ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಮೇನಗುರಿ ಪಟ್ಟಣದ ಬಳಿ ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲಿನ 12 ಬೋಗಿಗಳು ಹಳಿತಪ್ಪಿವೆ.
ಅಪಘಾತದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 45 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಶುಕ್ರವಾರ ಬೆಳಿಗ್ಗೆ ಅಪಘಾತ ಸ್ಥಳಕ್ಕೆ ಭೇಟಿ ನೀಡಲಾಗಿದ್ದಾರೆ.
ಈಶಾನ್ಯ ಫ್ರಾಂಟಿಯರ್ ರೈಲ್ವೇಯ ಅಲಿಪುರ್ದುವಾರ್ ವಿಭಾಗದ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಎನ್‌ಎಫ್‌ಆರ್ ವಕ್ತಾರರು ಗುವಾಹಟಿಯಲ್ಲಿ ತಿಳಿಸಿದ್ದಾರೆ.
ಸಮೀಪದ ಗ್ರಾಮಗಳ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿ ಕುಸಿದ ಬೋಗಿಗಳಲ್ಲಿ ಸಿಲುಕಿದ್ದ ಪ್ರಯಾಣಿಕರಿಗೆ ಸಹಾಯ ಹಸ್ತ ಚಾಚಿದರು. ಕೆಲವು ಬೋಗಿಗಳು ರೈಲಿನ ಉಳಿದ ಭಾಗದಿಂದ ಬೇರ್ಪಟ್ಟಿದ್ದರೆ, ಕೆಲವು ಚಕ್ರಗಳು ಕಳಚಿ ಬಿದ್ದಿವೆ.
ಸ್ಥಳೀಯರು, ಇತರ ಪ್ರಯಾಣಿಕರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಜಲ್ಪೈಗುರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಮೂರು NDRF ತಂಡಗಳು ಅಪಘಾತ ಸ್ಥಳಕ್ಕೆ ತಲುಪಿವೆ. ಅಪಘಾತದ ಕುರಿತು ಉನ್ನತ ಮಟ್ಟದ ರೈಲ್ವೆ ಸುರಕ್ಷತಾ ತನಿಖೆಗೆ ಆದೇಶಿಸಲಾಗಿದೆ. ರೈಲ್ವೆಯ ಉನ್ನತ ಅಧಿಕಾರಿಗಳು ದೆಹಲಿಯಿಂದ ಅಪಘಾತದ ಸ್ಥಳಕ್ಕೆ ತೆರಳಿದ್ದಾರೆ.
“ಸಮಯ ಸುಮಾರು 5 ಗಂಟೆಯಾಗಿತ್ತು. ನಾನು ನನ್ನ ಹೆಂಡತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಇದ್ದಕ್ಕಿದ್ದಂತೆ ನನಗೆ ದೊಡ್ಡ ಶಬ್ದ ಕೇಳಿಸಿತು. ಭಾರೀ ಜರ್ಕ್ ಉಂಟಾಯಿತು. ನಾನು ನನ್ನ ಬರ್ತ್‌ನಿಂದ ಬಿದ್ದೆ. ಮರಳಿ ಬಂದಾಗ ಪ್ರಜ್ಞೆ ಬಂದಾಗ ನನ್ನನ್ನು ಆಂಬ್ಯುಲೆನ್ಸ್ ಒಳಗೆ ಕರೆದೊಯ್ಯಲಾಗಿತ್ತು” ಎಂದು ಬದುಕುಳಿದ ಸಂಜಯ್ ಎಂಬವರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
“ನನ್ನ ತಾಯಿ ಮತ್ತು ನಾನು ಚಹಾ ಸೇವಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಶಬ್ದ ಬಂದಿತು. ನಂತರ ತೀವ್ರ ಆಘಾತಕ್ಕೊಳಗಾದೆವು. ಮೇಲಿನ ಬರ್ತ್‌ಗಳಲ್ಲಿ ಇರಿಸಲಾಗಿದ್ದ ಸಾಮಾನುಗಳು ಉರಳಲಾರಂಭಿಸಿದವು. ನಂತರ ಸ್ಥಳೀಯರು ನನ್ನನ್ನು ರಕ್ಷಿಸಿದರು, ಆದರೆ ನಾನು ಇನ್ನೂ ನನ್ನ ತಾಯಿಯನ್ನು ಪತ್ತೆ ಮಾಡಿಲ್ಲ. ಅವರಿಗೆ ಏನಾಯಿತು ಎಂದು ತಿಳಿದಿಲ್ಲ” ಎಂದು ಮತ್ತೊಬ್ಬ ಗಾಯಾಳು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
“ನಾವು ಅಪಘಾತದ ಸ್ಥಳದಿಂದ ಮೂರು ದೇಹಗಳನ್ನು ವಶಪಡಿಸಿಕೊಂಡಿದ್ದೇವೆ. ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ” ಎಂದು ಜಲಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋಡರಾ ಬಸು ಹೇಳಿದ್ದಾರೆ. ಅಪಘಾತದಲ್ಲಿ ಕನಿಷ್ಠ 45 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ತೀವ್ರವಾಗಿ ಗಾಯಗೊಂಡವರಿಗೆ ₹ 1 ಲಕ್ಷ ಮತ್ತು ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ ₹ 25,000 ಪರಿಹಾರ ನೀಡಲಾಗುವುದು ಎಂದು ತಿಳಿಸಲಾಗಿದೆ.
ಸುದ್ದಿ ಅಪ್‌ಡೇಟ್: ಸಾವಿನ ಸಂಖ್ಯೆ ಏಳಕ್ಕೆ ಏರಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅಪಘಾತಕ್ಕೆ ಸಂಬಂಧಿಸಿದ ಚಿತ್ರಗಳನ್ನು ಎನ್‌ಡಿಟಿವಿ ವರದಿ ಮಾಡಿದೆ.






ಇದನ್ನೂ ಓದಿರಿ: ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಿ ವೊಡಾಫೋನ್ ಷೇರು ಖರೀದಿಸುವಲ್ಲಿ ಅರ್ಥವಿದೆಯೇ?: ಬಿಜೆಪಿಗೆ ಖರ್ಗೆ ಪ್ರಶ್ನೆ


