Homeಮುಖಪುಟದೂರು ಕೊಡಿಸಿದವರು ಯಾರೆಂಬುದು ಮುಖ್ಯವಲ್ಲ; ಸರಿಯಾದ ತನಿಖೆ ಮತ್ತು ಸತ್ಯ ಹೊರಬರುವುದು ಮುಖ್ಯ

ದೂರು ಕೊಡಿಸಿದವರು ಯಾರೆಂಬುದು ಮುಖ್ಯವಲ್ಲ; ಸರಿಯಾದ ತನಿಖೆ ಮತ್ತು ಸತ್ಯ ಹೊರಬರುವುದು ಮುಖ್ಯ

ದಮನಿತರ ಮೇಲೆ ದೌರ್ಜನ್ಯ ನಡೆದಾಗ ಪ್ರಭುತ್ವ ಮತ್ತು ಮಾಧ್ಯಮ ಬಲಾಢ್ಯರ ರಕ್ಷಕರಾಗಬಾರದು. ಅವು ತನಿಖೆಯ ಮುನ್ನವೇ ಅಭಿಪ್ರಾಯ ರೂಪಿಸಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತ ಚರ್ಚೆಯ ದಿಕ್ಕುತಪ್ಪಿಸಬಾರದು

- Advertisement -
- Advertisement -

ದೇಶದಲ್ಲೆಡೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ, ಅಂತಹ ಗಂಭೀರ ಪ್ರಕರಣಗಳಲ್ಲಿ ಸರ್ಕಾರಗಳು ಅಪರಾಧಿಗಳನ್ನು ಬಿಡುಗಡೆ ಮಾಡುವ, ಆರೋಪಿಗಳಿಗೆ ರಕ್ಷಣೆ ನೀಡುವ, ನೊಂದವರು ಮತ್ತೆ ಮತ್ತೆ ದೌರ್ಜನ್ಯಗಳಿಗೆ ತುತ್ತಾಗುತ್ತಿರುವ ಬಗ್ಗೆ ಆತಂಕ ತೀವ್ರಗೊಳ್ಳುತ್ತಿರುವಂತೆಯೇ, ಕರ್ನಾಟಕದಲ್ಲಿ ನಾಡಿನ ಪ್ರತಿಷ್ಠಿತ ಮುರುಘಾ ಮಠದ ಸ್ವಾಮೀಜಿಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿರುವುದಾಗಿ ಬಾಲಕಿಯರಿಬ್ಬರು ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗೆ ದೂರು ನೀಡಿದ್ದು ನಿನ್ನೆ ತಡರಾತ್ರಿ ಎಫ್‌ಐಆರ್ ಸ್ವಾಮೀಜಿಯವರ ವಿರುದ್ಧ ದಾಖಲಾಗಿದೆ.

ನಿನ್ನೆಯಷ್ಟೇ, ಆಗಸ್ಟ್ ೨೭ರಂದು ಗುಜರಾತ್‌ನ ಬಿಲ್ಕೀಸ್ ಬಾನೋ ಸಾಮೂಹಿಕ ಅತ್ಯಾಚಾರದ ಅಪರಾಧಿಗಳನ್ನು ಅಲ್ಲಿನ ಸರ್ಕಾರ ಅವಧಿಗೆ ಮುನ್ನವೇ ‘ಸನ್ನಡತೆ’ ಆಧಾರದ ಮೇಲೆ ಬಿಡುಗಡೆ ಮಾಡಿದ ಅನ್ಯಾಯವನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಆ ಪ್ರತಿಭಟನೆಯ ಕೂಗಿನ್ನೂ ನಿಲ್ಲುವ ಮೊದಲೇ ನಮ್ಮದೇ ರಾಜ್ಯದಲ್ಲಿ ಮತ್ತೊಂದು ಗಂಭೀರ ಲೈಂಗಿಕ ಕಿರುಕುಳದ ಪ್ರಕರಣ ವರದಿಯಾಗಿರುವುದು ಆತಂಕದ ವಿಷಯ. ಅದಕ್ಕಿಂತಲೂ ಆತಂಕದ ವಿಚಾರವೇನೆಂದರೆ ಈ ಪ್ರಕರಣದಲ್ಲಿನ್ನೂ ತನಿಖೆ ಆರಂಭವಾಗುವ ಮೊದಲೇ ಕೆಲವು ಟಿವಿ ವಾಹಿನಿಗಳು ಅಭಿಪ್ರಾಯ ರೂಪಿಸುವಂತಹ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು! ಹಾಗೆಯೇ, ಈ ಪ್ರಕರಣದ ಸುತ್ತಲಿನ ಇಡೀ ಚರ್ಚೆಯನ್ನು ‘ಈ ಆರೋಪದ ಹಿಂದೆ ಯಾರಿದ್ದಾರೆ?’, ‘ಪ್ರಕರಣವನ್ನು ಹೊರತಂದವರು ಯಾರು?’, ‘ಸ್ವಾಮೀಜಿಯವರ ವಿರೋಧಿಗಳಿಂದ ಈ ಹುನ್ನಾರ ನಡೆದಿದೆಯೇ?’, ‘ಈಗ ಸ್ವಾಮೀಜಿ ಈ ಬಿಕ್ಕಟ್ಟಿನಿಂದ ಪಾರಾಗಲು ಹೈಕೋರ್ಟ್ ಮುಂದೆ ದೂರನ್ನು ರದ್ದುಪಡಿಸಬೇಕೆಂದು ಮೊರೆಹೋಗಬಹುದು’ ಇವೇ ಮುಂತಾದ ಪ್ರಕರಣಕ್ಕೆ ನೇರವಾಗಿ ಸಂಬಂಧಿಸದ ಮತ್ತು ಏಕಪಕ್ಷೀಯವಾದ ಹೇಳಿಕೆಗಳ ಮೂಲಕ ಮಠದ ಒಳಗಿನ ರಾಜಕಾರಣ ಮತ್ತು ಕೆಲವು ಪ್ರಭಾವಿಗಳ ನಡುವಿದ್ದ ಪರಸ್ಪರ ದ್ವೇಷಾಸೂಯೆಗಳ ದಿಕ್ಕಿಗೆ ಹೊರಳಿಸಲಾಗುತ್ತಿದೆ.

ಕೇವಲ ಮಾಧ್ಯಮಗಳಷ್ಟೇ ಅಲ್ಲದೆ, ಆರೋಪಕ್ಕೆ ಗುರಿಯಾಗಿರುವ ಸ್ವಾಮೀಜಿಗಳ ಬೆಂಬಲಿಗರೆನ್ನಲಾದ ಅನೇಕರ ಪ್ರತಿಕ್ರಿಯೆಗಳೂ ಆತಂಕ ಮೂಡಿಸುತ್ತಿವೆ. ದೂರುದಾರ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬಗಳಿಗೆ ಭೀತಿ ಹುಟ್ಟಿಸುವಂತಹ ವಾತಾವರಣ ಉಂಟಾಗುತ್ತಿದೆ. ಇನ್ನೂ ತನಿಖೆಯಾಗುವುದಕ್ಕೆ ಮೊದಲೇ ‘ಸುಳ್ಳು ಆರೋಪ ಮಾಡಿದವರ ವಿರುದ್ಧ ನ್ಯಾಯಕ್ಕಾಗಿ ಉಗ್ರ ಹೋರಾಟ’ ನಡೆಸುವ ಬೆದರಿಕೆಗಳನ್ನೊಡ್ಡಲಾಗುತ್ತಿದೆ. ಆರೋಪಿತರ ಮೇಲೆ ಕ್ರಮ ಕೈಗೊಳ್ಳುವುದು ವಿಳಂಬವಾಗುತ್ತಿರುವುದನ್ನು ನೋಡಿದರೆ, ಇದರಲ್ಲಿ ರಾಜಕೀಯ ಪ್ರಭಾವ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನವೂ ಕಾಡುತ್ತದೆ.

ಧಾರ್ಮಿಕ ಮಠಗಳು ರಾಜಕೀಯ ಮೇಲಾಟಗಳ ತಾಣಗಳಾಗಿ ಬದಲಾಗಿ ಶತಮಾನಗಳು ಕಳೆದಿವೆ. ಇತರೆಲ್ಲ ಮಠಗಳಲ್ಲಿರುವಂತೆಯೇ ಈ ಸಂದರ್ಭದಲ್ಲಿ ಚರ್ಚೆಯಲ್ಲಿರುವ ಮಠದ ಸುತ್ತಲೂ ವಿವಾದಗಳು ಇಲ್ಲದಿಲ್ಲ. ಮಠಗಳು ಅಪಾರ ಸಂಪತ್ತು ಮತ್ತು ಅಧಿಕಾರದ ಕೇಂದ್ರಗಳಾಗಿ ಬದಲಾಗಿರುವುದು ಈ ಮಠದ ವಿಚಾರದಲ್ಲೂ ಸತ್ಯ; ಅದೇ ಸಂದರ್ಭದಲ್ಲಿ ಈಗ ಆರೋಪಕ್ಕೆ ಗುರಿಯಾಗಿರುವ ಸ್ವಾಮೀಜಿ ಈ ಹಿಂದೆ ಸಾಕಷ್ಟು ಜನಪರವಾದ, ಕಂದಾಚಾರ ವಿರೋಧಿಯಾದ, ವೈಚಾರಿಕವಾದ ನಿಲುವುಗಳನ್ನುಳ್ಳ ಕಾರ್ಯಕ್ರಮಗಳ ಕಡೆಗೆ ಒಲವುಳ್ಳವರಾಗಿದ್ದದ್ದೂ, ಅಂತಹ ಅನೇಕ ಚಟುವಟಿಕೆಗಳನ್ನು ಯೋಜಿಸುತ್ತಿದ್ದದ್ದೂ ನಿಜ. ಆದರೆ, ಈಗ ಚರ್ಚೆಯ ಕೇಂದ್ರವಾಗಬೇಕಿದ್ದ ಸಂಗತಿಯಾದರೂ ಏನು? ಅದು ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆಯ ವಿಚಾರ.

ಯಾಕೆಂದರೆ, ಈ ದೇಶಕ್ಕೆ ಲೈಂಗಿಕ ಹಿಂಸಾಚಾರ, ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಹಲವು ಬಗೆಯ ಒತ್ತಡಗಳ ಮರೆಗೆ ನಿಲುಕಿಸಿ ನ್ಯಾಯವನ್ನು ಉಸಿರುಕಟ್ಟಿಸುವ ಸುದೀರ್ಘ ಇತಿಹಾಸವಿದೆ. ಜಾತಿ, ಧರ್ಮ ಮತ್ತು ಜನಾಂಗಗಳ ಆಧಿಪತ್ಯವನ್ನು ಸಾರುವುದಕ್ಕಾಗಿ, ಹೆಣ್ಣುಮಕ್ಕಳ ಘನತೆ-ಗೌರವಗಳನ್ನು ಮಣ್ಣುಪಾಲು ಮಾಡುವ ಅಧಿಕಾರರೂಢ ಮನಸ್ಥಿತಿಯ ಆಳವಾದ ಹಿನ್ನೆಲೆಯಿದೆ. ವಿಶೇಷವಾಗಿ ತಳಸಮುದಾಯಗಳ, ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಯಾವುದೇ ಅಧಿಕಾರವಿಲ್ಲದ ಶೋಷಿತ ಮಹಿಳೆಯರು, ಅಸಹಾಯಕರಾದ ಮಕ್ಕಳು ವಿಕೃತ ಮನಸ್ಥಿತಿಯ ತೆವಲಿಗೋ ಅಥವಾ ತಮ್ಮ ಜಾತಿ-ಜನಾಂಗಗಳ-ಪುರುಷತ್ವದ ಮೇಲರಿಮೆಯನ್ನು ಹೆಚ್ಚಿಸಿಕೊಳ್ಳುವ ದುಷ್ಟತನಕ್ಕೋ ಅತ್ಯಂತ ಬರ್ಬರವಾದಂತಹ ಲೈಂಗಿಕ ಹಿಂಸಾಚಾರಗಳಿಗೆ ಗುರಿಯಾಗುತ್ತಲೇ ಬಂದಿದ್ದಾರೆ.

ಭಾರತದಲ್ಲಿ ಈಗಲೂ ಪ್ರತಿ ಗಂಟೆಗೆ 3 ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತದೆ. ಪ್ರತಿ ಗಂಟೆಗೆ 5 ಮಕ್ಕಳ ಮೇಲೆ ಲೈಂಗಿಕ ದಾಳಿ ಮತ್ತು ಹಿಂಸಾಚಾರ ನಡೆದ ಪ್ರಕರಣಗಳು ದಾಖಲಾಗುತ್ತಿವೆ (ಎನ್‌ಸಿಆರ್‌ಬಿ 2019ರ ಅಂಕಿಅಂಶ). ಕೇವಲ ಕೋವಿಡ್ ಸಾಂಕ್ರಾಮಿಕ ತೀವ್ರ ರೂಪದಲ್ಲಿದ್ದ 7 ತಿಂಗಳಗಳಲ್ಲೇ 13,244 ಮಕ್ಕಳ ಮೇಲಿನ ಅತ್ಯಾಚಾರ, ಸಾಮೂಹಿಕ ಅತ್ಯಾಚಾರಗಳು ದಾಖಲಾಗಿವೆ. (ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ ವರದಿ 2020). 2018ರಲ್ಲಿ 1,54,526 ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದವು (ಆನಂತರದಲ್ಲಿ ಈ ಅಂಕಿಅಂಶ ಸರ್ಕಾರಿ ಇಲಾಖೆಗಳಲ್ಲಿ ಅಪ್‌ಡೇಟ್ ಆಗಿಲ್ಲ). 2012ರ ನಿರ್ಭಯಾ ಪ್ರಕರಣದ ನಂತರ ನಡೆದ ಪ್ರತಿಭಟನೆಗಳ ಪ್ರವಾಹದ ಕಾರಣದಿಂದ ರೂಪುತಳೆದ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಕಾಯ್ದೆ- ಪೋಕ್ಸೋ’ ದಂತಹ ಗಟ್ಟಿಯಾದ ಕಾಯ್ದೆಯ ನಂತರವೂ ಇಂದಿಗೂ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಕೇವಲ 34.9%. ಇವುಗಳಲ್ಲಿಯೂ ಸಾಕಷ್ಟು ಪ್ರಕರಣಗಳಲ್ಲಿ (ಹೆಣ್ಣುಮಗಳು 16 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಮತ್ತು ಆರೋಪಿಯ ವಯಸ್ಸೂ ಹೆಚ್ಚೂ ಕಡಿಮೇ ಅಷ್ಟೇ ಆಗಿದ್ದರೆ) ಅವುಗಳು ಹದಿಹರೆಯದವರ ಅಪ್ರಬುದ್ಧ ಪ್ರೇಮ ಪ್ರಕರಣಗಳಾಗಿದ್ದು, ಜಾತಿಯ ಅಥವಾ ಪ್ರತಿಷ್ಠೆಯ ಕಾರಣಕ್ಕೆ ಕಾನೂನು ಕಟ್ಟಲೆಯ ಮೆಟ್ಟಿಲೇರಿರುತ್ತವೆಯೇ ಹೊರತು ನ್ಯಾಯ ದೊರೆಯಬೇಕೆಂಬ ಕಾರಣಕ್ಕಲ್ಲ. ಅಂತಹವುಗಳನ್ನು ಹದಿಹರೆಯದವಲ್ಲಿ ಅರಿವು ಮೂಡಿಸುವ ಮೂಲಕ ಬಗೆಹರಿಸುವ ಯಾವುದೇ ವ್ಯವಸ್ಥೆ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ಇದೂ ಪೋಕ್ಸೋದ ಪಟ್ಟಿಗೆ ಬರುತ್ತಿವೆ. ಅವನ್ನು ಬಿಟ್ಟರೆ, ಶಿಕ್ಷೆಯಾಗುವಿಕೆಯ ಪ್ರಮಾಣ ಇನ್ನಷ್ಟು ಮತ್ತಷ್ಟು ಕಡಿಮೆಯಾಗುತ್ತದೆ. ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ ಅಂಶದಂತೆಯೇ 2019ರ ವೇಳೆಗೆ ವೇಶ್ಯಾವಾಟಿಕೆಯಲ್ಲಿ ಒತ್ತಾಯಪೂರ್ವಕವಾಗಿ ತಳ್ಳಲ್ಪಟ್ಟ ಅಪ್ರಾಪ್ತ ಮಕ್ಕಳ ಸಂಖ್ಯೆ ಭಾರತದಲ್ಲಿ 12 ಲಕ್ಷದಷ್ಟಿತ್ತು, ಆದರೆ ಈ ಕುರಿತು ದಾಖಲಾದ ಪ್ರಕರಣಗಳು ಕೇವಲ 529.

ನಮ್ಮ ದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ಮತ್ತು ಅವುಗಳಲ್ಲಿ ನ್ಯಾಯ ದೊರೆಯುವಿಕೆಯ ಪರಿಸ್ಥಿತಿ ಇಷ್ಟು ಘೋರ ಸ್ವರೂಪದಲ್ಲಿರುವಾಗ, ಸಮಾಜದಲ್ಲಿ ಅತಿಹೆಚ್ಚು ಚರ್ಚೆ ಮತ್ತು ಕಾಳಜಿ ಹುಟ್ಟಬೇಕಿರುವುದು ಆರೋಪಿಗಳ ಕುರಿತಾಗಿ ಅಲ್ಲ, ಬದಲಿಗೆ ಸಂತ್ರಸ್ತೆಯರ ಕುರಿತಾಗಿ. ಇನ್ನೆಲ್ಲ ರಾಜಕಾರಣ ಮತ್ತು ಜಿದ್ದಾಜಿದ್ದಿಗಳ ವಿಷಯಗಳನ್ನು ಪಕ್ಕಕ್ಕಿಟ್ಟು ನಾವು ಚಿಂತಿಸಬೇಕಿರುವುದು ನಮ್ಮ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ. ಇಡೀ ಚಿಂತನೆಯ ಕ್ರಮವೇ ತಲೆಕೆಳಗಾಗಿ ನಿಂತಿರುವಾಗ ನೇರವಾಗಿ ನ್ಯಾಯವನ್ನು ಗಳಿಸುವುದಾದರೂ ಹೇಗೆ?

ಈ ಪ್ರಕರಣದಲ್ಲಿಯೂ ತಮ್ಮ ಮೇಲೆ ದೌರ್ಜನ್ಯ ನಡೆದಿದೆಯೆಂದು ಹೇಳಿಕೊಂಡಿರುವವರು ಮಠದ ಆಶ್ರಯದಲ್ಲಿದ್ದು ಓದುತ್ತಿದ್ದ ವಿದ್ಯಾರ್ಥಿನಿಯರು. ಅವರಿಬ್ಬರೂ ಶೋಷಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.  ಅವರ ಕುಟುಂಬಗಳೂ ಬಹಳ ಸುಸ್ಥಿತಿಯಲ್ಲಿದ್ದಂಥವಾಗಿರಲಿಲ್ಲವೆಂಬುದಕ್ಕೆ ದೌರ್ಜನ್ಯದ ಬಗ್ಗೆ ದೂರು ನೀಡಿರುವ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಿರುವ ‘ಒಡನಾಡಿ’ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥರುಗಳು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿಬಹುದು. ಮತ್ತೊಂದೆಡೆ ಆರೋಪಿತರಾದವರು ಸಮಾಜದಲ್ಲಿ ಸಮುದಾಯ, ಹಣ, ಅಧಿಕಾರ ಮತ್ತು ಭಾವನಾತ್ಮಕ ನೆಲೆಯಲ್ಲಿ ಅತ್ಯಂತ ಶಕ್ತಿಯುತ ಸ್ಥಾನಮಾನಗಳನ್ನು ಹೊಂದಿದವರು. ಹೀಗಿರುವಾಗ, ಮೊದಲೇ ಅಸಮವಾಗಿ ತೂಗುತ್ತಿರುವ ತಕ್ಕಡಿಯ ಜೊತೆಗೆ ಮಾಧ್ಯಮಗಳ ಅಭಿಪ್ರಾಯ ನಿರೂಪಣೆ ಮತ್ತು ರಾಜಕೀಯ ಪ್ರಭಾವದ ತೂಕವನ್ನೂ ಸೇರಿಸಿದರೆ, ಇಲ್ಲಿ ನಿಜವಾಗಿಯೂ ನಿಷ್ಪಕ್ಷಪಾತವಾದ ತನಿಖೆ ನಡೆಯುವುದು ಸಾಧ್ಯವೇ? ಹಲವಾರು ಅನುಮಾನ, ಪ್ರಶ್ನೆಗಳ ಹೊಗೆಯ ಮುಸುಕಿನಡಿ ಅಡಗಿರುವ ಸತ್ಯ ಹೊರಬರುವುದು ಸಾಧ್ಯವೇ? ದೂರು ನೀಡಿದವರು ಶೋಷಿತರು, ಸಾಮಾಜಿಕವಾಗಿ ದುರ್ಬಲರು ಎಂದಾಕ್ಷಣ ಅವರ ದೂರಿನ ಹಿಂದಿನ ಕಾರಣ ಹುಡುಕುವ ಅಥವಾ ಅವರ ಮೇಲೆಯೇ ಆರೋಪ ಹೊರಿಸುವ ಸಾಮಾಜಿಕ ಮನಸ್ಥಿತಿಯಲ್ಲಿ ಬದಲಾವಣೆ ತರುವುದು ಬೇಡವೇ?

ಹಾಗಂದ ಮಾತ್ರಕ್ಕೆ ಪ್ರಭಾವಿಗಳಾದ ಕಾರಣದಿಂದಲೇ ಅಂತಹವರ ಮೇಲೆ ಸುಳ್ಳು ಆರೋಪಗಳು ನಡೆಯುವುದಿಲ್ಲವೆಂದಲ್ಲ. ಅಂತಹ ಸಾಕಷ್ಟು ಘಟನೆಗಳು ನಡೆದಿವೆ. ಆದರೆ ಈ ಸಂದರ್ಭದಲ್ಲಿ ಅದೆಲ್ಲವೂ ತೀರ್ಮಾನವಾಗಲು ಸಾಧ್ಯವಾಗುವುದು ನಿಷ್ಪಕ್ಷಪಾತವಾದ, ಚುರುಕಾದ, ವಿವೇಕಯುತವಾದ ತನಿಖೆಯ ಮೂಲಕ ಮಾತ್ರವಷ್ಟೆ. ಆದ್ದರಿಂದ ಇಲ್ಲಿ ನಮಗೀಗ ಬೇಕಾಗಿರುವುದು ಪರವಿರೋಧಗಳ ವಾಗ್ವಾದಗಳಲ್ಲ, ಯಾವುದೇ ಪ್ರಭಾವ ಅಥವಾ ಒತ್ತಡಗಳಿಂದ ದಿಕ್ಕುತಪ್ಪದಂತಹ ನಿಖರವಾದ ತನಿಖೆ ಮತ್ತು ಆಮೂಲಕ ಹೊರಬರುವ ಸತ್ಯವನ್ನು ಆಧರಿಸಿದ ನ್ಯಾಯ.

ಹಾಗಾಗಿ, ಈ ಪ್ರಕರಣದಲ್ಲಿ ಬಹಳಷ್ಟು ಪ್ರಭಾವಿ ವ್ಯಕ್ತಿಗಳ ಹೆಸರು ಕೇಳಿಬರುತ್ತಿರುವುದರಿಂದ ಕೇವಲ ಸ್ಥಳೀಯ ಮಟ್ಟದ ಯಂತ್ರಾಂಗಗಳಿಗಷ್ಟೇ ಎಲ್ಲ ಜವಾಬ್ದಾರಿಯನ್ನೂ ಬಿಟ್ಟುಬಿಡದೆ, ರಾಜ್ಯದ ಉಚ್ಛ ನ್ಯಾಯಾಲಯವು ಇದನ್ನು ಸು ಮೊಟೋ ಪ್ರಕರಣವನ್ನಾಗಿ ಕೈಗೆತ್ತಿಕೊಳ್ಳಬೇಕು. ಈಗಾಗಲೇ ಸಾಕಷ್ಟು ಮಾನಸಿಕ ಒತ್ತಡಕ್ಕೆ ಗುರಿಯಾಗಿರುವ ದೂರುದಾರ ಹೆಣ್ಣುಮಕ್ಕಳಿಗೆ ಇನ್ನಷ್ಟು ನೋವಾಗದಂತೆ ಮತ್ತು ಸ್ಥಳೀಯ ಒತ್ತಡಗಳ ಕಾರಣಕ್ಕೆ ತನಿಖೆ ದಿಕ್ಕುತಪ್ಪದಂತೆ ಆಗಬೇಕಾದರೆ, ಬೇರೆ ಜಿಲ್ಲೆಯ ಅಧಿಕಾರಿಗಳ ಕೈಗೆ ಪ್ರಕರಣ ವರ್ಗಾವಣೆಯಾಗಿ ಆ ಮೂಲಕ ತನಿಖೆ ನಡೆಯುವುದು ಸೂಕ್ತ. ಜೊತೆಗೆ ದೂರು ನೀಡಿದ ಹೆಣ್ಣುಮಕ್ಕಳು, ಅವರ ಕುಟುಂಬ ಮತ್ತು ಒಡನಾಡಿ ಸಂಸ್ಥೆಯ ಪದಾಧಿಕಾರಿಗಳಿಗೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ಒದಗಿಸಬೇಗಾಗಿದೆ.

ಅಲ್ಲದೆ ರಾಜ್ಯದಲ್ಲಿ ಹಲವು ಕಾರ್ಯಚಟುವಟಿಕೆಗಳ ಮೂಲಕ ಹೆಸರುವಾಸಿಯಾಗಿದ್ದ ಮಠದ ಸ್ವಾಮೀಜಿಗಳ ಮೇಲೆ ಇದು ರಾಜಕೀಯ ವಿರೋಧಿಗಳು ಮಾಡಿರುವ ಹುನ್ನಾರವೆಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಈ ಆರೋಪಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಿ, ಹಾಗೇನಾದರೂ ನಡೆದಿರುವುದೇ ಆದಲ್ಲಿ ಅದನ್ನು ಸರಿಪಡಿಸಲಿಕ್ಕಾಗಿ ನಿಷ್ಟುರವಾದಿಗಳೂ ಶುದ್ಧಹಸ್ತರೆಂದು ಹೆಸರುವಾಸಿಯಾಗಿದ್ದ ನಿವೃತ್ತ ನ್ಯಾಯಮೂರ್ತಿ ಶ್ರೀ ನಾಗಮೋಹನ್‌ದಾಸ್ ಅವರಂತಹ ಹಿರಿಯರು, ಘನತೆವೆತ್ತ ನಿಷ್ಪಕ್ಷಪಾತರಾದ ಹಿರಿಯ ವಕೀಲರು, ಸಾಮಾಜಿಕ ಸಂಘಟನೆಗಳು ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಆಯೋಗಗಳ ಮುಖ್ಯಸ್ಥರನ್ನೊಳಗೊಂಡ ಸ್ವತಂತ್ರ ಸತ್ಯಶೋಧನಾ ತಂಡವನ್ನು ರಚಿಸಬೇಕು. ಈ ಎಲ್ಲ ಬಗೆಯ ತನಿಖೆ ಮತ್ತು ಸತ್ಯಶೋಧನೆಗಳೂ ಪೂರ್ಣಗೊಳ್ಳುವತನಕ ಜನರ ಅಭಿಪ್ರಾಯವನ್ನು ಏಕಪಕ್ಷೀಯವಾಗಿ ಪ್ರಭಾವಿಸದಂತೆ ಮಾಧ್ಯಮಗಳಿಗೂ ಸೂಚನೆಗಳಿರಬೇಕಾದದ್ದು ಅಗತ್ಯವಾಗಿದೆ.

ಈ ಎಲ್ಲ ಕ್ರಮಗಳನ್ನೂ, ಅಗತ್ಯವಿದ್ದರೆ ಇನ್ನಷ್ಟು ಹೆಚ್ಚಿನ ಕ್ರಮಗಳನ್ನೂ ಕೈಗೊಂಡು ವೇಗವಾಗಿ ಈ ವಿಚಾರದಲ್ಲಿ ಸತ್ಯಾಸತ್ಯತೆಯನ್ನು ಆಧರಿಸಿದ ನ್ಯಾಯದಾನ ನಡೆಯಬೇಕು ಎಂಬುದು ಸಮಾಜದ ಎಲ್ಲ ಕಾಳಜಿವಂತರ ಒಕ್ಕೊರಲಿನ ಕೂಗಾಗಿದೆ.

ಮಲ್ಲಿಗೆ ಸಿರಿಮನೆ

(ಮಹಿಳಾ ಹಕ್ಕುಗಳ ಹೋರಾಟಗಾರರು, ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ)

ಇದನ್ನೂ ಓದಿ; ಮಕ್ಕಳ ಮೇಲೆ ಮುರುಘಾ ಶರಣರಿಂದ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಒಡನಾಡಿ ಸಂಸ್ಥೆ ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...