Homeಮುಖಪುಟಪ್ರಬಂಧ: ನಾಯಿ ಕಾಟ

ಪ್ರಬಂಧ: ನಾಯಿ ಕಾಟ

ಒಂದು ಕಾಲದಲ್ಲಿ ನಾಯಿಗಳನ್ನು ನಖ ಶಿಖಾಂತ ದ್ವೇಷಿಸುತ್ತಿದ್ದ ನನ್ನ ಹೃದಯದಲ್ಲಿ ನಾಯಿಪ್ರೇಮವನ್ನು ನೆಟ್ಟ ಕೀರ್ತಿ ನಮ್ಮೂರಿನ ಸೀತಳಿಗೇ ಸಲ್ಲಬೇಕು.

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೊಮ್ಮೆ ಯಾರಾದರೂ ನಾಯಿಗೆ ಕಲ್ಲು ಹೊಡೆದರೆ “ಏನೋ ಬ್ಯಾರಿಗಳ ಮಕ್ಕಳಂತೆ ಮಾಡುವುದು”? ಎಂದು ತುಳುವರು ಹೇಳುತ್ತಿದ್ದರು. ಆ ಮಟ್ಟಿಗೆ ಬ್ಯಾರಿ ಹುಡುಗರು ನಾಯಿ ದ್ವೇಷಿಗಳಾಗಿದ್ದರು.

ಬ್ಯಾರಿ ಹುಡುಗನಾದ ನಾನು ಕೂಡಾ ಇತರ ಹುಡುಗರಿಗಿಂತ ಭಿನ್ನವೇನೂ ಇರಲಿಲ್ಲ. ನಾಯಿಗಳಿಗೆ ಕಲ್ಲು ಹೊಡೆಯುವ ಸ್ವಭಾವ ನಮಗೆ ನಮ್ಮ ವಂಶವಾಹಿಯಲ್ಲೇ ಬಂದಿರಬಹುದೋ ಏನೋ ಎಂಬಷ್ಟು ನಾನೂ ನಾಯಿಗಳಿಗೆ ಕಲ್ಲು ಹೊಡೆಯುತ್ತಿದ್ದೆ. ಇಂತಿಪ್ಪ ಅದೊಂದು ದಿನ ನಮ್ಮ ಅಡಿಕೆ ತೋಟದಲ್ಲಿ ಮಲಗಿದ್ದ ನಾಯಿಯೊಂದಕ್ಕೆ ಕಲ್ಲು ಹೊಡೆದಾಗ ಅದು ನನ್ನತ್ತ ಗುರಾಯಿಸಲೂ ಇಲ್ಲ, ಮಲಗಿದ ಸ್ಥಳದಿಂದ ಒಂದಿಂಚು ಕದಲಲೂ ಇಲ್ಲ. ಪುನಃ ಮತ್ತೊಂದು ಕಲ್ಲೆತ್ತಿ ಒಗೆದೆ. ಆಗಲೂ ಅದು ಕದಲಲಿಲ್ಲ, ನನ್ನತ್ತ ಬೊಗಳಲೂ ಇಲ್ಲ.. ಪೆಟ್ಟು ತಿಂದಾಗ ಕುಂಯ್ಯೋ ಎನ್ನುತ್ತಾ ನೋವು ಪ್ರಕಟಿಸಲೂ ಇಲ್ಲ. ಅದರ ಸನಿಹ ತೆರಳಿ ನೋಡಿದಾಗ ಅದರ ಕಣ್ಣಿಂದ ಹನಿಗಳು ಉದುರುತ್ತಿದ್ದವು. ಅರೆ.. ಇದಕ್ಕೇನಾಗಿದೆ ಎಂದು ಬೆತ್ತವೊಂದರಲ್ಲಿ ತಿವಿದೆ.. ಬರೀ ಕಣ್ಣೀರಲ್ಲದೇ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ನನ್ನಜ್ಜ ಪಳ್ಳಿಬ್ಯಾರಿಯನ್ನು ಕರೆದು ನಾಯಿಯನ್ನು ತೋರಿಸಿದೆ. ಅಜ್ಜ ಪ್ರಾಥಮಿಕ ಪರೀಕ್ಷೆಗಳನ್ನೆಲ್ಲಾ ಮಾಡಿದರು. ಬೆತ್ತದಿಂದ ಮೆತ್ತಗೆ ಒಂದೇಟು ಬಿಗಿದರು. ಅದರ ಕಣ್ಣಿಂದ ಹನಿಗಳುದುರುತ್ತಲೇ ಇತ್ತು. ಅಜ್ಜ ಅದರ ಸನಿಹ ಹೋದರು. ಅದು ನರಳುತ್ತಿತ್ತು. ಅಜ್ಜ ಆಗತಾನೇ ಪಕ್ರು ಬ್ಯಾರಿಯಿಂದ ಖರೀದಿಸಿದ್ದ ಬೂತಾಯಿ ಮೀನೊಂದನ್ನು ತಂದು ಅದರ ಪಕ್ಕ ಹಾಕಿದರು. ನಾಯಿಗಳು ಏನನ್ನೇ ತಿನ್ನದೇ ಬಿಟ್ಟರೂ ಮೀನನ್ನು ತಿನ್ನದೇ ಬಿಟ್ಟರೆ ಅದು ನಾಯಿಯ ಜಾತಿಗೆ ಹುಟ್ಟಿದ್ದಲ್ಲ ಎಂದೇ ಲೆಕ್ಕ. ಆದರೆ ಈ ನಾಯಿ ಮೀನನ್ನು ಮೂಸಿ ತಿನ್ನಲಾಗದ ತನ್ನ ಸಂಕಟಕ್ಕೆ ಸ್ವಮರುಕಪಟ್ಟು ಕಣ್ಣೀರು ಸುರಿಸುತ್ತಲೇ ಇತ್ತು.‌ ಅಲ್ಲೇ ಪಕ್ಕದಲ್ಲಿದ್ದ ನಮ್ಮ ಜಾನುವಾರುಗಳ ಹಟ್ಟಿಯಿಂದ ಗೊಬ್ಬರವನ್ನು ಹೊತ್ತು ತಂದು ಅಡಿಕೆ ಗಿಡಗಳ ಬುಡಕ್ಕೆ ಹಾಕುತ್ತಿದ್ದ ನಮ್ಮ ಒಕ್ಕಲಿನ ಹುಡುಗ ಧನಂಜಯನನ್ನು ಕರೆದು ನಾಯಿಯನ್ನು ಎತ್ತಿ ನಿಲ್ಲಿಸಲು ಹೇಳಿದರು. ಆತ ಅಳುಕುತ್ತಲೇ ಎತ್ತಿ ನಿಲ್ಲಿಸಿದ. ಅದರ ಕಾಲಿಗೇನಾದರೂ ಏಟಾಗಿದೆಯಾ ಎಂದು ಅಜ್ಜ ಪರೀಕ್ಷಿಸಿದರು. ಏನೊಂದೂ ತಿಳಿಯದಾದಾಗ ತೋಟ ಕಾಯುವ ಮೋನಿಚ್ಚನ ಗುಡಿಸಲಿಂದ ಟಾರ್ಚ್ ತರ ಹೇಳಿದರು. ಅವರ ತಲೆ ದಿಂಬಿನ ಪಕ್ಕವೇ ಇಟ್ಟಿದ್ದ ದೊಡ್ಡ ಟಾರ್ಚ್ ಹಿಡ್ಕೊಂಡು ಬಂದು ಅಜ್ಜನಿಗೆ ಕೊಟ್ಟೆ. ನಾಯಿಯ ಬಾಯಿಯನ್ನು ಮೆದುವಾಗಿ ಅಗಲಿಸಲು ಧನಂಜಯ‌ನಿಗೆ ಹೇಳಿದರು. ಅಜ್ಜ ನಾಯಿಯ ಬಾಯಿಗೆ ಟಾರ್ಚ್ ಬೆಳಕು ಹರಿಸಿ ನೋಡಿದರು.ನಾಲಿಗೆಯಿಂದ ಅಲ್ಲಲ್ಲಿ ರಕ್ತ ಒಸರುತ್ತಿತ್ತು.

ಅಜ್ಜ ಖಾಯಿಲೆ ಪತ್ತೆ ಹಚ್ಚಿಯೇ ಬಿಟ್ಟರು. ಅದಕ್ಕೆ ಯಾರೋ ಅನ್ನದೊಂದಿಗೆ ಗಾಜಿನ ಚೂರುಗಳನ್ನು ಬೆರೆಸಿ ಹಾಕಿದ್ದಾರೆ. ಪರಿಣಾಮವಾಗಿ ಅದರ ಬಾಯಿ, ನಾಲಿಗೆ, ಗಂಟಲು ಮತ್ತು ಅನ್ನನಾಳಕ್ಕೆ ತೀವ್ರ ಗಾಯವಾಗಿದೆ. ಆದುದರಿಂದ ಅದಕ್ಕೆ ತಿನ್ನಲೂ ಆಗುತ್ತಿಲ್ಲ, ಬೊಗಳಲೂ ಆಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಸಾಯುತ್ತದೆ ಎಂದು ನುರಿತ ವೈದ್ಯನಂತೆ ನುಡಿದರು. ಅಜ್ಜನ ಭವಿಷ್ಯ ಸುಳ್ಳಾಗಲಿಲ್ಲ. ಅಂದು ಕಂಡ ನಾಯಿಯೊಂದರ ಕಣ್ಣೀರು, ಅಸಹಾಯಕತೆ,ಯಾತನೆ ನನ್ನ ಮನಪರಿವರ್ತನೆ ಮಾಡಿತು.

ಅಂದಿನಿಂದ ನಾಯಿಗಳಿಗೆ ಕಲ್ಲು ಹೊಡೆಯುವುದಿಲ್ಲ ಎಂದು ನಿರ್ಧರಿಸಿದೆನಾದರೂ ದರಿದ್ರದ ನಾಯಿಗಳು ಪೂರ್ವ ಜನ್ಮದ ದ್ವೇಷವೆಂಬಂತೆ ನನ್ನತ್ತ ಗುರಾಯಿಸುವುದು, ನನ್ನನ್ನು ಓಡಿಸುವುದು ಇವೆಲ್ಲಾ ಮುಂದುವರಿದಿತ್ತು.

ಅಂದ ಹಾಗೆ ಬ್ಯಾರಿ ಹುಡುಗರು ನಾಯಿಗಳನ್ನು ಕಂಡರೆ ಕರ್ಫ್ಯೂ ಹೇರಿದ ಬೀದಿಯಲ್ಲಿ ಕಂಡ ಹುಡುಗರ ಮೇಲೆ ಪೋಲೀಸರು ಲಾಠಿ ಬೀಸುವಂತೆ ನಾಯಿಗಳಿಗೆ ಕಲ್ಲೆಸೆಯುವುದಕ್ಕೆ ಬಲವಾದ ಕಾರಣವಿದೆ. ಮುಸ್ಲಿಮರಿಗೆ ಒದ್ದೆ ನಾಯಿ ಅಶುದ್ಧ. ಒಣ ನಾಯಿ ಅಶುದ್ಧವಲ್ಲ. ಅದರ ಮೈ ಒದ್ದೆಯಾಗಿದ್ದರೆ ಅದನ್ನು ಮುಟ್ಟಿದರೆ ಶುದ್ಧ ಮಣ್ಣು ಕಲಸಿದ ನೀರಿನಿಂದ ತೊಳೆಯಬೇಕಾಗುತ್ತದಾದ್ದರಿಂದ ಮುಸ್ಲಿಮರು ನಾಯಿಯನ್ನು ಮುಟ್ಟುವುದಿಲ್ಲ. ಈ ಕಷ್ಟಕ್ಕೆ ಮುಸ್ಲಿಮರು ನಾಯಿ ಮುಟ್ಟುವುದಿಲ್ಲವಷ್ಟೆ. ಅದರ ಮೇಲಿರುವ ಸೂಕ್ಷ್ಮಾಣುಜೀವಿಗಳನ್ನು ನೀಗಿಸುವ ಗುಣವಿರುವುದು ಮಣ್ಣಿಗೆ ಮಾತ್ರ.

ಈ ಬ್ಯಾರಿ ಹುಡುಗರು ಅದನ್ನೇ ತಪ್ಪಾಗಿ ಅರ್ಥೈಸಿ ನಾಯಿಗಳಿಗೆ ಕಲ್ಲು ಹೊಡೆಯುವುದು ಪುಣ್ಯಕಾರ್ಯ ಎಂದು ನಂಬಿದಂತಿತ್ತು. ಬೀದಿ ನಾಯಿಗಳಿಗೆ ಕಲ್ಲು ಹೊಡೆಯುವುದೇನೋ ಇದೆ. ಆದರೆ ನಾವು ಯಾರದ್ದೋ ಮನೆಯ ಅಂಗಳದಲ್ಲಿ ಅದರ ಪಾಡಿಗಿರುತ್ತಿದ್ದ ನಾಯಿಗಳಿಗೂ ಕಲ್ಲು ಹೊಡೆಯುತ್ತಿದ್ದೆವು. ಒಮ್ಮೆ ಸಂಜೆ ಹೊತ್ತು ಮದ್ರಸಾಕ್ಕೆ ಹೋಗುವ ದಾರಿಯಲ್ಲಿ ಲೋಕಣ್ಣನ ಮನೆಯ ಅಂಗಳದಲ್ಲಿ ತನ್ನ ಪಾಡಿಗೆ ಮಲಗಿದ್ದ ಅವರ ಸಾಕುನಾಯಿಗೆ ಕಲ್ಲು ಹೊಡೆದಾಗ ಲೋಕಣ್ಣ ನಮ್ಮನ್ನು ಬೆನ್ನಟ್ಟಿ ಬಂದರು. ಓಡೋಡಿ ಹೋಗಿ ಮದ್ರಸಾ ತರಗತಿಗೆ ನುಗ್ಗಿ ಕೂತೆವು. ಲೋಕಣ್ಣ ಮದ್ರಸಾದ ಕಂಪೌಂಡು ದಾಟಿ ಮುಂದೆ ಬರಲಾರರು ಎಂದೇ ನಾವು ನಂಬಿದ್ದೆವು. ತರಗತಿ ಆರಂಭವಾಗಿ ತುಸು ಹೊತ್ತಿನಲ್ಲೇ ಮದ್ರಸಾದ ಮುಖ್ಯ ಉಸ್ತಾದರಿಂದ ನನಗೆ, ನನ್ನ ಮಾವನ ಮಗ ಅಲೀಗೆ ಕರೆ ಬಂತು. ಏನೋ ಎಡವಟ್ಟಾಗಿದೆ ಎಂದು ಉಸ್ತಾದರ ಕೊಠಡಿಯತ್ತ ಹೋಗಬೇಕಾದರೆ ತುಳುವಿನಲ್ಲಿ ಮಾತನಾಡುವುದು ಕೇಳಿ ಗಂಟಲ ಪಸೆ ಆರಿತ್ತು.

ಒಳಹೋದವರಲ್ಲಿ ಏನೊಂದೂ ವಿಚಾರಿಸದೇ ನಾಗರ ಬೆತ್ತದಲ್ಲಿ ರಪ ರಪನೇ ಬಾರಿಸಿದರು.. ಯಾ ಅಲ್ಲಾಹ್.. ಯಾ..ಉಮ್ಮಾ ಎಂದು ನಾವು ಬೊಬ್ಬೆ ಹೊಡೆಯಬೇಕಾದರೆ ಉಸ್ತಾದ್ ನಾಯಿಗೆ ಕಲ್ಲು ಹೊಡೆದಾಗ ಅದು ಕುಂಯ್ಯೋ ಕುಂಯ್ ಎನ್ನುತ್ತಾ ಕೂಗುತ್ತಲ್ವಾ ಅದೇನೆನ್ನುವುದು ಗೊತ್ತಾ..? ಅದರ ಭಾಷೆಯಲ್ಲಿ ಹೀಗೆಯೇ ಯಾ ಅಲ್ಲಾಹ್..ಯಾ ಉಮ್ಮಾ.. ಎನ್ನುವುದು ಎಂದು ಇಬ್ಬರ ಕಿವಿಯನ್ನೂ ಒಂದೊಂದು ಕೈಯಲ್ಲಿ ಹಿಡಿದು ಹಿಂಡಿದರು. ಲೋಕಣ್ಣ ಅಲ್ಲೇ ಕೂತಿದ್ದರು. ಲೋಕಣ್ಣನ ಮುಂದೆಯೇ ಮಹಾನ್ ಸೂಫಿ ಸಂತರುಗಳಾದ ಶೈಕ್ ಅಹ್ಮದ್ ಕಬೀರ್ ರಿಫಾಯಿಯವರ ನಾಯಿಪ್ರೇಮದ ಕುರಿತು ಪ್ರವಚನ ಶುರು ಹಚ್ಚಿದರು. ರಿಫಾಯಿ ಗುರುಗಳು ರೋಗ ಪೀಡಿತ ಬೀದಿ ನಾಯಿಗಳನ್ನು ತಂದು ಸಾಕಿ, ಅವುಗಳಿಗೆ ಶುಶ್ರೂಷೆ ಮಾಡಿ ಆ ಮೂಲಕ ಅಲ್ಲಾಹನ ಸಂಪ್ರೀತಿ ಗಳಿಸಿದರು. ನಾಯಿಗಳನ್ನು ಪ್ರೀತಿಸುವುದೂ ಆಧ್ಯಾತ್ಮ ಸಿದ್ಧಿಯ ಒಂದು ಭಾಗ…

ಉಸ್ತಾದರ ಪ್ರವಚನ ಅಷ್ಟಕ್ಕೇ ನಿಲ್ಲಲಿಲ್ಲ. ನೀವೀಗ ಆರನೇ ಕ್ಲಾಸ್ ಮದ್ರಸಾ ಓದುತ್ತೀರಲ್ವಾ..?
ಐದನೇ ಕ್ಲಾಸಿನಲ್ಲಿ ಓದಿದ ಪಾಠ ಇಷ್ಟು ಬೇಗ ಮರೆತು ಬಿಟ್ಟಿರಾ..?
ಬನೂ ಇಸ್ರಾಯಿಲ್ ಜಮಾನಾದಲ್ಲಿ ದೈವಭಕ್ತೆಯೊಬ್ಬಳು ಬೆಕ್ಕೊಂದನ್ನು ಕೋಣೆಯಲ್ಲಿ ಕೂಡಿ ಹಾಕಿ ಹಿಂಸಿಸಿದ್ದಕ್ಕೆ ಅವಳ ಎಲ್ಲಾ ಆರಾಧನೆಗಳೂ ನಾಶವಾಯಿತು. ವೇಶ್ಯೆಯೊಬ್ಬಳು ಬಾಯಾರಿದ ನಾಯಿಯೊಂದರ ದಾಹ ತಣಿಸಿದ್ದಕ್ಕೆ ಅವಳ ಪಾಪಗಳೆಲ್ಲವೂ ಪರಿಹಾರವಾಯಿತು. ಬರೀ ನಮಾಜು, ರೋಜಾ ಮಾಡಿದ್ರೆ ಸಾಲದು ಮೂಕಪ್ರಾಣಿಗಳನ್ನು ಪ್ರೀತಿಸಬೇಕು. ಖುರ್‌ಆನ್ ಹೇಳುತ್ತದಲ್ವಾ “ನೀನು ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿದರೆ, ಆಕಾಶದಲ್ಲಿರುವವನು ನಿನ್ನ ಮೇಲೆ ಕರುಣೆ ತೋರುತ್ತಾನೆ..” ಹೀಗೆ ಉಸ್ತಾದರ ಪ್ರವಚನ ಅರ್ಧ ಗಂಟೆಯ ಕಾಲ ಮುಂದುವರಿದದ್ದನ್ನು ಆಲಿಸಿದ ಲೋಕಣ್ಣ ತಲೆದೂಗಿದ್ದರು.
ಅದೇ ಕೊನೆ ಆ ಬಳಿಕ ಯಾರದ್ದೇ ಹಿತ್ತಲಲ್ಲಿ ಮಲಗಿದ್ದ ನಾಯಿಗಳಿಗೆ ಕಲ್ಲು ಹೊಡೆಯುವ ಕುಬುದ್ಧಿ ತಾನಾಗೇ ನಿಂತು ಹೋಯಿತು.

ನಾನು ನಾಯಿಗಳಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸುತ್ತೇನೆಂದೂ, ನಾಯಿಗಳೂ ನನ್ನನ್ನು ಅಟ್ಟಾಡಿಸಬಾರದೆಂದು ಕರಾರು ಮಾಡಕ್ಕಾಗುತ್ತಾ..?
ಒಂದರಿಂದ ಪಾರಾದರೆ ಇನ್ನೊಂದರ ಉಪಟಳವನ್ನೆದುರಿಸಲು ಸದಾ ಸಿದ್ಧನಾಗಿರಬೇಕಾದ ಪರಿಸ್ಥಿತಿ ನನ್ನದು.

ನಮ್ಮ ಮನೆಯಿಂದ ನಮ್ಮ ತರವಾಡು ಮನೆಗೆ ರಸ್ತೆಯ ಮೂಲಕ ಹೋಗಬೇಕಾದರೆ ಎರಡು ಕಿಲೋ ಮೀಟರ್ ನಡೆಯಬೇಕು. ಆದರೆ ಕಾಲುದಾರಿಯಲ್ಲಿ ಸಾಗಿದರೆ ಒಂದು ಕಿಲೋ ಮೀಟರ್ ಅಷ್ಟೇ ದೂರ.ಕಾಲುದಾರಿಯಲ್ಲಿ ಸಾಗುವಾಗ ಕುಂಟಲಚ್ಚಿಲ್ ಪೂಜಾರಿಗಳ ಮನೆಯ ಅಂಗಳ ದಾಟಿಯೇ ಹೋಗಬೇಕು. ಕುಂಟಲಚ್ಚಿಲ್ ಮನೆಯಲ್ಲಿ ಎರಡು ನಾಯಿಗಳಿತ್ತು. ಅವುಗಳು ಹಿಂದೊಮ್ಮೆ ನನ್ನನ್ನು ಬೆನ್ನಟ್ಟಿತ್ತು. ಪ್ರಾಣಭಯದಿಂದ ಓಡುತ್ತಾ ಪುಟ್ಟ ತೋಡು ದಾಟಲೆಂದು ಹಾಕಿದ ಅಡಿಕೆ ಮರದಿಂದ ತಯಾರಿಸಿದ್ದ ಪಾಲ (ಸೇತುವೆ)ದಿಂದ ಆಯ ತಪ್ಪಿ ಹಳ್ಳಕ್ಕೆ ಬಿದ್ದು ಕೈ ಕಾಲು ಜರಿಸಿಕೊಂಡಿದ್ದೆ. ಆ ಬಳಿಕದಿಂದ ಆ ದಾರಿಯಲ್ಲಿ ಸಾಗುವಾಗ ಕುಂಟಲಚ್ಚಿಲ್ ಮನೆಯ ಹಿತ್ತಲಿಗಿಂತ ಮುಂಚೆ ಸಿಗುವ ಅಕ್ಕರೆ ಬಡುವಚ್ಚನ ಗುಡ್ಡದ ಮಾವಿನ ಮರವೊಂದನ್ನೇರಿ ಕುಂಟಲಚ್ಚಿಲ್ ಮನೆಯಂಗಳದಲ್ಲಿ ಯಾರಾದರೂ ಇದ್ದಾರಾ ಎಂದು ನೋಡಿ ಖಚಿತಪಡಿಸಿಕೊಂಡು ಹೋಗುತ್ತಿದ್ದೆ. ಒಂದು ವೇಳೆ ಯಾರನ್ನಾದರೂ ಕಾಣದಿದ್ದರೆ ಮರದ ಮೇಲಿಂದಲೇ ಕೂಗಿ ಕರೆದು ಅವರು ಅಂಗಳಕ್ಕೆ ಬಂದ ಮೇಲಷ್ಟೇ ಮರ ಇಳಿದು ಆ ದಾರಿಯಾಗಿ ನಡೆದಾಡುತ್ತಿದ್ದೆ. ಆ ರಕ್ಕಸ ನಾಯಿಗಳು ಅವರಿಗಲ್ಲದೇ ಇನ್ನಾರಿಗೂ ಮಣಿಯುತ್ತಿರಲಿಲ್ಲ. ಒಮ್ಮೆ ಕುಂಟಲಚ್ಚಿಲ್ ಮನೆಯ ಸಂಬಂಧಿಕರ ಮದುವೆಯಿತ್ತು. ಮನೆಗೆ ಬೀಗ ಹಾಕಿ ಎಲ್ಲರೂ ಮದುವೆಗೆ ಹೋಗಿದ್ದರು. ಅಕ್ಕರೆ ಬಡುವಚ್ಚನ ಮಾವಿನ ಮರವೇರಿ ನೋಡಿದಾಗ ಅಂಗಳದಲ್ಲಿ ಸಿಂಹಗಳಂತೆ ಕೂತಿದ್ದ ನಾಯಿಗಳನ್ನು ನೋಡಿ ಎದೆ ದಸಕ್ಕೆಂದಿತು. ಈಗ ಇವರ ಅಂಗಳಕ್ಕೆ ಕಾಲಿಡುವುದು ಅಪಾಯಕಾರಿ ಎಂದರಿತು ತಿರ್ತ ಇಲ್ಲ್ ಗಂಗಣ್ಣ ಶೆಟ್ರ ಗದ್ದೆಯ ಹುಣಿಯಲ್ಲಿ ನಡೆಯುವುದೆಂದು ತೀರ್ಮಾನಿಸಿ ಗದ್ದೆಯ ದಾರಿಯಲ್ಲಿ ಸಾಗಿದೆ. ಒಂದು ದೊಡ್ಡ ಸುತ್ತು ಹೊಡೆದು ಹೋಗಬೇಕಾದರೂ ಅದು ಸುರಕ್ಷಿತ ದಾರಿಯಾಗಿತ್ತು. ಗದ್ದೆ ಹುಣಿಯಲ್ಲಿ ಸ್ವಲ್ಪ ದೂರ ಸಾಗಿದ್ದೆನಷ್ಟೆ. ನನ್ನ ದಾರಿಗಡ್ಡವಾಗಿ ಕುಂಟಲಚ್ಚಿಲ್ ಮನೆಯ ನಾಯಿಯೊಂದು ಪ್ರತ್ಯಕ್ಷವಾಗಬೇಕೇ.. ಹಿಂದಕ್ಕೆ ತಿರುಗಿದರೆ ಹಿಂದಿನಿಂದ ಇನ್ನೊಂದು ನಾಯಿ..! ಹೃದಯ ಬಾಯಿಗೆ ಬಂದಿತ್ತು. ಸುತ್ತಮುತ್ತ ಎತ್ತ ನೋಡಿದರೂ ಕಣ್ಣೆಟಕುವಷ್ಟು ಹಸಿರು ಹೊದ್ದು ತಣ್ಣಗೆ ಮಲಗಿದ್ದ ಭತ್ತದ ಗದ್ದೆಯ ಹೊರತು ಒಂದೇ ಒಂದು ನರಪಿಳ್ಳೆಯಿರಲಿಲ್ಲ. ಸಹಾಯಕ್ಕೆಂದು ಬೊಬ್ಬಿರಿದು ಕರೆದರೂ ನನ್ನದು ಬರೀ ಅರಣ್ಯರೋಧನವಷ್ಟೇ ಆಗಬಲ್ಲುದು. ಯಾರಾದರೂ ನನ್ನ ಅರಬಾಯಿ ಕೇಳಿ ಬಂದರೂ ಅವರು ತಲುಪುವಷ್ಟರಲ್ಲಿ ಈ ರಕ್ಕಸ ನಾಯಿಗಳು ನನ್ನನ್ನು ಹರಿದು ಹಾಕುವುದರಲ್ಲಿ ಸಂಶಯವುಳಿದಿರಲಿಲ್ಲ. ಬಾಯಿಪಾಠವಿದ್ದ ಖುರ್‌ಆನಿನ ಸೂಕ್ತಗಳನ್ನೋದುತ್ತಾ ಪಕ್ಕದ ಪೊದೆಯೊಂದಕ್ಕೆ ಹಾರಿ ಪುಟ್ಟ ಕಾಟು ಗಿಡವೊಂದನ್ನು ಎಳೆದು ಬಗ್ಗಿಸಿ ನಿಂತಲ್ಲಿಂದಲೇ ಬಲ ಮೊಣಗಾಲನ್ನೆತ್ತಿ ಮಡಚಿ ಲಟಕ್ಕನೆ ತುಂಡರಿಸಿದೆ.ಎರಡೂ ನಾಯಿಗಳು ನನ್ನ ಸನಿಹ ತಲುಪಿಯಾಗಿತ್ತು. ಧೈರ್ಯ ಮಾಡಿ ಕೈಯಲ್ಲಿದ್ದ ಬಡಿಗೆಯನ್ನು ಬೀಸಿದೆ. ಮೊದಲ ಏಟು ನಾಯಿಯೊಂದರ ತಲೆಗೆ ಬೀಳುತ್ತಲೇ ಕುಂಯ್ ಕುಂಯ್ಯೋ ಎನ್ನುತ್ತಾ ಬದುಕಿದರೆ ಬೇಡಿ ತಿಂದೇನೆಂಬ ಭಯದಿಂದ ಅದು ಓಡಿತು. ಎರಡನೇ ಬೀಸುವಿಕೆಗೆ ಇನ್ನೊಂದು ನಾಯಿಯೂ ಜೋರಾಗಿ ಬೊಗಳುತ್ತಾ ಅಲ್ಲಿಂದ ಕಾಲ್ಕಿತ್ತಿತು. ತುಸು ದೂರ ಹೋಗಿ ಮತ್ತೆ ಬೊಗಳಿತು. ಗಾಳಿಯಲ್ಲಿ ಬಡಿಗೆ ಬೀಸಿದೆ. ಮತ್ತೆ ನನ್ನ ಸನಿಹ ಬರುವ ಧೈರ್ಯ ತೋರಿಸಲಿಲ್ಲ. ಅದೇ ಕೊನೆ.. ಅಂದಿನಿಂದ ಕುಂಟಲಚ್ಚಿಲ್ ಮನೆಯ ನಾಯಿಗಳಿಗೆ ಭಯಪಡುವ ಸನ್ನಿವೇಶವೇ ಎದುರಾಗಲಿಲ್ಲ. ಅಕ್ಕರೆ ಬಡುವಚ್ಚನ ಮಾವಿನ ಮರವೇರಿ ಶತ್ರುಗಳಿದ್ದಾರಾ ಎಂದು ಹೊಂಚಿ ನೋಡುವ ಪ್ರಮೇಯ ಮುಂದೆಂದೂ ಎದುರಾಗಲಿಲ್ಲ. ಕೈಯಲ್ಲೊಂದು ಕೋಲು ಹಿಡಿದು ಸಾಗುವಾಗ ಬೊಗಳುತ್ತಿತ್ತೇ ಹೊರತು ನನ್ನ ಸನಿಹ ಸುಳಿವ ಧೈರ್ಯ ತೋರುತ್ತಿರಲಿಲ್ಲ. ನಾನು ಅವುಗಳು ಬೊಗಳುವಾಗೆಲ್ಲಾ ” ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ..” ಎಂದು ನನ್ನ ಮನವ ಸಂತೈಸುತ್ತಾ ಮುಂದೆ ಸಾಗುತ್ತಿದ್ದೆ.

ಕುಂಟಲಚ್ಚಿಲ್ ಪೂಜಾರಿಗಳ ನಾಯಿಗಳಿಗೆ ನಾನು ಕೊಟ್ಟ ಏಟಿನ ಕತೆ ಬೇರೆ ನಾಯಿಗಳಿಗೆ ಹೇಗೆ ತಾನೇ ಗೊತ್ತಾಗಬೇಕು..? ನಾನು ಅವುಗಳ ದರ್ಪ ಇಳಿಸಿದ ಕತೆ ಏನು ಪೇಪರಲ್ಲಿ ಪ್ರಕಟವಾಗುತ್ತದಾ..? ಒಂದು ಬಿಟ್ಟರೆ ಇನ್ನೊಂದರ ಉಪಟಳ ಹೆಜ್ಜೆ ಹೆಜ್ಜೆಗೂ ಎದುರಾಗುತ್ತಿತ್ತು.
ಅದೊಂದು ಮಳೆಗಾಲ. ಹಾಲುಬಿಳುಪಿನ ಸಮವಸ್ತ್ರ ಧರಿಸಿ ಶಾಲೆಗೆ ಹೊರಟಿದ್ದೆ. ನಮ್ಮ ಹಿತ್ತಲು ದಾಟಿ ಒಂದು ಪುಟ್ಟ ಓಣಿಯಲ್ಲಿ ಸಾಗಿದ ಬಳಿಕ ಸುಮಾರು ಇನ್ನೂರು ಮೀಟರ್ ಗದ್ದೆ ಹುಣಿಯಲ್ಲಿ ಸಾಗಬೇಕು. ಸೀಲ ಪೊರ್ಬುಗಳ ಗದ್ದೆಯಲ್ಲಿ ಎರಡು ದಿನಗಳ ಹಿಂದಷ್ಟೇ ನಾಟಿ ಕಾರ್ಯ ಮುಗಿದಿತ್ತು. ಗದ್ದೆಗಳೆಲ್ಲಾ ಹಸಿ ಹಸಿಯಾಗಿತ್ತು. ಪಕ್ಕದ ವಾಸು ಪೂಜಾರಿಯ ಕರಡಿಯಂತಹ ನಾಯಿ ನನ್ನ ಸನಿಹಕ್ಕೆ ಬಂತೆಂದು ಕಲ್ಲಿಗಾಗಿ ಬಗ್ಗಿದೆ. ಈತ ನನಗೆ ಕಲ್ಲು ಹೊಡೆಯುತ್ತಾನೆಂದು ಸಿಟ್ಟಾದ ನಾಯಿ ಬೊಗಳುತ್ತಾ ನನ್ನ ಮೇಲೆ ಎರಗಲು ಸಿದ್ಧವಾಯಿತು. ಯೋಚಿಸಲು ಕ್ಷಣಾವಕಾಶವೂ ಇರಲಿಲ್ಲ. ಓಡುವುದೊಂದೇ ದಾರಿಯೆಂದು ಓಡಿಯೇ ಬಿಟ್ಟೆ. ಹಸಿಯಾದ ಗದ್ದೆ ಹುಣಿಯಲ್ಲಿ ಬದುಕಿದರೆ ಬೇಡಿ ತಿಂದೇನೆಂದು ಓಡುವ ರಭಸದಲ್ಲಿ ಕಾಲುಗಳ ಹೆಜ್ಜೆ ತಪ್ಪಿ ಮುಗ್ಗರಿಸಿ ಬಿದ್ದೆ. ಅಂಗಾತ ಬಿದ್ದದ್ದು ಸೀಲ ಪೊರ್ಬುಗಳ ಎರಡು ದಿನಗಳ ಹಿಂದಷ್ಟೇ ನಾಟಿ ಮಾಡಿದ ಹಸಿ ಮಣ್ಣು ಮತ್ತು ನೀರು ತುಂಬಿದ್ದ ಗದ್ದೆಗೆ. ಬಿಳಿ ಬಣ್ಣದ ದಿರಿಸು, ಮುಖ ಕೈ ಕಾಲೆಲ್ಲಾ ಸಂಪೂರ್ಣವಾಗಿ ಮಣ್ಣಿನ ಬಣ್ಣಕ್ಕೆ ತಿರುಗಿತು. ಸಾವರಿಸಿ ಎದ್ದು ನಿಂತಾಗ ನನ್ನ ಬದಲಾದ ವಿಚಿತ್ರ ರೂಪವನ್ನು ಕಂಡ ನಾಯಿ ಇದ್ಯಾವುದೋ ದೆವ್ವ ಗದ್ದೆಯಿಂದ ಪ್ರತ್ಯಕ್ಷವಾಯಿತೆಂದು ಹೆದರಿ ವಿಚಿತ್ರವಾಗಿ ಊ… ಎಂದು ಊಳಿಡುತ್ತಾ ಪರಾರಿಯಾಯಿತು.

ನಾಯಿಗಳಿಗೆ ಬ್ಯಾರಿ ಹುಡುಗರು ಕಲ್ಲು ಹೊಡೆಯುತ್ತಾರಲ್ವಾ… ಅವುಗಳ ಎಲ್ಲೆಂದರಲ್ಲಿ ಕಾಲೆತ್ತಿ ಉಚ್ಚೆ ಹೊಯ್ಯುವ ಕೇಡು ಬುದ್ಧಿಗೆ ಯಾರೇ ಆದರೂ ಕೊಂದು ಬಿಟ್ಟಾರು. ನಾನು ಶಾಲಾ ಬಾಲಕನಾಗಿದ್ದಾಗ ನಮ್ಮ ಶಾಲೆಯ ಪಕ್ಕದ ಅಮ್ಮದೆ ಬ್ಯಾರಿ ಅಂಗಡಿಯ ಹೊರಗೆ ಪೀಪಾಯಿಯೊಂದರಲ್ಲಿ ಉಪ್ಪನ್ನಿಟ್ಟಿದ್ದರು. ನಾವು ಸಲ್ಮಜ್ಜಿಯ ಮರಕ್ಕೆ ಕಲ್ಲು ಹೊಡೆದು ಉದುರಿಸುತ್ತಿದ್ದ ಮಾವಿನ ಕಾಯಿಗೆ ನೆಂಜಲು ಅಮ್ಮದೆ ಬ್ಯಾರಿಯ ಪೀಪಾಯಿಗೆ ಕೈ ಹಾಕಿ ಹಿಡಿ ಉಪ್ಪು ತೆಗೆಯುತ್ತಿದ್ದೆವು. ಮಸೀದಿಯಲ್ಲಿ ಬಾಂಗ್ ಕೇಳಿಸಿದರೆ ಮತ್ತೆ ಅರೆಕ್ಷಣವೂ ತಡಮಾಡದೇ ಅಮ್ಮದೆ ಬ್ಯಾರಿ ಮಸೀದಿಗೋಡುತ್ತಿದ್ದರು. ಅದೊಂದು ಮಧ್ಯಾಹ್ನ ಅಮ್ಮದೆ ಬ್ಯಾರಿಯ ಅಂಗಡಿಯ ಉಪ್ಪಿನ ಪೀಪಾಯಿಯ ಪಕ್ಕದ ದಿನ್ನೆಯ ಮೇಲೆ ನಿಂತು ಒಂದು ಕಾಲೆತ್ತಿ ಉಪ್ಪಿನ ಪೀಪಾಯಿಗೆ ನಾಯಿಯೊಂದು ಮೂತ್ರಾಭಿಷೇಕ ಮಾಡಿದ್ದು ಕಂಡ ಬಳಿಕ ಯಾವತ್ತೂ ಅಮ್ಮದೆ ಬ್ಯಾರಿಯ ಉಪ್ಪಿನ ಪೀಪಾಯಿಗೆ ನಾವು ಕೈ ಹಾಕುತ್ತಿರಲಿಲ್ಲ.

ಬೀದಿ ದೀಪದ ಕಲ್ಲಿನ ಕಂಬಕ್ಕೆ, ನಿಲ್ಲಿಸಿದ ಬೈಕಿಗೆ, ನಿಲ್ಲಿಸಿದ ಕಾರಿನ ಚಕ್ರಕ್ಕೆ ಹೀಗೆ ತುಸು ಬೆಚ್ಚಗಿನ ಸ್ಥಳ ಹುಡುಕಿ ಕಾಲೆತ್ತಿ ಮೂತ್ರಾಭಿಷೇಕ ಮಾಡುವ ವಿಚಿತ್ರ ಅಭ್ಯಾಸ ನಾಯಿಗಳದ್ದು. ಒಂದು ನಾಯಿ ಒಂದೆಡೆ ಕಾಲೆತ್ತಿದ್ದನ್ನು ಬೇರೆ ನಾಯಿಗಳು ಕಂಡರೆ ಅದೂ ಇದು ಟಾಯ್ಲೆಟ್ ಏನೋ ಎಂಬಂತೆ ಅಲ್ಲೇ ಬಂದು ಕಾಲೆತ್ತುತ್ತವೆ.

ನಾಯಿಗಳು ಕಾಲೆತ್ತಿ ಉಚ್ಚೆ ಹೊಯ್ಯುವುದಕ್ಕೆ ಕಾರಣವನ್ನು ಹಲವರ ಬಳಿ ಕೇಳಿದ್ದೆ. ಒಮ್ಮೆ ಮದ್ರಸಾ ಉಸ್ತಾದರ ಬಳಿಯೂ ಈ ಪ್ರಶ್ನೆ ಕೇಳಿದಾಗ ವಿಶಿಷ್ಟವಾದ ಮಾಹಿತಿಯೊಂದು ಸಿಕ್ಕಿತು. ಪ್ರಸಿದ್ಧ ಸೂಫಿ ಸಂತ ಇಮಾಮ್ ಶಾಫಿಯವರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗ ದಾರಿಯಲ್ಲಿ ಹುಚ್ಚನೊಬ್ಬ ಹೋಗುತ್ತಿದ್ದನಂತೆ. ಆತನನ್ನು ಕಂಡ ಕೂಡಲೇ ಇಮಾಂ ಶಾಫಿ ಗುರುಗಳು ಎದ್ದು ನಿಂತರಂತೆ. ವಿದ್ಯಾರ್ಥಿಗಳು “ಆ ಹುಚ್ಚ ಬಂದಿದ್ದಕ್ಕೆ ನೀವೇಕೆ ಎದ್ದು ನಿಂತಿರಿ ಗುರುಗಳೇ..?
ಅದಕ್ಕೆ ಶಾಫಿ ಗುರುಗಳು” ಅವರು ನನ್ನ ಗುರುಗಳು…”
ನಿಜವಾಗ್ಲೂ…. ಹೇಗೆ..?
ನಾಯಿಯು ಫ್ರೌಡ ವಯಸ್ಕವಾಯಿತೆಂದು ತಿಳಿಯುವುದು ಹೇಗೆಂಬ ನನ್ನ ಸಂಶಯಕ್ಕೆ ಉತ್ತರ ನೀಡಿದ ಗುರುಗಳವರು…
ಹೇಗೆ..?
ನಾಯಿ ಫ್ರೌಡ ವಯಸ್ಸಿಗೆ ತಲುಪಿದ ಬಳಿಕ ಕಾಲೆತ್ತಿ ಉಚ್ಚೆ ಹೊಯ್ಯುತ್ತದೆಂಬ ಅಪರೂಪದ ಜ್ಞಾನ ನನಗೆ ಅವರಿಂದ ಸಿಕ್ಕಿತ್ತು.

ನಾಯಿಗೆ ಎಷ್ಟೇ ಶಿಕ್ಷೆ ಕೊಟ್ಟರೂ ಅದು ಒಂದು ಕಾಲೆತ್ತಿ ಉಚ್ಚೆ ಹೊಯ್ಯುವ ಹುಟ್ಟು ಗುಣವನ್ನು ಬಿಡದು. ಅದು ಒಂದು ಕಾಲೆತ್ತಿಯಲ್ಲ, ನೆಗೆಯುತ್ತಾ ಉಚ್ಚೆ ಹೊಯ್ಯಲಿ. ನನ್ನದೇನೂ ತಕರಾರಿಲ್ಲ. ಆದರೆ ನಮ್ಮ ಬಳಕೆಯ ವಸ್ತುಗಳಿಗೆಲ್ಲಾ ಹುಡುಕಿ ಹುಡುಕಿ ಮೂತ್ರಾಭಿಷೇಕ ಮಾಡುವುದೇ ನನ್ನ ಸಿಟ್ಟಿಗೆ ಕಾರಣ.

ಅಂದ ಮಾತ್ರಕ್ಕೆ ನಾಯಿಯೆಂದರೆ ಮನುಷ್ಯನಿಗೆ ಉಪಟಳ ಕೊಡಲೆಂದೇ ಹುಟ್ಟಿದ ಜೀವಿಯಲ್ಲ. ಪ್ರಸಿದ್ಧ ಸೂಫಿ ಸಂತ ಹಸನುಲ್ ಬಸ್ರೀ ನಾಯಿಗಳನ್ನು ಹಿಂಸಿಸುವುದನ್ನು ಕಟುವಾಗಿ ವಿರೋಧಿಸುತ್ತಿದ್ದರು. ಅವರ ಶಿಷ್ಯಂದಿರು “ಗುರುಗಳೇ ನೀವೇಕೆ ಸದಾ ನಾಯಿಗಳ ಪರ ವಕಾಲತ್ತು ವಹಿಸುವುದು”?
ನಾಯಿಗಿರುವ ಅನೇಕ ಸದ್ಗುಣಗಳು ಮನುಷ್ಯನಿಗಿಲ್ಲ. ನಾಯಿಯ ನಿಯ್ಯತ್ತಿಗೆ ಪರ್ಯಾಯವಿಲ್ಲ. ಯಜಮಾನ ಎಷ್ಟೇ ಹೊಡೆದರೂ ಯಜಮಾನ ಮತ್ತೆ ಕರೆದರೆ ಬಂದು ಬಿಡುವ ಕ್ಷಮಾಗುಣ. ಅನ್ನ ಹಾಕಿದವನಿಗೆ ಕೇಡು ಬಗೆಯದ ಸದ್ಗುಣ.

ಒಂದೊಮ್ಮೆ ಮಸೀದಿಯೊಂದರಲ್ಲಿ ಮುಅದ್ದಿನ್ ಆಗಿದ್ದ ಮೋನಿಚ್ಚ ಎಂಬ ಅವಿವಾಹಿತ ಹಿರಿಯರೊಬ್ಬರನ್ನು ನಮ್ಮಜ್ಜ ಅಡಿಕೆ ತೋಟ ಕಾಯುವ ಕೆಲಸಕ್ಕೆ ನೇಮಿಸಿದ್ದರು. ಅವರು ನನ್ನಜ್ಜನಲ್ಲಿ ನನಗೊಂದು ನಾಯಿ ಬೇಕು ಎಂದು ಕೇಳಿದಾಗ ಅಜ್ಜ ನಕ್ಕಿದ್ದರು. ಆಗ ಮೋನಿಚ್ಚ ಅಜ್ಜನಿಗೆ ಹಸನುಲ್ ಬಸ್ರಿಯ ನಾಯಿ ಪ್ರೇಮದ ಕತೆಗಳನ್ನು ಹೇಳಿದ್ದರಂತೆ. ಏನೇ ಹೇಳಿದರೂ ಮಹಾ ಘಾಟಿ ಮುದುಕ ನನ್ನಜ್ಜ ಮೋನಿಚ್ಚನಿಗೆ ನಾಯಿ ಕೊಡಿಸಲೇ ಇಲ್ಲ. ಕೊನೆಗೆ
ನಮ್ಮ ಒಕ್ಕಲಿನ ವೆಂಕಪ್ಪ ಪೂಜಾರಿಯ ಮಗ ಧನಂಜಯ ಸಾಕುತ್ತಿದ್ದ ನಾಯಿಗೆ ಪ್ರತೀ ದಿನ ಮೀನು, ತಿಂಡಿ ತಿನಿಸು ನೀಡಿ ಮೋನಿಚ್ಚ ವಶೀಕರಿಸಿ ಬಿಟ್ಟರು. ಆದುದರಿಂದ ಅದು ಸದಾ ಅವರ ಹಿಂದೆ ಮುಂದೆ ಸುಳಿದಾಡುತ್ತಿತ್ತು. ತೋಟ ಕಾಯುವವರಿಗೆಂದೇ ತೋಟದಲ್ಲಿ ನಿರ್ಮಿಸಿದ್ದ ಸೋಗೆಯ ಮೇಲ್ಚಾವಣಿಯ ಗುಡಿಸಲಲ್ಲಿ ಮಲಗುವಾಗ ಧೈರ್ಯಕ್ಕೆ ನಾಯಿಯೊಂದರ ಅಗತ್ಯ ಬಹಳವಿತ್ತು. ನಮ್ಮ ಅಡಿಕೆ ತೋಟದಿಂದ ಕೂಗಳತೆ ದೂರದಲ್ಲಿ ಕಾಡೂ ಇತ್ತು. ಹುಲಿ ಸಿಂಹ ಚಿರತೆಯಂತಹ ಕ್ರೂರ ಪ್ರಾಣಿಗಳಿರುವ ಕಾಡೇನಲ್ಲ. ನರಿ, ಮೊಲ, ಮುಳ್ಳುಹಂದಿ, ಕಾಡುಹಂದಿ, ಕಾಡುಕೋಣಗಳೆಲ್ಲಾ ಆ ಕಾಡಿನಲ್ಲಿದ್ದವು. ಅವುಗಳಲ್ಲಿ ಕಾಡು ಹಂದಿಗಳ ಹಿಂಡು ಆಗಾಗ ನಮ್ಮ ತೋಟದತ್ತ ಬರುತ್ತಿದ್ದವು. ಹಾಗೆಯೇ ತೋಟಕ್ಕೆ ಭೇಟಿ ಕೊಡುತ್ತಿದ್ದ ಹಾವುಗಳಿಗೆ ಕೊರತೆಯಿರಲಿಲ್ಲ. ಮೋನಿಚ್ಚನ ನಾಯಿ ಗುಡಿಸಲಿನತ್ತ ಬಂದ ಅದೆಷ್ಟೋ ಕನ್ನಡಿ ಹಾವುಗಳನ್ನು, ವಿಷ ಜಂತುಗಳನ್ನು ಕಚ್ಚಿ ಕತ್ತರಿಸಿ ಒಗೆದೆಸದದ್ದಿದೆ. ಕಾಡು ಹಂದಿಯ ಹಿಂಡು ಕಾಡಿಂದಿಳಿದು ಬರುವಾಗ ಮೋನಿಚ್ಚನಿಗೆ ಮುನ್ಸೂಚನೆ ಕೊಟ್ಟದ್ದಿದೆ. ಸದಾ ಅವರ ಸುತ್ತವೇ ಸುಳಿದಾಡುತ್ತಿದ್ದ ಧನಂಜಯನ ಬಾಡು ನಾಯಿಗೆ ಮೋನಿಚ್ಚ ಇಟ್ಟ ಹೊಸ ಹೆಸರು “ನಾಯಿಂಡೆ ಮೋನೆ”( ನಾಯಿ ಮಗನೇ). ಧನಂಜಯ, ಆತನ ತಮ್ಮ ಲೋಕೇಶ, ಆತನ ತಾಯಿ ಸೇಸಮ್ಮ ಬಾಡು ಎಂದು ಕರೆದಾಗೆಲ್ಲಾ ಪ್ರತಿಕ್ರಿಯಿಸುತ್ತಿದ್ದ ನಾಯಿ ಮೋನಿಚ್ಚನ ಸಹವಾಸದಿಂದ ಬಾಡು ಎಂಬ ತನ್ನ ಹೆಸರನ್ನೇ ಮರೆತುಬಿಟ್ಟಿತ್ತು. ಮೋನಿಚ್ಚ ಕರೆದು ಕರೆದು ಅಭ್ಯಾಸವಾಗಿ ಅದು ನಾಯಿಂಡೆ ಮೋನೆ ಎಂದು ಕರೆದರೆ ಮಾತ್ರ ಪ್ರತಿಕ್ರಿಯಿಸುತ್ತಿತ್ತು. ಕೊನೆಗೆ ಅದರ ಮೂಲ ಮಾಲಕರಾದ ಧನಂಜಯ ಮತ್ತು ಆತನ ಪರಿವಾರದವರೂ ನಾಯಿಂಡೆ ಮೋನೆ ಎಂದೇ ಕರೆಯತೊಡಗಿದರು.

ನಾನೊಮ್ಮೆ ಮೋನಿಚ್ಚನಲ್ಲಿ ನಾಯಿಂಡೆ ಮೋನೆ ಎಂದರೆ ಬೈಗುಳವಲ್ವಾ..? ಅದು ನಿಮ್ಮನ್ನು ಇಷ್ಟು ಪ್ರೀತಿಸುವಾಗ ನೀವದನ್ನು ಅಷ್ಟು ಕೆಟ್ಟದಾಗಿ ಸಂಬೋಧಿಸುವುದು ನ್ಯಾಯವೇ..? ಎಂದಿದ್ದಕ್ಕೆ ನಾಯಿಯ ಮಗನನ್ನು ನಾಯಿಯ ಮಗನೆನ್ನದೇ ಪಳ್ಳಿಬ್ಯಾರಿಯ ಮಗನೇ, ವೆಂಕಪ್ಪನ ಮಗನೇ ಎಂದು ಕರೆಯಕ್ಕಾಗುತ್ತಾ ಮಾರಾಯ ಎಂದು ಪ್ರಶ್ನಿಸಿದ್ದರು. ಅದೂ ಹೌದಲ್ವಾ ಎಂದು ಅಂದಿನಿಂದ ನಾನೂ ಅದನ್ನು ನಾಯಿಂಡೆ ಮೋನೆ ಎಂದು ಕರೆಯಲಾರಂಭಿಸಿದೆ. ಕೆಲವೇ ತಿಂಗಳಲ್ಲಿ ಮೋನಿಚ್ಚನ ನಾಯಿಂಡೆ ಮೋನೆಯ ನಿಯ್ಯತ್ತು ಕಂಡು ನನ್ನಜ್ಜನಿಗೂ ಆ ನಾಯಿಯ ಮೇಲೆ ಪ್ರೀತಿ ಬೆಳೆದಿತ್ತು.

 

ನಾಯಿ ನಿಯ್ಯತ್ತು ಮತ್ತು ನಾಯಿ ಪ್ರೇಮಿಯೊಬ್ಬಳ ಕರುಣಾಜನಕ ಕತೆಯೊಂದನ್ನು ಹೇಳಲೇಬೇಕು.

ನಮ್ಮೂರಿನಲ್ಲಿ ಸೀತಳನ್ನು ಅರಿಯದವರು ಯಾರೂ ಇಲ್ಲ. ಅಂದ ಮಾತ್ರಕ್ಕೆ ಆಕೆ ಪ್ರಸಿದ್ಧಳೋ, ಸಿಲೆಬ್ರಿಟಿಯೋ ಅಲ್ಲ. ಕಡುಬಡವಿ ಮತ್ತು ಅನಾಥೆ. ಸೀತ ಮತ್ತು ಆಕೆಯ ಅಕ್ಕ ಬೂದ ಅವರ ನಾಯಿಯೊಂದಿಗೆ ಬದುಕುತ್ತಿದ್ದರು. ಬೂದ ಇರುವವರೆಗೆ ಸೀತಳಿಗೆ ಅವಳು ಎಲ್ಲವೂ ಆಗಿದ್ದಳು. ಬೂದ ವಿಧಿವಶಳಾಗಿ ಕೆಲವು ವರ್ಷಗಳಾಯಿತು. ಅಂದು ಬೂದಳಿಗಾಗಿ ಅತ್ತದ್ದು ಸೀತ ಮತ್ತು ಅವರ ನಾಯಿ ಮಾತ್ರ. ಆ ನಾಯಿ ಅನೇಕ ದಿನಗಳವರೆಗೆ ಏನನ್ನೂ ತಿಂದಿರಲಿಲ್ಲವಂತೆ. ಕ್ರಮೇಣ ಸೀತಳಂತೆಯೇ ಅದೂ ಸಹಜ ಸ್ಥಿತಿಗೆ ಮರಳಿತು. ಈ ಸೀತ ಪ್ರತಿದಿನ ಒಂಬತ್ತು ಗಂಟೆಯ ಹೊತ್ತಿಗೆಲ್ಲಾ ನಮ್ಮೂರ ಪುಟ್ಟ ಪೇಟೆ ಪದವಿಗೆ ಬರುವಾಗ ನಾಯಿಯೂ ಅವಳನ್ನು ಹಿಂಬಾಲಿಸುತ್ತಿತ್ತು. ಸೀತ ತನ್ನ ಮನೆಯಲ್ಲಿ ಅಡುಗೆಯೇನೂ ಮಾಡುತ್ತಿರಲಿಲ್ಲ
. ಊರ ಯಾವುದಾದರೂ ಮನೆಯಲ್ಲಿ ಸಿಕ್ಕ ತಂಗಳನ್ನ ತಿಂದು ಮಧ್ಯಾಹ್ನ ಮತ್ತು ರಾತ್ರಿಗಾಗುವಷ್ಟು ಕಟ್ಟಿಕೊಂಡು ಹೋಗುತ್ತಿದ್ದಳು ನಾನು ಬೈಕೋ, ಕಾರೋ ನಿಲ್ಲಿಸಿದ್ದನ್ನು ಕಂಡರೆ ನನ್ನ ವಾಹನದ ಬಳಿ ಬರುತ್ತಿದ್ದಳು. ನಾನು ಹತ್ತು ರೂಪಾಯಿ ಕೊಡುತ್ತಿದ್ದೆ.
ಸುಮಾರು ಐದು ವರ್ಷಗಳ ಹಿಂದಿನ ಕತೆ. ನಾನು ಮುಂಜಾನೆ ಎಂಟೂವರೆಯ ಹೊತ್ತಿಗೆಲ್ಲಾ ಮುಖಕ್ಷೌರ ಮಾಡಿಸಿ ಮರಳುತ್ತಿದ್ದಾಗ ನಾಯಿಯೊಂದು ವಿಚಿತ್ರವಾಗಿ ಊಳಿಡುತ್ತಾ ಪದವಿನಲ್ಲಿ ಅತ್ತಿಂದಿತ್ತ ಓಡುತ್ತಿತ್ತು. ಈ ನಾಯಿಯ ವಿಚಿತ್ರ ನಡವಳಿಕೆ ನನ್ನ ಗಮನ ಸೆಳೆಯಿತು. ಆಗಷ್ಟೇ ಇಬ್ಬಾಯಿ ಬ್ಯಾರಿಯಿಂದ ಖರೀದಿಸಿದ ಮೀನನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಬೈಕಿನ ಹ್ಯಾಂಡಲ್‌ಗೆ ನೇತಾಡಿಸಿದ್ದೆ. ಅದರಿಂದ ಒಂದು ನಂಗ್ ಮೀನನ್ನು ತೆಗೆದು ಆ ನಾಯಿಗೆಸೆದೆ. ಅದು ಮೂಸಿಯೂ ನೋಡಲಿಲ್ಲ. ಸೀತ ಪದವಿಗೆ ಬರುವಾಗ ಅವಳ ಹಿಂದೆಯೇ ಬಂದಿದ್ದ ನಾಯಿ ಅಲ್ಲಿ ಸಭೆ ಸೇರಿದ್ದ ತನ್ನ ಕುಲಬಾಂಧವರನ್ನು ಕಂಡು ಏನು ಕತೆ ಎಂದು ವಿಚಾರಿಸಹೋದಾಗ ಸೀತ ಮುಂದೆ ಸಾಗಿ ಯಾರದೋ ಮನೆಯ ಹಿತ್ತಲು ದಾಟಿದ್ದಳು. ನಾನು ಪಕ್ಕದಲ್ಲೇ ಇದ್ದ ಗೆಳೆಯ ರಾಜೀವನ ಅಂಗಡಿಗೆ ಹೋಗಿ ವೀಳ್ಯದೆಲೆ ಮೆಲ್ಲುತ್ತಾ ಹೊರಬರುವಾಗ ಅತ್ತ ಕಡೆಯಿಂದ ಸೀತ ಕಾಲೆಳೆಯುತ್ತಾ ಬರುತ್ತಿದ್ದಳು. ಅವಳನ್ನು ಕಂಡ ಕೂಡಲೇ ಜಾತ್ರೆಯ ಜನಜಂಗುಳಿಯಲ್ಲಿ ಅಮ್ಮನ ಕೈ ತಪ್ಪಿದ ಮಗು ಅಮ್ಮನನ್ನು ಕಂಡರೆ ಓಡೋಡಿ ಹೋಗುವಂತೆ ಓಡಿದ ನಾಯಿ ಅವಳ ಮುಂದೆ ತನ್ನ ಮುಂಗಾಲುಗಳನ್ನೆತ್ತಿ ಅದರದೇ ಭಾಷೆಯಲ್ಲಿ ಏನೋ ಹೇಳುತ್ತಿತ್ತು. ನಾನೂ ಸೀತಳ ಸನಿಹ ತಲುಪಿದೆ. ಆಕೆ ಅದರ ಹಣೆ ನೇವರಿಸುತ್ತಾ ತುಳುವಿನಲ್ಲಿ “ದಾನೆಯಾ…ಯನನ್ ಮಸ್ತ್ ನಾಡಿಯನಾ…?” ಎಂದು ವಿಚಾರಿಸಿದಳು. ಅದು ಆಕೆಯನ್ನು ಪ್ರೀತಿಯಿಂದ ನೆಕ್ಕತೊಡಗಿತು. ಚೀಲದಿಂದ ಮತ್ತೊಂದು ನಂಗ್ ಮೀನನ್ನು ತೆಗೆದು ಅದಕ್ಕೆಸೆದೆ. ಅದು ಸುತಾರಾಂ ಮೂಸಿಯೂ ನೋಡಲಿಲ್ಲ. ಪೋಯಾ ತಿನ್‌ಯಾ ಎಂದು ಅವಳೆಷ್ಟೇ ಒತ್ತಾಯಿಸಿದರೂ ಅದು ಅವಳನ್ನು ಬಿಟ್ಟು ಕದಲಲಿಲ್ಲ. ಕೊನೆಗೆ ಅವಳೇ ಆ ಮೀನನ್ನೆತ್ತಿ ಅದರ ಬಾಯಿಗೆ ನೀಡಿದಾಗ ನಿಶ್ಚಿಂತೆಯಿಂದ ತಿಂದಿತು. ಬೂದಳ ಕಾಲಾನಂತರ ಆ ನಾಯಿ ಅವಳ ಗುಡಿಸಲಲ್ಲಿ ಅವಳ ಪಕ್ಕವೇ ಮಲಗುತ್ತಿತ್ತಂತೆ.

ಸೀತಳ ಅಂಗಳ ದಲ್ಲಿದ್ದ ಎರಡು ಗಿಡ್ಡ ತೆಂಗಿನ ಮರದಿಂದ ತೆಂಗಿನಕಾಯಿ ಕದಿಯಲೆಂದು ರಾತ್ರಿ ಹೊತ್ತು ಊರ ಪುಡಿ ಕಳ್ಳನೊಬ್ಬ ಮರವೇರಿದ್ದ. ಆತನ ಕೈ ತಪ್ಪಿ ಬಿದ್ದ ತೆಂಗಿನ ಕಾಯಿ ತಗಡು ಶೀಟು ಹೊದಿಸಿದ್ದ ಸೀತಳ ಬಚ್ಚಲು ಮನೆಯ ತಗಡಿನ ಮೇಲ್ಚಾವಣಿಗೆ ಬಿದ್ದ ಟೈಂ ಎಂಬ ಸದ್ದಿಗೆ ಎಚ್ಚೆತ್ತ ಸೀತ ಮತ್ತು ಆಕೆಯ ನಾಯಿ ಗುಡಿಸಲಿಂದ ಹೊರಗೋಡಿ ಬರುವಾಗ ಕಳ್ಳ ಮರದಿಂದ ಲಗುಬಗನೇ ಕೆಳಗಿಳಿಯುತ್ತಿದ್ದ. ನಾಯಿ ನಿಂತಲ್ಲಿಂದಲೇ ನೇರವಾಗಿ ತೆಂಗಿನ ಬುಡಕ್ಕೆ ಜಿಗಿದು ಆತನನ್ನು ಹರಿದು ಹಾಕಿತ್ತು. ಬದುಕಿದರೆ ಬೇಡಿ ತಿಂದೇನೆಂದು ಕಾಲ್ಕಿತ್ತ ಕಳ್ಳ ರೇಬಿಸ್ ಇಂಜೆಕ್ಷನ್ ಕೊಡಿಸಿದರೂ ಆತನ ಮೈ ಮೇಲಿನ ಗಾಯಗಳು ಒಣಗಲು ಹದಿನೈದು ದಿನಗಳೇ ಹಿಡಿಯಿತು. ಕೋಪದಿಂದ ಕುದಿಯುತ್ತಿದ್ದ ಕಳ್ಳ ಸಮಯಕ್ಕಾಗಿ ಹೊಂಚು ಹಾಕುತ್ತಲೇ ಇದ್ದ. ಅದೊಂದು ಮಧ್ಯಾಹ್ನ ಸೀತ ಬಚ್ಚಲು ಮನೆಯಲ್ಲಿದ್ದಾಗ ಕೊತ ಕೊತ ಕುದಿಯುತ್ತಿದ್ದ ಬಿಸಿ ಗಂಜಿ ನೀರನ್ನು ನಾಯಿಯ ಮೇಲೆ ಎರಚಿದ್ದ. ಪರಿಣಾಮವಾಗಿ ಅದರ ಕುತ್ತಿಗೆ ಬಳಿಯ ಚರ್ಮ ಸುಲಿದು ಹೋಗಿ ನಾಯಿ ವಿಪರೀತ ಯಾತನೆ ಅನುಭವಿಸಿತ್ತು. ನನ್ನ ನಾಯಿಗೆ ಬಿಸಿ ಗಂಜಿನೀರು ಎಳೆಸಿದ ನೀನೂ ಕುದಿಯುವ ನೀರಿಗೆ ಬಿದ್ದು ನರಳಿ ನರಳಿ ಸತ್ತು ಹೋಗ… ಎಂದು ಸೀತ ನೆಲಕ್ಕೆ ಕೈ ಬಡಿದು ಹಿಡಿಶಾಪ ಹಾಕಿದ್ದಳು.

ನಾಟಿ ವೈದ್ಯ ಅಬ್ಬು ಬ್ಯಾರಿಯ ಗಿಡ ಮೂಲಿಕೆ ಚಿಕಿತ್ಸೆಯಿಂದ ಅದರ ಯಾತನೆ ಸ್ವಲ್ಪ ಕಡಿಮೆಯಾಗಬೇಕಾದರೆ ತಿಂಗಳು ಹಿಡಿದಿತ್ತು. ಅದು ಅಲ್ಪ ಸ್ವಲ್ಪ ಚೇತರಿಸಿ ಮತ್ತೆ ತನ್ನ ಅರ್ಭಟ ಆರಂಭಿಸಿತ್ತು.ಕಳ್ಳನ ದ್ವೇಷ ಮುಗಿದಿರಲಿಲ್ಲ.

ಕೆಲ ತಿಂಗಳ ಬಳಿಕ ಮೀನಿನೊಂದಿಗೆ ವಿಷ ಬೆರೆಸಿ ಅವಳ ಅಂಗಳಕ್ಕೆ ಎಸೆದಿದ್ದನಂತೆ. ತನ್ನದೇ ಅಂಗಳದಲ್ಲಿರುವುದಲ್ವಾ ಎಂದು ಧೈರ್ಯದಿಂದ ತಿಂದು ಕೆಲಗಂಟೆಗಳೊಳಗಾಗಿ ಅವಳ ಕಣ್ಮುಂದೆಯೇ ಪ್ರಾಣ ತ್ಯಜಿಸಿತು. ಈಗಂತೂ ಸೀತ ಅಕ್ಷರಶಃ ಅನಾಥಳಾಗಿದ್ದಳು. ಆ ಬಳಿಕ ಆಕೆ ಅದರ ಸ್ಥಾನ ತುಂಬಿಸಲು ಬೇರೆ ನಾಯಿ ಸಾಕುವ ಗೋಜಿಗೇ ಹೋಗಲಿಲ್ಲ. ಆಕೆ ಒಂಟಿಯಾಗಿ ಪದವಿಗೆ ನಡಕೊಂಡು ಬರುವಾಗ ಅಲ್ಲೆಲ್ಲಾ ಇರುತ್ತಿದ್ದ ಬೀದಿನಾಯಿಗಳನ್ನು ದಿಟ್ಟಿಸಿ ನೋಡುತ್ತಿದ್ದಳು. ಆಗೆಲ್ಲಾ ಅವಳ ಕಣ್ಣಾಲಿಗಳು ಒದ್ದೆಯಾಗುತ್ತಿದ್ದವು. ತನ್ನ ನಾಯಿ ಸತ್ತ ಬಳಿಕ ಸೀತ ಹೆಚ್ಚು ದಿನ ಬದುಕಲಿಲ್ಲ. ತುಳುನಾಡಿನಲ್ಲಿ ಕುಮಾರಿ ಹೆಣ್ಮಕ್ಕಳು ಸತ್ತರೆ ಹೂಳುವುದು ವಾಡಿಕೆ. ಅವಳ ಪಾರ್ಥಿವ ಶರೀರವನ್ನು ಅವಳ ನಾಯಿಯ ಕಳೇಬರವನ್ನು ಹೂತದ್ದರ ಪಕ್ಕವೇ ಹೂಳಬೇಕೆಂದು ಬೇಂಗೋಡಿ ಸೋಮಕ್ಕೆ ಹೇಳಿದರು. ಆ ಪ್ರಕಾರ ಅವಳ ನಾಯಿಯನ್ನು ದಫನ ಮಾಡಿದ ಜಾಗದಿಂದ ಒಂದು ಅಡಿ ಅಂತರದಲ್ಲಿ ಸೀತಳನ್ನು ಹೂಳಲಾಯಿತು. ಬದುಕಿದ್ದ ಕಾಲದಲ್ಲಿ ಅವಳ ಸನಿಹವೇ ಮಲಗುತ್ತಿದ್ದ ನಾಯಿಯ ಪಕ್ಕವೇ ಅವಳು ಚಿರನಿದ್ರೆಗೆ ಜಾರಿದಳು.

ಒಂದು ಕಾಲದಲ್ಲಿ ನಾಯಿಗಳನ್ನು ನಖ ಶಿಖಾಂತ ದ್ವೇಷಿಸುತ್ತಿದ್ದ ನನ್ನ ಹೃದಯದಲ್ಲಿ ನಾಯಿಪ್ರೇಮವನ್ನು ನೆಟ್ಟ ಕೀರ್ತಿ ನಮ್ಮೂರಿನ ಸೀತಳಿಗೇ ಸಲ್ಲಬೇಕು. ನನಗೆ ನಾಯಿ ಸಾಕಲು ಮೂಗಿನವರೆಗೆ ಮನಸ್ಸಿತ್ತಾದರೂ ಅಮ್ಮ ಬಿಲ್ಕುಲ್ ಒಪ್ಪಲೇ ಇಲ್ಲ. ಕೊನೆಗೆ ನಮ್ಮ ಮನೆ ಪಕ್ಕದ ಮ್ಯಾಕ್ಸಿಂ ಮಾಮನ ನಾಯಿಯನ್ನು ನಮ್ಮದೇ ನಾಯಿಯೆಂದು ಸಾಕತೊಡಗಿದೆ. ಅವರು ಅದಕ್ಕಿಟ್ಟ ಹೆಸರು ಪಿಂಟು.. ನಾನದಕ್ಕೆ ನಾಯಿ ಎಂದೇ ಮರು ನಾಮಕರಣ ಮಾಡಿ ಬಿಟ್ಟೆ. ಬರ ಬರುತ್ತಾ ಅದರ ಪಿಂಟು ಎಂಬ ಹೆಸರು ಮರೆಯಾಗಿ ಈಗದು ನಾಯಿಯೆಂದು ಕರೆದರೆ ಮಾತ್ರ ಸ್ಪಂದಿಸುತ್ತದೆ. ಕಳೆದೈದು ವರ್ಷಗಳಿಂದ ನಾಯಿಯ ದೇಖ್‌ಬಾಲ್ ನಾವೂ ಮಾಡುತ್ತಿರುವುದರಿಂದ ಈಗ ಮ್ಯಾಕ್ಸಿಮ್ ಮಾಮ್ ಮನೆಗೆ ಬೀಗ ಹಾಕಿ ಹೋಗಲು ಅಂಜುವುದಿಲ್ಲ. ನಾಯಿ ಹಸಿವಲ್ಲಿ ಸಾಯುತ್ತದೆಯೆಂಬ ದುಗುಡವೂ ಇಲ್ಲ. ಈಗದು ನಮ್ಮದೇ ಸ್ವಂತ ನಾಯಿಯೇ ಆಗಿ ಬಿಟ್ಟಿದೆ.

  • ಇಸ್ಮತ್ ಪಜೀರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಅದ್ಭುತ ಅನುಭವ ನೀಡುತ್ತದೆ. ಇಸ್ಮಾತ್ ಅವರೇ…

  2. ನಿಮ್ಮ ಪ್ರಭಂದ ತುಂಬಾ ಇಷ್ಟವಾಯಿತು. ಬಹಳ ಚಂದವಾಗಿ ಬರೆದಿರುವಿರಿ.
    ಧನ್ಯವಾದಗಳು…

  3. Very nice writing lot many messages are hidden in it. Still there is many things to comment on it but in this language it is enough.
    Do write such instances u are writing very interestingly.
    Regards.

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...