Homeಪುಸ್ತಕ ವಿಮರ್ಶೆಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

ಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

- Advertisement -
- Advertisement -

ಕೆ. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿರುವ ಫ್ಯೋದೊರ್ ದಾಸ್ತೋವ್‌ಸ್ಕಿಯವರ ’ಕರಮಜೋವ್ ಸಹೋದರರು’ ಕಾದಂಬರಿಯ ಮೊದಲ ಅಧ್ಯಾಯ

ಕರಮಜೋವ್ ಕುಟುಂಬದ ಚರಿತ್ರೆ- ಫೈಡರ್ ಪಾವ್ಲೋವಿಚ್ ಕರಮಜೋವ್

ಅಲೆಕ್ಸಿ ಕರಮಜೋವ್, ಫೈಡರ್ ಪಾವ್ಲೋವಿಚ್ ಕರಮಜೋವ್‌ನ ಮೂರನೆ ಮಗ. ಈ ಫೈಡರ್, ನಮ್ಮ ಪ್ರದೇಶದ ಎಲ್ಲೆಲ್ಲೂ ತನ್ನದೇ ಆದ ವಿಶಿಷ್ಟವಾದ ಕಾರಣಗಳಿಗೋಸ್ಕರ ಪ್ರಚಲಿತನಾದ ಜಮೀನುದಾರ, ಮತ್ತು ಇಂದಿಗೆ ಹದಿಮೂರು ವರ್ಷಗಳ ಹಿಂದೆ ನಡೆದ ಅವನ ದುರ್ಮರಣದಿಂದಾಗಿ ಎಲ್ಲರ ನೆನಪಿನಲ್ಲೂ ಉಳಿದಿರುವ ವ್ಯಕ್ತಿ. ಈ ಘಟನೆಯ ಬಗ್ಗೆ ವಿವರವಾಗಿ ಮುಂದೆ ಪ್ರಸ್ತಾಪಿಸುತ್ತೇನೆ. ಸದಕ್ಕೆ, ಅವನು ಎಂದೂ ತನ್ನ ಜಮೀನಿನಲ್ಲಿ ಕಾಲಿಟ್ಟಿರಲಿಲ್ಲದಿದ್ದರೂ ಅವನನ್ನು ಜಮೀನುದಾರ ಅಂತಲೇ ಕರೆಯುತ್ತೇನೆ. ನಾವು ಆಗಾಗ್ಗೆ ಸಮಾಜದಲ್ಲಿ ಕಾಣುವಂತಹ ಈ ರೀತಿಯ ವಿಚಿತ್ರ ವ್ಯಕ್ತಿಗಳ ಜಾತಿಗೆ ಇವನೂ ಸೇರಿದ್ದಾನೆ. ಇವನಲ್ಲಿರುವ ವೈಚಿತ್ರ್ಯ ಏನೆಂದರೆ, ಇವನೊಬ್ಬ ಅಹಿತಕರವಾದ ದುಷ್ಟ ಮತ್ತು ಅವಿವೇಕದಿಂದ ಕೂಡಿದ ವ್ಯಕ್ತಿ.

ಇವನು ಎಷ್ಟೇ ಪ್ರಜ್ಞಾಶೂನ್ಯನಾಗಿದ್ದರೂ ತನ್ನ ಸ್ವಂತ ವಹಿವಾಟುಗಳನ್ನು ನಿಭಾಯಿಸುವ ಸಾಮರ್ಥ್ಯವುಳ್ಳವನಾಗಿದ್ದ. ಅವನಲ್ಲಿದ್ದ ಸಣ್ಣ ಜಮೀನನ್ನು ಬಿಟ್ಟರೆ, ಅವನ ಜೀವನ ಸೊನ್ನೆಯಿಂದಲೇ ಶುರುವಾಯಿತು. ಅವನು ಬೇರೆಯವರ ಔತಣಕೂಟಗಳಲ್ಲಿ, ಆಮಂತ್ರಣವಿರಲಿ ಇಲ್ಲದಿರಲಿ, ಯಾವುದೇ ಹಿಂಜರಿಕೆಯಿಲ್ಲದೆ ವಿನಮ್ರತೆಯಿಂದಲೇ ಭಾಗವಹಿಸುತ್ತಿದ್ದ. ಆದರೆ, ಅವನ ಸಾವಿನ ನಂತರ ಬಹಿರಂಗವಾದದ್ದು, ಅವನಲ್ಲಿ ಒಂದು ಲಕ್ಷ ರೂಬಲ್ಲುಗಳಷ್ಟು ನಗದು ಹಣವಿತ್ತೆಂಬುದು. ಅವನು ತನ್ನ ಇಡೀ ಜೀವನವನ್ನು ಒಬ್ಬ ಅಪ್ರಜ್ಞಾವಂತ ಮತ್ತು ಹಾಸ್ಯಾಸ್ಪದ ವ್ಯಕ್ತಿಯಾಗಿಯೇ ಸವೆಸಿದ. ಆದರೆ ಅವನು ಅತಿ ಮೂರ್ಖನಾಗಿರಲಿಲ್ಲ. ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿಗಳು ಸಾಕಷ್ಟು ಜಾಣರೂ ಬುದ್ಧಿವಂತರೂ ಆಗಿರುತ್ತಾರೆ.

ಅವನಿಗೆ ಎರಡು ಮದುವೆಗಳಾಗಿದ್ದು, ಎರಡೂ ಮದುವೆಗಳಿಂದ ಮೂರು ಗಂಡು ಮಕ್ಕಳಿದ್ದರು. ಮೊದಲನೇ ಹೆಂಡತಿಯ ಮಗ ಡಿಮಿಟ್ರಿ; ಇವಾನ್ ಮತ್ತು ಅಲೆಕ್ಸಿ ಎರಡನೇ ಹೆಂಡತಿಯ ಮಕ್ಕಳು. ಫೈಡರ್‌ನ ಮೊದಲನೇ ಹೆಂಡತಿ, ಅಡೆಲೈಡ ಇವಾನೊವ್ನ, ಶ್ರೀಮಂತ ಮತ್ತು ಪ್ರತಿಷ್ಠಿತ ವರ್ಗದ ಕುಟುಂಬದಿಂದ ಬಂದವಳು, ಮತ್ತು ಈ ಕುಟುಂಬ ಆ ಫಾಸಲೆಯ ಪ್ರತಿಷ್ಠಿತ ಜಮೀನುದಾರರಲ್ಲಿ ಒಂದು. ಅವರದು ಮಿಯುಸೋವ್ ಎಂಬ ಕುಟುಂಬ. ಈ ರೀತಿಯ ಐಶ್ವರ್ಯದ ವಾರಸುದಾರಳೂ ರೂಪವತಿಯೂ ಆದ, ಅಲ್ಲದೇ ಬುದ್ಧಿವಂತಳೂ ಆದ ಅಡೆಲೈಡ, ಇಂಥ ನಾಲಾಯಕ್ ಮನುಷ್ಯನನ್ನು ಹೇಗೆ ಮದುವೆಯಾದಳು ಅನ್ನುವ ವಿಸ್ಮಯವನ್ನು ನಾನು ವಿವರಿಸುವ ಗೋಜಿಗೆ ಹೋಗುವುದಿಲ್ಲ.

ಆದರೆ, ನನಗೊಬ್ಬಳು ಯುವತಿಯ ಬಗ್ಗೆ ತಿಳಿದಿದೆ. ಹಿಂದಿನ ಭಾವನಾತ್ಮಕತೆಯಲ್ಲಿ ವಿಹರಿಸುತ್ತಿದ್ದ ಯುವತಿಯರ ಪೀಳಿಗೆಗೆ ಸೇರಿದವಳು ಅವಳು ಮತ್ತು ಸ್ವಲ್ಪ ಸಮಯದ ನಂತರ ಒಬ್ಬ ಯುವಕನ ಜತೆಗೆ ನಿಗೂಢವಾಗಿ ನೆಲೆಸಿದ್ದ ಗಾಢಪ್ರೇಮದ ಕಾರಣಗಳಿಗೋಸ್ಕರ, ಅವನನ್ನು ಸುಲಭ ರೀತಿಯಲ್ಲಿ ವಿವಾಹವಾಗಬಹುದಾಗಿದ್ದರೂ, ಒಂದು ಮನೋಹರ ನದಿಯ ಬದಿಯಿದ್ದ ಶಿಖರವೊಂದರಿಂದ ಕೆಳಗೆ ಹಾರಿ ಅವರ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿಕೊಂಡಳು. ಈ ರೀತಿ ಎಸಗಿದ ಕೃತ್ಯ, ಬರಿಯ ಅವಳ ಚಂಚಲಚಿತ್ತವನ್ನು ತೃಪ್ತಿಗೊಳಿಸಲೋಸ್ಕರ ಮತ್ತು ಶೇಕ್ಸ್‌ಪಿಯರಿನ ಒಪೀಲಿಯಾ ಪಾತ್ರವನ್ನು ಅನುಕರಿಸುವುದಕ್ಕೋಸ್ಕರ. ಈ ಶಿಖರ ಮನೋಹರವಾದ ಮತ್ತು ದೃಶ್ಯ ವಿಹಂಗಮವಾಗಿಲ್ಲದೆ ಇದ್ದಿದ್ದರೆ ಮತ್ತು ನೀರಸ ನದಿಯ ದಡವಾಗಿದ್ದಿದ್ದರೆ ಈ ಆತ್ಮಹತ್ಯೆಯ ಘಟನೆ ನಡೆಯುತ್ತಿರಲಿಲ್ಲವೋ ಏನೋ! ಇದೊಂದು ನಡೆದ ಘಟನೆ ಮತ್ತು ಇಂಥ ಘಟನೆ ಕಳೆದ ಹಿಂದಿನ ಮೂರು ಪೀಳಿಗೆಗಳಲ್ಲೆಂದೂ ಪುನರಾವರ್ತನೆಯಾಗಿರಲಿಲ್ಲ.

ಅಡೆಲೈಡಳ ಈ ವಿವಾಹ ಒಂದು ರೀತಿಯಲ್ಲಿ, ಬೇರೆ ವ್ಯಕ್ತಿಗಳ ಅನಿಸಿಕೆಗಳ ಒಂದು ಪ್ರತಿಧ್ವನಿ ಎನ್ನಬಹುದು. ಅವಳು ಮಾನಸಿಕ ಸ್ವಾತಂತ್ರ್ಯದಿಂದ ವಂಚಿತಳಾದ ಕಾರಣ ಸಿಟ್ಟಿಗೆದ್ದು ಉದ್ರೇಕದಿಂದ ಕೈಗೊಂಡ ನಿರ್ಧಾರ ಅದು. ಅವಳು ಬಹುಶಃ, ಸ್ತ್ರೀಸ್ವಾತಂತ್ರ್ಯದ ಮಹತ್ವವನ್ನು ಎತ್ತಿ ಹಿಡಿಯುವುದಕ್ಕೋಸ್ಕರ, ಅಲ್ಲದೇ ವರ್ಗಭೇದ ಮತ್ತು ಅವಳ ಕುಟುಂಬದಲ್ಲಿನ ನಿರಂಕುಶತೆಯನ್ನು ಧಿಕ್ಕರಿಸುವುದಕ್ಕೋಸ್ಕರ ಈ ವಿವಾಹವಾದಳು ಅನ್ನಿಸುತ್ತದೆ. ಅನಿಶ್ಚಿತವಾದ ಕಲ್ಪನೆಯ ಲೋಕದಲ್ಲಿ ತೇಲಾಡುವ ಅವಳ ಮನಸ್ಥಿತಿ ಅವಳನ್ನು ಈ ಕೆಲಸಕ್ಕೆ ಪ್ರೇರೇಪಿಸಿರಬಹುದು.

ಈ ರೀತಿಯ ಉದಾತ್ತವಾದ ಅನಿಸಿಕೆಗಳ ಜತೆ, ತನ್ನ ಪರಾವಲಂಬಿ ಜೀವನ ಮತ್ತು ದುರುಳತನವಿದ್ದರೂ ಯಾವುದೋ ಒಂದು ತಾತ್ಕಾಲಿಕ ಕ್ಷಣದಲ್ಲಿ ಫೈಡರ್‌ನ ಮನೋಪ್ರವೃತ್ತಿ ಇವಳ ಜತೆ ಹೊಂದಿಕೊಂಡುಬಿಟ್ಟಿತ್ತೇನೊ? ಈ ಮದುವೆ ಹೆಚ್ಚು ರಸವತ್ತಾಗಿದ್ದು, ಅವರಿಬ್ಬರ ಪ್ರೇಮ ಪಲಾಯನದಿಂದ. ಅಡೆಲೈಡಳ ಅಭಿರುಚಿ ಈ ಪಲಾಯನಕ್ಕೆ ಪುಷ್ಟಿ ಕೊಟ್ಟಿತು. ಫೈಡರ್‌ನ ಅಂದಿನ ಹೀನಾಯ ಪರಿಸ್ಥಿತಿಯಲ್ಲಿ, ತನ್ನ ಬದುಕನ್ನು ರೂಪಿಸಿಕೊಳ್ಳಲು ಈ ಕೃತ್ಯ ಅವನಿಗೆ ಅತ್ಯವಶ್ಯಕವಾಗಿತ್ತು. ಸುಸಂಸ್ಕೃತ ಕುಟುಂಬದ ಜತೆಗೆ ಅವನ ನೆಂಟಸ್ತನ ಬೆಳೇಸಿ, ಅವನ ಮುಂದಿನ ಬದುಕಿಗೆ ಅತ್ಯಮೂಲ್ಯವಾದ ವರದಕ್ಷಿಣೆಯೇ ಅವನ ಈ ಮದುವೆಯ ಮೂಲೋದ್ದೇಶವಾಗಿತ್ತು. ಸ್ತ್ರೀಲಂಪಟ ಸ್ವಭಾವದ ಫೈಡರ್‌ಗೆ ಅಡೆಲೈಡಳ ಸೌಂದರ್ಯವೊಂದೇ ಆಕರ್ಷಣೆಯಾಗಿರಲಿಲ್ಲ.

ಈ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ತಮ್ಮ ಪ್ರೇಮಪಲಾಯನದ ನಂತರ, ಕ್ಷಣಮಾತ್ರದಲ್ಲಿ ಅಡೆಲೈಡಳಿಗೆ ತನ್ನ ಗಂಡನ ಬಗ್ಗೆ ತಿರಸ್ಕಾರವಲ್ಲದೇ ಬೇರೆ ಯಾವ ಭಾವನೆಗಳೂ ಇರಲಿಲ್ಲ. ಈ ಮದುವೆಯ ಯಶಸ್ಸಿನ ನಿಜವಾದ ಬಣ್ಣ ಶೀಘ್ರವಾಗಿ ಗೋಚರಿಸತೊಡಗಿತು. ಅಡೆಲೈಡಳ ಕುಟುಂಬದವರು ಸ್ವಲ್ಪ ಸಮಯದ ನಂತರ ಈ ಮದುವೆಯನ್ನು ಒಪ್ಪಿಕೊಂಡು, ಅಡೆಲೈಡಳ ಪಾಲಿನ ವರದಕ್ಷಿಣೆಯನ್ನು ಬೇರೆ ತೆಗೆದಿಟ್ಟರೂ ಕೂಡ ಈ ಗಂಡ-ಹೆಂಡಿರ ವೈವಾಹಿಕ ಜೀವನ ಎಡರುತೊಡರುಗಳಿಂದಲೇ ಕೂಡಿತ್ತು. ಅವರಿಬ್ಬರ ನಡುವೆ ನಿರಂತರ ಅಹಿತಕರ ಘಟನೆಗಳು ನಡೆಯುತ್ತಲೇ ಇದ್ದವು. ಅವನ ಹೆಂಡತಿ, ತರುಣಿ, ಅವನಿಗಿಂತಲೂ ಹೆಚ್ಚು ಧಾರಾಳಿ ಮತ್ತು ಘನತೆಯಿಂದ ಕೂಡಿದವಳಾಗಿದ್ದಳು.

ಅಡೆಲೈಡಳಿಗೆ ತಂದೆಯ ಮನೆಯಿಂದ ಸಂದಾಯವಾದ ಇಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಫೈಡರೇ ಲಪಟಾಯಿಸಿಬಿಟ್ಟಿದ್ದ. ಅವಳ ವರದಕ್ಷಿಣೆಯ ಭಾಗವಾದ ಒಂದು ಸಣ್ಣ ಹಳ್ಳಿ ಮತ್ತು ಒಂದು ಅಮೂಲ್ಯವಾದ ಮನೆಯನ್ನು ಮೋಸದಿಂದ ಹೊಡೆದುಕೊಳ್ಳಲು ಫೈಡರ್ ಹೊಂಚುಹಾಕುತ್ತಿದ್ದ. ಈ ಕೆಲಸದಲ್ಲಿ ಫೈಡರ್ ಬಹುಶಃ, ಅಡೆಲೈಡಳ ನೈತಿಕ ನಿಶ್ಯಕ್ತಿ ಮತ್ತು ಅವನ ಸಾನ್ನಿಧ್ಯದಿಂದ ದೂರ ಹೋಗುವ ಹಂಬಲಗಳ ಕಾರಣಗಳಿಂದ ಈ ಆಸ್ತಿಗಳನ್ನು ಹೊಡೆದುಕೊಳ್ಳುವಲ್ಲಿ ಸಫಲನಾಗುತ್ತಿದ್ದನೇನೋ, ಆದರೆ ಅಡೆಲೈಡಳ ಕುಟುಂಬದವರ ಮಧ್ಯಸ್ಥಿಕೆಯಿಂದ ಅದು ಅಸಾಧ್ಯವಾಯಿತು. ಇವರಿಬ್ಬರ ನಡುವೆ ಆಗಿಂದಾಗ್ಗೆ ಹೊಡೆದಾಟಗಳು ಆಗುತ್ತಲೇ ಇದ್ದವು. ವಿಚಿತ್ರವೇನೆಂದರೆ, ಫೈಡರ್ ಅಡೆಲೈಡಳನ್ನು ಹೊಡೆಯುತ್ತಿರಲಿಲ್ಲ, ಆದರೆ ಅಡೆಲೈಡಳೇ ಅವನಿಗೆ ಬಾರಿಸುತ್ತಿದ್ದಳು.

ಅಡೆಲೈಡ ಶಕ್ತಿವಂತ ಮತ್ತು ಮುಂಗೋಪಿ ಹೆಣ್ಣಾಗಿದ್ದರಿಂದ ಇದು ನಿಜವಿರಬಹುದು. ಕೊನೆಗೆ ಅಡೆಲೈಡ, ಒಬ್ಬ ಅನಾಥ ದೈವಶಾಸ್ತ್ರದ ವಿದ್ಯಾರ್ಥಿಯ ಜತೆ ಅಲ್ಲಿಂದ ಪಲಾಯನಗೈದಳು. ಜತೆಗೆ ಅವಳಿಗೆ ಹುಟ್ಟಿದ್ದ ಡಿಮಿಟ್ರಿ ಎಂಬ ಮಗುವನ್ನೂ ಅನಾಥನನ್ನಾಗಿ ಮಾಡಿ ಹೊರಟುಹೋಗಿದ್ದಳು. ನಂತರ ಫೈಡರ್ ತನ್ನ ಮನೆಯನ್ನು ವ್ಯಭಿಚಾರ ಕೇಂದ್ರವನ್ನಾಗಿ ಪರಿವರ್ತಿಸಿದ, ಮತ್ತು ಅವನು ಕುಡಿತ ವ್ಯಭಿಚಾರಗಳ ಬಲಿಪಶುವಾದ. ಮಧ್ಯೆ ಮಧ್ಯೆ ಇಡೀ ಪ್ರಾಂತ್ಯದ ಪ್ರದೇಶಗಳಿಗೆ ಹೋಗಿ ಅಡೆಲೈಡ ತನ್ನನ್ನು ಬಿಟ್ಟುಹೋದದ್ದರ ಬಗ್ಗೆ ಎಲ್ಲರ ಮುಂದೆ ಕಣ್ಣೀರಿಡುತ್ತಿದ್ದ. ಒಬ್ಬ ಸಂಭಾವಿತ ಗಂಡ, ತನ್ನ ವೈವಾಹಿಕ ಜೀವನದ ಬಗ್ಗೆ ಹೇಳಬಾರದಂತಹ ನಾಚಿಕೆಗೇಡಿನ ವಿಷಯಗಳನ್ನೆಲ್ಲ ಬಹಿರಂಗಪಡಿಸುತ್ತಿದ್ದ. ಅವನಿಗೆ ಆತ್ಮ ಸಂತೋಷವನ್ನುಂಟು ಮಾಡುತ್ತಿದ್ದ ಸಂಗತಿಯೆಂದರೆ, ಅವನೊಂದು ರೀತಿಯ ಘಾಸಿಗೊಂಡ ಪತಿಯೆಂಬ ಅವನ ಕಪಟನಾಟಕದ ಪಾತ್ರ.

“ನೀನೊಬ್ಬ, ದುಃಖಪಡುವ ಬದಲು, ನಿನ್ನ ಜೀವನದಲ್ಲಿ ಬಡ್ತಿ ಸಿಕ್ಕವನಂತೆ, ಸಂತೋಷ ಪಡುತ್ತಿದ್ದೀಯಲ್ಲ ಅಂತ ಜನ ಅವನನ್ನು ಅಪಹಾಸ್ಯ ಮಾಡುತ್ತಿದ್ದರು. ಅವಹೇಳನಕ್ಕೊಳಗಾದ ಪರಿಸ್ಥಿತಿಯನ್ನೂ ಲೆಕ್ಕಿಸದೆ ಅವನು ವಿದೂಷಕನ ರೀತಿ ವರ್ತಿಸುತ್ತಿದ್ದ.

ಕೊನೆಗೂ ಅವನ ಓಡಿಹೋದ ಹೆಂಡತಿ ಎಲ್ಲಿದ್ದಾಳೆ ಎಂಬ ಸುಳಿವು ಅವನಿಗೆ ಸಿಕ್ಕಿತು. ಆ ಪಾಪದ ಹೆಣ್ಣು ಪೀಟರ್ಸ್‌ಬರ್ಗಿಗೆ ದೈವಶಾಸ್ತ್ರದ ವಿದ್ಯಾರ್ಥಿಯ ಜತೆ ಹೋಗಿದ್ದಳು. ಅಲ್ಲಿ ಅವಳು ಸಂಪೂರ್ಣ ವಿಮೋಚನೆಗೆ ತನ್ನನ್ನು ತಾನೇ ಅರ್ಪಿಸಿಕೊಂಡಿದ್ದಳು. ಫೈಡರ್ ಕೂಡಲೇ ಪೀಟರ್ಸ್‌ಬರ್ಗಿಗೆ ಹೊರಡಲು ತರಾತುರಿ ನಡೆಸುತ್ತಿದ್ದ. ಆದರೆ ಅದು ಯಾವ ಕಾರಣಕ್ಕೆನ್ನುವುದು ಅವನಿಗೇ ತಿಳಿದಿರಲಿಲ್ಲ. ಅಲ್ಲಿಗೆ ಹೊರಡುವುದಕ್ಕೆ ತನ್ನಲ್ಲಿ ಧೈರ್ಯ ತುಂಬಿಕೊಳ್ಳುವ ಕಾರಣವನ್ನೊಡ್ಡಿ ಅತಿಯಾಗಿ ಕುಡಿಯಲಾರಂಭಿಸಿದ. ಅದೇ ಸಮಯದಲ್ಲೇ ಅವನ ಹೆಂಡತಿಯ ಕುಟುಂಬದವರಿಗೆ ಅಡೆಲೈಡಳ ಸಾವಿನ ಸುದ್ದಿ ಮುಟ್ಟಿತು. ಅವಳ ಸಾವಿನ ಕಾರಣಗಳ ಬಗ್ಗೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದವು.

ಕೆಲವು, ಅವಳು ಸಣ್ಣ ರೂಮಿನಲ್ಲಿ ಹಸಿವಿನಿಂದ ಅಸು ನೀಗಿದಳು ಎಂದೂ, ಮತ್ತೆ ಕೆಲವು ಟೈಫಾಯ್ಡಿನಿಂದ ಸತ್ತಳು ಎಂದು. ಫೈಡರ್ ಅವಳ ಸಾವಿನ ಸುದ್ದಿ ಕೇಳಿದಾಗ ಕುಡಿದಿದ್ದ. ಕೆಲವರು ಅವನು ಅದನ್ನು ಕೇಳಿದವನೇ ಬೀದಿಯಲ್ಲಿ ಓಡಿ ಸಂತೋಷದಿಂದ ಕುಣಿದಾಡಿದ ಎಂದೂ, ಇನ್ನು ಕೆಲವರು ಸಣ್ಣ ಮಗುವಿನ ರೀತಿ ಗೋಳಿಟ್ಟ ಎಂದೂ ಹೇಳುತ್ತಾರೆ. ಅವನ ಬಗ್ಗೆ ಅವನೇ ಹುಟ್ಟುಹಾಕಿದ್ದ ಅಸಹ್ಯದ ಭಾವನೆಗಳ ನಂತರವೂ, ಜನರು ಅವನ ಬಗ್ಗೆ ಮರುಗಿದರು. ಇಲ್ಲಿ ಎರಡೂ ಹೇಳಿಕೆಗಳು ನಿಜವಿರಬಹುದು. ಒಂದು ಅವನಿಗೆ ಸಿಕ್ಕ ವಿಮೋಚನೆಯಿಂದ ಸಂತೋಷ ಮತ್ತು ಇನ್ನೊಂದು ವಿಮೋಚನೆ ಕೊಟ್ಟವಳ ಬಗ್ಗೆ ಸಂತಾಪ. ವಾಡಿಕೆಯಲ್ಲಿರುವ ನಿಯಮವೇನೆಂದರೆ, ಅತ್ಯಂತ ಕೆಟ್ಟ ಮನುಷ್ಯನೂ ಕೂಡ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಅಮಾಯಕ ಮತ್ತು ಹೃದಯವಂತನಾಗಿರುತ್ತಾನೆ. ಇದರಲ್ಲಿ ನಾವೂ ಸೇರಿದ್ದೇವೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಚೈತನ್ಯಪೂರ್ಣವಾಗಿರಲು ಪ್ರೇರೇಪಿಸುವ ಓಶೋನ ‘ಭಾರತ ಎನ್ನೊಲವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...