Homeಪುಸ್ತಕ ವಿಮರ್ಶೆಭ್ರಮೆ ಮತ್ತು ವಾಸ್ತವಗಳ ನಡುವೆ ಪುಸ್ತಕದ ಆಯ್ದ ಭಾಗ; ಯು.ಜಿ.ಕೃಷ್ಣಮೂರ್ತಿ ರಮಣರನ್ನು ಭೇಟಿಯಾದುದು

ಭ್ರಮೆ ಮತ್ತು ವಾಸ್ತವಗಳ ನಡುವೆ ಪುಸ್ತಕದ ಆಯ್ದ ಭಾಗ; ಯು.ಜಿ.ಕೃಷ್ಣಮೂರ್ತಿ ರಮಣರನ್ನು ಭೇಟಿಯಾದುದು

- Advertisement -
- Advertisement -

1939ರಲ್ಲಿ ಇದೇ ಕೋಣೆಯಲ್ಲೆಲ್ಲೋ ಕುಳಿತು ರಮಣರಿಗೆ ಯು.ಜಿ.ಕೃಷ್ಣಮೂರ್ತಿಯು ಕೇಳಿದ ಕೆಲವು ಆಧ್ಯಾತ್ಮಿಕ ಪ್ರಶ್ನೆಗಳು ಇಂದು ದಂತಕಥೆಯಂತೆ ಚಾಲ್ತಿಯಲ್ಲಿವೆ. ಆಗಲೇ ಅನೇಕ ವರ್ಷಗಳ ಸಾಧನೆ, ಧ್ಯಾನ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಪಡೆದಿದ್ದ ಯುಜಿಗೆ ಮೂಲಭೂತವಾಗಿ ತನ್ನಲ್ಲೇನೂ ಬದಲಾವಣೆ ಆಗಿಲ್ಲದಿರುವುದು ನೋವಿನ ಸಂಗತಿಯಾಗಿತ್ತು. ಎಲ್ಲಾ ಬಗೆಯ ಆಧ್ಯಾತ್ಮ ಸಾಧನೆಗಳ, ಮಾರ್ಗಗಳ ಬಗೆಗೆ ಅನುಮಾನ ಹೊಂದಿದ್ದ ಯುಜಿ ಒಂದು ಬಗೆಯ ನಾಸ್ತಿಕನಾಗಿ ಪರಿವರ್ತಿತರಾಗಿದ್ದರು.

ಆಗ ರಮಣರಿಗೆ 60 ವರ್ಷ, ಯುಜಿಗೆ 21 ವರ್ಷ ವಯಸ್ಸು. ಯುಜಿ ರಮಣರನ್ನು ಭೇಟಿಯಾದ ದಿನ ರಮಣರು ಇದೇ ಮಂಚದ ಮೇಲೆ ತಮ್ಮ ಕಾಲುಗಳನ್ನು ಮಡಚಿಕೊಂಡು ಕುಳಿತಿದ್ದರು. ಸೊಂಟದ ಮೇಲಿನ ತುಂಡು ಬಟ್ಟೆ ಬಿಟ್ಟರೆ, ಅವರ ದೇಹದ ಮೇಲೆ ಬೇರಾವುದೇ ಬಟ್ಟೆಗಳಿರಲಿಲ್ಲ. ಕ್ಷೌರ ಮಾಡಿಸಿದ ಬಿಳಿದಾದ ಕೂದಲುಗಳ ತಲೆ, ಬಿಳಿದಾದ ಕುರುಚಲು ಗಡ್ಡ, ವಿಶಾಲವಾದ ಕಿಟಕಿಯಿಂದ ಬರುತ್ತಿದ್ದ ಬಿಸಿಲಿಗೆ ಹೊಳೆಯುವ ತಾಮ್ರದ ಮೈಬಣ್ಣ. ತೊಡೆಗಳ ಮೇಲೆ ಈಳಿಗೆ ಮಣೆ ಇರಿಸಿಕೊಂಡು ನಿಧಾನಕ್ಕೆ ತರಕಾರಿಯನ್ನು ಹೆಚ್ಚುತ್ತಿದ್ದರು ರಮಣರು. ಆಗಾಗ ಕತ್ತೆತ್ತಿ ಕಿಟಕಿಯ ಹೊರಗೆ ಕಾಣುವ ಹಸಿರು ಬಯಲ ಕಡೆಗೆ ನಿಟ್ಟಿಸುತ್ತಾ, ಸುತ್ತಲೂ ಸುಮ್ಮನೊಮ್ಮೆ ನೋಡುತ್ತಾ ತಮ್ಮ ಕೆಲಸದಲ್ಲಿ ತಾವು ಮಗ್ನರಾಗಿದ್ದರು. ಅಲ್ಲಿದ್ದ ಇತರ ಎಲ್ಲರೂ ಗಾಢವಾದ ಮೌನದಲ್ಲಿದ್ದು, ಈ ಶಾಂತಸಾಗರದಲ್ಲಿ ಧ್ಯಾನಸ್ಥರಾಗಿರುವುದೇ ಧನ್ಯತೆ ಎಂಬಂತೆ ಕುಳಿತಿದ್ದರು.

ಕಲ್ಲಿನ ನೆಲದ ಮೇಲೆ ಕುಳಿತ ಯು.ಜಿ ಕೃಷ್ಣಮೂರ್ತಿಯ ಮನಸಿನಲ್ಲಿ ’ಇವರು ನನಗೆ ಹೇಗೆ ಸಹಾಯ ಮಾಡಬಲ್ಲರು’ ಎಂಬ ಆಲೋಚನೆ ಹಾಗೆಯೇ ಹಾದು ಹೋಗುತ್ತಿತ್ತು. ಕೊನೆಗೊಮ್ಮೆ ಸಂತ ರಮಣರು ತಲೆಯೆತ್ತಿ ಇವರನ್ನು ನೋಡಿದರು. ಇಬ್ಬರ ಕಣ್ಣುಗಳು ಕೆಲಕ್ಷಣ ಸಂಧಿಸಿದವು. ಯು.ಜಿ ಕೃಷ್ಣಮೂರ್ತಿಯು ಕೇಳಿದರು “ಮೋಕ್ಷ ಅನ್ನುವುದು ಇದೆಯಾ?” ರಮಣರ ಉತ್ತರವು ಸಕಾರಾತ್ಮಕವಾಗಿತ್ತು.

“ಕೆಲವೊಮ್ಮೆ ನಾವು ಸ್ವತಂತ್ರರೂ ಮತ್ತೆ ಕೆಲವೊಮ್ಮೆ ಬಂಧಿಗಳೂ ಆಗಿರಲು ಸಾಧ್ಯವೇ?”

“ಒಂದು, ನೀವು ಸ್ವತಂತ್ರರಾಗಿರಬಹುದು ಅಥವಾ ನೀವು ಎಂದೆಂದಿಗೂ ಸ್ವತಂತ್ರರಾಗಲು ಸಾಧ್ಯವಿಲ್ಲ”

“ಇದರಲ್ಲೇನಾದರೂ ಹಂತಗಳಿವೆಯಾ?”

“ಇಲ್ಲ, ಯಾವುದೇ ಹಂತಗಳಿಲ್ಲ, ಒಂದೋ ನೀವಲ್ಲಿ ತಲುಪಿರುತ್ತೀರಿ, ಇಲ್ಲ ತಲುಪಿರುವುದಿಲ್ಲ. ಅಷ್ಟೇ”

“ನೀವು ಅದನ್ನು ನನಗೆ ಕೊಡಬಹುದೇ?”

“ನಾನು ಕೊಡಬಲ್ಲೆ, ಆದರೆ ನೀನು ಪಡೆದುಕೊಳ್ಳಬಲ್ಲೆಯಾ?”2

“ನೀನು ಪಡೆದುಕೊಳ್ಳಬಲ್ಲೆಯಾ?” ಹೀಗೆ ಹಿಂದೆಂದೂ, ಯಾವ ಗುರುವೂ ಉತ್ತರಿಸಿರಲಿಲ್ಲ. ಈ ಮರುಪ್ರಶ್ನೆಯು ಯುಜಿಗೆ ಸಿಡಿಲಿನಂತೆ ಅಪ್ಪಳಿಸಿತು. ಹಿಂದೆ ಯುಜಿ ಭೇಟಿ ಮಾಡಿದ್ದ ಇತರೆ ಗುರುಗಳೆಲ್ಲಾ, ಇನ್ನಷ್ಟು ಕಾಲ ಗಾಢ ಸಾಧನೆ ಮಾಡಿದ ನಂತರ ಮುಕ್ತಿ ಸಿಗಬಹುದೆಂದು ನುಡಿದಿದ್ದರು. ಇದುವರೆಗೂ ಯುಜಿ ಅನೇಕ ವಿಧದ ಕಠಿಣತಮ ಸಾಧನೆಗಳಲ್ಲಿ ತೊಡಗಿಸಿಕೊಂಡಿದ್ದು, ಕೆಲವು ಆಧ್ಯಾತ್ಮಿಕ ಅವಸ್ಥೆಗಳನ್ನೂ ಅನುಭವಿಸಿದ್ದರು.

ಆದರೂ ಅನೇಕ ಪ್ರಶ್ನೆಗಳು, ಅನುಮಾನಗಳು ಹಾಗೆಯೇ ಉಳಿದಿದ್ದವು. ರಮಣರು ಕೊಟ್ಟ ಉತ್ತರದಿಂದ ಯುಜಿಗೆ ತನ್ನ ಪ್ರಶ್ನೆಗೆ ತಾನೇ ಉತ್ತರಗಳನ್ನು, ಅದು ಹೇಗೆಯೇ ಇರಲಿ ತನಗೆ ತಾನೇ ಕಂಡುಕೊಳ್ಳಬೇಕೆಂಬುದು ಸ್ಪಷ್ಟವಾಯಿತು. ಹೀಗೆ ತನ್ನ ಸ್ವಂತ ಕಾಲುಗಳ ಮೇಲೆ ತಾನು ನಿಲ್ಲಬೇಕೆಂಬುದನ್ನು ರಮಣರು ಕಲಿಸಿದ್ದರು. ’ನಾನೀಗ ನನ್ನ ದಾರಿ ಹಿಡಿದು ಸಾಗಬೇಕು’ ಎಂದು ಯುಜಿ ನಿರ್ಧರಿಸಿದ್ದರು. “ನಾವೆ, ದೋಣಿ, ದಿಕ್ಸೂಚಿಗಳಿಲ್ಲದೆಯೇ ಯಾರೂ ಕಂಡಿರದ ಸಮುದ್ರದ ಮೇಲೆ ಪ್ರಯಾಣ ಮಾಡುವಂತೆ ಇತ್ತು. ನಾನೇ ಆ ಸ್ಥಿತಿಯನ್ನು ಸ್ವತಃ ಅರಿಯಬೇಕೆಂದು ಅರಿವಾಗಿತ್ತು”. ಹಾಗೆಯೇ ಇಪ್ಪತ್ತೆಂಟು ವರ್ಷಗಳ ನಂತರ ಯುಜಿಗೆ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆತ ದಿನ, ಹುಡುಕಾಟ ಪೂರ್ತಿಯಾಗಿ ನಿಂತ ದಿನ ಕೂಡ ಬಂತು. ಅದೊಂದು ರೋಚಕ ಕಥೆಯಾಗಿದ್ದರೂ, ಈಗ ಬೇಡ. ಈಗ ಹೇಳುತ್ತಿರುವ ಕಥೆಯ ಹಾದಿ ತಪ್ಪಿಹೋಗಬಾರದಲ್ಲ, ಅಲ್ಲಿಗೆ ಮತ್ತೊಮ್ಮೆ ಬರುತ್ತೇನೆ.

* * * * *

ಭಾರತದ ಸಂತರ ಕಥೆಗಳಲ್ಲೆಲ್ಲಾ ರಮಣರ ಕಥೆ ಬಹಳ ವಿಶೇಷವಾದುದು. ಬಹುತೇಕ ಸಂತರ ಜೀವನದಲ್ಲಿ ವಿವಿಧ ಹಂತಗಳಾದ ಅನ್ವೇಷಣೆ, ಸಾಧನೆ, ಮಾಯೆ ಕಳೆಯುವುದು, ಸಾವಿನ ಅನುಭವಕ್ಕೆ ಒಳಗಾಗುವುದು ಮೊದಲಾದ ಅನುಭವಗಳನ್ನು ಪಡೆದು ಮೋಕ್ಷ ಪಡೆದ ಬಗೆಗೆ ತಿಳಿದು ಬರುತ್ತದೆ. ರಮಣರು ಬಾಲ್ಯದಲ್ಲಿ ಸಾವಿನ ಸನಿಹದ ಅನುಭವಕ್ಕೆ ಒಳಗಾದದ್ದು ಇದೆಯಾದರೂ, ಅವರಲ್ಲಿ ಮೊದಲಿಗೆ ಯಾವುದೇ ಬಗೆಯ ಆಧ್ಯಾತ್ಮಿಕ ಹುಡುಕಾಟ, ಸಾಧನೆ, ಪ್ರಜ್ಞಾಪೂರ್ವಕ ಅನ್ವೇಷಣೆಗಳು ಇರಲಿಲ್ಲ. ಯಾವುದೇ ಹಾದಿಯ ಬಾಗಿಲು ಬಡಿಯಲಿಲ್ಲ. ಅಥವಾ ಯಾವುದೇ ಹಾದಿಗಳು ಇದ್ದುದು ಸಹ ಅವರಿಗೆ ಆಗ ತಿಳಿದಿರಲಿಲ್ಲ. ಆದರೂ ಬಾಗಿಲು ತಾನೇ ತೆರೆದುಕೊಂಡಿತು, ಮತ್ತು ರಮಣರು ನೇರವಾಗಿ ನಡೆದುಕೊಂಡು ಹೋಗಿಬಿಟ್ಟರು. ಕೇಳದೆಯೆ ಅವರಿಗೆ ಎಲ್ಲವೂ ದೊರಕಿತ್ತು.

ಆತ್ಮನನ್ನು ಸೂಚನೆಗಳ ಮೂಲಕ ಪಡೆಯಲಾಗುವುದಿಲ್ಲ
ಬುದ್ಧಿಯ ಮೂಲಕ, ಕಲಿಕೆಯ ಮೂಲಕವೂ ಪಡೆಯಲಾಗುವುದಿಲ್ಲ
ಆತ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೋ ಅವರು ಮಾತ್ರ ಆತ್ಮನನ್ನು ಹೊಂದುತ್ತಾರೆ
ಅವರಿಗೆ ಮಾತ್ರ ಆತ್ಮ ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತದೆ.

* * * * *

ಮತ್ತೊಂದು ವಿಚಾರವೇನೆಂದರೆ ರಮಣರ ಕಥೆಯಲ್ಲಿ (1879-1949) ಅವರ ಜಾತಕದಲ್ಲೆಲ್ಲೂ ಮುಂದೆ ಮಹಾನ್ ವ್ಯಕ್ತಿಯಾಗುತ್ತಾರೆಂದು ಬರೆದುದನ್ನು ಕಾಣಲು ಸಿಗುವುದಿಲ್ಲ. ಅಥವಾ ಅವರ ತಂದೆ ತಾಯಿಗಳ ಬಳಿ ಯಾವುದೋ ಅಜ್ಞಾತ ಸಾಧು ಬಂದು ನಿಮ್ಮ ಮಗ ಬೆಳೆದು ಆಧ್ಯಾತ್ಮಿಕ ಗುರುವಾಗುತ್ತಾನೆಂದು ಭವಿಷ್ಯವನ್ನೇನೂ ನುಡಿದಿರುವುದಿಲ್ಲ. 1896ರಲ್ಲಿ ಜುಲೈ 17ರಂದು, ತನ್ನ ಹದಿನಾರನೆಯ ವಯಸಿನಲ್ಲಿ ಸಾವಿನ ಸನಿಹದ ಅನುಭವ ಆಗುವ ತನಕ ಆತನು ಎಲ್ಲಾ ಸಾಮಾನ್ಯ ಬಾಲಕರಂತೆಯೇ ಇದ್ದುದನ್ನು ನಾವು ಕಾಣುತ್ತೇವೆ. ಆ ಅನುಭವವು ಆತನನ್ನು ತಿರುವಣ್ಣಾಮಲೆಯ ಅರುಣಾಚಲಂ ಬೆಟ್ಟದ ಕಡೆಗೆ ಪಯಣಿಸುವಂತೆ ಮಾಡಿತು. ಇಲ್ಲಿಗೆ ಬಂದ ನಂತರವೂ ರಮಣನಿಗೆ ಸಾವಿನ ಸನಿಹದ ಅನುಭವಗಳು ಅನೇಕ ಸಲ ಉಂಟಾಗಿ ಅವರ ದೇಹ ಒಂದು ಸಹಜ ಸ್ಥಿತಿಗೆ ತಲುಪುವಂತೆ ಆಯಿತು.

ಅರುಣಾಚಲಂಗೆ ಬಂದ ಮೊದಲ ಕೆಲವು ದಿನಗಳು ರಮಣ ಉಳಿದುಕೊಂಡಿದ್ದು ದೇವಸ್ಥಾನದಲ್ಲಿನ ಸಾವಿರ ಕಂಬಗಳ ಪ್ರಾಂಗಣದಲ್ಲಿ. ನಂತರ, ದೇವಾಲಯದ ಕೆಳಗಿರುವ ಗುಹೆಯಾದ ಪಾತಾಳಲಿಂಗಂನಲ್ಲಿ ಆರು ವಾರಗಳ ಕಾಲ ತಂಗಿದನು. ಅಲ್ಲಿಯೇ ಗಾಢ ಸಮಾಧಿಯಲ್ಲಿದ್ದ ರಮಣನಿಗೆ ಗುಹೆಯಲ್ಲಿದ್ದ ವಿಷಜಂತುಗಳು ಕಚ್ಚಿದ್ದು ಸಹ ಅರಿವಿಗೆ ಬರಲಿಲ್ಲ. ಇದನ್ನು ಗಮನಿಸಿದ ಕೆಲವರು ಆತನನ್ನು ಅಲ್ಲಿಂದ ಬಲವಂತವಾಗಿ ಹೊರಗೆ ತಂದು ಉಪಚರಿಸಬೇಕಾಯಿತು. ನಂತರ ಕೆಲಕಾಲ ಅರುಣಾಚಲ ಬೆಟ್ಟದ ಅಲ್ಲಲ್ಲಿ ವಾಸಿಸುತ್ತಾ ಸಮಾಧಿಗೆ ಒಳಗಾಗುತ್ತಾ ಇದ್ದ ರಮಣರು ಕೊನೆಗೆ 1921ರಲ್ಲಿ ಕೆಳಗೆ ಬಂದು ನೆಲೆಸಿದರು. ಅಲ್ಲಿಂದಲೇ ತಮ್ಮ ಬೋಧನೆಗಳನ್ನು ಹರಡಿದರು. ಇದೇ ಸ್ಥಳ ಈಗಿರುವ ರಮಣಾಶ್ರಮ.

ಇಲ್ಲಿ ಮತ್ತೊಂದು ಆಸಕ್ತಿಯ ವಿಷಯವೆಂದರೆ ರಮಣರಿಗೆ ತಾವಿದ್ದ ಸ್ಥಿತಿಯ ಕುರಿತು
ಯಾವುದೇ ಬಗೆಯ ಕಲ್ಪನೆಯೂ ಇರಲಿಲ್ಲ. ಅವರು ಯಾವುದೇ ಗ್ರಂಥಗಳನ್ನೋ, ಉಪನಿಷತ್ತುಗಳನ್ನೋ ಆಗಲಿ ಓದಿರಲಿಲ್ಲ. ಹದಿನಾರನೆಯ ವಯಸಿನಲ್ಲಿ ’ಪೆರಿಯಪುರಾಣಂ’ನ ಕೆಲವು ಭಾಗಗಳನ್ನೂ, ಬೈಬಲ್‌ನ ಕೆಲವು ಅಧ್ಯಾಯಗಳನ್ನು ಮತ್ತು ’ತೇವರಂ’ನ ಕೆಲವು ಭಾಗಗಳನ್ನು ಮಾತ್ರ ಓದಿದ್ದರು. ಅವರಿಗೆ ಹಿಂದೂ ಧರ್ಮದ ಪರಿಕಲ್ಪನೆಗಳಾದ ಬ್ರಹ್ಮ, ಆತ್ಮ, ಸತ್-ಚಿತ್-ಆನಂದ, ಸಮಾಧಿ, ಸಹಜ ಮೊದಲಾದ ಯಾವುದರ ಪರಿಚಯವೂ ಇರಲಿಲ್ಲ. ನಂತರದಲ್ಲಿ ಕೆಲವು ಸಂಸ್ಕೃತ ಪಂಡಿತರ ಜೊತೆಗೆ ಮಾತನಾಡುವಾಗ ’ರಿಭು ಗೀತ’ವನ್ನು ಓದಿದ ನಂತರ ಇವುಗಳಲ್ಲಿ ವಿವರಿಸಿರುವ ಅನೇಕ ವಿಷಯಗಳು, ಸ್ಥಿತಿಗಳು ತಾನು ಈಗಾಗಲೇ ಅನುಭವಿಸಿರುವ ಸಂಗತಿಗಳಾಗಿವೆ ಎಂಬುದನ್ನು ಅರಿತರು.

ಆಗಿನಿಂದ ರಮಣರು ತಮ್ಮ ಸ್ಥಿತಿ ಮತ್ತು ಅನುಭವಗಳ ಕುರಿತು ಮಾತನಾಡಲು ಈ ಪಠ್ಯಗಳ ಉದಾಹರಣೆಗಳನ್ನು ಬಳಸಿಕೊಂಡು ಆಧ್ಯಾತ್ಮಿಕ ಸಂಗತಿಗಳ ಕುರಿತು ಚರ್ಚಿಸಲು ಸಹ ಪ್ರಾರಂಭಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ಜಿಡ್ಡು ಕೃಷ್ಣಮೂರ್ತಿ ಮತ್ತು ನಂತರದಲ್ಲಿ ಯುಜಿ ಕೃಷ್ಣಮೂರ್ತಿ, ಇಬ್ಬರಿಗೂ ಹಿಂದೂ ಮತ್ತು ಇತರೆ ಧರ್ಮಗಳ ಕುರಿತು ಆಳವಾದ ಜ್ಞಾನವಿದ್ದಾಗಲೂ ಸಹ ತಾವು ನಡೆಸುವ ಯಾವುದೇ ಚರ್ಚೆಗಳಲ್ಲಿ, ಭಾಷಣಗಳಲ್ಲಿ ಹಿಂದೂ ಅಥವಾ ಬೌದ್ಧ ಧರ್ಮಕ್ಕೆ ಸೇರಿದ ಯಾವುದೇ ಬಗೆಯ ಆಧ್ಯಾತ್ಮಿಕ ಪರಿಭಾಷೆಯನ್ನು ಬಳಸುವುದನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸುತ್ತಿದ್ದರು. ಯುಜಿಯಂತೂ ಭಾರತೀಯ ತತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಬಹಳ ಅಧ್ಯಯನ ನಡೆಸಿದ್ದವರೇ.

ಈಗ ಬರುವ ಬಹು ಮುಖ್ಯವಾದ ಪ್ರಶ್ನೆಯೆಂದರೆ; ರಮಣರು ಹಿಂದೂ ಧಾರ್ಮಿಕತೆಯ ಪರಿಭಾಷೆಯನ್ನು ಬಳಸದೇ ಇದ್ದಿದ್ದರೆ ಏನಾಗುತ್ತಿತ್ತು? ಇದನ್ನು ಊಹಿಸುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಈ ಪರಿಭಾಷೆಯನ್ನು ಬಳಸಿದ ಕಾರಣಕ್ಕಾಗಿಯೇ ರಮಣರನ್ನು ಸಾಂಪ್ರದಾಯಿಕವಾದ ಭಾರತೀಯ ಆಧ್ಯಾತ್ಮಿಕ ಸಂತ ಪರಂಪರೆಯೊಳಗೆ ಸೇರಿಸಿಕೊಳ್ಳಲಾಯಿತು. ಮತ್ತಿದು ಯಾವ ಮಟ್ಟಕ್ಕೆ ಹೋಯಿತೆಂದರೆ ರಮಣರ ಬೋಧನೆಗಳು ಸಹ ಸಂಪ್ರದಾಯವಾದಿಗಳ ಸುಪರ್ದಿಗೆ ಸೇರಿದವು.

ಹಾಗಿದ್ದರೂ ಹಿಂದೂ ತಾತ್ವಿಕತೆಯ ಪರಿಭಾಷೆಯ ಚೌಕಟ್ಟಿನೊಳಗೆ ಸೇರದ ಅನೇಕ ನುಡಿಗಟ್ಟುಗಳನ್ನು ರಮಣರು ತಮ್ಮ ಹಲವಾರು ಉಪದೇಶಗಳಲ್ಲಿ, ಬೋಧನೆಗಳಲ್ಲಿ ಬಳಸಿದ್ದು ಅವು ನೇರ ಮತ್ತು ಸರಳವಾಗಿವೆ. ವಿಷಯದ ಹೃದಯಕ್ಕೆ ನೇರವಾಗಿ ನುಗ್ಗುತ್ತವೆ. ಅವು ಸಾಧನೆಯ ಕುರಿತದ್ದಾಗಿರಬಹುದು, ಮನಸ್ಸಿನ ಸ್ವರೂಪದ ಕುರಿತಾಗಿರಬಹುದು, ಜಿಜ್ಞಾಸೆ, ಜ್ಞಾನದ ಲಭ್ಯತೆ ಮೊದಲಾದ ಯಾವುದರ ಕುರಿತೂ ಸಹ ಇರಬಹುದು.

(ಬರಹಗಾರ ಚಿಂತಕ ಮುಕುಂದ ರಾವ್ ಅವರ ’ಬಿಟ್ವೀನ್ ದ ಸರ್ಪೆಂಟ್ ಅಂಡ್ ದ ರೋಪ್’ ಪುಸ್ತಕದ ಅನುವಾದ ’ಭ್ರಮೆ ಮತ್ತು ವಾಸ್ತವಗಳ ನಡುವೆ’ – ಆಶ್ರಮಗಳು, ಅವತಾರಗಳು, ಸಂಪ್ರದಾಯಗಳು, ಜ್ಞಾನಿಗಳು, ಕಪಟಿಗಳು. ಸಂತೋಷ್ ನಾಯಕ್ ಆರ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕದ ’ಶ್ರೀ ರಮಣ ಮಹರ್ಷಿ’ ಅಧ್ಯಾಯದಿಂದ ಈ ಭಾಗವನ್ನು ಆಯ್ದು ಪ್ರಕಟಿಸಲಾಗಿದೆ.)


ಇದನ್ನೂ ಓದಿ: ಮತಿಭ್ರಷ್ಟತೆಯ ಮಾಧ್ಯಮಗಳು ಚಾಚುವ ದ್ವೇಷದ ನಾಲಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...