HomeUncategorizedFACT CHECK : ಅಧಿಕಾರಕ್ಕೆ ಬಂದರೆ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

- Advertisement -
- Advertisement -

ಕಳೆದ ಎರಡು ದಿನಗಳಿಂದ ದೇಶದಲ್ಲಿ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೆ ತರಲಿದೆ. ಈ ಮೂಲಕ ಯಾರಾದರು ಮರಣ ಹೊಂದಿದರೆ ಅವರು ಕಷ್ಟಪಟ್ಟ ದುಡಿದು ಮಾಡಿಟಿದ್ದ ಆಸ್ತಿಯನ್ನು ಸರ್ಕಾರ ಕಿತ್ತುಕೊಳ್ಳಲಿದೆ ಎಂದು ಬಿಜೆಪಿ ಆರೋಪಿಸಿದೆ.

ಬುಧವಾರ (ಏ.24) ಛತ್ತೀಸ್‌ಗಢದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ” ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದೆ. ಈ ಮೂಲಕ ನಿಮ್ಮ ತಂದೆ, ತಾಯಿಯಿಂದ ನಿಮಗೆ ಬರಲಿರುವ ಆಸ್ತಿ ಮೇಲೆ ತೆರಿಗೆ ವಿಧಿಸಲಿದೆ. ‘ಜೀವನದಲ್ಲಿಯೂ, ಜೀವನದ ನಂತರವೂ ಲೂಟಿ’ ಮಾಡುವುದು ಕಾಂಗ್ರೆಸ್‌ನ ಮಂತ್ರ” ಎಂದಿದ್ದಾರೆ.

ಮೋದಿಯವರ ಈ ಹೇಳಿಕೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಅನೇಕ ಎಕ್ಸ್ ಬಳಕೆದಾರರು ಪ್ರಧಾನಿಯ ಹೇಳಿಕೆಯ ವಿಡಿಯೋ ಹಂಚಿಕೊಂಡಿದ್ದಾರೆ.

ಪೋಸ್ಟ್ ಲಿಂಕ್‌ ಇಲ್ಲಿದೆ ಇಲ್ಲಿದೆ

ಪಿತ್ರಾರ್ಜಿತ ಆಸ್ತಿ ತೆರಿಗೆ (Inheritance Tax) ಎಂದರೆ ಏನು?

ಪಿತ್ರಾರ್ಜಿತ ಆಸ್ತಿ ತೆರಿಗೆ ಎಂಬುವುದು ಯಾರಾದರು ಒಬ್ಬರು ವ್ಯಕ್ತಿ ಮೃತಪಟ್ಟರೆ, ಅವರ ವಾರಿಸುದಾರರಿಗೆ ಸಿಗಲಿರುವ ಆಸ್ತಿ ಮೇಲೆ ವಿಧಿಸುವ ತೆರಿಗೆಯಾಗಿದೆ. ಜಪಾನ್, ಯುಎಸ್ ಮತ್ತು ಫ್ರಾನ್ಸ್‌ನಂತಹ ಹಲವಾರು ದೇಶಗಳಲ್ಲಿ ಈ ತೆರಿಗೆ ಪದ್ದತಿ ಚಾಲ್ತಿಯಲ್ಲಿದೆ. ಈ ಕುರಿತು ‘livemint.com’ಪ್ರಕಟಿಸಿರುವ ವರದಿಯ ಲಿಂಕ್ ಇಲ್ಲಿದೆ

ಫ್ಯಾಕ್ಟ್‌ಚೆಕ್ : ಭಾರೀ ಚರ್ಚೆಗೆ ಕಾರಣವಾಗಿರುವ ಮತ್ತು ಸ್ವತಃ ಪ್ರಧಾನಿ ಮೋದಿ ಆರೋಪಿಸಿರುವ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರಾ? ಇಲ್ಲಾ ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದೆಯಾ? ಎಂಬುವುದರ ಬಗ್ಗೆ ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.

ನಾವು ಗೂಗಲ್ ಮೂಲಕ ಕೀ ವರ್ಡ್‌ ಬಳಸಿ ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಹುಡುಕಾಡಿದಾಗ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಘಟಕದ ಚೇರ್ಮನ್ ಸ್ಯಾಮ್ ಪಿತ್ರೋಡಾ ಈ ಕುರಿತು ಹೇಳಿಕೆ ನೀಡಿರುವ ಬಗ್ಗೆ ಅನೇಕ ಮಾಧ್ಯಮಗಳು ವರದಿ ಮಾಡಿರುವುದು ದೊರೆತಿದೆ.

ನಾವು ಇನ್ನಷ್ಟು ಹುಡುಕಿದಾಗ, ನಮಗೆ ಸ್ಯಾಮ್ ಪಿತ್ರೋಡಾ ಹೇಳಿಕೆಯ ಮೂಲ ವಿಡಿಯೋ ದೊರೆತಿದೆ. ಏಪ್ರಿಲ್ 24, 2024ರಂದು ಎಎನ್‌ಐ ಸುದ್ದಿ ಸಂಸ್ಥೆ “Is Congress advocating for Inheritance tax in India ? Sam Pitroda drops big hint in this interview” ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ದೊರೆತಿದೆ.

ಯೂಟ್ಯೂಬ್ ವಿಡಿಯೋ ಲಿಂಕ್ ಇಲ್ಲಿದೆ 

ಇದೇ ವಿಡಿಯೋದ ಆಯ್ದ ಭಾಗವನ್ನು ಏಪ್ರಿಲ್ 24, 2024ರಂದು ಎಎನ್‌ಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಒಟ್ಟು 2 ನಿಮಿಷ 45 ಸೆಕೆಂಡ್‌ನ ವಿಡಿಯೋದಲ್ಲಿ ” ಸರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಆಸ್ತಿ ಸಮೀಕ್ಷೆ ನಡೆಸಿ ಯಾರ ಬಳಿ ಎಷ್ಟು ಆಸ್ತಿ ಇದೆ ಎಂದು ತಿಳಿದುಕೊಳ್ಳಲಿದೆ. ಬಳಿಕ ಅದನ್ನು ಮರು ಹಂಚಿಕೆ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿಯೂ ಮಾತನಾಡಿದ್ದಾರೆ” ಎಂದು ಸ್ಯಾಮ್‌ ಪಿತ್ರೋಡಾ ಅವರಿಗೆ ಎಎನ್‌ಐ ಪ್ರತಿನಿಧಿ ಕೇಳಿದ್ದಾರೆ.

ಅದಕ್ಕೆ ಉತ್ತರಿಸಿ ಪಿತ್ರೋಡಾ, “ಆಸ್ತಿಯ ಮರು ಹಂಚಿಕೆ ಎಂದರೆ, ಒಬ್ಬರಿಂದ ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದು ಅಲ್ಲ. ಇದರರ್ಥ ಹೊಸ ನಿಯಮಗಳನ್ನು ರೂಪಿಸುವುದಾಗಿದೆ. ಅಮೆರಿಕದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಇದೆ. ಅಲ್ಲಿ ಉದಾಹರಣೆಗೆ 100 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದ್ದರೆ, ಅವರ ಮರಣದ ನಂತರ ಅವರ ವಾರಿಸುದಾರರಿಗೆ 45% ಆಸ್ತಿ ಸಿಗಲಿದೆ. ಉಳಿದ 55% ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ. ಇದೊಂದು ಒಳ್ಳೆಯ ಕಾನೂನು. ನಿಮ್ಮ ಜೀವಿತಾವಧಿಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ ಮತ್ತು ನೀವು ಅದನ್ನು ಬಿಟ್ಟು ಹೋಗುತ್ತಿದ್ದೀರಿ ಎಂದರೆ, ನಿಮ್ಮ ಸಂಪತ್ತಿನಲ್ಲಿ ಅರ್ಧದಷ್ಟನ್ನು ಸಾರ್ವಜನಿಕರಿಗಾಗಿ ನೀಡುವುದಾಗಿದೆ. ಇದೊಂದು ನ್ಯಾಯಯುತ ಕಾನೂನು ಎಂದು ನನಗೆ ಅನಿಸುತ್ತಿದೆ” ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಪಿತ್ರೋಡಾ, “ಭಾರತದಲ್ಲಿ ಈ ಕಾನೂನು ಇಲ್ಲ. ಇಲ್ಲಿ ಯಾರಾದರೂ 10 ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಮರಣ ಹೊಂದಿದರೆ, ಅವರ ಮಕ್ಕಳು ಆ 10 ಶತಕೋಟಿ ಆಸ್ತಿಯನ್ನೂ ಪಡೆಯುತ್ತಿದ್ದಾರೆ. ಹಾಗಾಗಿ, ಸಾರ್ವಜನಿಕರಿಗೆ ಏನೂ ಸಿಗುತ್ತಿಲ್ಲ. ಆದ್ದರಿಂದ, ಇದು ಜನರು ಚರ್ಚಿಸಬೇಕಾದ ವಿಷವಾಗಿದೆ. ಅಂತಿಮ ತೀರ್ಮಾನ ಏನು ಎಂಬುವುದು ನನಗೆ ಗೊತ್ತಿಲ್ಲ. ಆದರೆ, ಸಂಪತ್ತಿನ ಮರುಹಂಚಿಕೆಯ ಬಗ್ಗೆ ಮಾತನಾಡುವಾಗ ನಾವು ಈ ಹೊಸ ನೀತಿಗಳು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ. ಇದು ಜನರ ಹಿತಾಸಕ್ತಿಯಾಗಿಯೇ ಹೊರತು, ಅತಿ ಶ್ರೀಮಂತರ ಹಿತಾಸಕ್ತಿಗಾಗಿ ಮಾತ್ರ ಅಲ್ಲ” ಎಂದಿದ್ದಾರೆ.

ಎಎನ್‌ಐ ಎಕ್ಸ್ ಪೋಸ್ಟ್ ಲಿಂಕ್ ಇಲ್ಲಿದೆ 

ಈ ವಿಡಿಯೋದಲ್ಲಿರುವ ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಯಿಂದ ನಮಗೆ ಗೊತ್ತಾಗಿರುವ ಅಂಶವೇನೆಂದರೆ, “ಯುಎಸ್‌ನಲ್ಲಿ ಆಸ್ತಿಯ ಏಕಸ್ವಾಮ್ಯತೆಯನ್ನು ತೊಡೆದು ಹಾಕಲು ಪಿತ್ರಾರ್ಜಿತ ಆಸ್ತಿ ತೆರಿಗೆ ಚಾಲ್ತಿಯಲ್ಲಿರುವ ಬಗ್ಗೆ ಅವರು ಉದಾಹರಣೆ ನೀಡಿದ್ದಾರೆಯೇ ಹೊರತು, ಭಾರತದಲ್ಲಿ ಆ ರೀತಿಯ ತೆರಿಗೆ ಜಾರಿಗೆ ತರುತ್ತೇವೆ” ಎಂದು ಹೇಳಿಲ್ಲ.

ಸ್ಯಾಮ್ ಪಿತ್ರೋಡಾ ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ ಎಂಬ ಚರ್ಚೆಗಳು ಜೋರಾಗುತ್ತಿದ್ದಂತೆ ಸ್ವತಃ ಪಿತ್ರೋಡಾ ಅವರೇ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದ್ದು, “ಟಿವಿಯಲ್ಲಿ ಮಾತನಾಡುವ ವೇಳೆ ನಾನು ಯುಎಸ್‌ನಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಚಾಲ್ತಿಯಲ್ಲಿರುವ ಬಗ್ಗೆ ಉದಾಹರಣೆ ಕೊಟ್ಟಿದ್ದೇನೆ. ನಾನು ಸತ್ಯ ಹೇಳಬಾರದಾ? ಜನರು ಚರ್ಚಿಸಬೇಕಾದ ವಿಷಯಗಳು ಇವುಗಳಾಗಿವೆ ಎಂದು ನಾನು ಹೇಳಿದ್ದೆ. ಇದಕ್ಕೂ ಕಾಂಗ್ರೆಸ್‌ ಸೇರಿದಂತೆ ಯಾವುದೇ ಪಕ್ಷದ ನೀತಿಗಳಿಗೂ ಸಂಬಂಧವಿಲ್ಲ” ಎಂದಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಮತ್ತೊಂದು ಪೋಸ್ಟ್‌ನಲ್ಲಿ, “ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿಯವರು ಹರಡುತ್ತಿರುವ ಸುಳ್ಳುಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ನಾನು ಒಬ್ಬ ವ್ಯಕ್ತಿಯಾಗಿ ಅಮೇರಿಕದಲ್ಲಿರುವ ಪಿತ್ರಾರ್ಜಿತ ತೆರಿಗೆಯ ಕುರಿತು ಹೇಳಿದ್ದನ್ನು ಗೋದಿ ಮೀಡಿಯಾಗಳು ತಿರುಚಿರುವುದು ದುರದೃಷ್ಟಕರ. ಇದು ಮಂಗಳಸೂತ್ರ, ಚಿನ್ನದ ಕುರಿತ ಪ್ರಧಾನಿಯ ಹೇಳಿಕೆಯಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ 

55% ಆಸ್ತಿ ಕಿತ್ತುಕೊಳ್ಳಲಾಗುವುದು ಎಂದು ಯಾರು ಹೇಳಿದ್ದು? ಭಾರತದಲ್ಲಿ ಇಂತಹ ನಿಯಮ ತರುವುದಾಗಿ ಯಾರು ಹೇಳಿದ್ದು? ಬಿಜೆಪಿ ಮತ್ತು ಮಾಧ್ಯಮಗಳು ಹೆದರಿರುವುದು ಯಾಕೆ? ಎಂದು ಸ್ಯಾಮ್ ಪಿತ್ರೋಡಾ ಪ್ರಶ್ನಿಸಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆಯ ಕುರಿತು ಉಲ್ಲೇಖಿಸಿಲ್ಲ:

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಎಲ್ಲೂ ಪಿತ್ರಾರ್ಜಿತ ಆಸ್ತಿ ತೆರಿಗೆಯ ಕುರಿತು ಉಲ್ಲೇಖಿಸಿರುವುದು ನಮಗೆ ಕಂಡು ಬಂದಿಲ್ಲ. ಕಾಂಗ್ರೆಸ್‌ ಪ್ರಣಾಳಿಕೆಯ ‘ತೆರಿಗೆ ಮತ್ತು ತೆರಿಗೆ ಸುಧಾರಣೆ’ (Taxation and Tax Reforms) ಎಂಬ ಭಾಗದಲ್ಲಿ “ನೇರ ತೆರಿಗೆಗಳ ಕೋಡ್‌ನ ಜಾರಿ, ಏಂಜೆಲ್ ತೆರಿಗೆಯನ್ನು ತೆಗೆದು ಹಾಕುವುದು, ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳ ಮಾಲೀಕತ್ವದ MSMEಗಳ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಇತರರೊಂದಿಗೆ ಜಿಎಸ್‌ಟಿ ಕೌನ್ಸಿಲ್ ಅನ್ನು ಮರುವಿನ್ಯಾಸಗೊಳಿಸುವುದು ಈ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಎಲ್ಲೂ ಕೂಡ ಪಿತ್ರಾರ್ಜಿತ ಆಸ್ತಿ ತೆರಿಗೆ ಅಥವಾ ಪೂರ್ವಜರ ಸಂಪತ್ತಿನ ಮೇಲೆ ವಿಧಿಸುವ ಕುರಿತು ಉಲ್ಲೇಖಿಸಿಲ್ಲ.

ಪಿತ್ರಾರ್ಜಿತ (ಆನುವಂಶಿಕತೆ) ಎಂಬ ಪದವನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಂದೇ ಒಂದು ಭಾರಿ ಉಲ್ಲೇಖಿಸಿದೆ. ಪ್ರಣಾಳಿಕೆಯ ಮಹಿಳಾ ಸಬಲೀಕರಣ (women’s empowerment)ಭಾಗದಲ್ಲಿ “ಮದುವೆ, ಉತ್ತರಾಧಿಕಾರ, ಪಿತ್ರಾರ್ಜಿತ, ದತ್ತು, ಪಾಲನೆ ಇತ್ಯಾದಿ ವಿಷಯಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಹಕ್ಕುಗಳು ಇರಬೇಕು. ನಾವು ಎಲ್ಲಾ ಕಾನೂನುಗಳನ್ನು ಪರಿಶೀಲಿಸುತ್ತೇವೆ ಮತ್ತು ಪುರುಷರು ಮತ್ತು ಮಹಿಳೆಯರ ನಡುವೆ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಕಾಂಗ್ರೆಸ್ ಹೇಳಿದೆ.

ಇವಿಷ್ಟೇ ಅಲ್ಲದೆ, ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಯಾರೂ ಕೂಡ ಪಿತ್ರಾರ್ಜಿತ ಆಸ್ತಿ ತೆರಿಗೆಯ ಕುರಿತು ಇತ್ತೀಚೆಗೆ ಹೇಳಿಕೆ ನೀಡಿಲ್ಲ.

ಗಮನಾರ್ಹವಾಗಿ, ಯುಪಿಎ 2.0 ಅವಧಿಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಆಗಿನ ಕೇಂದ್ರ ಸಚಿವ ಪಿ ಚಿದಂಬರಂ ಅವರು ದೇಶದಲ್ಲಿ ಕಡಿಮೆ ತೆರಿಗೆ-ಜಿಡಿಪಿ ಅನುಪಾತದ ಕಾರಣ ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೊಳಿಸುವ ಆಲೋಚನೆಯನ್ನು ಮುಂದಿಟ್ಟಿದ್ದರು ಎಂದು ವರದಿಯಾಗಿದೆ. ಆದರೆ, ಆ ನಿಯಮ ಇದುವರೆಗೆ ಜಾರಿಯಾಗಿಲ್ಲ.

‘ಎಸ್ಟೇಟ್ ಡ್ಯೂಟಿ ಆಕ್ಟ್’ ಅನ್ನು 1953ರಲ್ಲಿ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ ರದ್ದುಗೊಳಿಸಲಾಯಿತು:

1953ರ ಎಸ್ಟೇಟ್ ಡ್ಯೂಟಿ ಆಕ್ಟ್ ಅಡಿಯಲ್ಲಿ ಭಾರತದಲ್ಲಿ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ರಾಜೀವ್ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರ್ಕಾರವು 1985 ರಲ್ಲಿ ಅದನ್ನು ರದ್ದುಗೊಳಿಸಿತು. ಆಗ ದೇಶದ ಹಣಕಾಸು ಸಚಿವರಾಗಿದ್ದ ವಿ.ಪಿ.ಸಿಂಗ್ ಅವರು, ಈ ಕಾಯ್ದೆಯು ಸಮಾಜದಲ್ಲಿ ಸಮತೋಲನವನ್ನು ತರಲು ಮತ್ತು ಸಂಪತ್ತಿನ ಅಂತರವನ್ನು ಕಡಿಮೆ ಮಾಡಲು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ : FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ ಹಾಕುತ್ತೇವೆಂದು ರಾಹುಲ್ ಗಾಂಧಿ ಹೇಳಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಬಿಎಸ್‌ವೈ ವಿರುದ್ಧ ಕಾಂಗ್ರೆಸ್ ಸೇಡು; ಬಿಜೆಪಿ ಆರೋಪ

0
'ರಾಜ್ಯದ ಕಾಂಗ್ರೆಸ್ ಸರ್ಕಾರವು ಮಾಜಿ ಮುಖ್ಯಮಂತ್ರಿ ಬಿ.ಎಸ್ ಒಳಗೊಂಡಿರುವ ಪೋಕ್ಸೋ ಪ್ರಕರಣದಲ್ಲಿ ಸೇಡಿನ ರಾಜಕಾರಣ ಮಾಡುತ್ತಿದೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ" ಎಂದು ರಾಜ್ಯ...