Homeಅಂಕಣಗಳು`ಹಾರಲೆ ಅಂದ್ರ ಹಾರೋದ ಬಿಟ್ಟು ಬರೇ ಓಡತದ ನೋಡ್ರಿ ಈ ಬೈಕು?'

`ಹಾರಲೆ ಅಂದ್ರ ಹಾರೋದ ಬಿಟ್ಟು ಬರೇ ಓಡತದ ನೋಡ್ರಿ ಈ ಬೈಕು?’

ಪ್ರಶಾಂತ್ ಭೂಷಣ ಅವರ ತಪ್ಪು ಇಲ್ಲ. ಇದರಿಂದ ನ್ಯಾಯಾಂಗ ನಿಂದನೆ ಆಗತದ ಅಂತ ಹೇಳ್ಲಿಕ್ಕೆ ಬರೋದಿಲ್ಲ, ಅಂತ ಹೇಳಿ ಹಿರಿಯ ವಕೀಲರಾದ ಮೋಹನ್ ಕಾತರಕಿ ಅವರೂ ಸೇರಿದಂತೆ ಅನೇಕರು ಹೇಳಿಕೆ ಕೊಟ್ಟಾರ.

- Advertisement -
- Advertisement -

ಈ ಹಳೆ ಮೈಸೂರು ಕಡೆ ಕೆಲಸ ಇರಲಾರದೆ ರಿಕಾಮಿ ಅಡ್ಡಾಡೋ ಹುಡುಗರಿಗೆ ಪಡ್ಡೆ ಹೈಕಳು ಅಂತಾರ. ಅದನ್ನ ಅಖಂಡ ಕರುನಾಡಿಗೆ ಗೊತ್ತಾಗೋ ಹಂಗ ಮಾಡಿದವರು ಯಾರಪಾ ಅಂದ್ರ ಪುರಾಣದ ಕಟ್ಟಿಯ ವಾಟಿಸ್ಸೆ ಮತ್ತು ಜುಮ್ಮಿ.

ಇಂತಹ ಪಡ್ಡೆ ಹೈಕಳುಗಳು, ಸುಮಾರು 80 ರ ದಶಕದಾಗ ಪ್ರೇಮಲೋಕ ಅಂತ ಒಂದು ಪಿಚ್ಛರು ಫುಲ್ ಫೇಮಸ್ ಮಾಡಿದ್ರು. ಅದು ಫೇಮಸ್ ಚಲನ ಚಿತ್ರ ನಿರ್ಮಾಪಕ ಎನ್ ವೀರಸ್ವಾಮಿ ಅವರ ಮಗ ರವಿ ಚಂದ್ರನ್ನ ಭಾರಿ ಫೇಮಸ್ ಮಾಡಿತು. ಅದು ‘ಗ್ರೀಸ್ ಟೂ’ ಅನ್ನೋ ಇಂಗ್ಲಿಷ್ ಚಿತ್ರದ ಕಾಪಿ ಅಂತ ನಮ್ಮೂರಿಂದ ಹುಬ್ಬಳ್ಳಿಗೆ ಹೋಗಿ ಪಿಚ್ಛರು ನೋಡಿ ಬಂದ ದೊಡ್ಡ ಹುಡುಗರೂ ಹೇಳಾಕ ಹತ್ತಿದ್ದರು. ನಮಗ ಅದು ಗೊತ್ತಾಗದ ಹೋಗಿ ನಾವು ಅದು ಕ್ರಿಸ್ಟೋ ಅನ್ನೋ ಪಿಚ್ಛರು ಅಂತ ತಪ್ಪು ತಪ್ಪು ಹೇಳತಿದ್ದಿವಿ.

ರವಿ ಅಣ್ಣಾ ಅವರು ತಮ್ಮ ಚಿತ್ರದ ಒರಿಜಿನಾಲಿಟಿ ಹಾಳಾಗಬಾರ್ದು ಅಂತ ಹೇಳಿ ಪ್ರೇಮ ಲೋಕದ `ಯಾರಿವನು ಈ ಮನ್ಮಥನು’ ಅನ್ನೋ ಹಾಡನ್ನು ಗ್ರೀಸು ಟೂ ಚಿತ್ರದ `ಹೂ ಈಸ್ ದ್ಯಾಟ ಗಾಯ್’ ಅನ್ನೋ ಹಾಡಿನ ಹಂಗನ ಚಿತ್ರೀಕರಣ ಮಾಡಿದ್ದರು. ಯಾರಿಗೂ ಯಾವ ಸಂದೇಹ ಇರಬಾರದು ಅಂತ ಅವರ ಉದ್ದೇಶ ಆಗಿತ್ತು ಅನ್ನೋದು ಆಮ್ಯಾಲೆ ಗೊತ್ತ ಆತು. ಅದರಾಗ ಆ ಹೀರೋ ಮೈಕೆಲ್ ಒಂದು ಬೈಕು ಹತ್ತಿಕೊಂಡ ಬಂದ ಪುಂಡರಿಗೆ ಹೊಡೀತಾನ, ಇದರಾಗ ರವಿಚಂದ್ರನ ಅವರು ಹಂಗ ತಮ್ಮ ಮಾರಿ ಮುಚ್ಚಿಕೊಂಡರೂ ಗೊತ್ತಾಗೋ ಹಂಗ ಮೇಕ್ ಅಪ್ ಮಾಡಿಕೊತಾನ. ಹುಡುಗಿಯರ ಮುಂದ ಗೂಂಡಾಗಳಿಗೆ ಹೊಡೀತಾನ. ಅದರಾಗ ಒಂದು ಸಾಲು ಬರತೇತಿ.

“ನೀ ಯಾರ ಅಂತ ಗೊತ್ತಿರದಾಗ ನೀ ಎಲ್ಲರಿಗೂ ಬೇಕು
ನೀನು ರಹಸ್ಯ ಆಗಿ ಇದ್ದಷ್ಟೂ ಭಾಳ ದೂರ ಹೋಗ್ತಿ
ನಿನ್ನ ಸುತ್ತ ಇರೋರೆಲ್ಲಾ ನೀ ಭಾಳ ದೊಡ್ಡ ಸ್ಟಾರ್ ಅಂತ ತಿಳ್ಕೊಂತಾರೂ..” ಈ ಸಾಲು ಭಾಷಾಂತರ ಮಾಡೋದು ಹಂಸಲೇಖ ಅವರು ಮರ್ತು ಬಿಟ್ಟಿದ್ದರು ಅಂತ ಕಾಣತೇತಿ.

ಈ ಸಾಲು ಈಗ ಯಾಕ ನೆನಪು ಆಗಾಕ ಹತ್ತೇತಿ ಅಂದ್ರ ನಮ್ಮ ಬೋಬಡೆ ಸಾಹೇಬರು ನಾಗಪುರದಾಗ ಒಬ್ಬ ಮರಿ ಪುಢಾರಿ ಅವರ ಮೋಟರ್ ಸೈಕಲ್ಲು ಮ್ಯಾಲೆ ಹತ್ತಿ ಒಂದ್ ರೌಂಡ್ ಹೋಗಿ ಬಂದಾರ. ಅದರ ಫೋಟೋ ತಗದು ಯಾರೋ ಸಮಾಜ ವಿರೋಧಿ ಮಾಧ್ಯಮದಾಗ ಹಾಕ್ಯಾರ.

ಅದು ಹಾರಲೆ ಡೇವಿಡ್ ಸನ್ ಬೈಕು. ಹಂಗ ಅಂತ ಅದರ ಮ್ಯಾಲೆ ಯಾರ ಕೂತು ಹಾರಲೇ ಅಂತ ಅಂದ್ರ ಅದು ಹಾರೋದಿಲ್ಲ. ಅದು ಬರೇ ನೆಲೆದ ಮ್ಯಾಲೆ ಓಡೋ ಗಾಡಿ. ಗ್ರೀಸು ಟೂ ದಾಗ ಉಪಯೋಗಿಸಿದ ಗಾಡಿ ಹೆಸರು ಹೋಂಡಾ ಎಳದಾಟ (ಸ್ಕರಾಂಬಲರ್). ರವಿಚಂದ್ರನ ಅವರು ಓಡಿಸಿದ್ದು, ಸುಜೂಕಿ ಅಂತ ಸ್ಟಿಕ್ಕರು ಹಚ್ಚಿದ ಯಮಹ ಅಂತ ಒಂದು ಊಹೆ. ಇರಲಿ.

ಆದರ ಈ ನಾಗಪುರದ ಗಾಡಿ ಐತೆಲ್ಲ, ಅದು ಅಂತಾ- ಇಂಥಾ ಬೈಕು ಅಲ್ಲ. ಅದರ ಬೆಲೆ ಸುಮಾರು ಐದು ಲಕ್ಷ ದಿಂದ 50 ಲಕ್ಷದ ವರೆಗೂ. ಇದು ಬರೀ ಒಂದು ಬೈಕ್ನ ಬೆಲೆ. ನೀವು ಬೈಕು ಶೋ ರೂಮಿನ ಬೆಲೆ ಅಂತ ಅಂದುಕೋಂಡೀರಿ, ಮತ್ತ.

ಆ ಪಟ ನೋಡಿದ ನಮ್ಮ ಪ್ರಶಾಂತ್ ಭೂಷಣ ವಕೀಲ ಸಾಹೇಬರು “ನ್ಯಾಯಾಧೀಶರು ಅದವರು ಹಿಂಗೆಲ್ಲ ಯಾರದರ ಗಾಡಿ ಇಸಕೊಂಡು ಓಡಸಬಾರದು. ಅದರಾಗ ರಾಜಕೀಯ ವ್ಯಕ್ತಿಗಳ ಕಡೆ ಇಸಕೋಬಾರದು,” ಅಂತ ಟ್ವೀಟ್ ಮಾಡಿದರು.

ಅಲ್ಲಿಂದ ಶುರು ಆತು ಬೋಬಡೆ ಸಾಹೇಬರ ತಿರಸ್ಕಾರದ ಪ್ರಕರಣ. ಅವರು ಭೂಷಣ ಅವರ ಮ್ಯಾಲಿನ ಹಳೇ ನ್ಯಾಯನಿಂದನೆ ಪ್ರಕರಣ ಎಲ್ಲಾ ತೆಗಿಸಿದರು.

ಈ ನ್ಯಾಯಾಂಗನಿಂದನೆ ಅಂದ್ರ ಖರೆ ಏನು? ಅದಕ್ಕ ಕಂಟೆಮ್ಟ ಅಂತ ಅಂತಾರು.
ಇಂಗ್ಲಿಷ್ನ ಕಂಟೆಮ್ಟ ಅನ್ನೋ ಪದಕ್ಕ ತಿರಸ್ಕಾರ, ಅನಾದರ, ಅಗೌರವ, ನಿಂದನೆ ಅನ್ನೋ ಅರ್ಥ ಅದಾವು.

ಕಾನೂನುತಜ್ಞ ಹಾಲಸಬರಿ ಅವರ ಪ್ರಕಾರ, ನ್ಯಾಯನಿರ್ಣಯ ಪ್ರಕ್ರಿಯೆಗೆ ಅಡ್ಡಿ ಮಾಡೋ ಯಾವುದೇ ಲಿಖಿತ, ಅಥವಾ ಅಲಿಖಿತ ಶಬ್ದ, ನ್ಯಾಯಾಂಗನಿಂದನೆ ಅನ್ನಿಸಿಕೊಳ್ಳತದ.

ಇನ್ನೂ ಭಾರತೀಯ ವಕೀಲರ ಕಾಯಿದೆ ಪ್ರಕಾರ, “ಒಬ್ಬ ವ್ಯಕ್ತಿ – ಅವನು ಪ್ರಕರಣದ ಕಕ್ಷಿದಾರ ಇರಬಹುದು ಅಥವಾ ಹೊರಗಿನವ ಆಗಿರಬಹುದು, ಅವನು ನ್ಯಾಯಾಧೀಶನ ಅಧಿಕಾರ ಕುಗ್ಗಿಸುವಂತೆ ಅಥವಾ ಅವನು ಪ್ರಕರಣ ನಡೆಸೋ ರೀತಿಯ ಬಗ್ಗೆ ಅಪಹಾಸ್ಯ ಮಾಡಿದರೆ, ವಿನಾಕಾರಣ ಟೀಕೆ ಮಾಡಿದರೆ, ಸಾಕ್ಷಿಗಳು, ಇತರ ಕಕ್ಷಿದಾರರು ಹಾಗೂ ಇತರರು ಪ್ರಕರಣ ಮುಗಿಯುವ ಮುಂಚೆ ಅದರ ಬಗ್ಗೆ ತಪ್ಪು ತಿಳಿದುಕೊಳ್ಳುವ ಹಾಗೆ ಸಾರ್ವಜನಿಕರಲ್ಲಿ, ಮಾಧ್ಯಮದಲ್ಲಿ ದುರಭಿಪ್ರಾಯ ಮೂಡಿಸಿದರೆ, ನ್ಯಾಯದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೆ, ಸಬೂತುಗಳಿಲ್ಲದೇ ನ್ಯಾಯಾಲಯದಲ್ಲಿ ಹಗರಣ ಆಗಿದೆ ಎಂಬ ಸುಳ್ಳುಗಳನ್ನು ಹಬ್ಬಿಸಿದರೆ” ಅದು ನ್ಯಾಯಾಂಗ ನಿಂದನೆ.

ಆದರೆ, ರಾಜಕೀಯ ನಿರ್ಲಿಪ್ತತೆಯನ್ನು ಮೈಗೂಡಿಸಿಕೊಳ್ಳಬೇಕಾದ ನ್ಯಾಯಾಧೀಶರು ಪುಢಾರಿ ರಾಜಕಾರಣೀಯ ಬೈಕು ಇಸಿದುಕೊಂಡು ಒಂದು ರೌಂಡ್ ಹೊಡಿಯಬಾರದು ಅನ್ನೋ ಮಾತು ನ್ಯಾಯಾಂಗನಿಂದನೆ ಆಗತೇತಿ ಅಂತ ಎಲ್ಲೂ ಇಲ್ಲ. ಅಂತರರಾಷ್ಟ್ರೀಯ ಕಾನೂನುದಾಗೂ ಇಲ್ಲ, ಭಾರತದ ಕಾನೂನುದಾಗೂ ಇಲ್ಲ.

ಮಜಾ ಅಂದ್ರ ನ್ಯಾಯಾಧೀಶರು ಫೋಟೋ ತಗದವರಿಗೆ ಏನೂ ಅಂದಿಲ್ಲ. ಅದರ ಬಗ್ಗೆ ಟಿಪ್ಪಣಿ ಮಾಡಿದ ವಕೀಲರಿಗೆ ಮಾತ್ರ ಬರೋಬ್ಬರಿ ಬಿಗಿ ಹಚ್ಚಿದಾರು.

ಪ್ರಶಾಂತ್ ಭೂಷಣ ಅವರ ತಪ್ಪು ಇಲ್ಲ. ಇದರಿಂದ ನ್ಯಾಯಾಂಗ ನಿಂದನೆ ಆಗತದ ಅಂತ ಹೇಳ್ಲಿಕ್ಕೆ ಬರೋದಿಲ್ಲ, ಅಂತ ಹೇಳಿ ಹಿರಿಯ ವಕೀಲರಾದ ಮೋಹನ್ ಕಾತರಕಿ ಅವರೂ ಸೇರಿದಂತೆ ಅನೇಕರು ಹೇಳಿಕೆ ಕೊಟ್ಟಾರ.

ತಮ್ಮ ಕ್ರಿಯೆ- ಖಯಾಲಿಗಳನ್ನ ಜನರಿಗೆ ತೋರಿಸಿ ನಮ್ಮನ್ನ ನಗಿಪಾಟ್ಲಿಗೆ ಒಡ್ಡಿದರೂ ಅಂತ ನ್ಯಾಯಾಧೀಶರಿಗೆ ಅನ್ನಿಸಿರಬಹುದು. ಅವರಿಗೆ ಚೀನಾ ದೇಶದ ಒಂದು ಗಾದಿ ಮಾತು ನೆನಪು ಮಾಡಿಕೊಡೋಣ.

“ನೀವು ಮಾಡಿದ್ದು ಯಾರಿಗೂ ಗೊತ್ತು ಆಗಬಾರದು ಅಂತ ನಿಮಗ ಇದ್ದರ, ಅದನ್ನ ನೀವು ಮಾಡಾಕ ಹೋಗಬಾರದು”

ನಮ್ಮ ಘನ ಸರಕಾರ ಚೀನಾ ದೇಶದ ಮೊಬಾಯಿಲು ಯಾಪುಗಳ ಮ್ಯಾಲೆ ನಿರ್ಬಂಧ ಹೇರೇತಿ. ಅಲ್ಲಿನ ಗಾದಿ ಮಾತಿನ ಮ್ಯಾಲೆ ಏನು ನಿರ್ಬಂಧ ಇಲ್ಲಲ್ಲ!, ಅಲ್ಲವೇ, ಮನೋಲ್ಲಾಸಿನಿ?


ಇದನ್ನು ಓದಿ: ಸಿಡಿದೆದ್ದ ಆಶಾ ಕಾರ್ಯಕರ್ತೆಯರು: ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...