ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಬಗ್ಗೆ ಇರುವ ಪೋಡ್‌ಕಾಸ್ಟ್ ಆಗಿರುವ “ಜೆ-ಪೋಡ್”ನಲ್ಲಿ ಮಾತಾಡುತ್ತಾ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, “ಎವ್ರಿಬಡಿ ಲವ್ಸ್ ಎ ಗುಡ್ ಡ್ರೌಟ್” ಎಂಬ ಪ್ರಸಿದ್ಧ ಕೃತಿಯ ಲೇಖಕ ಪತ್ರಕರ್ತ ಪಿ. ಸಾಯಿನಾಥ್ ಅವರು ಭಾರತ ಮತ್ತು ಕೋವಿಡ್ ನಂತರದ ಭಾರತೀಯ ಮಾಧ್ಯಮ ಮತ್ತು ವಲಸೆ ಕಾರ್ಮಿಕರ ಬಗ್ಗೆ ವಿವರಿಸಿದ್ದಾರೆ. ಶೂನ್ಯ ಜ್ಞಾನದ ಪೆದ್ದರು ನಮ್ಮ ಕಾರ್ಮಿಕ ಕಾನೂನುಗಳನ್ನು ಮರುರೂಪಿಸುತ್ತಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ. ಸಾರಾಂಶ ಇಲ್ಲಿದೆ.
ಅನುವಾದ: ನಿಖಿಲ್ ಕೋಲ್ಪೆ
ಅಭಿವೃದ್ಧಿಯ ಮರಣೋತ್ತರ ಪರೀಕ್ಷೆ
ಕೋವಿಡ್ ನಮಗೆ ಕಳೆದ ಮೂವತ್ತು ವರ್ಷಗಳ ನಮ್ಮ ಅಭಿವೃದ್ಧಿಯ ಸಂಪೂರ್ಣ, ಸಮಗ್ರ ಮತ್ತು ಎಗ್ಗಿಲ್ಲದ ಮರಣೋತ್ತರ ಪರೀಕ್ಷೆ ನಡೆಸುವ ಅವಕಾಶವನ್ನು ಒದಗಿಸಿಕೊಟ್ಟಿದೆ. ನೋಟು ಅಮಾನ್ಯೀಕರಣವನ್ನು ನಾವು ಕಡೆಗಣಿಸಬಹುದಾಗಿತ್ತು. ಆದರೆ ಈಗ ಬೆಂಕಿ ನಮ್ಮ ಮನೆ ಹೊಸ್ತಿಲಲ್ಲಿದೆ.
ನಾವು ನಮ್ಮ ಇತಿಹಾಸದಲ್ಲಿ ಸಂಸದೀಯ ಪ್ರಜಾಪ್ರಭುತ್ವವು ಅತ್ಯಂತ ವೇಗವಾಗಿ ಶಿಥಿಲಗೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆ ಹೋಲಿಸಿದರೆ ತುರ್ತುಪರಿಸ್ಥಿತಿ ಏನೇನೂ ಅಲ್ಲ. ಇಲ್ಲೀಗ ಸಂಸತ್ತಾಗಲಿ, ಇ- ಸಂಸತ್ತಾಗಲಿ, ವರ್ಚುವಲ್ ಸಂಸತ್ತಾಗಲೀ, ಒಂದೂ ಇಲ್ಲ.
ನಮ್ಮಲ್ಲೀಗ ಕೆಲಸ ಮಾಡುತ್ತಿರುವ ವಿಧಾನಸಭೆಗಳಿಲ್ಲ. ಮುಖ್ಯಮಂತ್ರಿಗಳು ಈಗ ಕೇಂದ್ರ ಸರಕಾರದ ಕೃಪೆಯಲ್ಲಿದ್ದಾರೆ. ಕೇಂದ್ರವು ರಾಜ್ಯಗಳಿಗೆ ಬರಬೇಕಾದ ಜಿಎಸ್‌ಟಿ ನಿಧಿಯನ್ನು ತಡೆಹಿಡಿಯುತ್ತಿದೆ ಮತ್ತು ಖಾಸಗಿಯಾಗಿ ನೋಂದಾಯಿತವಾದ ‘ಪಿಎಂ ಕೇರ್ಸ್’ ಟ್ರಸ್ಟ್ ಮುಖಾಂತರ ರಾಜ್ಯಗಳಿಗೆ ಬರಬೇಕಾದ ಹಣವನ್ನು ಕೊಳ್ಳೆಹೊಡೆಯುತ್ತಿದೆ.
ಮೂರು ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಎರಡು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಏರಿಸುವ ನಿರ್ಧಾರವು ಇತಿಹಾಸದ ಶೂನ್ಯ ಜ್ಞಾನವಿರುವ ಪೆದ್ದರಿಂದ ಬಂದಿದೆ.
ಯುಎಸ್‌ಎಯಲ್ಲಿ ಬಂಡವಾಳಶಾಹಿ ಗುಂಪುಗಳು ದಿನಕ್ಕೆ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಒಪ್ಪಿಕೊಂಡಿವೆ ಏಕೆಂದರೆ, ಎಂಟು ಗಂಟೆಗಳ ಬಳಿಕ ಉತ್ಪಾದಕತೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.
ಭಾರತವು ಸಮಾಜೋ-ಧಾರ್ಮಿಕ ಮೂಲಭೂತವಾದಿಗಳು ಮತ್ತು ಆರ್ಥಿಕ-ಮಾರುಕಟ್ಟೆ ಮೂಲಭೂತವಾದಿಗಳ ಮೈತ್ರಿಕೂಟದ ಕಪಿಮುಷ್ಟಿಯಲ್ಲಿದೆ. ಅವರು ಜೊತೆಸೇರುವ, ಹಂಚಿಕೊಳ್ಳುವ ಹಾಸಿಗೆಯೆಂದರೆ, ಕಾರ್ಪೊರೇಟ್ ಮಾಧ್ಯಮ ಅಥವಾ ಮುಖ್ಯವಾಹಿನಿಯ ಮಾಧ್ಯಮ.
ಮಾಧ್ಯಮ ಮನಸ್ಥಿತಿಯ ಬ್ರೈನ್ ಸ್ಕ್ಯಾನಿಂಗ್
ಕೋವಿಡ್ ನಮಗೆ ಭಾರತೀಯ ಸಮಾಜದ ಮರಣೋತ್ತರ ಪರೀಕ್ಷೆಯ ವರದಿಯನ್ನು ಒದಗಿಸಿದಂತೆಯೇ, ಅದು ಮೇಲ್ವರ್ಗದ ಚಿಂತನೆಯ, ಮಾಧ್ಯಮಗಳ ಚಿಂತನೆಯ ಮೆದುಳಿನ ಪರೀಕ್ಷೆಯ ವರದಿಯನ್ನೂ ಒದಗಿಸಿದೆ.
ಪ್ರಮುಖ ಪತ್ರಕರ್ತನೊಬ್ಬ ತನ್ನದೇ ಆನ್‌ಲೈನ್ ಟಿವಿಯಲ್ಲಿ ಎನು ಹೇಳುತ್ತಾನೆ ಎಂದರೆ, “ಒಳ್ಳೆಯ ಬಿಕ್ಕಟ್ಟನ್ನು ಯಾವಾಗಲೂ ವ್ಯರ್ಥಮಾಡಬೇಡಿ” ಎಂದು! ಇದು ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಮುನ್ನುಗ್ಗಿಸಲು ಸರಿಯಾದ ಸಮಯವೆಂದು ಆತ ಹೇಳುತ್ತಾನೆ. ಇದು ಭಾರತದ ಮೇಲ್ವರ್ಗದ ಚಿಂತನೆಯ ಬಗ್ಗೆ ಅದರ ಕ್ರೌರ್ಯದ ಬಗ್ಗೆ, ಸಮಾಜದ ದುರ್ಬಲ ವರ್ಗಗಳ ಕುರಿತು ಸಂಪೂರ್ಣ ದಯಾಹೀನತೆಯ ಬಗ್ಗೆ ಏನು ಹೇಳುತ್ತದೆ?
ಏನು ಬದಲಾಗಿದೆಯೋ, ಯಾವುದು ರಾಜಕೀಯವನ್ನು ಬದಲಾಯಿಸಿದೆಯೋ, ಯಾವುದು ಎಲ್ಲಾ ರೀತಿಯಲ್ಲಿ ಪತ್ರಿಕೋದ್ಯಮದ ಮೇಲೆ ಪರಿಣಾಮ ಬೀರಿದೆಯೋ, ಅದು ನಮ್ಮನ್ನು ಬಾಧಿಸದೇ ಇರಬಹುದು. ಆದರೆ ಅದು ಇತರನ್ನು ಬಾಧಿಸಿದೆ ಎಂಬುದು ಬಹಳ ಮುಖ್ಯ. ನ್ಯಾಯ ಎಂಬುದು ಎಲ್ಲರಿಗೂ ಸೇರಿದ್ದು, ಅದನ್ನು ನಿರಾಕರಿಸುವವರಿಗೆ ಮಾತ್ರವಲ್ಲ.
ಇಡೀ ಒಂದು ಯುವಜನರ ಪೀಳಿಗೆಯೇ ಪತ್ರಿಕೆಗಳ ಪುರವಣಿಗಳಲ್ಲಿ ಬರುವುದಕ್ಕಿಂತ ಬೇರೆ ಪತ್ರಿಕೋದ್ಯಮವೇ ಇಲ್ಲ; ನವ ಉದಾರವಾದಕ್ಕಿಂತ ಬೇರೆಯಾದ ಆರ್ಥಿಕತೆಯೇ ಇಲ್ಲ ಎಂದು ನಂಬಿಕೊಂಡು ಬೆಳೆದುಬಿಟ್ಟಿದೆ. ವಲಸೆ ಕಾರ್ಮಿಕರ ಬಿಕ್ಕಟ್ಟು ಪತ್ರಕರ್ತರ ಮೇಲೆ, ಅದರಲ್ಲೂ ಎಳೆಯ ಪತ್ರಕರ್ತರ ಮೇಲೆ ಆಳವಾದ ಪರಿಣಾಮ ಬೀರಿದೆ.
ಕೋಣೆಯೊಳಗೊಂದು ವಾನರ!
ಸರಾಸರಿಯಾಗಿ ರಾಷ್ಟ್ರೀಯ ದಿನಪತ್ರಿಕೆಗಳು 69 ಶೇಕಡಾ ಜನರು ವಾಸಿಸುವ ಗ್ರಾಮೀಣ ಪ್ರದೇಶಗಳ ಸುದ್ದಿಗೆ ತಮ್ಮ ಮುಖಪುಟದಲ್ಲಿ ಕೇವಲ 0.67 ಶೇಕಡಾ ಜಾಗವನ್ನು ಮಾತ್ರ ನೀಡುತ್ತವೆ ಎಂದು ಐದು ವರ್ಷಗಳ ಅಧ್ಯಯನ ತೋರಿಸುತ್ತದೆ. ನೀವು ಚುನಾವಣಾ ವರ್ಷವನ್ನು ಪರಿಗಣನೆಗೆ ಹೊರತುಪಡಿಸಿದರೆ ಇದು 0.18ರಿಂದ 0.24ಶೇಕಡಾದಷ್ಟಿದೆ. ಅಂದರೆ, 75 ಶೇಕಡಾ ಜನರು ಚುನಾವಣೆಯಲ್ಲದ ಕಾಲದಲ್ಲಿ ಯಾವುದೇ ಸುದ್ದಿಗಳನ್ನು ಮಾಡುವುದಿಲ್ಲ ಎಂದು ಮಾಧ್ಯಮಗಳು ನಿರ್ಧರಿಸಿದಂತಿದೆ.
ಮಾರ್ಚ್ 25ರಿಂದ 1,000ದಷ್ಟು ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಜನರಿಗೆ ಅವರ ಅತ್ಯಂತ ಜರೂರಿ ಇರುವ ಹೊತ್ತಿನಲ್ಲಿಯೇ ಸೆನ್ಸೆಕ್ಸ್‌ನ 30 ಅತ್ಯನ್ನತ ಸ್ಥಾನಗಳಲ್ಲಿ ಇರುವ ಕಂಪನಿಗಳು ಅಸೂಯೆಪಡುವಷ್ಟು ಆದಾಯವಿರುವ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಹೊರಗೆಸೆಯುತ್ತಿವೆ.
ನಿಮ್ಮಲ್ಲಿ ಇಷ್ಟು ಹಣವಿದೆ. ನಿಮ್ಮ ಕಾಲಂಗಳಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಮಿಡಿಯುತ್ತಾ ನಿಮ್ಮ ಹೃದಯವು ರಕ್ತ ಸುರಿಸುತ್ತದೆ. ಆದರೂ ನೀವು 24 ಗಂಟೆಗಳ ನೋಟಿಸ್ ನೀಡಿ ಪತ್ರಕರ್ತರು ರಾಜೀನಾಮೆ ನೀಡುವಂತೆ ಮಾಡುತ್ತೀರಿ. ಏಕೆಂದರೆ, ನೀವು ಜನರ ಕಣ್ಣಲ್ಲಿ ವಾನರರಂತೆ ಕಾಣಬಾರದಲ್ಲ!
ಕೊರೋನಕ್ಕೆ ಮಿಡಿಯುತ್ತಿರುವ ಪತ್ರಿಕೆಗಳೇ ಜನರನ್ನು ಕಸದಂತೆ ಹೊರಗೆಸೆಯುತ್ತಿವೆ. ಭಾರತದ ಅತ್ಯಂತ ದೊಡ್ಡ ಮಾಧ್ಯಮದ ಮಾಲೀಕ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ಭಾರತೀಯ. ತಮ್ಮದೇ ದೇಶದ ಬಗ್ಗೆ ಸುದ್ದಿ ಪ್ರಸಾರ ಮಾಡುವುದಕ್ಕಿಂತಲೂ ಹೆಚ್ಚಾಗಿ ನೆರೆಯ ರಾಷ್ಟ್ರದ ಬಗ್ಗೆ ಸುದ್ದಿ ಪ್ರಸಾರ ಮಾಡುವ ಟಿ.ವಿ. ಚಾನೆಲ್‌ಗಳಿರುವ ಏಕೈಕ ದೇಶ ಭಾರತ! ನಮ್ಮ ಸಾಲಿಸಿಟರ್ ಜನರಲ್ ಮಾಧ್ಯಮಗಳನ್ನು ದೂರುತ್ತಿದ್ದಾಗ, ಅವರು ಯಾವ ಮಾಧ್ಯಮಗಳನ್ನು ದೂರುತ್ತಿದ್ದಾರೆ ಎಂದು ಆಶ್ಚರ್ಯಪಟ್ಟಿದ್ದೆ! ಏಕೆಂದರೆ, 90 ಶೇಕಡಾ ಮಾಧ್ಯಮಗಳು ಅವರ ಜೊತೆಗೇ ಇವೆ!
ಪಿ. ಸಾಯಿನಾಥ್ ರವರ ಪೂರ್ಣ ಪಾಡ್‌ಕಾಸ್ಟ್‌ಕೇಳಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಶ್ರಮಿಕ್ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು: ಫ್ಯಾಕ್ಟ್‌ಚೆಕ್ ಮಾಡುವ ಪಿಐಬಿ ಸತ್ಯ ಮರೆಮಾಚಿತೆ?


