ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಕುರಿತ ರಾಹುಲ್ ಗಾಂಧಿಯ ಆರೋಪಕ್ಕೆ ಚುನಾವಣಾ ಆಯೋಗ ತಕ್ಷಣ ಪ್ರತಿಕ್ರಿಯೆ ನೀಡಿದ್ದು, “ತಪ್ಪು ಮತ್ತು ಆಧಾರರಹಿತ” ಎಂದಿದೆ. ಮತದಾರರ ಹೆಸರನ್ನು ಸಾರ್ವಜನಿಕರು ಆನ್‌ಲೈನ್ ಮೂಲಕ ಅಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ಕಾನೂನು ಬದ್ಧವಾಗಿದ್ದು, ಸಂಬಂಧಿತ ವ್ಯಕ್ತಿಗೆ ಮಾಹಿತಿ ನೀಡದೆ ಯಾವುದೇ ಅಳಿಸುವಿಕೆ ನಡೆಯುವುದಿಲ್ಲ ಎಂದು ಚುನಾವಣಾ ಆಯೋಗ ಒತ್ತಿ ಹೇಳಿದೆ.
ಆದರೆ, ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮತದಾರರ ಹೆಸರನ್ನು ಅಳಿಸಲು ವಿಫಲ ಪ್ರಯತ್ನಗಳು ನಡೆದಿರುವುದನ್ನು ಒಪ್ಪಿಕೊಂಡು, ಈ ಸಂಬಂಧ ತನಿಖೆಗಾಗಿ ಸ್ವತಃ ಎಫ್‌ಐಆರ್ ದಾಖಲಿಸಿರುವುದಾಗಿ ಆಯೋಗ ಸ್ಪಷ್ಟಪಡಿಸಿದೆ.
ಇಂದು (ಸೆ.18) ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, 2023ರ ವಿಧಾನಸಭೆ ಚುನಾವಣೆಗೆ ಮುನ್ನ ಆಳಂದ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ಪ್ರಯತ್ನದ ದಾಖಲೆ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಭದ್ರಕೋಟೆಯಾದ ಆಳಂದ ಕ್ಷೇತ್ರದಲ್ಲಿ, ಮತದಾರರಿಗೆ ಗೊತ್ತಾಗದಂತೆ 6000ಕ್ಕೂ ಹೆಚ್ಚು ಮತಗಳನ್ನು ಅಳಿಸಿ ಹಾಕುವ ಪ್ರಯತ್ನ ಮಾಡಲಾಗಿತ್ತು. ಯಾರೂ 6,018 ಮತದಾರರ ಹೆಸರುಗಳನ್ನು ಅಳಿಸುವಾಗ ಸಿಕ್ಕಿ ಬಿದ್ದಿದ್ದರು. ಅಲ್ಲಿ ಒಟ್ಟು ಎಷ್ಟು ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ನಮಗೆ ತಿಳಿದಿಲ್ಲ. ಆದರೆ, 6018 ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಎಂದಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕಿ ಗೋದಾಬಾಯಿ ಅವರ ಹೆಸರಿನಲ್ಲಿ ನಕಲಿ ಲಾಗಿನ್ ಸೃಷ್ಟಿಸಿ 12 ಮತದಾರರನ್ನು ಅಳಿಸಲು ಪ್ರಯತ್ನಿಸಲಾಗಿದೆ ಎಂಬ ಉದಾಹರಣೆಯನ್ನು ಗಾಂಧಿ ಮಂಡಿಸಿದ್ದಾರೆ. “ಗೋದಾಬಾಯಿಯವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ” ಎಂದು ತಿಳಿಸಿದ್ದಾರೆ.
ಇದೇ ವೇಳೆ ಚುನಾವಣಾ ಆಯೋಗದ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು “ಮತಗಳ್ಳರನ್ನು ರಕ್ಷಿಸುತ್ತಿದ್ದಾರೆ”ಎಂದು ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ‘ಮತಗಳ್ಳರ ರಕ್ಷಕ’ ಎಂದ ರಾಹುಲ್ ಗಾಂಧಿ: ಆಳಂದ ಮತಗಳ್ಳತನದ ದಾಖಲೆ ಬಿಡುಗಡೆ


