HomeದಿಟನಾಗರFACT CHECK: ರಾಹುಲ್ ಗಾಂಧಿ ನಕಲಿ ಲೋಕೋ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಿದ್ದಾರೆ ಎಂಬುವುದು ಸುಳ್ಳು

FACT CHECK: ರಾಹುಲ್ ಗಾಂಧಿ ನಕಲಿ ಲೋಕೋ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಿದ್ದಾರೆ ಎಂಬುವುದು ಸುಳ್ಳು

- Advertisement -
- Advertisement -

ಸಿಬ್ಬಂದಿ ಕೊರತೆಯಿಂದಾಗಿ ಅಸಮರ್ಪಕ ವಿಶ್ರಾಂತಿ ವ್ಯವಸ್ಥೆಯಿದೆ ಎಂದು ಹೇಳಿಕೊಂಡಿದ್ದ ರೈಲ್ವೆ ಲೋಕೋ ಪೈಲಟ್‌ಗಳನ್ನು ಜುಲೈ 5,2024ರಂದು ಭೇಟಿಯಾಗಿದ್ದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಅವರ ಸಮಸ್ಯೆ ಆಲಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.

“ಲೋಕೋ ಪೈಲಟ್‌ಗಳು ಎಂದು ಹೇಳಿ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಹಾಕಿರುವ ಫೋಟೋ ಪರಿಶೀಲಿಸಿದಾಗ ಅದರಲ್ಲಿ ರೈಲ್ವೆ ನೌಕರರು ಮತ್ತು ಲೋಕೋ ಪೈಲಟ್‌ಗಳು ಇಲ್ಲ ಎಂದು ರೈಲ್ವೆ ದೃಢಪಡಿಸಿದೆ. ಎಲ್ಲರೂ ವೇಷ ಹಾಕಿ ಬಂದವರು. ಅವರ ವಿರುದ್ದ ಪ್ರಕರಣ ದಾಖಲಾಗಿದೆ. ಭಾರತವನ್ನು ಯಾವ ರೀತಿಯಲ್ಲಾದರೂ ನಾಶಪಡಿಸುವುದು ರಾಹುಲ್ ಗಾಂಧಿಯ ಉದ್ದೇಶ ಎಂಬುವುದು ಇದರಿಂದ ಸ್ಪಷ್ಟವಾಗಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳಲಾಗಿದೆ.


ಹಾಗಾದರೆ, ರಾಹುಲ್ ಗಾಂಧಿಯವರು ಭೇಟಿಯಾಗಿ ಮಾತುಕತೆ ನಡೆಸಿರುವುದು ನಕಲಿ ಲೋಕೋ ಪೈಲಟ್‌ಗಳ ಜೊತೆಯಾ? ಎಂಬುವುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : ನಮ್ಮ ಪರಿಶೀಲನೆಯಲ್ಲಿ ರಾಹುಲ್ ಗಾಂಧಿಯವರು ಭೇಟಿಯಾಗಿ ಮಾತುಕತೆ ನಡೆಸಿರುವುದು ನಿಜವಾದ ಲೋಕೋ ಪೈಲಟ್‌ಗಳ ಜೊತೆಯೇ ಎಂಬುವುದು ಗೊತ್ತಾಗಿದೆ.

ರಾಹುಲ್ ಗಾಂಧಿ ದೆಹಲಿಯಲ್ಲಿ ಲೋಕೋ ಪೈಲಟ್‌ಗಳನ್ನು ಭೇಟಿಯಾಗಿದ್ದರು. ಆದರೆ, ಅವರಲ್ಲಿ ದೆಹಲಿ ವಿಭಾಗದವರು ಮಾತ್ರ ಇರಲಿಲ್ಲ. ದೇಶದ ವಿವಿಧ ಭಾಗಗಳಿಂದ ಆಗಮಿಸಿದವರು ಇದ್ದರು. ಈ ಕುರಿತು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ನಾನುಗೌರಿ.ಕಾಂ ಜುಲೈ 6ರಂದು ಸುದ್ದಿ ಪ್ರಕಟಿಸಿತ್ತು.

ರಾಹುಲ್ ಗಾಂಧಿ ಲೋಕೋ ಪೈಲಟ್‌ಗಳನ್ನು ಭೇಟಿಯಾಗಿದ್ದ ಬಗ್ಗೆ ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ದೀಪಕ್ ಕುಮಾರ್ ಅವರು “ರಾಹುಲ್ ಗಾಂಧಿ ಜೊತೆ ಸಂವಹನ ನಡೆಸಿದ ಲೋಕೋ ಪೈಲಟ್‌ಗಳು ‘ಹೊರಗಿನವರು’ ದೆಹಲಿ ವಿಭಾಗದವರಲ್ಲ ಎಂದು ಹೇಳಿದ್ದರು. ಈ ಹೇಳಿಕೆಯಿಂದ ರಾಹುಲ್ ಗಾಂಧಿ ಭೇಟಿಯಾಗಿದ್ದು ಲೋಕೋ ಪೈಲಟ್‌ಗಳನ್ನೇ ಎಂಬುವುದು ದೃಢಪಟ್ಟಿದೆ.

“ರಾಹುಲ್ ಗಾಂಧಿ ದೆಹಲಿಯಿಂದ ಬಂದವರೊಂದಿಗೆ ಮಾತ್ರವಲ್ಲದೆ ವಿವಿಧ ರೈಲು ವಿಭಾಗಗಳ ಲೋಕೋ ಪೈಲಟ್‌ಗಳೊಂದಿಗೆ ಸಂವಾದ ನಡೆಸಿದ್ದಾರೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಅಖಿಲ ಭಾರತ ಲೊಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಶನ್‌ನ ದಕ್ಷಿಣ ವಲಯದ ಅಧ್ಯಕ್ಷ ಆರ್ ಕುಮರೇಶನ್ ಸುದ್ಧಿ ಸಂಸ್ಥೆಯಾದ ಪಿಟಿಐಗೆ ತಿಳಿಸಿದ್ದರು. ಇದು ಕೂಡ ರಾಹುಲ್ ಗಾಂಧಿ ಭೇಟಿಯಾಗಿದ್ದು ನಿಜವಾದ ಲೋಕೋ ಪೈಲಟ್‌ಗಳನ್ನು ಎಂಬುವುದು ಖಚಿತಪಡಿಸಿದೆ.

ರಾಹುಲ್ ಗಾಂಧಿಯವರು ಲೋಕೋ ಪೈಲೆಟ್‌ಗಳ ಜೊತೆಗೆ ನಡೆಸಿದ ಸಂವಾದವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದನ್ನು ಈ ಕೆಳಗೆ ನೋಡಬಹುದಾಗಿದೆ.

ಇನ್ನು ರಾಹುಲ್ ಗಾಂಧಿಯವರ ಜೊತೆ ಸಂವಾದ ನಡೆಸಲು ಲೋಕೋ ಪೈಲಟ್‌ಗಳ ರೀತಿ ವೇಷ ಹಾಕಿ ಬಂದವರ ವಿರುದ್ದ ಪ್ರಕರಣ ದಾಖಲಾಗಿದೆ ಎಂಬುವುದು ಸುಳ್ಳು. ಈ ಕುರಿತು ಎಲ್ಲಿಯೂ ವರದಿಯಾಗಿಲ್ಲ. ರಾಹುಲ್ ಗಾಂಧಿ ನಿಜವಾದ ಲೋಕೋ ಪೈಲಟ್‌ಗಳ ಜೊತೆ ಸಂವಾದ ನಡೆಸಿರುವಾಗ ಲೋಕೋ ಪೈಲಟ್‌ಗಳು ವೇಷ ಹಾಕಿ ಬರುವುದು, ಪ್ರಕರಣ ದಾಖಲಿಸುವ ಪ್ರಮೇಯವೇ ಬರುವುದಿಲ್ಲ.

ಒಟ್ಟಿನಲ್ಲಿ ರಾಹುಲ್ ಗಾಂಧಿ ನಕಲಿ ಲೋಕೋ ಪೈಲಟ್‌ಗಳನ್ನು ಭೇಟಿಯಾಗಿದ್ದಾರೆ. ಪೈಲಟ್‌ಗಳಂತೆ ವೇಷ ಹಾಕಿ ಬಂದವರ ವಿರುದ್ದ ಪ್ರಕರಣ ದಾಖಲಾಗಿದೆ ಎಂಬುವುದು ಸುಳ್ಳು. ರಾಹುಲ್ ಗಾಂಧಿ ಲೋಕೋ ಪೈಲಟ್‌ಗಳನ್ನು ಭೇಟಿಯಾಗಿರುವ ಕುರಿತು ನಾನುಗೌರಿ.ಕಾಂ ಪ್ರಕಟಿಸಿದ ವರದಿಯ ಲಿಂಕ್ ಕೆಳಗಿದೆ.

ರೈಲ್ವೆ ಲೋಕೋ ಪೈಲಟ್‌ಗಳನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...