ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ‘ಉದ್ಯೋಗ ಸಂಬಂಧಿತ ಪ್ರೋತ್ಸಾಹ’ (Employment Linked Incentive) ಯೋಜನೆಯ ಬಗ್ಗೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಪ್ರತಿದಿನ ಹೊಸ ಘೋಷಣೆಗಳನ್ನು ನೀಡುತ್ತಿದ್ದರೂ, ಯುವಕರು ಇನ್ನೂ ನಿಜವಾದ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದು, ಹೊಸ ಘೋಷಣೆಯನ್ನು “ಮತ್ತೊಂದು ಜುಮ್ಲಾ” ಎಂದು ಶುಕ್ರವಾರ ಕರೆದಿದ್ದಾರೆ.
“2024 ರ ಚುನಾವಣೆಯ ನಂತರ, ಪ್ರಧಾನಿ ಮೋದಿ “ಉದ್ಯೋಗ ಸಂಬಂಧಿತ ಪ್ರೋತ್ಸಾಹ” ಯೋಜನೆಯನ್ನು ಬಹಳ ಅಬ್ಬರದಿಂದ ಘೋಷಿಸಿದರು, ನಮ್ಮ ಯುವಕರಿಗೆ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದರು. ಆದರೆ, ಯೋಜನೆಯನ್ನು ಘೋಷಿಸಿ ಸುಮಾರು ಒಂದು ವರ್ಷವಾಗಿದೆ. ಸರ್ಕಾರ ಇನ್ನೂ ಅದನ್ನು ವ್ಯಾಖ್ಯಾನಿಸಿಲ್ಲ ಮತ್ತು ಅದಕ್ಕೆ ನಿಗದಿಪಡಿಸಿದ 10,000 ಕೋಟಿ ರೂ.ಗಳನ್ನು ಹಿಂದಿರುಗಿಸಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸರ್ಕಾರದ ಈ ನಡೆಯೆ ಪ್ರಧಾನಿ ನಿರುದ್ಯೋಗದ ಬಗ್ಗೆ ಎಷ್ಟು ಗಂಭೀರವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ರಾಹುಲ್ ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆಗೆ ಕೇಂದ್ರ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
https://twitter.com/RahulGandhi/status/1910555339834949893
ದೊಡ್ಡ ಕಾರ್ಪೊರೇಟ್‌ಗಳ ಕಂಪೆನಿಗಳ ಮೇಲೆ ಮಾತ್ರ ಕೇಂದ್ರೀಕರಿಸುವ ಮೂಲಕ, ನ್ಯಾಯಯುತ ವ್ಯವಹಾರಗಳಿಗಿಂತ ಆಪ್ತಮಿತ್ರರನ್ನು ಉತ್ತೇಜಿಸುವ ಮೂಲಕ, ಉತ್ಪಾದನೆಗಿಂತ ಸಭೆಗಳಿಗೆ ಆದ್ಯತೆ ನೀಡುವ ಮೂಲಕ ಮತ್ತು ಭಾರತದ ಸ್ಥಳೀಯ ಕೌಶಲ್ಯಗಳನ್ನು ನಿರ್ಲಕ್ಷಿಸುವ ಮೂಲಕ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“MSME ಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುವುದು, ಸ್ಪರ್ಧೆ ಇರುವ ನ್ಯಾಯಯುತ ಮಾರುಕಟ್ಟೆಗಳ ನಿರ್ಮಾಣ, ಸ್ಥಳೀಯ ಉತ್ಪಾದನಾ ಜಾಲಗಳಿಗೆ ಬೆಂಬಲ ನೀಡುವುದು ಮತ್ತು ಸರಿಯಾದ ಕೌಶಲ್ಯಗಳನ್ನು ಹೊಂದಿರುವ ಯುವಕರಿಗೆ ಪ್ರೋತ್ಸಾಹ ನೀಡುವುದು ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ ಮಾರ್ಗವಾಗಿದೆ” ಎಂದು ಅವರು ಹೇಳಿದ್ದಾರೆ.
“ಪ್ರಧಾನಿ ಈ ವಿಚಾರಗಳನ್ನು ಒಪ್ಪುವುದಿಲ್ಲ. ಆದರೆ ನಾನು ಅವರನ್ನು ನೇರವಾಗಿ ಕೇಳಬೇಕು: ಪ್ರಧಾನಿ ಅವರೇ, ನೀವು ಉತ್ತಮ ಪ್ರಚಾರದೊಂದಿಗೆ Employment Linked Incentive ಅನ್ನು ಘೋಷಿಸಿದ್ದೀರಿ – ಆದರೆ ಈ 10,000 ಕೋಟಿ ರೂ. ಯೋಜನೆ ಎಲ್ಲಿ ಕಣ್ಮರೆಯಾಯಿತು?. ನೀವು ನಿಮ್ಮ ಭರವಸೆಗಳ ಜೊತೆಗೆ ನಮ್ಮ ನಿರುದ್ಯೋಗಿ ಯುವಕರನ್ನು ಕೈಬಿಟ್ಟಿದ್ದೀರಾ?. ನೀವು ಪ್ರತಿದಿನ ಹೊಸ ಘೋಷಣೆಗಳನ್ನು ನೀಡುತ್ತಿದ್ದೀರಿ. ನಮ್ಮ ಯುವಕರು ಇನ್ನೂ ನಿಜವಾದ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ” ಎಂದು ಅವರು ಕೇಳಿದ್ದಾರೆ.
ಭಾರತಕ್ಕೆ ತೀರಾ ಅಗತ್ಯವಿರುವ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಲು ನಿಮ್ಮ ಯೋಜನೆ ಏನು, ಅಥವಾ ಇದು ಮತ್ತೊಂದು ಜುಮ್ಲಾವೆ? ಎಂದು ಅವರು ಕೇಳಿದ್ದಾರೆ. ಅದಾನಿ ಮತ್ತು ಅವರ ಬಿಲಿಯನೇರ್ ಸ್ನೇಹಿತರನ್ನು ಶ್ರೀಮಂತಗೊಳಿಸುವುದರಿಂದ ತಳಮಟ್ಟದಲ್ಲಿರುವ ಸಮುದಾಯಗಳ ಯುವಜನರಿಗೆ ಉದ್ಯೋಗದಲ್ಲಿ ಸಮಾನ ಪ್ರವೇಶವನ್ನು ಖಚಿತಪಡಿಸಿಕೊಳ್ಳುವತ್ತ ಪ್ರಧಾನಿ ಯಾವಾಗ ಗಮನ ಹರಿಸುತ್ತಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನ್ಯಾಯಾಲಯದಲ್ಲಿ ಅನುಚಿತ ವರ್ತನೆ: ವಕೀಲನಿಗೆ ಆರು ತಿಂಗಳು ಜೈಲು

