಿನ ದುಡಿಯುವೆ ಎಂಬ ಛಲ ಅವರದು.

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬದಲಾವಣೆ ಅನಿವಾರ್ಯ, ಆದರೆ ಬದಲಾವಣೆಗಳಿಂದ ಬವಣೆ ಗಳಿಗೆ ಒಳಗಾಗುವವರು ಯಾವಾಗಲೂ ದುಡಿಯುವ ವರ್ಗದವರು,

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...