Homeಕರೋನಾ ತಲ್ಲಣಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣದ ಆರ್ಥಿಕತೆಯ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರ!

ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣದ ಆರ್ಥಿಕತೆಯ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರ!

- Advertisement -
- Advertisement -

ನನ್ನ ಕುಟುಂಬ ನನ್ನ ಮೇಲೆ ಬಹಳಷ್ಟು ಹಣ ಖರ್ಚು ಮಾಡುತ್ತಿದೆ. ನಾನು ಅವರಿಗೆ ಹೊರೆಯಾಗಿದ್ದೇನೆ. ನನ್ನ ಓದು ಹೊರೆಯಾಗಿದೆ. ಆದರೆ, ನಾನು ಓದದೇ ಬದುಕಲಾರೆ. ನಾನು ಈ ಬಗ್ಗೆ ಒಂದಷ್ಟು ದಿನಗಳಿಂದ ಯೋಚಿಸುತ್ತಿದ್ದೆ. ಆತ್ಮಹತ್ಯೆಯೇ ನನಗುಳಿದಿರುವ ದಾರಿ ಎಂದು ನಾನು ಭಾವಿಸಿದ್ದೇನೆ.

ಇದು, ಐಶ್ವರ್ಯ ಬಿಟ್ಟು ಹೋದ ಕಡೆಯ ತೆಲುಗು ಸಂದೇಶದ ಕನ್ನಡಾನುವಾದ. ಐಶ್ವರ್ಯ ಈ ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ದೆಹಲಿಯ ಲೇಡಿ ಶ್ರೀ ರಾಮ್ ಮಹಿಳೆಯರ ಕಾಲೇಜಿನಲ್ಲಿ ಗಣಿತಶಾಸ್ತ್ರ ವಿಷಯದಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತಿದ್ದಳು. ನವೆಂಬರ್ 2020ರವರೆಗೆ ಈ ರೀತ್ಯ ಕನಿಷ್ಠ 15 ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ವರದಿಯಾಗಿತ್ತು. ಇನ್ನು ವರದಿಯಾಗದಿರುವ ಪ್ರಕರಣಗಳೆಷ್ಟೋ. ಜೀವ ಕಳೆದುಕೊಂಡ, ಹಣಕಾಸಿನ ತೊಂದರೆಯಿಂದಾಗಿ ಶಾಲೆಗಳಿಂದ ಹೊರನಡೆದ ವಿದ್ಯಾರ್ಥಿಗಳೆಷ್ಟೋ. ಶಾಲೆಗಳು ನಿಂತುಹೋದಾಗ, ಮಧ್ಯಾಹ್ನದ ಬಿಸಿಯೂಟ ಸಿಗದೇ ಹಸಿವಿನಿಂದ ಬಳಲುತ್ತಿರುವ ಮಕ್ಕಳೆಷ್ಟೋ.

ಇನ್ನೊಂದು ಕಡೆಯಲ್ಲಿ ಕರ್ನಾಟಕವನ್ನೇ ಗಮನಿಸುವುದಾದರೆ, ಕಳೆದ ವರ್ಷ ಮಾರ್ಚ್ ಮತ್ತು ಜೂನ್ ತಿಂಗಳ ನಡುವಿನಲ್ಲಿ ಕನಿಷ್ಠ 35000 ಖಾಸಗಿ ಶಾಲಾ ಶಿಕ್ಷಕರು ಕೆಲಸ ಕಳೆದುಕೊಂಡಿದ್ದರು ಮತ್ತು 8 ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ತದನಂತರದ ದಿನಗಳಲ್ಲಿ ಕೆಲಸಗಳನ್ನು ಕಳೆದುಕೊಂಡ ಶಿಕ್ಷಕರೆಷ್ಟೋ. ವೇತನ ಕಡಿತ ಹೊಂದಿದವರೆಷ್ಟೋ.

ಇತ್ತ, ಕಳೆದ ವರ್ಷ ಮತ್ತು ಈ ವರ್ಷ ಕೂಡ ತರಗತಿಗಳು ಬಹುತೇಕ ನಡೆಯದೇ ಇದ್ದರೂ (ಆನ್ಲೈನ್‌ನಲ್ಲಿ ಒಂದಷ್ಟು ತರಗತಿಗಳು ನಡೆಯುತ್ತಿದ್ದರೂ) ಖಾಸಗಿ ಶಾಲೆಗಳು ಫೀಸನ್ನು ಹೆಚ್ಚಿಸಿವೆ. ಇದು ತರ್ಕಬದ್ಧವಲ್ಲವೆಂದೂ, ಇದು ಈಗಾಗಲೇ ದುಡಿಮೆ ಕಳೆದುಕೊಂಡಿರುವ ಅಥವಾ ಆದಾಯದಲ್ಲಿ ಕಡಿತ ಹೊಂದಿರುವ ಬಹುತೇಕ ಜನರನ್ನು ಮತ್ತಷ್ಟೂ ಕಷ್ಟಕ್ಕೆ ದೂಡಲಿವೆಯೆಂದೂ ಸಂಘಟನೆಗಳು ಮತ್ತು ಪೋಷಕರು ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದಾರೆ.

ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಶಿಕ್ಷಣ ಕ್ಷೇತ್ರವನ್ನು ನಿಭಾಯಿಸುವುದಕ್ಕೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಮಾಡಿದ್ದೇನು ಎಂದು ಗಮನಿಸೋಣ.

ನರೇಂದ್ರ ಮೋದಿ ಕಳೆದ ವರ್ಷ ಮಾರ್ಚ್‌ನಲ್ಲಿ ಏಕಾಏಕಿ ಹೇರಿದ ಲಾಕ್‌ಡೌನ್‌ನಿಂದಾಗಿ ಏನು ಮಾಡಬೇಕೆಂದು ತಿಳಿಯದೆ ಶಿಕ್ಷಣ ಸಂಸ್ಥೆಗಳು ಕಂಗೆಟ್ಟು, ಕೈಚೆಲ್ಲಿ ಕೂತವು. ಅತ್ತ, ಶಿಕ್ಷಣ ಇಲಾಖೆಗಳು ಮತ್ತು UGC, AICTE ಸೇರಿದಂತೆ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸುವ ಸಂಸ್ಥೆಗಳು ದಿಕ್ಕೆಟ್ಟು, ಈ ಸಂಕಷ್ಟವನ್ನು ನಿಭಾಯಿಸುವ ಮಾರ್ಗವನ್ನು ಕಂಡುಕೊಳ್ಳಲಾಗದೆ ಮನಸೋ ಇಚ್ಛೆ ಆದೇಶಗಳನ್ನು ಹೊರಡಿಸತೊಡಗಿದವು. UGC, CBSE ಸೇರಿದಂತೆ ಎಲ್ಲಾ ಸಂಸ್ಥೆಗಳು ಆದ್ಯತೆಯ ಮೇರೆಗೆ ಕೈಗೊಂಡ ನಿರ್ಧಾರಗಳು ಪರೀಕ್ಷೆಯನ್ನು ಮುಂದೂಡುವುದು ಮತ್ತು ಪಠ್ಯಕ್ರಮಗಳ ಹೊರೆಯನ್ನು ಇಳಿಸುವುದು. ಈ ಪ್ರಕ್ರಿಯೆ ಕೂಡ ಭಾರಿ ಗೊಂದಲಮಯವಾಗಿತ್ತು.

PC : Mid-Day

ಸಂವಿಧಾನದಡಿಯಲ್ಲಿ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಈ ಕ್ಷೇತ್ರವನ್ನು ನಿಭಾಯಿಸುತ್ತವೆ. ಎಲ್ಲಾ ಪರೀಕ್ಷೆಗಳನ್ನು ರದ್ದುಪಡಿಸಿ zero year ಆಗಿ ಘೋಷಣೆ ಮಾಡಬೇಕೆಂದು ಸಣ್ಣಮಟ್ಟದ ಕೂಗುಗಳು ಶಿಕ್ಷಣ ಪರಿಣಿತರಿಂದ, ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಘಟನೆಗಳಿಂದ ಕೇಳಿಬಂದರೂ ಅದು ದೂರದ ಮಾತಾಗಿಯೇ ಉಳಿಯಿತು. ಅತ್ತ ಒಕ್ಕೂಟ ಸರ್ಕಾರದ ಶಿಕ್ಷಣ ಮಂತ್ರಿಗಳಾದ ರಮೇಶ್ ‘ನಿಶಾಂಕ್’ ಪೋಖ್ರಿಯಾಲ್ ಎಚ್ಚೆತ್ತುಕೊಳ್ಳುವುದಕ್ಕೇ ಬಹಳ ಸಮಯ ತೆಗೆದುಕೊಂಡರು. ನಂತರ ದಿಢೀರನೆ ಚ್ಚರಗೊಂಡ ಪೋಖ್ರಿಯಾಲ್‌ಗೆ ಈ ದೇಶದ ಬಹುತೇಕ ಎಲ್ಲ ಕುಟುಂಬಗಳನ್ನು ದೊಡ್ಡ ರೀತಿಯಲ್ಲಿ ಪ್ರಭಾವಿಸುವ ಕ್ಷೇತ್ರ ಶಿಕ್ಷಣವೆಂಬುದಾಗಲೀ, ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಯಾದಲ್ಲಿ ಇಡೀ ದೇಶಕ್ಕೇ ಸಮಸ್ಯೆಯಾಗುತ್ತದೆ ಎಂದಾಗಲಿ ಅರ್ಥವಾಗಲೇ ಇಲ್ಲ. ಬದಲಿಗೆ ಆನ್ಲೈನ್ ಶಿಕ್ಷಣ ಎಂಬ ಒಂದು ದಿನದ ಹುಣ್ಣಿಮೆ ಚಂದ್ರನನ್ನು ಜನರಿಗೆ ತೋರಿಸಿ, ಪ್ರಚಾರ ಗಿಟ್ಟಿಸಿ, ಮೆಲ್ಲಗೆ ಕಾಲ್ಕಿತ್ತರು.

ಅದೇ ಚಂದ್ರನನ್ನು ಬಿಟ್ಟೂ-ಬಿಡದೆ ನೋಡಿದ ಕಾರಣ ಕರ್ನಾಟಕದಲ್ಲೂ ಎಲ್ಲಾ ಮಕ್ಕಳನ್ನು ಒಳಗೊಳ್ಳುವ, ಎಲ್ಲಾ ವರ್ಗದ ಎಲ್ಲಾ ಲಿಂಗಗಳ ಮಕ್ಕಳ ಹಿತದೃಷ್ಟಿಯನ್ನು ಕಾಪಾಡುವ ಒಂದು ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ಕಂಡುಕೊಳ್ಳುವುದಿರಲಿ, ಅದಕ್ಕೆ ಬೇಕಿದ್ದ ಪ್ರಯತ್ನಗಳೂ ನಡೆಯಲಿಲ್ಲ. ಇತ್ತ ರಾಜ್ಯ ಶಿಕ್ಷಣ ಮಂತ್ರಿಗಳಾದ ‘ಸಜ್ಜನ’ರೂ ಎನಿಸಿಕೊಂಡಿರುವ ಸುರೇಶ ಕುಮಾರ್ ಅವರು ನಾನು ಗೆದ್ದೇ ತೀರುತ್ತೇನೆಂಬ ಹಠಕ್ಕೆ ಬಿದ್ದು ಮಕ್ಕಳ ಮಾನಸಿಕ – ದೈಹಿಕ ಹಿತದೃಷ್ಟಿಯನ್ನೂ ಬದಿಗೊತ್ತಿ, ಕೋವಿಡ್ ಮಧ್ಯೆಯೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನೂ ಮುಗಿಸಿಯೇಬಿಟ್ಟರು.

ಒಮ್ಮೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದ ನಂತರ ಮುಂದಿನ ವರ್ಷದ ದಾಖಲಾತಿಗಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಕೋವಿಡ್ ಸಂದರ್ಭದಲ್ಲೂ ಜನರನ್ನು ಸುಲಿಗೆ ಮಾಡುತ್ತಿವೆ ಎಂದೂ, ಶಾಲಾ ಶುಲ್ಕಗಳನ್ನು ಹೆಚ್ಚಿಸಿವೆಯೆಂದೂ ವರದಿಗಳು ಬರಲಾರಂಭಿಸಿದವು. ಒರಿಸ್ಸಾ, ಬಿಹಾರ್, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ 100 ರಲ್ಲಿ 40 ಜನ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಶಾಲಾ ಶುಲ್ಕ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆಯೆಂದು ತಿಳಿಸಿದ್ದರು. ಬೆಂಗಳೂರಿನಲ್ಲೂ ಈ ರೀತಿಯ ಅನೇಕ ಪ್ರಕರಣಗಳು ಬೆಳಕಿಗೆ ಬಂದವು. ಅದೇ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ವೆಚ್ಚಗಳನ್ನು ಕಡಿತಗೊಳಿಸಲು ಈ ಹಿಂದೆ ಹೇಳಿದಂತೆಯೇ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ವಜಾಗೊಳಿಸಿದ್ದಲ್ಲದೆ, ಅವರ ಸಂಬಳಗಳನ್ನು ಶೇ.20-65ರಷ್ಟು ಕಡಿತಗೊಳಿಸುವುದಕ್ಕೆ ಶುರು ಮಾಡಿದವು. ಅಂತೆಯೇ, ಸಂಬಳಗಳನ್ನು ಪಾವತಿಸುವಲ್ಲಿ ತಡಮಾಡತೊಡಗಿತು.

ಆಗ ರಾಜ್ಯ ಸರ್ಕಾರವು ಇನ್ನಿತರೆ ರಾಜ್ಯಗಳ ಮಾದರಿಯನ್ನು ಅನುಸರಿಸಿ ಶಿಕ್ಷಣ ಇಲಾಖೆಯಡಿಯಲ್ಲಿ ಸಭೆಗಳ ಮೇಲೆ ಸಭೆಗಳನ್ನು ನಡೆಸಿ ಶಾಲಾ ಶುಲ್ಕಗಳನ್ನು ಹೆಚ್ಚಿಸಬಾರದೆಂದೂ ಈ ಹಿಂದಿನ ಶುಲ್ಕದಲ್ಲಿ ಶೇ.70ಕ್ಕಿಂತ ಹೆಚ್ಚಿಗೆ ಪಡೆಯಬಾರದೆಂದೂ ಆದೇಶಿಸಿತು. ಅಂತೆಯೇ ಸಂಬಳಗಳ ಪಾವತಿಯನ್ನು ಈ ಕೂಡಲೇ ಮಾಡಬೇಕೆಂದು ಆದೇಶಿಸಲಾಯಿತು. ಇದೇ ರೀತಿಯ ಆದೇಶಗಳು ಮದ್ರಾಸಿನ ಉಚ್ಚ ನ್ಯಾಯಾಲಯ ಸೇರಿದಂತೆ ಇನ್ನಿತರೇ ನ್ಯಾಯಾಲಗಳಿಂದಲೂ ಬರತೊಡಗಿತು.

ಆದರೆ ಇಂತಹ ಅರೆಬರೆ ಆದೇಶಗಳ ಮಧ್ಯೆ ನಮಗೆ ಕಾಣಸಿಗದೇ ಇರುವ ಅಂಶವೆಂದರೆ ಶಿಕ್ಷಣ ಕ್ಷೇತ್ರಕ್ಕೆ ಅತ್ಯಗತ್ಯವಾಗಿರುವ ಒಂದು ದೂರದೃಷ್ಟಿಯ ಸಮಗ್ರ ನೋಟ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಈ ನಿಟ್ಟಿನಲ್ಲಿ ಸಂಪೂರ್ಣ ಎಡವಿವೆ. ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಎಜುಕೇಷನಲ್ ಪ್ಲಾನಿಂಗ್ (International Institute for Educational Planning), ಯುನೆಸ್ಕೋ (UNESCO) ಸೇರಿದಂತೆ ಭಾರತ ಮತ್ತು ಕರ್ನಾಟಕದಲ್ಲಿರುವ ಶಿಕ್ಷಣ ತಜ್ಞರೆಲ್ಲರೂ ಹೇಳುತ್ತಿರುವಂತೆ, ಶಿಕ್ಷಣ ಕ್ಷೇತ್ರಕ್ಕೆ ಕೋವಿಡ್ ತಂದೊಡ್ಡಿರುವ ಬಿಕ್ಕಟ್ಟು ದೊಡ್ಡ ಪ್ರಮಾಣದ್ದು. ಖಾಸಗೀ ಕ್ಷೇತ್ರದ ಮೇಲೆ ಅವಲಂಬಿತವಾಗಿರುವ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಭಾರತಕ್ಕೆ ಇದರ ಹೊಡೆತ ಮತ್ತೂ ಹೆಚ್ಚು.

ಶಿಕ್ಷಣವನ್ನು ಅರ್ಥಶಾಸ್ತ್ರದ ಸಹಾಯದಿಂದ ನೋಡುವುದು ಅದರ ಬಹಳ ಸಂಕುಚಿತ ಅರ್ಥೈಸುವಿಕೆಯಾದರೂ ಇಂದಿನ ಶಿಕ್ಷಣ ಕ್ಷೇತ್ರದ ಈ ಬಿಕ್ಕಟ್ಟನ್ನು ನಾವು ಅರ್ಥೈಸಲಿಕ್ಕೆ ಶಿಕ್ಷಣದ ಹಿಂದಿರುವ ಅರ್ಥಶಾಸ್ತ್ರವನ್ನು ತಿಳಿಯಬೇಕು.

ಉದಾರವಾದಿ ನಿಲುವಿನಲ್ಲೇ ಅರ್ಥೈಸುವುದಾದರೆ, ಯಾವುದೇ ಸರಕು (ಅಥವಾ ಸೇವೆಯನ್ನು) – ಸಾರ್ವಜನಿಕ ಸರಕು, ಖಾಸಗಿ ಸರಕು ಎಂದು ವಿಂಗಡಿಸಬಹುದು. ಯಾವ ಸರಕಿನ ಬಳಕೆಯಿಂದ ಜನರನ್ನು ಹೊರಗಿಡಲು ಅಸಾಧ್ಯವೋ, ಯಾವ ಸರಕಿನ ಬಳಕೆಯು ಜನರ ಮಧ್ಯೆ ಪೈಪೋಟಿ ತಂದೊಡ್ಡುವುದಿಲ್ಲವೋ ಅದು ಸಾರ್ವಜನಿಕ ಸರಕಾಗುತ್ತದೆ ಮತ್ತು ಅದರ ನಿರ್ವಹಣೆ ಸರ್ಕಾರದ ಹೊಣೆಯಾಗುತ್ತದೆ. ಅದರ ನಿರ್ವಹಣೆಯು ಸರ್ಕಾರವು ಸಾರ್ವಜನಿಕರಿಂದ ಸಂಗ್ರಹಿಸುವ ತೆರಿಗೆಯ ಮೂಲಕ ನಡೆಯಬೇಕು. ಅಂತೆಯೇ ಯಾವ ಸರಕಿನ ಬಳಕೆಯಿಂದ ಜನರನ್ನು ಹೊರಗಿಡಲು ಸಾಧ್ಯವೋ, ಯಾವ ಸರಕಿನ ಬಳಕೆಯು ಜನರ ಮಧ್ಯೆ ಪೈಪೋಟಿಯನ್ನು ತಂದೊಡ್ಡುತ್ತದೆಯೋ ಅದರ ನಿರ್ವಹಣೆ ಖಾಸಗಿ ವಲಯದ್ದಾಗುತ್ತದೆ ಮತ್ತು ಮಾರುಕಟ್ಟೆಯ ಮೂಲಕ ಅದರ ವ್ಯವಹಾರ ನಡೆಯುತ್ತದೆ.

PC : Prajavani

ಹಾಗಾದರೆ ಶಿಕ್ಷಣ ಸಾರ್ವಜನಿಕ ಸೇವೆಯೇ ಅಥವಾ ಖಾಸಗಿ ಸೇವೆಯೇ? ಶಿಕ್ಷಣವನ್ನು ಇಡಿಯಾಗಿ ಹಾಗೆ ಅರ್ಥೈಸಲು ಸಾಧ್ಯವಾಗುವುದಿಲ್ಲ. ಇವೆರಡರ ಗುಣಲಕ್ಷಣಗಳನ್ನೂ ಹೊಂದಿರುವ ಉನ್ನತ ಶಿಕ್ಷಣವನ್ನು ಬಹುತೇಕ ಎಲ್ಲಾ ರಾಷ್ಟ್ರಗಳು ಅರೆ-ಸಾರ್ವಜನಿಕ ಸರಕೆಂದು (ಸೇವೆಯೆಂದು) ಪರಿಗಣಿಸಲಾಗುತ್ತದೆ. ಆದರೆ, ಶಿಕ್ಷಣದಿಂದ ಒಟ್ಟಾರೆಯಾಗಿ ಸಮಾಜಕ್ಕೆ ಎಷ್ಟು ಲಾಭ ಮತ್ತು ಶಿಕ್ಷಿತನೊಬ್ಬನಿಗೆಷ್ಟು ಖಾಸಗಿಯಾಗಿ ಲಾಭವಾಗುತ್ತದೆಂಬುದರ ಆಧಾರದ ಮೇಲೆ ಪ್ರಾಥಮಿಕ ಶಿಕ್ಷಣವನ್ನು ಸಾರ್ವಜನಿಕ ಸರಕೆಂದೂ, ಅದರ ಸಾರ್ವಜನಿಕತೆಯು ಹಂತ ಹಂತವಾಗಿ ಕುಂದುತ್ತಾ ಹೋದಂತೆ ಉನ್ನತ ಶಿಕ್ಷಣವನ್ನು ಅರೆ-ಸಾರ್ವಜನಿಕ ಸರಕೆಂದೂ ಅರ್ಥೈಸಲಾಗುತ್ತದೆ. ಸರ್ಕಾರ ಮತ್ತು ಮಾರುಕಟ್ಟೆಗಳೆರಡೂ ಅದನ್ನು ನಿರ್ವಹಿಸುತ್ತವೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಹಳಷ್ಟು ಮಂದಿ ಹಿಂದುಳಿದುಬಿಡುವುದರಿಂದ, ಅವರ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕಾಗುತ್ತದೆ.

ನಮ್ಮ ದೇಶದಲ್ಲಿ 1980ರಿಂದ ಅದರಲ್ಲೂ 1990ರಿಂದ ಖಾಸಗಿ ವಲಯಕ್ಕೆ ಶಿಕ್ಷಣ ಕ್ಷೇತ್ರವನ್ನು ಧಾರೆಯೆರೆದ ಕಾರಣಕ್ಕೆ ಇವತ್ತು ನಮ್ಮ ಉನ್ನತ ಶಿಕ್ಷಣ ಹಂತದಲ್ಲಿರುವ ಎಲ್ಲಾ ಸಂಸ್ಥೆಗಳ ಎರಡನೇ ಮೂರು ಭಾಗದಷ್ಟು ಸಂಸ್ಥೆಗಳು ಖಾಸಗಿ ಒಡೆತನಗಳಲ್ಲಿವೆ. ಇಂತಹ ಸಂದರ್ಭವನ್ನೇ ಶಾಲಾ ಶಿಕ್ಷಣ ಕ್ಷೇತ್ರದಲ್ಲಿಯೂ ನಾವಿಂದು ನೋಡುತ್ತಿರುವುದು. ಇವುಗಳು ಅಂತಿಮವಾಗಿ ವಿದ್ಯಾರ್ಥಿಗಳು ಮತ್ತವರ ಪೋಷಕರು ಕಟ್ಟುವ ಶಾಲಾ ಶುಲ್ಕದಿಂದಾಗಿಯೇ ಕಾರ್ಯ ನಿರ್ವಹಿಸುತ್ತವೆ. ಆದುರರಿಂದಲೇ ತಮ್ಮ ಶಾಲೆಯ ಸಿಬ್ಬಂದಿಗಳಿಗೆ ಸಂಬಳವನ್ನೂ ನೀಡುತ್ತವೆ. ಕೋವಿಡ್‌ನ ಮುಂಚೆಯೂ ನಮ್ಮ ದೇಶದ ಅರ್ಧದಷ್ಟು ಕಾಲೇಜುಗಳು ಆರ್ಥಿಕವಾಗಿ ದುರ್ಬಲವಾಗಿದ್ದವು. ಇದಕ್ಕೆ ಮುಖ್ಯ ಕಾರಣಗಳು ಎರಡು. ಒಂದು ಸರ್ಕಾರವು ತನ್ನ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿಡುವುದು ಅಗತ್ಯಕ್ಕಿಂತ ಬಹಳ ಕಡಿಮೆ. 1968ರಲ್ಲೇ ಕೊಥಾರಿ ಕಮಿಷನ್ ಈ ದೇಶದ ಆದಾಯದ ಒಟ್ಟು 6ರಷ್ಟು ಭಾಗ ಶಿಕ್ಷಣಕ್ಕೆ ಮೀಸಲಿಡಬೇಕೆಂದು ಶಿಫಾರಸ್ಸು ಮಾಡಿತ್ತು. ತದನಂತರದ ಎಲ್ಲಾ ವರದಿಗಳೂ ಕೂಡ ಅದನ್ನೇ ಪುನರುಚ್ಛರಿಸಿದ್ದವು. ಆದರೆ ಇಂದಿಗೂ ನಮ್ಮ ದೇಶ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುವುದು 1 ರಿಂದ 1.5% ಮಾತ್ರ. ಒಬ್ಬ ವಿದ್ಯಾರ್ಥಿಯ ಮೇಲೆ ಸರ್ಕಾರ ಮಾಡುತ್ತಿರುವ ಖರ್ಚು 1990ರಿಂದೀಚೆಗೆ ಗಣನೀಯವಾಗಿ ಇಳಿದಿದೆ. ಇದರಿಂದಾಗಿ ಸರ್ಕಾರಿ ಕಾಲೇಜುಗಳು ಸಾಲದಾಗಿ ಹೆಚ್ಚೆಚ್ಚು ಖಾಸಗಿ ಕಾಲೇಜುಗಳು ತಲೆಯೆತ್ತಿದವು.

ಉನ್ನತ ಶಿಕ್ಷಣ ನೀಡುವುದಕ್ಕಾಗುವ ಖರ್ಚಿನ 25ರಷ್ಟು ಭಾಗವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಬೇಕು ಎಂದು ಸರ್ಕಾರವೇ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೆ ಪುನ್ನಯ್ಯ ಸಮಿತಿ ವರದಿ ನೀಡಿದರೂ ಈವರೆಗೆ ಅದು ಕಾರ್ಯಾನುಷ್ಠಾನಕ್ಕೆ ಬಂದಿಲ್ಲ. ಇಂದರಿಂದಾಗಿ, ಇವತ್ತು ಶಿಕ್ಷಣದ ಖರ್ಚನ್ನು ಬರಿಸುತ್ತಿರುವುದು ಸರ್ಕಾರ ನೆಪಮಾತ್ರಕ್ಕೆ ಎಂಬಂತಿದೆ ಮತ್ತು ಈ ಖರ್ಚಿನ ಜವಾಬ್ದಾರಿ ವಹಿಸಿರುವುದು ಕೂಡ ವಿದ್ಯಾರ್ಥಿಗಳ ಪೋಷಕರೇ ಆಗಿದ್ದಾರೆ. ಇದೆ ರೀತಿಯ ಸನ್ನಿವೇಶವನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೂ ಕೂಡ ನಾವು ಕಾಣಬಹುದಾಗಿದೆ.

ಇದೂ ಈವರೆಗಿದ್ದ ಸಮಸ್ಯೆಯೇ ಆಗಿದ್ದರೂ, ಈಗ ಕೋವಿಡ್ ಸಂದರ್ಭದಲ್ಲಿ ಆಗಿರುವ ಬದಲಾವಣೆಗಳು ಕೂಡ ಬಹಳ ನಿರಾಶಾದಾಯಕವಾಗಿದೆ. ದೇಶದಲ್ಲಿ ಆರ್ಥಿಕತೆ ಕುಸಿದಿರುವ ಕಾರಣ, ಹಿಂದಿಗಿಂತಲೂ ಹೆಚ್ಚು ಅಗತ್ಯವಿದ್ದರೂ ಸಾಮಾಜಿಕ ಕ್ಷೇತ್ರಗಳಾದ ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆ ಸೇರಿದಂತೆ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಮೀಸಲಿಡುವ ಬಜೆಟ್‌ನಲ್ಲಿ ಕಡಿತ ಮಾಡಲಾಗಿವೆ. ಅದರಲ್ಲೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಬೇಕಾಗಿ ಬಂದಿರುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಸಿಗುವ ಮೊತ್ತ ಕಡಿಮೆಯಾಗಿದೆ.

ಆದರೆ, ಸಾಂಸ್ಥಿಕ (ಕಾಲೇಜು ಮತ್ತು ಶಾಲೆಗಳು) ಶಿಕ್ಷಣ ನೀಡಲಿಕ್ಕೆ ತಗಲುವ ಖರ್ಚು ಹೆಚ್ಚುತ್ತಿದೆ. ಇದಕ್ಕೆ ನಾವು ಎರಡು ಕಾರಣವನ್ನು ಗುರುತಿಸಬಹುದು. ಒಂದು, ಆನ್ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಲು ತಗಲುವ ಬಂಡವಾಳ (ಸಿಬ್ಬಂದಿಗಳಿಗೆ ನೀಡಬೇಕಾಗುವ ತರಬೇತಿ ಮತ್ತು ಅಗತ್ಯ ಗಣಕಯಂತ್ರ ಮತ್ತಿತರೆ ಯಂತ್ರಗಳ ಖರೀದಿ) ಮತ್ತು ಇಳಿಮುಖವಾಗುತ್ತಿರುವ ದಾಖಲಾತಿಗಳು (ಆದಾಯ ಕಡಿತದಿಂದಾಗಿ ಶಿಕ್ಷಣದಿಂದ drop -out ಆಗುತ್ತಿರುವ ವಿದ್ಯಾರ್ಥಿಗಳು ದೊಡ್ಡಸಂಖ್ಯೆಯಲ್ಲಿದ್ದು ಶಾಲೆ-ಕಾಲೇಜುಗಳ ಮಟ್ಟದಲ್ಲಿ economics of scale ಹೊಡೆತ ತಿಂದಿದೆ).

ಕುಟುಂಬಗಳ ಆದಾಯದಲ್ಲಿ ಶಿಕ್ಷಣಕ್ಕೆ ಮೀಸಲಿಡಬಹುದಾದ ಪ್ರಮಾಣದಲ್ಲಿ ಇಳಿಕೆ: ಒಂದೆಡೆ ಕುಟುಂಬಗಳ ಆದಾಯಗಳಲ್ಲೇ ಗಣನೀಯ ಇಳಿಕೆಯಾಗಿದ್ದು, ಇನ್ನೊಂದೆಡೆ ಹಸಿವು ಮತ್ತು ಆರೋಗ್ಯಕ್ಕೆ ತಮ್ಮ ಆದಾಯದಲ್ಲಿ ಹೆಚ್ಚಿನ ಪಾಲನ್ನು ಮೀಸಲಿಡಬೇಕಾಗಿರುವುದರಿಂದ, ಶಿಕ್ಷಣಕ್ಕೆ ಆದ್ಯತೆ ಕಡಿಮೆಯಾಗಿದೆ.

PC : The Tribune India

ಇದೆಲ್ಲದರಿಂದಾಗಿ ಆರ್ಥಿಕವಾಗಿ ಶಿಕ್ಷಣ ಕ್ಷೇತ್ರವಿಂದು ಸಂಪೂರ್ಣವಾಗಿ ಕುಸಿದಿದ್ದು, ಇದನ್ನು ನಾವು ತತ್‌ಕ್ಷಣದಲ್ಲಿ ಗಮನಿಸಬೇಕಾಗಿದೆ. ಇಂದಿನ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟು ಮುಂದಿನ ಪೀಳಿಗೆಗೆ ಸಮಸ್ಯೆಯಾಗಬಾರದಾದರೆ, ಇಡೀ ದೇಶದ ಬಿಕ್ಕಟ್ಟಾಗಬಾರದಾದರೆ ಇಂದೇ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದಿಂದ ಹೆಚ್ಚಿನ ಹಣ ಅನುದಾನದ ರೂಪದಲ್ಲಿ ಬರಬೇಕಿದೆ. ಇದನ್ನು ಬಹುಮುಖ್ಯವಾಗಿ ಮಧ್ಯಾಹ್ನದ ಬಿಸಿಊಟ ಸೇರಿದಂತೆ ಮಕ್ಕಳ ಮತ್ತು ತಾಯಂದಿರ ಆರೈಕೆಗೆ ಸಂಬಂಧಿಸಿದ ಈಗಿರುವ ಎಲ್ಲಾ ಯೋಜನೆಗಳಿಗೆ ಮತ್ತು ಈ ರೀತ್ಯ ಹೊಸ ಯೋಜನೆಗಳಿಗೆ ಉಪಯೋಗಿಸಬೇಕು. ಅದರೊಟ್ಟಿಗೆ ಸರ್ಕಾರಿ ಶಿಕ್ಷಣ ವ್ಯವಸ್ಥೆಯ – ಸರ್ಕಾರಿ ಶಾಲಾ ಕಾಲೇಜುಗಳ ಬಲವರ್ಧನೆಯಾಗಬೇಕಿದೆ. ಇಲ್ಲವಾದಲ್ಲಿ drop-outಗಳು ಹೆಚ್ಚಾಗಿ ಒಂದಿಡೀ ಪೀಳಿಗೆ ಶಿಕ್ಷಣದಿಂದ ವಂಚಿತವಾಗುವ ಅಪಾಯವಿದೆ. ಖಾಸಗಿ ಶಾಲೆ-ಕಾಲೇಜುಗಳಿಂದ ಹೆಚ್ಚಿನ ಮಕ್ಕಳು ಸರಕಾರಿ ಶಾಲಾ ಕಾಲೇಜುಗಳಿಗೆ ಶಿಫ್ಟ್ ಆಗುವ ಸಂಭಾವ್ಯತೆ ಇರುವುದರಿಂದ ಅದನ್ನು ಗಮನದಲ್ಲಿರಿಸಿ ಸರ್ಕಾರಿ ಶಾಲಾ ಕಾಲೇಜುಗಳ ಸಂಖ್ಯೆಯನ್ನೂ ಸಾಮರ್ಥ್ಯವನ್ನೂ ಹೆಚ್ಚಿಸಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ drop-out ಆಗುವ ಸಾಧ್ಯತೆ ಇರುವುದರಿಂದ ಅದನ್ನು ತಡೆಯಲಿಕ್ಕೆ ಗಮನ ಹರಿಸಿ ತಕ್ಕ ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಶಾಲಾ-ಕಾಲೇಜುಗಳಲ್ಲಿ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕು.

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳೆಲ್ಲವಕ್ಕೆ ಆರ್ಥಿಕ ದೃಷ್ಟಿಯಿಂದ ಪರಿಹಾರ ಕಂಡುಕೊಳ್ಳಬಹುದು ಎಂಬುದು ಇದರರ್ಥವಲ್ಲ. ಬದಲಿಗೆ, ಆರ್ಥಿಕವಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡದೆ ಏನೂ ಮಾಡಲು ಸಾಧ್ಯವಿಲ್ಲವೆಂಬುದು.

ಆದರೆ, ಇದೆಲ್ಲವೂ ತಿಳಿದಿದ್ದೂ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅನುದಾನವನ್ನು ಹೆಚ್ಚಿಸುವ ಬದಲು ಕಡಿತಗೊಳಿಸಿವೆ. (ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ). ಅಂತೆಯೇ ಕೋವಿಡ್ ಸಂದರ್ಭದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಸಂಘಟಿಸುವುದು ಕಷ್ಟವೆಂದು ಅರಿತ ಒಕ್ಕೂಟ ಸರ್ಕಾರಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟೂ ಖಾಸಗೀಕರಣಕ್ಕೆ ದೂಡಿದೆ.

ಇದು ಸರ್ಕಾರ ಶಿಕ್ಷಣಕ್ಕೆ ತೋರುತ್ತಿರುವ ಅಸಡ್ಡೆಯಲ್ಲದೇ ಮತ್ತೇನು?


ಇದನ್ನೂ ಓದಿ: ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳ ಮತ್ತು ಕೆಲವು ಮುಖಂಡರ ನಡೆ ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಟ್ಟಂತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...