ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ” ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ” ಎಂದಿದ್ದಾರೆ.
“ಕಾಂಗ್ರೆಸ್‌ನ ಪ್ರಣಾಳಿಕೆ ಸಂಪೂರ್ಣ ತುಷ್ಠೀಕರಣದಿಂದ ಕೂಡಿದೆ. ಅದರಲ್ಲಿ, ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರಿಗೆ ಅಥವಾ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಕಲ್ಪಿಸುವ ಆಘಾತಕಾರಿ ಭರವಸೆಯನ್ನು ಕಾಂಗ್ರೆಸ್ ಲಿಖಿತವಾಗಿ ನೀಡಿದೆ” ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಧಾನಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾದ ಸುರೇಂದ್ರನಗರದ ಕಾರ್ಯಕ್ರಮದ ವಿಡಿಯೋದಲ್ಲಿ 30 ನಿಮಿಷ 32 ಸೆಕೆಂಡ್‌ನಿಂದ ಮೇಲಿನ ಹೇಳಿಕೆಯನ್ನು ಆಲಿಸಬಹುದು.
ಫ್ಯಾಕ್ಟ್‌ಚೆಕ್ : ಪ್ರಧಾನಿಯ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಲು ನಾವು ಕಾಂಗ್ರೆಸ್‌ನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯನ್ನು ಪರಿಶೀಲಿಸಿದ್ದೇವೆ. ಪ್ರಣಾಳಿಕೆಯಲ್ಲಿ ಎಲ್ಲೂ ‘ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ’ ನೀಡುತ್ತೇವೆ ಎಂದು ಕಾಂಗ್ರೆಸ್ ಭರವಸೆ ನೀಡಿರುವುದು ನಮಗೆ ಕಂಡು ಬಂದಿಲ್ಲ.
ಒಟ್ಟು 48 ಪುಟಗಳ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎರಡು ಕಡೆ ಸರ್ಕಾರಿ ಕಾಮಗಾರಿಗಳ ಟೆಂಡರ್ ಅಥವಾ ಕಾಂಟ್ರಾಕ್ಟ್ ಬಗ್ಗೆ ಉಲ್ಲೇಖಿಸಲಾಗಿದೆ.
1. ಪ್ರಣಾಳಿಕೆಯಲ್ಲಿ ‘ಈಕ್ವಿಟಿ (ಸಮಾನತೆ)’ ಎಂಬ ವಿಭಾಗದ ( ಪುಟ ಸಂಖ್ಯೆ 6) 8 ನೇ ಪ್ಯಾರಾದಲ್ಲಿ “ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಹೆಚ್ಚಿನ ಗುತ್ತಿಗೆಗಳು ಸಿಗುವಂತೆ ಮಾಡಲು ಸಾರ್ವಜನಿಕ ಗುತ್ತಿಗೆ ಪ್ರಕ್ರಿಯೆಯ ವ್ಯಾಪ್ತಿ ವಿಸ್ತರಿಸುತ್ತೇವೆ” ಎಂದು ಹೇಳಲಾಗಿದೆ.

2. ಪ್ರಣಾಳಿಕೆಯ ‘ಧಾರ್ಮಿಕ ಮತ್ತು ಭಾಷಾ ಅಲ್ಪ ಸಂಖ್ಯಾತರು’ ಎಂಬ ವಿಭಾಗದ (ಪುಟ ಸಂಖ್ಯೆ 7-8) 6ನೇ ಪ್ಯಾರಾದಲ್ಲಿ “ಶಿಕ್ಷಣ, ಆರೋಗ್ಯ, ಸರ್ಕಾರಿ ಉದ್ಯೋಗ, ಸರ್ಕಾರಿ ಕಾಮಗಾರಿ ಒಪ್ಪಂದಗಳು, ಕೌಶಲ್ಯ ಅಭಿವೃದ್ದಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಲ್ಪ ಸಂಖ್ಯಾತರು ಯಾವುದೇ ಬೇಧವಿಲ್ಲದೆ ತಮ್ಮ ಪಾಲು ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ” ಎಂದು ಹೇಳಲಾಗಿದೆ.

ಮೇಲ್ಗಡೆ ಉಲ್ಲೇಖಿಸಿದ ಎರಡು ಕಡೆ ಹೊರತುಪಡಿಸಿ ಎಲ್ಲೂ ಸರ್ಕಾರಿ ಕಾಮಗಾರಿಗಳ ಕುರಿತು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿಲ್ಲ. ಗಮನಾರ್ಹವಾಗಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಲ್ಲೂ ‘ಮುಸ್ಲಿಂ’ ಎಂಬ ಪದವನ್ನು ಉಲ್ಲೇಖಿಸಿಲ್ಲ. ಅನೇಕ ಕಡೆಗಳಲ್ಲಿ ಅಲ್ಪ ಸಂಖ್ಯಾತರು ಎಂದಿದೆ. ಭಾರತದಲ್ಲಿ ಅಲ್ಪ ಸಂಖ್ಯಾತರು ಎಂದರೆ ಕೇವಲ ಮುಸ್ಲಿಮರಲ್ಲ. ಕ್ರೈಸ್ತ, ಬೌದ್ಧ, ಜೈನ ಮತ್ತು ಪಾರ್ಸಿಗಳೂ ಕೂಡ ಈ ದೇಶದ ಅಧಿಕೃತ ಅಲ್ಪ ಸಂಖ್ಯಾತರು.
ಕಾಂಗ್ರೆಸ್‌ನ ಸಂಪೂರ್ಣ ಪ್ರಣಾಳಿಕೆ ಇಲ್ಲಿದೆ
ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಹೇಳಿರುವುದು ಹಸಿ ಸುಳ್ಳು ಎಂದು ಖಚಿತಪಡಿಸಬಹುದು.
ಪ್ರಧಾನಿ ಇತ್ತೀಚಿನ ಭಾಷಣಗಳಲ್ಲಿ ಅನೇಕ ಬಾರಿ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದೆ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಮುಸ್ಲಿಂ ಮೀಸಲಾತಿ ಎಂಬುವುದನ್ನು ಭಯೋತ್ಪಾದನಾ ಕೃತ್ಯದಂತೆ ಬಿಂಬಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿರುವುದು ಸಂವಿಧಾನ ಬದ್ದವಾಗಿ ಆಗಿದೆ. ಎಲ್ಲೂ ಸಂವಿಧಾನ ಬಾಹಿರವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿಲ್ಲ.
ಮುಸ್ಲಿಂ ಮೀಸಲಾತಿ ಕುರಿತು ಇತ್ತೀಚೆಗೆ ಪ್ರಧಾನಿ ಮೋದಿ ಸರಣಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಈ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಿರುವ ‘ನಾನುಗೌರಿ.ಕಾಂ‘ ಸಾಕ್ಷಿ ಸಹಿತ ಸಂಪೂರ್ಣ ವಿವರಣೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಅವುಗಳ ಲಿಂಕ್ ಕೆಳಗೆ ಕೊಡಲಾಗಿದೆ.
FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ
FACT CHECK: ‘ದೇಶದ ಸಂಪತ್ತಿನಲ್ಲಿ ಮೊದಲ ಅಧಿಕಾರ ಮುಸ್ಲಿಮರಿಗೆ’ ಎಂದು ಮನಮೋಹನ್ ಸಿಂಗ್ ಹೇಳಿಲ್ಲ


