ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಮಧ್ಯ ಪ್ರದೇಶದಲ್ಲಿ ಸಂಚರಿಸುವಾಗ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ತಿರುಚಿದ ವಿಡಿಯೋ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡನ ಮೇಲೆ ಛತ್ತೀಸ್‌ಘಡ ಪೊಲೀಸರು FIR ದಾಖಲಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಯಾತ್ರೆಯ ಮೂರನೇ ದಿನ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ ಎಂದು ಬಿಜೆಪಿ ಮುಖಂಡ ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದರು. ಇದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಬಂದಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ವಿರುದ್ಧ ದೂರು ನೀಡಿದ್ದಾರೆ.
बेहद शर्मनाक!
खरगोन में राहुल गांधी की भारत जोड़ो यात्रा में सरेआम “पाकिस्तान जिन्दाबाद” के नारे से कांग्रेस की देश तोड़ने की मानसिकता फिर से उजागर हुई है।
यह बार बार साबित हो रहा है कि यह भारत तोड़ो यात्रा है। इस निंदनीय कृत्य के लिए राहुल गांधी को देश से माफ़ी मांगना चाहिए। pic.twitter.com/CXq1a09xVF
— VD Sharma (@vdsharmabjp) November 25, 2022
ಈ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್, “ವಿಡಿಯೋ ತಿರುಚಲ್ಪಟ್ಟಿದೆ. ಭಾರತ್ ಜೋಡೋ ಯಾತ್ರೆಗೆ ಅಪಾರ ಜನಬೆಂಬಲ ವ್ಯಕ್ತವಾಗಿರುವುದರಿಂದ ಬಿಜೆಪಿ ಪಕ್ಷಕ್ಕೆ ಹತಾಶೆಯಾಗಿದೆ. ಹಾಗಾಗಿ ಅದು ತಿರುಚಿದ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ಕುರಿತು ಕೂಡಲೇ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಬಿಜೆಪಿಯ ಕುತಂತ್ರಗಳಿಗೆ ತಿರುಗೇಟು ನೀಡಲು ಸಿದ್ದರಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
ಆ ವೀಡಿಯೋವನ್ನು ವಿರೂಪಗೊಳಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಮಧ್ಯಪ್ರದೇಶ ಬಿಜೆಪಿ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್ ವಿರುದ್ಧ ಛತ್ತೀಸ್‌ಗಢದ ರಾಯ್‌ಪುರದ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಾಂಗ್ರೆಸ್ ಕಾನೂನು ವಿಭಾಗದ ವಕೀಲ ಅಂಕಿತ್ ಮಿಶ್ರಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು IPC ಸೆಕ್ಷನ್ 153-A, 504, 505 (1), 505 (2), ಮತ್ತು 120-B ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಛತ್ತೀಸ್‌ಗಢದ ಕಾಂಗ್ರೆಸ್ ವಕ್ತಾರ ಧನಂಜಯ್ ಸಿಂಗ್ ಮಾತನಾಡಿ “ಭಾರತ್ ಜೋಡೋ ಯಾತ್ರೆಯು ಮಧ್ಯಪ್ರದೇಶ ತಲುಪಿದೆ ಮತ್ತು ಮಧ್ಯಪ್ರದೇಶದಲ್ಲಿ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ. ಭಾರತೀಯ ಜನತಾ ಪಕ್ಷವು ನಕಲಿ ವೀಡಿಯೊಗಳನ್ನು ಮಾಡುವ, ತಪ್ಪುದಾರಿಗೆಳೆಯುವ ಮತ್ತು ಸುಳ್ಳು ಹೇಳುವ ಅಭ್ಯಾಸವನ್ನು ಹೊಂದಿದೆ. ಅವರು ಅದಕ್ಕೆ ಸಂಬಂಧಿಸಿದ ಕಲ್ಪಿತ ವೀಡಿಯೊವನ್ನು ಪ್ರಚಾರ ಮಾಡಿದ್ದಾರೆ. ಅದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ‘ಇಬ್ರಾಹಿಂ ಏಕೆ ಸಿಎಂ ಆಗಬಾರದು?, ಅವರೇನು ಅಸ್ಪೃಶ್ಯರಲ್ಲ’: ಎಚ್.ಡಿ ಕುಮಾರಸ್ವಾಮಿ ಅಸೂಕ್ಷ್ಮ ಹೇಳಿಕೆ


