’ಇಂಡಿಯಾ ಮೈ ಲವ್’ ಎಂಬ ಪುಸ್ತಕವು ಓಶೋ ಅವರ ಭಾಷಣಗಳನ್ನು ಆಧರಿಸಿ ಸಂಗ್ರಹಿಸಿರುವ ಕೃತಿ. ಧಾರ್ಮಿಕ ಡಾಂಭಿಕತನ ಮತ್ತು ತತ್ವಶಾಸ್ತ್ರಜ್ಞರ, ಪಂಡಿತರ ಆಷಾಡಭೂತಿತನಗಳನ್ನು ಬಯಲಿಗೆಳೆದ ಓಶೋ, ಪ್ರತಿಪಾದಿಸಿದ್ದು ಆಧ್ಯಾತ್ಮಿಕತೆ ಎಂಬುದು ಸರಳ, ನೇರ ಮತ್ತು ಮುಕ್ತ ಎಂಬುದನ್ನು. ಆದರೆ ಅದನ್ನು ಕಠಿಣಗೊಳಿಸಿ ತಮ್ಮನ್ನು ಸುಭಗರೆನಿಸಿಕೊಂಡು ಸಾಮಾನ್ಯರನ್ನು ಶೋಷಣೆ ಮಾಡಿದವರ ಬಗ್ಗೆ ಓಶೋ ಬಹಳ ಆಕ್ರೋಶ ಹೊಂದಿದ್ದರು.
ನಮ್ಮ ಭಾರತದ ಆಧ್ಯಾತ್ಮಿಕ ಪರಂಪರೆಯು ಸರಳವೂ, ನೇರವೂ ಮತ್ತು ಮುಕ್ತವೂ ಆಗಿದ್ದು ಪಂಡಿತರ ದೊರೆತನದಲ್ಲಿ ಸಾಮಾನ್ಯರಿಗೆ ನಿಲುಕಲಾರದಂತಹ ಹೊರೆಯೇನಾಗಿರಲಿಲ್ಲ. ಅದನ್ನೇ ಭಾರತ ಎನ್ನೊಲವು ಕೃತಿಯಲ್ಲಿ ಗಮನಿಸಿರುವುದು. ನನ್ನ ಪ್ರಿಯ ಭಾರತ ಎಂದು ಕನ್ನಡದಲ್ಲಿ ಅನುವಾದವಾಗಿದೆ. ಆದರೆ, ಅದು ಮೈ ಡಿಯರ್ ಇಂಡಿಯಾ ಎಂಬ ಅರ್ಥದಲ್ಲಿ ನೋಡುವುದಕ್ಕಿಂತ ಭಾರತವೇ ತನ್ನ ಒಲವು ಎಂಬ ಅರ್ಥದಲ್ಲಿ ಗಮನಿಸುವುದು ಸೂಕ್ತವಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ.
ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಪ್ರೇಮ ಎಂಬುದರ ರೂಪಕವಾಗಿ ಓಶೋ ಮನಗಾಣಿಸಲು ಯತ್ನಿಸುತ್ತಾರೆ. ಪ್ರೇಮ ಮತ್ತು ಆಧ್ಯಾತ್ಮಿಕವೆಂಬುದು ಸಮನಾರ್ಥಕ ಪದಗಳು. ಅಥವಾ ಒಂದೇ ನಾಣ್ಯದ ಎರಡು ಮುಖಗಳು. ಆ ನಾಣ್ಯವಾದರೂ ಯಾವುದು? ಜೀವನ. ಜೀವನಕ್ಕೆ ಮಿಗಿಲಾದುದು ಜೀವಕ್ಕೆ ಯಾವುದೂ ಇಲ್ಲ. ಇನ್ನೂ ಸೂಕ್ಷ್ಮವಾಗಿ ಮತ್ತು ಸ್ಥೂಲವಾಗಿ ನೋಡಿದರೆ, ಜೀವ ಇಲ್ಲದೇ ಇರುವುದೂ ಕೂಡಾ ಅಸ್ತಿತ್ವದಲ್ಲಿ ತಮ್ಮ ಇರುವಿಕೆಯ ತರಂಗದಲ್ಲಿ ಇರುತ್ತವೆ. ಸ್ಪಂದಿಸುತ್ತಿರುತ್ತವೆ. ಹಾಗಾಗಿ ವಸ್ತುಗಳು, ವಿಷಯಗಳು, ಪ್ರಾಣಿಗಳು, ಮನುಷ್ಯರು, ಒಟ್ಟಿನಲ್ಲಿ ಎಲ್ಲಾ ಭೂತಗಳೂ ಕೂಡಾ ಈ ಅಸ್ತಿತ್ವದಲ್ಲಿ ತಮ್ಮದೇ ಇರುವಿಕೆಯ ಮೌಲ್ಯವನ್ನು ಹೊಂದಿವೆ. ಹಾಗೂ ಅದನ್ನು ಗುರುತಿಸುವ, ಗೌರವಿಸುವ, ಸಮ್ಮತಿಸುವ ಯಾವನೇ ಆಗಲಿ ಅವನು ಪ್ರೇಮಿಯಾಗುತ್ತಾನೆ. ಪ್ರೇಮಿಯೇ ಆಧ್ಯಾತ್ಮಿಕ ವ್ಯಕ್ತಿ.
ಈ ಪ್ರೇಮಿಯು ರಾಜನಾಗಿರಬಹುದು, ಭಿಕ್ಷುಕನಾಗಿರಬಹುದು, ಹೆಣ್ಣಾಗಿರಬಹುದು, ಗಂಡಾಗಿರಬಹುದು, ಬುದ್ಧಿವಂತನಾಗಿರಬಹುದು, ಮುಗ್ಧನೋ, ಮೂರ್ಖನೋ, ಯೋಧನೋ, ಕಲಾವಿದನೋ, ಪಂಡಿತನೋ ಏನೋ ಆಗಿರಬಹುದು. ಅಥವಾ ಏನೂ ಆಗಿಲ್ಲದಿರಬಹುದು. ಆದರೆ ಅವನು ಪ್ರೇಮಿಯಾಗಿರುತ್ತಾನೆ. ತಾನು ಪ್ರೀತಿಸುತ್ತಿದ್ದೇನೆ ಎಂಬ ಬೌದ್ಧಿಕ ಅರಿವಿಲ್ಲದೇ ಉಸಿರಾಟದಷ್ಟೇ ಸಹಜವಾಗಿ ಪ್ರೇಮವನ್ನು ಹೊಂದಿರುತ್ತಾನೆ. ಪ್ರೇಮವು ಅವನ ಸಹಜವಾದ ಮತ್ತು ಜೀವಂತಿಕೆಯ ಸ್ವಭಾವ ಅಥವಾ ಗುಣವಾಗಿರುತ್ತದೆ. ಇಂತಹ ಗುಣ ಲಕ್ಷಣಗಳನ್ನು ನಿರೂಪಿಸುವ ಅನೇಕಾನೇಕ ಸಂಗತಿಗಳು ಭಾರತ ಎನ್ನೊಲವು ಕೃತಿಯಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ.
ಭಾರತವೆಂದರದು ಭೌಗೋಳಿಕವಾಗಿ ನೆಲದ ಭಾಗವಲ್ಲ. ಅದೊಂದು ಆಧ್ಯಾತ್ಮಿಕ ಅಥವಾ ಪ್ರೇಮದ ಪರಂಪರೆಯಿಂದ ಸದಾ ಸ್ಪಂದಿಸುತ್ತಿರುವ ಕ್ಷೇತ್ರವನ್ನಾಗಿ ಗುರುತಿಸಲು ಬೇಕಾದ ಅಂಶಗಳನ್ನು ಓಶೋ ನಮ್ಮ ಗಮನಕ್ಕೆ ತಂದು, ಭಾರತದ ಈ ಪ್ರೇಮದ ಪರಂಪರೆಯಿಂದ ಒಬ್ಬ ವಿನಯ ಮತ್ತು ಆನಂದದಿಂದ ಹಗುರತನವನ್ನು ಅನುಭವಿಸಲು ಪ್ರೇರೇಪಿಸುತ್ತಾರೆ.
ಇಡೀ ಜಗತ್ತು ಕಂಡಿರುವ ಮುದವಾದ ಪ್ರೇಮದ ಕನಸನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿರುವ ಭಾರತ ಅನೇಕಾನೇಕಾ ಬುದ್ಧರನ್ನು ಹೆತ್ತಿದೆ ಮತ್ತು ಮತ್ತಷ್ಟು ಮಗದಷ್ಟು ಹೆರಲು ಫಲವತ್ತಾಗಿದೆ. ನಮ್ಮ ವಿಸ್ಮೃತಿಯಲ್ಲಿ ಕಳೆದುಹೋಗಿರುವ ಆ ಚೈತನ್ಯವನ್ನು ನಮ್ಮ ಸ್ಮರಣೆಗೆ ತಂದು ನಾವು ಎಂತಹ ಚೈತನ್ಯಭರಿತರು, ಪ್ರೇಮಸ್ವರೂಪರು ಎಂದು ಮನವರಿಕೆ ಮಾಡಿ ನಮ್ಮ ಬದುಕನ್ನು ಆನಂದಗೊಳಿಸಿಕೊಳ್ಳಲು ಈ ಕೃತಿಯಲ್ಲಿ ಓಶೋ ಪ್ರೇರೇಪಿಸುತ್ತಾರೆ.
ಪ್ರಜ್ಞೆ ಅಥವಾ ಎಚ್ಚರವಾಗಿರುವ ಸ್ಥಿತಿಯಾದ ಧ್ಯಾನದ ಮುಖೇನ ಮೌನವನ್ನು ಕಂಡುಕೊಳ್ಳುವುದು ಒಂದು ಮುಖ್ಯವಾದ ಅಭ್ಯಾಸ. ಧ್ಯಾನವೆಂದರೆ ಒಂದು ಇರುವಿಕೆಯ ಸ್ಥಿತಿಯೇ ಹೊರತು, ಮಾಡುವುದೋ, ಮೈಮರೆಯುವುದೋ ಅಥವಾ ಯಾವುದೋ ಧಾರ್ಮಿಕ ಆಚರಣೆಯ ಭಾಗವೋ ಅಲ್ಲ. ಅಲ್ಲಿ ಯಾವ ಪ್ರತಿಮೆಯಿರಲಿ ಯಾವ ಸಾಕ್ಷಾತ್ಕಾರದ ಆಸೆ ಅಥವಾ ದೈವಾನುಗ್ರಹದ ವಾಂಛೆಯೂ ಬೇಕಾಗಿಲ್ಲ.
ಇಡೀ ಭಾರತದ ಆಧ್ಯಾತ್ಮಿಕ ಪರಂಪರೆಯೇ ಅಹಿಂಸೆಯ ಪರಂಪರೆ. ಭಾರತವೆಂಬುದು ಒಂದು ಸಂಪೂರ್ಣ ಹೆಣ್ಣು. ಅದರಲ್ಲೂ ತಾಯಿ. ಅವಳು ತನ್ನ ಮೌನದ ಹಾಡನ್ನು ಎಲ್ಲೆಡೆಯೂ ಕೇಳಿಸುತ್ತಾಳೆ. ಕೇಳಿರುವ ಮಕ್ಕಳು ಆನಂದದ ಸೂತ್ರಗಳನ್ನಾಗಿ ಎಲ್ಲೆಲ್ಲೋ ದಾಖಲಿಸಿದ್ದಾರೆ. ಸಾವಿರಾರು ವರ್ಷಗಳಿಂದ ನಾನಾ ರೀತಿಗಳಲ್ಲಿ ದಾಖಲಿಸಿರುವ ಆ ಯೋಗಿಗಳು, ದಾರ್ಶನಿಕರು ಒಂದರ್ಥದಲ್ಲಿ ಸಹಜ ಮನುಷ್ಯರು. ಎಂಥಾ ಕಗ್ಗತ್ತಲಿನಲ್ಲಿಯೂ ಕಾಣಲಾಗುವಂತೆ ಹೊಂಬಣ್ಣ ಬೆಳಕಿನ ಹೆಜ್ಜೆಗಳನ್ನು ಬಿಟ್ಟುಹೋಗಿದ್ದಾರೆ. ಆ ಹೆಜ್ಜೆಗಳೋ ತಮ್ಮನ್ನು ಅನುಸರಿಸಲು ಕರೆಯುವುದಿಲ್ಲ. ಆದರೆ ಅದರಂತೆ ಮತ್ತಷ್ಟು ಹೆಜ್ಜೆಗಳನ್ನು ಹೊಸತಾಗಿ ರೂಪಿಸಲು ಕರೆ ನೀಡುವವು. ಅದರಲ್ಲೂ ಮುಖ್ಯವಾಗಿ ಅದೊಂದು ಕಲೆಗಾರಿಕೆ ಮತ್ತು ಕೌಶಲ್ಯವಿದೆ ಎಂಬುದನ್ನು ನಿರೂಪಿಸುವವು. ಮಿಕ್ಕದ್ದು ನಮಗೆ ಬಿಟ್ಟದ್ದು.
ಅಹಮಿಕೆಯ ಆರ್ಭಟವನ್ನು ಅರಿತವನು ತಾನೇ ತಾನಾಗಿ ಶರಣಾನಾಗುವನು. ತನ್ನ ಹಿನ್ನೆಲೆಯ ಧರ್ಮ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿ ಯಾವುದೇ ಇರಲಿ, ಅವನು ಪ್ರೇಮಿಯಾಗುವನು, ಯೋಗಿಯಾಗುವನು, ಸೂಫಿಯಾಗುವನು, ಸಿದ್ಧನಾಗುವನು, ಬುದ್ಧನಾಗುವನು. ಇವರೆಲ್ಲರ ನೆಲವೇ ಭಾರತ.
ಕಂಡಿರುವಷ್ಟು, ಕಾಣುತ್ತಿರುವಷ್ಟೇನೆಲ್ಲಾ ಇವೆಯೋ ಅವೆಲ್ಲದರ ಆಚೆಯ ವಿಶ್ವದ ಕನಸು ಭಾರತದ ಗರ್ಭದಲ್ಲಿ ಬೀಜ ಬಿತ್ತಿದೆ. ಆ ಕಸುವನ್ನು ಅನೇಕಾನೇಕ ಯೋಗಿಗಳು, ಪ್ರೇಮಿಗಳು, ದಾರ್ಶನಿಕರು ರಹಸ್ಯವೆಂದು ಕರೆದಿದ್ದಾರೆ. ಅದನ್ನು ಅನುಭವಿಸಿ ತಮ್ಮ ಅನುಭಾವದ ಕಂಪನವನ್ನು ಈ ಮಣ್ಣಿಗೆ ಬೆರೆಸಿದ್ದಾರೆ. ಹಾಗಾಗಿ ಈ ಮಣ್ಣು ಭೂಮಿಯ ಸಾಧಾರಣ ಮಣ್ಣಾಗದೇ ಜೀವನ ಪ್ರೀತಿಯ, ಆಧ್ಯಾತ್ಮಿಕ ಅನುಭಾವದ ತರಂಗಗಳನ್ನು ಹೊಂದಿದೆ. ಹಾಗಂತ ಮುಟ್ಟಿದ ತಕ್ಷಣ ಕರೆಂಟ್ ಹೊಡೆದಂತೆ ವಿದ್ಯುಚ್ಛಕ್ತಿಯ ತರಂಗವೇನಲ್ಲ ಇದು. ಸುಪ್ತಾವಸ್ಥೆಯಲ್ಲಿ ತನ್ನ ಪಾಡಿಗೆ ತಾನಿರುವ ಚೈತನ್ಯವಿದು.
ಅದಕ್ಕೆ ತೆರೆದುಕೊಳ್ಳುವ ಹೊಣೆಗಾರಿಕೆಯನ್ನು ತಾನೇ ಹೊತ್ತುಕೊಳ್ಳಬೇಕು. ತನ್ನ ಮನಸ್ಸಿನ ಚಲನವಲನಗಳನ್ನು ಗಮನಿಸುತ್ತಾ, ತನ್ನ ತಾನು ನೋಡಿಕೊಳ್ಳುತ್ತಾ, ತನ್ನ ಗುಣ ಅವಗುಣ, ವರ್ತನೆ ಪ್ರತಿವರ್ತನೆಗಳ ದಾಂಧಲೆಗಳನ್ನು ಅರಿತುಕೊಳ್ಳುತ್ತಾ ಯಾವನು ಅಥವಾ ಯಾವಳು ಆತ್ಮಾವಲೋಕನ ಮಾಡಿಕೊಳ್ಳಲು ತೊಡಗುತ್ತಾರೆಯೋ ಆ ಗಳಿಗೆಯಿಂದಲೇ ಆತ್ಮಾನಂದ ಜಾಗೃತವಾಗುತ್ತದೆ. ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಅದಕ್ಕೆ ವಿಶ್ವದ ಬೇರಾವ ಕ್ಷೇತ್ರಕ್ಕಿಂತಲೂ ಭಾರತವು ಹೇಗೆ ಪೂರಕವಾಗಿದೆ ಎಂಬುದನ್ನೇ ಸಾಕ್ಷಿಗಳ ಮತ್ತು ದಾಖಲೆಗಳ ಸಮೇತ ಓಶೋ ವಿವರಿಸಲು ಯತ್ನಿಸುತ್ತಾರೆ.
ಒಟ್ಟಾರೆ ಭಾರತದ ಪ್ರೇಮ ಮತ್ತು ಆಧ್ಯಾತ್ಮದ ಸುವರ್ಣ ಗತಕಾಲವು ಸತ್ತ ಸಮಯವಾಗಿರದೇ ಪ್ರಸ್ತುತದಲ್ಲಿಯೂ ಚೈತನ್ಯಪೂರ್ಣವಾಗಿರಲು ಪ್ರೇರೇಪಿಸಲು ಈ ಪುಸ್ತಕ ಇಂಡಿಯಾ ಮೈ ಲವ್.
ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?
