Homeಕರ್ನಾಟಕಮಾಜಿ ಸ್ಪೀಕರ್‌ ರಮೇಶ್ ಕುಮಾರ್‌ರವರಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ.. : ಪೂರ್ಣ ಪತ್ರ...

ಮಾಜಿ ಸ್ಪೀಕರ್‌ ರಮೇಶ್ ಕುಮಾರ್‌ರವರಿಂದ ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಪತ್ರ.. : ಪೂರ್ಣ ಪತ್ರ ಓದಿ

ಉಪಚುನಾವಣೆಗಳನ್ನು ಮೌಲ್ಯಾಧಾರಿತವಾಗಿ ಎದುರಿಸುತ್ತಿರೋ ಅಥವಾ ಕೇವಲ ಕ್ಷುಲ್ಲಕ ರಾಜಕೀಯ ಹೆಚ್ಚುಗಾರಿಕೆಗಾಗಿ ಮಾಡುವ ಮತ್ತೊಂದು ಅಪವಿತ್ರದ ಕದನವೋ ಎಂದು ಜನತೆಗೆ ತಿಳಿಸಬೇಕಾಗಿದೆ.

- Advertisement -
- Advertisement -

ಮಾಜಿ ಸ್ಪೀಕರ್‌ ಕೆ.ಆರ್. ರಮೇಶ್ ಕುಮಾರ್‌ರವರು ಉಪಚುನಾವಣೆಯನ್ನು ಕುರಿತು ಒಂದು ಗಂಭೀರವಾದ ಪತ್ರವನ್ನು ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ರವರಿಗೆ ಬರೆದಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿದ್ದೇವೆ ಓದಿ.

ಕಾಂಗ್ರೆಸ್ ಅಧ್ಯಕ್ಷರಿಗೆ ಒಂದು ಬಹಿರಂಗ ಮನವಿ

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಉಪಚುನಾವಣೆಗಳು ನಡೆಯುತ್ತಿರುವುದು ಗಮನಾರ್ಹ ವಿಷಯ. ಸಹಜವಾಗಿಯೇ ಉಪಚುನಾವಣೆಗಳು ಸಂವಿಧಾನಾತ್ಮಕವಾಗಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ನಡೆಯುತ್ತವೆ.

ಆದರೆ ಇಂದಿನ ಕರ್ನಾಟಕ ರಾಜಕೀಯ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಉಪಚುನಾವಣೆಗಳು ಸಂವಿಧಾನದ 10ನೇ ಷೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಉಲ್ಲಂಘನೆಯ ಕಾರಣದಿಂದಾಗಿ ಶಾಸನಾತ್ಮಕವಾಗಿ ಶಾಸನ ಸಭೆಯ ಸದಸ್ಯರಾಗಿ ಮುಂದುವರೆಯಲು ಅನರ್ಹಗೊಂಡ ಶಾಸಕ ಸ್ಥಾನಗಳನ್ನು ತುಂಬುವ ಉದ್ದೇಶದಿಂದ ಸಂಭವಿಸಿವೆ. ದೇಶದ ಸರ್ವೋಚ್ಛ ನ್ಯಾಯಾಲಯ ಅನರ್ಹತೆಗೆ ಒಳಪಟ್ಟ ಶಾಸಕರು ಸಲ್ಲಿಸಿದ ಮನವಿಯನ್ನು ಭಾಗಶಃ ಗೌರವಿಸಿದೆ. ಇದರ ಪರಿಣಾಮವಾಗಿ ,ಅನರ್ಹತೆಯನ್ನು ಸ್ಥಿರೀಕರಣಗೊಳಿಸಿ ಉಪ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅಂಶದ ಬಗ್ಗೆ ನಾನು ವ್ಯಾಖ್ಯಾನಿಸುವುದಿಲ್ಲ. ಆದರೆ, 15ನೇ ವಿಧಾನಸಭೆಗೆ ಆಯ್ಕೆಗೊಂಡ ಹಲವು ಶಾಸಕರು ಸಂವಿಧಾನ ವಿರೋಧಿ ಚಟುವಟಿಕೆಗಳ ಕಾರಣದಿಂದ ಅನರ್ಹಗೊಂಡ, ಅಂತಹ ಅನರ್ಹತೆಯಿಂದ ತೆರವುಗೊಂಡ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಪುನಃ ಅವರು ಸ್ಪರ್ಧಿಸಲು ತಾಂತ್ರಿಕವಾಗಿ ಕಾನೂನಿನಲ್ಲಿ ಅವಕಾಶವಿದ್ದರೂ ನೈತಿಕವಾಗಿ ಇದು ಪ್ರಜಾಪ್ರಭುತ್ವಕ್ಕೆ ಆಗುವ ಘೋರ ಅಪಮಾನ. ದೇಶದ ಸರ್ವೋಚ್ಛ ನ್ಯಾಯಾಲಯವು ಬಹುಶಃ ಅತ್ಯಂತ ಗಂಭೀರವಾಗಿ, ಪ್ರೌಢಿಮೆಯಿಂದ ಈ ವಿಷಯವನ್ನು ಇತ್ಯರ್ಥಗೊಳಿಸಲು ಎರಡು ಭಾಗಗಳಾಗಿ ವಿಂಗಡಿಸಿದೆ:

1-ಅಂತಹ ಅನರ್ಹರಿಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನತೆ ಸೂಕ್ತವಾದ ಪಾಠ ಕಲಿಸಬೇಕೆಂದು, ಅದರ ಮುಖೇನ ನಮ್ಮ ಮತದಾರರು ಅತ್ಯಂತ ಪ್ರಬುದ್ಧರು ಎಂದು ಜಗತ್ತಿಗೆ ತೋರಿಸಬೇಕಿದೆ.

2-ದೇಶದ ಚುಕ್ಕಾಣಿಯನ್ನು ಹಿಡಿದಿರುವ ಮಹಾನುಭಾವರು ಈ ದೇಶದಲ್ಲಿ ತ್ಯಾಗ ಬಲಿದಾನಗಳ ಹಿನ್ನೆಲೆಯಲ್ಲಿ ಗಳಿಸಿದ ಪ್ರಜಾಸತ್ತೆಯನ್ನು ಬಲಪಡಿಸಲು, ಸದೃಢಗೊಳಿಸಲು, ಈ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕೂಡಲೇ ಸಮಗ್ರ ತಿದ್ದುಪಡಿಗೆ ಒಳಪಡಿಸಿ, ನೈಜ ಪ್ರಜಾಪ್ರಭುತ್ವ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ತಮ್ಮ ಬದ್ಧತೆಯನ್ನು ರುಜುವಾತು ಮಾಡಬೇಕಾಗಿದೆ.

ಇದರ ಜೊತೆಜೊತೆಗೆ ತೀವ್ರಸ್ವರೂಪದ, ಪರಿಣಾಮಕಾರಿಯಾದ, ಸಾಮಾನ್ಯ ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಚುನಾವಣೆಯ ಸುಧಾರಣೆಗಳನ್ನೂ ತರಬೇಕಾಗಿದೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನಿಮ್ಮ ಮುಂದೆ ಇರುವ ಬಹಳ ದೊಡ್ಡ ಸವಾಲು, ಉಪಚುನಾವಣೆಗಳನ್ನು ಮೌಲ್ಯಾಧಾರಿತವಾಗಿ ಎದುರಿಸುತ್ತಿರೋ ಅಥವಾ ಕೇವಲ ಕ್ಷುಲ್ಲಕ ರಾಜಕೀಯ ಹೆಚ್ಚುಗಾರಿಕೆಗಾಗಿ ಮಾಡುವ ಮತ್ತೊಂದು ಅಪವಿತ್ರದ ಕದನವೋ ಎಂದು ಜನತೆಗೆ ತಿಳಿಸಬೇಕಾಗಿದೆ.

ಈ ಉಪಚುನಾವಣೆಗಳಲ್ಲಿ ಗೆಲುವು ಸೋಲುಗಳು, ಹೊಂದಾಣಿಕೆ, ಮರು ಹೊಂದಾಣಿಕೆಗಳು ಮುಖ್ಯವಲ್ಲ. ಪ್ರಜಾಸತ್ತೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನು ನಿರ್ಲಜ್ಜರಾಗಿ ಉಲ್ಲಂಘಿಸಿ ತಮ್ಮ ಸ್ವಾರ್ಥ ರಾಜಕಾರಣವನ್ನೇ ತ್ಯಾಗ ಎಂದು ಜನರಲ್ಲಿ ಭ್ರಮೆ ಹುಟ್ಟಿಸುವ ಅಪಾಯವೂ ನಮ್ಮನ್ನು ಕಾಡುತ್ತಿದೆ. ಜನತಾ ಪ್ರಾತಿನಿಧಿ ಕಾಯ್ದೆ ಅನ್ವಯ ಆಯ್ಕೆಗೊಂಡ ಪ್ರತಿನಿಧಿಗಳು ಜನರ ವಿಶ್ವಾಸವನ್ನೇ ಪಡೆಯದೆ, ಅಭಿಪ್ರಾಯವನ್ನು ಸಂಗ್ರಹಿಸದೆ ಕೆಲವು ಕೋಟಿ ರೂಪಾಯಿಗಳನ್ನು ಮತದಾರರ ಕಲ್ಯಾಣಕ್ಕೆಂದು ತರುವುದಾಗಿ ಘೋಷಿಸಿ, ಇದೊಂದು ತ್ಯಾಗದ ನಿರ್ಧಾರ ನಮಗೆ ಅನಿವಾರ್ಯವಾಯಿತು ಎಂದು ಹೇಳಲು ಹೊರಟಿರುವ ಇವರಿಗೆ, ಜನತೆಯಿಂದ ಸೂಕ್ತ ಉತ್ತರ ದೊರಕಿಸುವ ಪ್ರಯತ್ನ ಮಾಡಬೇಕಾಗಿದೆ.

ಈ ಉಪಚುನಾವಣೆಗಳ ಸೋಲು-ಗೆಲುವು ಯಾವುದೇ ಪಕ್ಷದ್ದಾಗಿರುವುದಿಲ್ಲ ಆದರೆ ಇದು ಪ್ರಜಾಸತ್ತೆಯ ಸೋಲು ಅಥವಾ ಗೆಲುವು ಆಗಿರುತ್ತದೆ. ಒಂದು ವೇಳೆ ಈ ಅನರ್ಹರು ಒಂದು ಕ್ಷೇತ್ರದಲ್ಲಿ ಜಯಗಳಿಸಿದರೂ ಅದು ತೋಳ್ಬಲಕ್ಕೆ, ಹಣದ ಬಲಕ್ಕೆ ಸಲ್ಲುವ ಜಯವೇ ಹೊರತು ಪ್ರಜಾಸತ್ತೆಗೆ ಸಂದ ಜಯವಲ್ಲ.

ಅಂದಿನ ಸಂವಿಧಾನ ಸಭೆಯ ತೀರ್ಪಿನಂತೆ ಹೊಸದಾಗಿ ಸ್ವಾತಂತ್ರ್ಯ ಪಡೆದುಕೊಂಡ ಭಾರತ ದೇಶವನ್ನು ಸಮಗ್ರ ಗಣರಾಜ್ಯ ರಾಷ್ಟ್ರವನ್ನಾಗಿ ಮಾರ್ಪಡಿಸಿ ಎಲ್ಲಾ ಜಾತಿ, ಮತ, ಧರ್ಮ, ಕುಲ, ಲಿಂಗಬೇಧವಿಲ್ಲದ, ಸಮಾನತೆಯನ್ನು ಗೌರವಿಸುವ, ಕರಡು ಸಂವಿಧಾನವನ್ನು ರೂಪಿಸುವ ಹೊಣೆಗಾರಿಕೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಇನ್ನಿತರ 13 ಜನ ಸದಸ್ಯರಿಗೆ ವಹಿಸಲಾಯಿತು. ಅಂದಿನ ಆ ಕರಡು ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಸೂಚಿಸಲಾಯಿತು. ಅಂದಿನ ಸಂವಿಧಾನ ಸಭೆಯಲ್ಲಿ, ಜಗತ್ತಿನ ಎಲ್ಲಾ ದೇಶಗಳ ಸಂವಿಧಾನಗಳ ಆಳ ಅಧ್ಯಯನ ಮಾಡಿದ್ದವರೂ, ಕಾನೂನು ಶಾಸ್ತ್ರದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಪಾಂಡಿತ್ಯವನ್ನು ಗಳಿಸಿದ್ದವರೂ, ಅರ್ಥಶಾಸ್ತ್ರದಲ್ಲೂ ಪರಿಣಿತಿಯನ್ನು ಪಡೆದಿದ್ದವರು, ನೋವು, ನರಳುವಿಕೆ, ಹಸಿವು, ಆಕ್ರಂದನಗಳ ಮಧ್ಯೆಯೇ ಭುಗಿಲೆದ್ದಿದ್ದ ಒಂದು ಜ್ವಾಲಾಮುಖಿ ಡಾ. ಬಿಆರ್ ಅಂಬೇಡ್ಕರ್ ಅವರು.

ಅಂದಿನ ಭಾರತದ ಜಾತಿ ವ್ಯವಸ್ಥೆಯ ಕ್ರೌರ್ಯದ ಪೂರ್ಣ ಒಳನೋಟ ತಮಗಿದ್ದು, ಮನೋಶಾಸ್ತ್ರದಲ್ಲಿಯೂ ಸಹ ಅಪಾರ ಜ್ಞಾನ ಹೊಂದಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರು ತಮಗೆ ವೈಯುಕ್ತಿಕವಾಗಿ ಇಷ್ಟವಿಲ್ಲದಿದ್ದರೂ ದೂರದೃಷ್ಟಿಯಿಂದ ಸಮಗ್ರತೆಯನ್ನು ಎತ್ತಿಹಿಡಿಯುವ ಕಾರಣದಿಂದ, ಚಕ್ರವರ್ತಿಗಳು ಆಳಿದ ಈ ಭೂಮಿಯಲ್ಲಿ ಕತ್ತಿ, ಕಿರೀಟ, ಸಿಂಹಾಸನಗಳ ಬದಲಿಗೆ ಸಾಮಾನ್ಯ ಪ್ರಜೆಯ ಅಭಿಪ್ರಾಯ ಪ್ರಮುಖ ಆಗಬೇಕು ಎಂದು, ವಯಸ್ಕ ಮತದಾನ ಪದ್ಧತಿಗೆ ಒಬ್ಬ ವ್ಯಕ್ತಿಗೆ ಒಂದೇ ಮತ ಎಂಬ ಸಿದ್ಧಾಂತದ ಮೇಲೆ, ತಮಗಿಲ್ಲವಾದ ಸಮಾನತೆ ಮುಂದಿನ ಪೀಳಿಗೆಗಾದರೂ ಲಭ್ಯವಾಗಲಿ ಎಂದು ತನ್ನ ಸಮಿತಿಯೊಳಗಿದ್ದ ಇತರ ಗೌರವಾನ್ವಿತ ಸದಸ್ಯರ ಅಭಿಪ್ರಾಯವನ್ನು ಪಡೆದು ನಮ್ಮ ಇಂದಿನ ಸಂವಿಧಾನಕ್ಕೆ ಅಂತಿಮ ಸ್ವರೂಪವನ್ನು ನೀಡಿದರು.

ಈ ಹಿನ್ನೆಲೆಯಲ್ಲಿ ನಾವು ಇವತ್ತು ಎದುರಿಸುತ್ತಿರುವ ಉಪಚುನಾವಣೆಗಳು, ಸಂವಿಧಾನದ ಪಾವಿತ್ರ್ಯತೆಗೆ ಒದಗಿರುವ ಸವಾಲು. ಆಯ್ಕೆ ಮಾಡಿ ಕಳಿಸಿದ ಮತದಾರನ ಆತ್ಮಸಾಕ್ಷಿಗೆ ಒಂದು ಸವಾಲು. ತೋಳ್ಬಲ, ಹಣದ ಬಲದಿಂದ ಸಂವಿಧಾನವನ್ನೇ ಬುಡಮೇಲು ಮಾಡಬಲ್ಲೆವು ಎಂದು ಕೊಬ್ಬಿದ ಮದಗಜಗಳಿಗೆ ಅಂಕುಶವನ್ನು ಹಾಕಬೇಕಾಗುವ ಸವಾಲು. ಭಾವನಾತ್ಮಕ ವಿಷಯಗಳಿಂದ ಜನಗಳನ್ನು ಕ್ಷಣಮಾತ್ರಕ್ಕೆ ಪ್ರಚೋದಿಸಿ ಜನತೆಯ ಮುಗ್ಧ ಮನಸ್ಸನ್ನು ಮತ್ತೊಂದೆಡೆ ಸೆಳೆದು ವಾಮಮಾರ್ಗದಲ್ಲಿ ರಾಜಕೀಯ ಅಧಿಕಾರವನ್ನು ಪಡೆಯಲು ಹೊಂಚು ಹಾಕುವ ಅವಕಾಶವಾದಿಗಳಿಗೆ ಇದು ಒಂದು ಸವಾಲು.

ಕಾಂಗ್ರೆಸ್ ಪಕ್ಷದ ವತಿಯಿಂದ, ಈ ಉಪಚುನಾವಣೆಗಳ ವೇದಿಕೆಗಳ ಮೇಲೆ ವೈಯುಕ್ತಿಕ ಆರೋಪಗಳು, ಚಾರಿತ್ರ್ಯವಧೆ ಮಾಡುವ ಚೇಷ್ಟೆಗಳು, ಅಸಂಬದ್ಧ ವಿಚಾರಗಳು, ಜಾತಿ ಮತ್ತು ಹಣದ ಪ್ರಾಬಲ್ಯದ ಲೆಕ್ಕಾಚಾರ ಹೀಗೆ ಇವೆಲ್ಲವನ್ನೂ ಬದಿಗಿಟ್ಟು, ಸಂವಿಧಾನಕ್ಕೆ ನಿಷ್ಠೆಯನ್ನು ವ್ಯಕ್ತಪಡಿಸಿ ವಿನಯ ವಿಧೇಯತೆಯಿಂದ ಜನರಲ್ಲಿಗೆ ಹೋಗಿ ಇದೊಂದು ಮೌಲ್ಯಾಧಾರಿತ ಹೋರಾಟ ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು ಅತ್ಯಗತ್ಯ.

ಸಾಮಾನ್ಯ ಜನ ಅಸಹ್ಯಪಡುವ, ಪದೇ ಪದೇ ನೋಡಿ ಬೇಸತ್ತು ಹೋಗಿರುವ ಭ್ರಷ್ಟರನ್ನೇ ಮುಖಂಡರು ಎಂಬ
ಭ್ರಮೆಯಿಂದ ಇವರು ವೇದಿಕೆಗಳ ಮೇಲೆ ವಿಜೃಂಭಿಸಿದರೆ ಬಹುಶಃ ದುಷ್ಪರಿಣಾಮಗಳನ್ನು ಎದುರಿಸಬೇಕಾದೀತು. ಸಾಮಾನ್ಯ ಜನರ ಮನೋಭಾವ, ಆಶೋತ್ತರಗಳನ್ನು ಗಮನಿಸಿ ಗೌರವಿಸಿದರೆ ಅದು ಸಹಜವಾಗಿಯೇ ಸಂವಿಧಾನಕ್ಕೆ ತೋರುವ ಗೌರವವಾಗುತ್ತದೆ.

ಕಾರಣಾಂತರಗಳಿಂದ ಒಂದು ಸಾಂವೈಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವ ಸ್ಥಾನದಲ್ಲಿದ್ದಾಗ ಈ ಇಕ್ಕಟ್ಟನ್ನು ನಾನು ಎದುರಿಸಬೇಕಾಯಿತು. ಯಾವುದೇ ರೀತಿಯ ಮತ್ಸರ, ದ್ವೇಷ, ಅಸೂಯೆ, ಪೂರ್ವಗ್ರಹಪೀಡಿತನಾಗದೆ ನಿಷ್ಕಳಂಕ ಮನಸ್ಸಿನಿಂದ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಈ ಘಟನೆಯ ನಂತರ, ಅಂದಿನಿಂದ ಇಂದಿನವರೆವಿಗೂ ಸಾಕಷ್ಟು ಮನೋವ್ಯಾಕುಲತೆಯನ್ನು ಅನುಭವಿಸಿದ್ದೇನೆ.

ಸದುದ್ದೇಶದಿಂದ ನಾನು ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ ಹಾಗೂ ಮಾಧ್ಯಮಗಳಿಗೂ ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಒಟ್ಟಾರೆ ಉದ್ದೇಶ ಡಿಸೆಂಬರ್ 5, 2019 ರಂದು ನಡೆಯುವ 15 ಉಪಚುನಾವಣೆಗಳು ಗುಣಾತ್ಮಕವಾಗಿ ಬೇರೆಯ ಸ್ವರೂಪ ಪಡೆಯುವಂತಾಗಲಿ ಹಾಗೂ ಮಾಮೂಲಿ ಚುನಾವಣೆಗಳಂತಾಗದಿರಲಿ ಎಂದು ನನ್ನ ಕಳಕಳಿ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವ ಸಂವಿಧಾನವನ್ನು ಜನರ ಧ್ವನಿಯಾಗಿಸುವ ಮಹತ್ತರ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ.

ಇಂತಿ
ಕೆ.ಆರ್ ರಮೇಶ್ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರಮೇಶ್ ಕುಮಾರ್ ಅವರ ಆಶಯ ಸರಿಯಾಗಿದೆ. ಈ ಉಪ ಚುನಾವಣೆಯಲ್ಲಿ, ಪಕ್ಷಾಂತರ ಮಾಡಿದವರೆಲ್ಲರೂ ಸೋಲಬೇಕು.

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...