Homeಮುಖಪುಟಲಲಿತ ಪ್ರಬಂಧ: ಕೈ ಮುರಿಸಿಕೊಂಡವನ ಅದ್ವಾನಗಳು..!!

ಲಲಿತ ಪ್ರಬಂಧ: ಕೈ ಮುರಿಸಿಕೊಂಡವನ ಅದ್ವಾನಗಳು..!!

ನಿಮಗೆ ಯಾವ ಭಾಗವನ್ನು ಕೆರೆಯಲು ಕಷ್ಟವಾಗುತ್ತದೋ ಆ ಭಾಗದಲ್ಲಿ ತುರಿಕೆ ಜಾಸ್ತಿ. ಹೌದು ತಾನೇ?

- Advertisement -
- Advertisement -

ವೈದ್ಯರು ಖಾಯಿಲೆಗೆ ಸಂಬಂಧಿಸಿದಂತೆ ರೋಗಿಗಳ ಮೇಲೆ ಹೇರುವ ನಿಯಮಾವಳಿಗಳನ್ನು ಪಾಲಿಸಲು ಅದೆಷ್ಟು ಕಷ್ಟ ಎನ್ನುವುದು ಸ್ವತಃ ಅವರೇ ರೋಗಿಯಾಗದ ಹೊರತು ಅರ್ಥವಾಗದು. ನಾನು ವೈದ್ಯನಲ್ಲ, ಅರೆ ವೈದ್ಯಕೀಯ ವೃತ್ತಿಪರನಾದುದರಿಂದ ನಾನೊಂದು ಪುಟ್ಟ ಪಾಲಿಕ್ಲಿನಿಕ್ ನಡೆಸುತ್ತಿದ್ದೇನೆ. ನಮ್ಮಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ವೈದ್ಯರು ನೀಡುವ ಸೂಚನೆಗಳನ್ನು ನಾನೂ ಅನೇಕ ಬಾರಿ ವಿವರಿಸಿ ಹೇಳುವುದಿದೆ. ಆದರೆ ಅದೇ ರೋಗಿಗಳಿ ಎದುರಾದಂತಹ ಸಮಸ್ಯೆ ನಮಗೂ ಎದುರಾಗದ ಹೊರತು ರೋಗಿಗಳ ಸಂಕಷ್ಟ ನಮಗರಿಯುವುದೇ ಇಲ್ಲ.

ನನ್ನಲ್ಲಿಗೆ ಕನ್ಸಲ್ಟೇಶನ್‌ಗೆ ಬರುವ ಮೂಳೆ ತಜ್ಞ ಡಾ.ಲಾರೆನ್ಸ್ ನನ್ನ ಆತ್ಮೀಯ ಮಿತ್ರರೂ ಹೌದು. ಅವರು ಸೊಂಟ ನೋವೆಂದು ಬಂದ ರೋಗಿಗಳಿಗೆ ಸದಾ ಕುಳಿತುಕೊಳ್ಳುವ ಭಂಗಿಯ ಬಗ್ಗೆ ಎಚ್ಚರಿಸುತ್ತಿರುತ್ತಾರೆ.ಕೆಲವರಿಗೆ ಎಷ್ಟು ವಿವರಿಸಿದರೂ ಅರ್ಥವಾಗುವುದಿಲ್ಲ. ಅವರಿಗೆ ಪ್ರಾಯೋಗಿಕವಾಗಿ ವಿವರಿಸಲು ಅವರು ನನ್ನಲ್ಲಿ ಹೇಳುವುದೂ ಇದೆ. ಅವರಿಗೆ ಕುಳಿತುಕೊಳ್ಳುವ ಸರಿಯಾದ ಭಂಗಿ ಯಾವುದೆಂದು ವಿವರಿಸುವ ನಾನು ಮಾತ್ರ ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಅಂಡಿಗಿಂತ ಬೆನ್ನೂರುವುದೇ ಜಾಸ್ತಿ. ಒಮ್ಮೆ ರೋಗಿಯೊಬ್ಬರಿಗೆ ನಾನು ವಿವರಿಸುತ್ತಿರುವಾಗ ನಾನು ಕೂತಿದ್ದ ಭಂಗಿಯನ್ನು ಡಾ.ಲಾರೆನ್ಸ್ ತುಸು ದೂರ ನಿಂತು ನೋಡುತ್ತಿದ್ದರು. ರೋಗಿ ನನ್ನ ಕ್ಯಾಬಿನಿನಿಂದ ಹೊರ ಹೋದ ಕೂಡಲೇ ನನ್ನ ಕ್ಯಾಬಿನಿಗೆ ಬಂದು “ಓ ಮಾರಾಯ.. ನೀನೇ ಬೆನ್ನೂರಿ ಕೂತು ರೋಗಿಗೆ ಅಂಡೂರಿ ಕೂರಲು ಹೇಳುತ್ತಿದ್ದಿಯಲ್ಲೋ… ಎಂದು ನನ್ನನ್ನು ಗೇಲಿ ಮಾಡತೊಡಗಿದರು. ಅಂದಿನಿಂದ ರೋಗಿಗಳಿಗೆ ಪ್ರಾಯೋಗಿಕವಾಗಿ ವಿವರಿಸುವ ಹೊತ್ತಲ್ಲಾದರೂ ಅಂಡೂರಿ ಕುಳಿತುಕೊಳ್ಳಬೇಕೆಂಬ ಪ್ರಜ್ಞೆಯನ್ನು ಬೆಳೆಸಿರುವೆ.

ಕೈಯ ಮೂಳೆ ಮುರಿಸಿಕೊಂಡು ಬಂದವರಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಿ ಕಟ್ಟುವುದು ಸರ್ವೇ ಸಾಮಾನ್ಯ.ಈ ಪ್ಲಾಸ್ಟರ್ ಆಫ್ ಪ್ಯಾರಿಸ್ ಎಷ್ಟು ಚಂದದ ಇಂಗ್ಲಿಷ್ ಪದ ಗುಚ್ಚವಲ್ವಾ..? ಇದನ್ನು ಮೂಳೆ ಮುರಿತಕ್ಕೊಳಗಾಗಿ ಕಟ್ಟಿಸಿಕೊಂಡವನ ಕಷ್ಟ ಅವನಿಗೇ ಗೊತ್ತು. ಪ್ಲಾಸ್ಟರ್ ಹಾಕಿಸಿಕೊಂಡವರ ತುರಿಕೆಯ ಸಂಕಟವಂತೂ ಸ್ವತಃ ಅನುಭವಿಸದೇ ಯಾರಿಗೂ ಅರಿಯಲಾಗದು.

ನಿಮಗೆ ಯಾವ ಭಾಗವನ್ನು ಕೆರೆಯಲು ಕಷ್ಟವಾಗುತ್ತದೋ ಆ ಭಾಗದಲ್ಲಿ ತುರಿಕೆ ಜಾಸ್ತಿ. ಈ ಪ್ಲಾಸ್ಟರ್ ಹಾಕಿಸಿಕೊಂಡವನ ತುರಿಕೆ ಸುಮ್ಮನೆ ಬರುವ ತುರಿಕೆಯಲ್ಲ. ಅದರೊಳಗೆ ಸರಿಯಾಗಿ ಗಾಳಿಯಾಡದೇ ಬೆವೆತು, ಬೆವರು ಒಣಗಿ ಕೆಸರಿನ ಪುಟ್ಟ ಪುಟ್ಟ ಕಣಗಳು ಉಂಟಾಗಿ ತುರಿಕೆ ಆರಂಭವಾಗುತ್ತದೆ. ಮಾತ್ರವಲ್ಲದೇ ಸರಿಯಾಗಿ ಗಾಳಿಯಾಡದೇ ಕೆಲವರ ಚರ್ಮದ ತೆಳುವಾದ ಮೇಲ್ಪದರ ಕಿತ್ತು ಹೋಗುವುದರಿಂದಲೂ ತುರಿಕೆಯಾಗುತ್ತದೆ. ಇಂತಹ ತುರಿಕೆಗಳು ಅದ್ಯಾವ ಪರಿ ರೋಗಿಯನ್ನು ಕೆರೆಯಲು ಪ್ರೇರೇಪಿಸುತ್ತದೆಂದರೆ ಆತ ಮುಂದೆ ಆಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ಯೋಚಿಸಲಾರ. ಕೆಲವರು ಹಿಡಿಸೂಡಿ ಕಡ್ಡಿಗಳನ್ನು ಪ್ಲಾಸ್ಟರ್‌ನೊಳಕ್ಕೆ ತೂರಿಸಿ ಅದರಿಂದ ಕೆರೆಯುತ್ತಾರೆ.ಇನ್ನು ಕೆಲವರು ಸಪೂರದ ಕೋಲನ್ನು ತುರುಕಿ ಕೆರೆಯುವುದು, ಉದ್ದದ ಬಾಚಣಿಗೆ ತುರುಕಿ ಕೆರೆಯುವುದು ಇವೆಲ್ಲಾ ಸರ್ವೇ ಸಾಮಾನ್ಯ. ಮೊದಲ ಯತ್ನದಲ್ಲಿ ಕೇವಲ ಹಿಡಿಸೂಡಿ ಕಡ್ಡಿಗಳನ್ನು ಮಾತ್ರ ಪ್ಲಾಸ್ಟರ್‌ನ ಒಳ ತುರುಕಲು ಸಾಧ್ಯವಾದರೆ,ಹಂತ ಹಂತವಾಗಿ ಪ್ಲಾಸ್ಟರ್ ಮತ್ತು ಕೈಯ ನಡುವಿನ ಅಂತರ ಸ್ವಲ್ಪ ಸ್ವಲ್ಪವೇ ಹೆಚ್ಚುತ್ತಾ ಆ ಬಳಿಕ ಬೆತ್ತ, ಪುಟ್ಟ ಕೋಲು, ಬಾಚಣಿಗೆ ಇವೆಲ್ಲವನ್ನೂ ತುರುಕಿ ಕೆರೆಯುವಷ್ಟು ಜಾಗ ಸಿಗುತ್ತದೆ. ಕೆಲವರು ಹಿಡಿಸೂಡಿ ಕಡ್ಡಿ ತುರುಕಿ ಅವು ಪ್ಲಾಸ್ಟರ್‌ನೊಳಗೇ ಉಳಿದು ಪಜೀತಿಗೀಡು ಮಾಡುತ್ತದೆ. ಕೆಲವರು ಇಂತಹ ಪರಿಕರಗಳಿಂದೆಲ್ಲಾ ಕೆರೆದೂ ಕೆರೆದು
ದೀರ್ಘ ಕಾಲದ ಕೆರೆತದಿಂದ ಪ್ಲಾಸ್ಟರ್ ಒಳಗೇ ರಕ್ತ ಒಸರಿ, ಕೀವು ತುಂಬಿ ಪ್ಲಾಸ್ಟರ್‌ನೊಳಗಿಂದ ಕೆಟ್ಟ ವಾಸನೆ ಬರುವುದೂ ಇದೆ.ಅದಾಗ್ಯೂ ಇಂತಹ ಒಂದು ಕೆರೆತ ನೀಡುವ ಸುಖಕ್ಕೆ ಪಾರವೇ ಇರುವುದಿಲ್ಲ. ನಾನು ಅದೆಷ್ಟೋ ಮಂದಿಯ ಪ್ಲಾಸ್ಟರ್ ಬಿಚ್ಚುವಾಗ ಮುಖಕ್ಕೆ ಡಬಲ್ ಮಾಸ್ಕ್ ಹಾಕಬೇಕಾದ ಸನ್ನಿವೇಶ ನಿರ್ಮಾಣವಾದದ್ದೂ ಇದೆ. ಮೂಳೆ ಮುರಿತಕ್ಕೆ ಹಾಕಿದ ಪ್ಲಾಸ್ಟರ್‌ನಿಂದ ಮೂಳೆಗಳು ಮತ್ತೆ ಕೂಡಿದ್ದರೂ ಅನೇಕರಿಗೆ ಚರ್ಮ ರೋಗ ತಜ್ಞರಿಂದ ಮತ್ತೆ ಎರಡು ವಾರಗಳ ಚಿಕಿತ್ಸೆ ಪಡೆಯಬೇಕಾಗಿ ಬಂದದ್ದನ್ನೂ ನೋಡಿರುವೆ.
ಹಲವರು ಪ್ಲಾಸ್ಟರ್‌ನೊಳಗಿನ ತುರಿಕೆಯ ದೂರನ್ನು ಹಿಡ್ಕೊಂಡು ಬಂದಾಗ “ಏ ಅದೆಲ್ಲಾ ಇದ್ದದ್ದೇ ಕಾಮನ್, ಅದರೊಳಕ್ಕೆ ಕಡ್ಡಿ ಹಾಕಿ ಕೆರೆಯದಿರಿ, ಕೆರೆದರೆ ಇನ್ನಷ್ಟು ಫಜೀತಿಗೀಡಾಗುತ್ತೀರಿ, ಇನ್‌ಫೆಕ್ಷನ್ ಆಗುತ್ತದೆ ಎಂದೆಲ್ಲಾ ವ್ಯಂಗ್ಯದ, ಉಡಾಫೆಯ ದಾಟಿಯಲ್ಲಿ ಅನೇಕರನ್ನು ಗದರಿಸಿದ್ದಿದೆ. ಆದರೆ ಅವರ ಕಷ್ಟ ಸಲಹೆ ಕೊಡುವ ನನಗೆಂತು ಅರ್ಥವಾಗುವುದು..?

ನನ್ನ ಪಾಲಿಕ್ಲಿನಿಕ್‌ಗೆ ಬಂದವರಿಗೆಲ್ಲಾ ಸಲಹೆ ಕೊಡುವ ನನಗೂ ಒಮ್ಮೆ ಅಪಘಾತವಾಗಿ ಬಲ ಭುಜದ ಮೂಳೆ ಮುರಿಯಿತು. ಮೂರು ತಿಂಗಳು ಗೃಹಬಂಧಿಯಾಗಬೇಕಾಯಿತು. ನನ್ನ ಎರಡನೇ ಪತ್ನಿಯೆಂದೇ ಹೇಳಬಹುದಾದ ಬೈಕನ್ನು‌ ಐದು ತಿಂಗಳ ಕಾಲ ಮುಟ್ಟಲೇ ಬಾರದ ಪರಿಸ್ಥಿತಿಗೀಡಾದೆ. ನನ್ನ ಸ್ನೇಹಿತ ಡಾ.ಲಾರೆನ್ಸ್ ಭುಜದ ಶಸ್ತಕ್ರಿಯೆ ಮಾಡಿ ಕುತ್ತಿಗೆಯಿಂದ ಭುಜದತ್ತ ಬರುವ ಕ್ಲ್ಯಾವಿಕಲ್ ಬೋನ್ ಮೇಲೆ ಒಂದು ಸ್ಟೀಲ್ ಪಟ್ಟಿಯಿಟ್ಟು ಡ್ರಿಲ್ಲಿಂಗ್ ಮೆಶಿನಿನಿಂದ ತೂತು ಕೊರೆದು ಆರು ಸ್ಕ್ರೂಗಳನ್ನು ಅಳವಡಿಸಿದರು. ಶಸ್ತ್ರಕ್ರಿಯೆ ಮುಗಿದಾಗ ಮಂಪರಿನಲ್ಲಿದ್ದೆ. ಮರುದಿನ ಮುಂಜಾನೆ ನನ್ನನ್ನು ನೋಡಲು ಡಾ.ಲಾರೆನ್ಸ್ ಬಂದಾಗ ನಾನವರಿಗೆ ಹೇಳಿದ ಮೊದಲ ಮಾತು “ನಿಮ್ಮದು ಮತ್ತು ನನ್ನ ನೆರೆಮನೆಯ ಮ್ಯಾಕ್ಸಿಂ ಮಾಮನದು ಒಂದೇ ಕೆಲಸ. ಇಬ್ಬರೂ ಬಡಗಿಗಳು. ವ್ಯತ್ಯಾಸವಿಷ್ಟೆ, ಅವರು ಮರದ ಹಲಗೆಗೆ ಡ್ರಿಲ್ ಮೆಶಿನ್‌ನಿಂದ ತೂತು ಕೊರೆದು ಸ್ಕ್ರೂ ಅಳವಡಿಸುತ್ತಾರೆ. ನೀವು ಮನುಷ್ಯನ ಮೂಳೆಗಳ ಮೇಲೆ ಆ ಕೆಲಸ ಮಾಡುತ್ತೀರಿ..” ಲೋ ತಲೆಹರಟೆ..ಅದೆಲ್ಲಾ ಕ್ಲಿನಿಕಲ್ಲಿ ಆರಾಮಾಗಿ ಕೂತು ಮಾತಾಡೋಣ, ಈಗ ನೋವು ಹೇಗಿದೆ ಎಂದು ಹೇಳು ಮಾರಾಯ ಎನ್ನುತ್ತಾ ನಗತೊಡಗಿದರು.

ಶಸ್ತ್ರ ಚಿಕಿತ್ಸೆಯ ಬಳಿಕ ಆಸ್ಪತ್ರೆಯಲ್ಲಿದ್ದ ಎರಡು ದಿನ ಬ್ಯಾಂಡೇಜ್ ಬಟ್ಟೆಯ ಹಗ್ಗವೊಂದನ್ನು ಕುತ್ತಿಗೆಯಿಂದ ಇಳಿಬಿಟ್ಟು ಮೊಣಕೈಗಿಂತ ಕೆಳಗಿನ ಭಾಗವನ್ನು ನಾಭಿಯ ನೇರಕ್ಕಿಟ್ಟು ಕಟ್ಟಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾಗುವ ದಿನ ಮೆಡಿಕಲ್ ರೆಪ್ ಒಬ್ಬ ನನ್ನ ರೂಮಿಗೆ ಬಂದು ಲಾರೆನ್ಸ್ ಸರ್ ಕಳಿಸಿದ್ದೆಂದು ಒಂದು ಆರ್ಮ್ ಪೌಚ್ ಎಂಬ ಚೀಲವನ್ನು ಉಚಿತವಾಗಿ ತಂದು ಕೊಟ್ಟ. ಆ ಬಳಿಕ ನರ್ಸ್ ಒಬ್ಬಾಕೆ ಬಂದು ಕುತ್ತಿಗೆಯಿಂದ ಕೈಗೆ ಇಳಿಬಿಟ್ಟು ಕಟ್ಟಿದ್ದ ಬ್ಯಾಂಡೇಜ್ ಬಟ್ಟೆಯ ಹಗ್ಗವನ್ನು ಬಿಚ್ಚಿ ಕಸದ ಬುಟ್ಟಿಗೆಸೆದು, ಈ ಆರ್ಮ್ ಪೌಚ್‌ನ ತುದಿಯನ್ನು ನನ್ನ ಕುತ್ತಿಗೆಗೆ ಕಟ್ಟಿ ಅದರ ಚೀಲದಂತಹ ಜಾಗದಲ್ಲಿ ಕೈಯನ್ನು ಬಂಧಿಸಿದಳು. ಅಬ್ಬಾ ಆ ಬ್ಯಾಂಡೇಜ್ ಹಗ್ಗದ ಕಿರಿಕಿರಿಗಿಂತ ಇದೇ ವಾಸಿಯೆಂದೆನಿಸಿತು.

ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ತಲುಪಿ ಇನ್ನೂ ಎರಡು ತಾಸಾಗಲಿಲ್ಲ.. ನನ್ನ ಬೆವರು ನನಗೇ ವಾಸನೆ ಬರತೊಡಗಿತು. ಕೈಯನ್ನು ಆಚೀಚೆ ಅಲುಗಾಡಿಸಲಾಗದೇ ಕಂಕುಳಿಗೆ ತಾಗಿಯೇ ಇದ್ದುದರಿಂದ ಬೆವರುವಿಕೆ ಸ್ವಲ್ಪ ಜಾಸ್ತಿಯೇ ಇತ್ತು. ಅದರ ಮೇಲೆ ಈ ಆರ್ಮ್ ಪೌಚ್‌ ಎಂಬ ಮುಚ್ಚಿದ ಚೀಲ ಬೇರೆ. ಅದೂ ಅಲ್ಲದೇ ಮಾರ್ಚ್ ತಿಂಗಳು. ಮಂಗಳೂರಲ್ಲಿ ಮಾರ್ಚೆಂದರೆ ಬಿರು ಬೇಸಗೆಯ ಕಾಲ. ಕಂಕುಳಡಿಯ ಕೂದಲು ಬೋಳಿಸಿದರೆ ಸ್ವಲ್ಪ ವಾಸನೆ ಕಡಿಮೆಯಾಗಬಹುದೇನೋ ಎಂಬ ದೂರದ ಆಸೆ. ಕಂಕುಳೆತ್ತಲಾಗದಿದ್ದರೆ ಕೂದಲು ಬೋಳಿಸುವುದೆಂತು..? ಒಟ್ಟಿನಲ್ಲಿ ವಿಚಿತ್ರ ಇಕ್ಕಟ್ಟು.

ಸುಮ್ಮನೆ ತಿಂದುಂಡು ಹಾಸಿಗೆಯಲ್ಲಿ ಬಿದ್ದು ಕೊಂಡಿರುವುದೇ ದಿನಚರಿಯಾಗಿತ್ತು. ಮಲಗಿದಲ್ಲಿಂದ ಮಗ್ಗುಲು ಬದಲಿಸಲೂ ಹೆಗಲಿಗೆ ಜಡಿಯಲಾಗಿದ್ದ ಪಟ್ಟಿ ಮತ್ತು ಸ್ಕ್ರೂಗಳು ಬಿಡುತ್ತಿರಲಿಲ್ಲ. ಹೊತ್ತು ಕಳೆಯಲು ಪುಸ್ತಕಗಳು ಮತ್ತು ಮೊಬೈಲಿನ ಹೊರತಾಗಿ ಅನ್ಯ ದಾರಿಯಿರಲಿಲ್ಲ. ಹಾಗೆ ಓದುತ್ತಿರಲು ಪಿ. ಲಂಕೇಶರ ಕವನವೊಂದು ಓದ ಸಿಕ್ಕಿತು.
“ಮಾತುಗಳಿಗೆ
ಗಾಯನದ
ನರ್ತನದ
ಎಳೆ ನಗೆಯ
ತಿಳಿ ಹಸಿರ
ಕೇವಲ ಕಮ್ಮನೆಯ
ಕಂಕುಳ ಬೆವರ ವಾಸನೆಯ
ಕೂಡಲಾರದವ
ಕವಿಯಾಗಲಾರ”
ಈ ಕಾವ್ಯದ ಓದು ಮತ್ತು ನನ್ನನ್ನು ಕಾಡುತ್ತಿರುವ ಬೆವರ ವಾಸನೆ ನನಗೆ ಸತ್ಯವೊಂದರ ಸಾಕ್ಷಾತ್ಕಾರ ಮಾಡಿಸಿತು.
ಅದು ಕಳೆದ ಹದಿನೈದು ವರ್ಷಗಳಿಂದ ಬರೆಯುತ್ತಿದ್ದರೂ ಕಾವ್ಯ ಪ್ರಕಾರ ನನಗೇಕೆ ಒಲಿಯಲೇ ಇಲ್ಲ ಎಂಬುದು ಪರಮ ಸತ್ಯ. ನನ್ನ ಕಂಕುಳ ಬೆವರ ವಾಸನೆಯೇ ನನಗೆ ಅಸಹ್ಯವಾಗುತ್ತಿರಲು ನಾನೆಂತು ಕವಿಯಾಗಲು ಸಾಧ್ಯ..?

ಮತ್ತೆ ತುರಿಕೆಯ ವಿಚಾರಕ್ಕೆ ಬರುತ್ತೇನೆ. ಕಂಕುಳ ಬೆವರ ವಾಸನೆಯೆಂದ ಮೇಲೆ ತುರಿಕೆ ಇದ್ದೇ ಇರುತ್ತೆ. ಆರ್ಮ್ ಪೌಚಿನಲ್ಲಿ ಬಂಧಿಯಾದ ಬಲ ಕಂಕುಳನ್ನು ಎಡಗೈ ಬೆರಳುಗಳಿಂದ ಕೆರೆಯಬಹುದು. ಈ ಎಡ ಕಂಕುಳು ಕೆರೆಯುವ ಕಷ್ಟ ಹೇಳತೀರದು. ಇನ್ನು ಬೆನ್ನು ತುರಿಸಿದರೆ ಜಾನುವಾರುಗಳು ಕಂಪೌಂಡ್ ಗೋಡೆಗಳಿಗೆ, ಮರಗಳಿಗೆ ಮೈಯುಜ್ಜುವಂತೆ ನಾನೂ ನನ್ನ ಬೆನ್ನನ್ನು ಗೋಡೆಗೆ, ಬಾಗಿಲ ದಾರಂದಗಳಿಗೆಲ್ಲಾ ಉಜ್ಜುತ್ತಾ ಸಮಾಧಾನಪಡುತ್ತಿದ್ದೆ. ಈ ಕೆರೆಯಲಾಗದ ತುರಿಕೆಯ ಕಷ್ಟ ಮುಗಿದು, ಆರ್ಮ್ ಪೌಚೆಂಬ ಕೈ ಕೋಳ, ಮನೆಯೆಂಬ ಜೈಲಿನಿಂದ ಬಿಡುಗಡೆಯಾಗುವ ಹೊತ್ತಿಗೆ ಸಾಕು ಸಾಕಾಗಿ ಬಿಟ್ಟಿತ್ತು.

ಈಗೆಲ್ಲಾ ಕೈ‌ ಮುರಿದು‌ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಿದವರಿಗೆ ಬುದ್ಧಿ ಹೇಳುವಾಗ ಒಂದಿನಿತೂ ವ್ಯಂಗ್ಯ ದಾಟಿಯಲ್ಲಿ ಮಾತನಾಡುವುದಿಲ್ಲ. ಯಾವುದೇ ನೋವು, ಕಷ್ಟ ಸ್ವಯಂ ಅನುಭವಿಸದ ಹೊರತಾಗಿ ಅನುಭವಿಸಿದವರ ಸಂಕಟ, ಅಸಹಾಯಕತೆ ಅರಿಯಲು ಸಾಧ್ಯವಿಲ್ಲ.

* ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)

ಇದನ್ನೂ ಓದಿ: ಪ್ರಬಂಧ: ನಾಯಿ ಕಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...