ಭಾರತೀಯ ಸೇನೆಯ ಹುತಾತ್ಮ ಯೋಧ ಕ್ಯಾಪ್ಟನ್ ಅನ್ಶುಮನ್ ಸಿಂಗ್ ಅವರಿಗೆ ಇತ್ತೀಚೆಗೆ ಮರಣೋತ್ತರವಾಗಿ ‘ಕೀರ್ತಿ ಚಕ್ರ’ ಪ್ರಧಾನ ಮಾಡಲಾಗಿದೆ. ಅನ್ಶುಮನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ತಮ್ಮ ಅತ್ತೆಯೊಂದಿಗೆ ಜುಲೈ 5, 2024 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಅನ್ಶುಮನ್ ಸಿಂಗ್ ಅವರ ಪತ್ನಿಯ ಕುರಿತು ಅನೇಕ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅನ್ಶುಮನ್ ಅವರ ಪೋಷಕರು, “ಸ್ಮೃತಿ ಸಿಂಗ್ ನಮ್ಮ ಮಗನ ಶೌರ್ಯ ಪದಕ ಮತ್ತು ಇತರ ನೆನಪುಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಿದ್ದಾರೆ” ಎಂದು ಆರೋಪಿಸಿದ್ದಾರೆ. ಸಶಸ್ತ್ರ ಪಡೆಗಳ ಪ್ರಸ್ತುತ ನೀತಿಯ ಅಡಿಯಲ್ಲಿ, ಸೈನಿಕನು ವಿವಾಹಿತನಾಗಿದ್ದರೆ, ಅವರ ಸಂಗಾತಿಯನ್ನು ‘ನೆಕ್ಸ್ಟ್ ಆಫ್ ಕಿನ್’ (NOK) ಎಂದು ಗುರುತಿಸಲಾಗುತ್ತದೆ. ಯೋಧ ಹುತಾತ್ಮರಾದರೆ ಪರಿಹಾರದ ಹಣವನ್ನು ಅವರ ಪತ್ನಿಗೆ ನೀಡಲಾಗುತ್ತದೆ. ಅನ್ಶುಮನ್ ಸಿಂಗ್ ಪೋಷಕರು “ನಮಗೆ ಮಗನೂ ಇಲ್ಲ, ಪರಿಹಾರನೂ ಇಲ್ಲ” ಎಂದು ಬೇಸರ ಹೊರ ಹಾಕಿದ್ದಾರೆ. ಸೇನೆಯ ನಿಯಮಗಳನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಅನ್ಶುಮನ್ ಸಿಂಗ್ ಅವರ ಪತ್ನಿಯ ವಿಡಿಯೋಗೆ ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆಯೂ ನಡೆದಿದೆ. ಇವೆಲ್ಲದರ ಬಳಿಕ ಈಗ ಹೊಸತೊಂದು ಚರ್ಚೆ ಶುರುವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ಹುತಾತ್ಮ ಯೋಧ ಅನ್ಶುಮನ್ ಸಿಂಗ್ ಅವರ ಪತ್ನಿಯದ್ದು ಎಂದು ಹೇಳಲಾಗಿದೆ. “ತಾಯಿ ದೇಶಕ್ಕಾಗಿ ತನ್ನ ಮಗನನ್ನು ಕಳೆದುಕೊಂಡರೆ, ಯೋಧನ ಪತ್ನಿ ಪರಿಹಾರದ ಹಣ ಮತ್ತು ಶೌರ್ಯ ಪದಕ ಪಡೆದುಕೊಂಡು, ಇಲ್ಲಿ ತನ್ನ ಸೌಂದರ್ಯ ಪ್ರದರ್ಶಿಸುತ್ತಿದ್ದಾರೆ” ಎಂದು ವಿಡಿಯೋ ಜೊತೆ ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದಲ್ಲಿರುವುದು ಹುತಾತ್ಮ ಯೋಧ ಕ್ಯಾಪ್ಟನ್ ಅನ್ಶುಮನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಎನ್ನುವುದು ಸುಳ್ಳು.
ಶೌರ್ಯ ಪದಕ ಪಡೆದುಕೊಂಡಾಗಿನ ಸ್ಮೃತಿ ಸಿಂಗ್ ಅವರ ವಿಡಿಯೋ ಮತ್ತು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್‌ಗಳು ಕೆಳಗಡೆಯಿದೆ. ಇಬ್ಬರು ಬೇರೆ ಬೇರೆ ಮಹಿಳೆಯರು ಎಂಬ ವ್ಯತ್ಯಾಸವನ್ನು ಗಮನಿಸಬಹುದು.

ವೈರಲ್ ವಿಡಿಯೋದ ಮೂಲ ತಿಳಿದುಕೊಳ್ಳಲು ನಾವು ಅದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ label_ilma ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ನಮಗೆ ವಿಡಿಯೋ ದೊರೆತಿದೆ. ವಿಡಿಯೋ ಕೆಳಗೆ “@reshsebu setting the perfect summer vibes in our Meadow Kota Doriya Saree” ಎಂದು ಕ್ಯಾಪ್ಶನ್ ಕೊಡಲಾಗಿದೆ.

ಮೇಲಿನ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾದ ಇನ್‌ಸ್ಟಾಗ್ರಾಂ ಖಾತೆಯನ್ನು ನಾವು ಪರಿಶೀಲಿಸಿದ್ದೇವೆ. ಅದು ರೇಷ್ಮಾ ಸೆಬಾಸ್ಟಿಯನ್ ಎಂಬ ಬಳಕೆದಾರರಿಗೆ ಸೇರಿದೆ. ಇವರೂ ಕೂಡ ವೈರಲ್ ವಿಡಿಯೋವನ್ನು ಏಪ್ರಿಲ್ 24 ರಂದು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಿದ್ದರು. ಸ್ಮೃತಿ ಸಿಂಗ್ ಹೆಸರಿನಲ್ಲಿ ವಿಡಿಯೋ ವೈರಲ್ ಆದ ಬಳಿಕ, ವಿಡಿಯೋದಲ್ಲಿರುವುದು ಸ್ಮೃತಿ ಸಿಂಗ್ ಅಲ್ಲ ಎಂದು ರೇಷ್ಮಾ ಸೆಬಾಸ್ಟಿಯನ್ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ತನ್ನ ವಿಡಿಯೋವನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಂಚುವ ಜನರು ಮತ್ತು ಸಾಮಾಜಿಕ ಜಾಲತಾಣ ಪೇಜ್‌ಗಳ ವಿರುದ್ದ ನಾವು ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದೂ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಫ್ಯಾಶನ್ ಬ್ರ್ಯಾಂಡ್ ಒಂದರ ಜಾಹೀರಾತಿಗಾಗಿ ರೇಷ್ಮಾ ಸೆಬಾಸ್ಟಿಯನ್ ಎಂಬ ನಟಿ, ರೂಪದರ್ಶಿ ವಿಡಿಯೋ ಮಾಡಿದ್ದರು. ಆಕೆ ಹುತಾತ್ಮ ಯೋಧನ ಪತ್ನಿ ಸ್ಮೃತಿ ಸಿಂಗ್ ರೀತಿ ಕಾಣುತ್ತಿರುವುದರಿಂದ ಜನರು, ಯೋಧನ ಪತ್ನಿ ಸರ್ಕಾರದಿಂದ ಸಿಕ್ಕ ಪರಿಹಾರದ ಹಣ ಬಳಸಿಕೊಂಡು ಬಹಳ ಖುಷಿಯಾಗಿದ್ದಾರೆ ಎಂಬ ದಾಟಿಯಲ್ಲಿ ತಪ್ಪಾದ ಸಂದೇಶದೊಂದಿಗೆ ವಿಡಿಯೋ ಹಂಚಿಕೊಂಡಿರುವುದು ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ : FACT CHECK : ಮುಸ್ಲಿಮರು ಹಿಂದೂ ಸಾಧುಗಳ ವೇಷ ಧರಿಸಿ ಮಕ್ಕಳನ್ನು ಅಪಹರಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂಬುವುದು ಸುಳ್ಳು


