HomeದಿಟನಾಗರFACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ ಮೋದಿ...

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ ಮೋದಿ ಹೇಳಿಕೆ ಸುಳ್ಳು

- Advertisement -
- Advertisement -

“ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ ಕೋಟಾವನ್ನು ನಾವು ನಿಲ್ಲಿಸಿದೆವು. ಹಕ್ಕುದಾರರಿಗೆ ಅವರ ಹಕ್ಕುಗಳನ್ನು ನಾವು ಕೊಟ್ಟೆವು” ಎಂದು ರಾಜಸ್ಥಾನದ ಟೋಂಕ್‌ನಲ್ಲಿ ಮಂಗಳವಾರ (ಏ.23) ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಹೇಳಿದಂತೆ ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ 4% ಮೀಸಲಾತಿಯನ್ನು ಬಿಜೆಪಿ ಸರ್ಕಾರ ಇದ್ದಾಗ ರದ್ದುಪಡಿಸಿ, ಅದನ್ನು ಮತ್ತೆ ಎಸ್‌ಸಿ, ಎಸ್‌ಟಿಗಳಿಗೆ ನೀಡಿದ್ದು ನಿಜಾನಾ? ಎಂಬುವುದರ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ.

ಫ್ಯಾಕ್ಟ್‌ಚೆಕ್ : ಮಾರ್ಚ್ 2023ರಲ್ಲಿ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ರಾಜ್ಯದ ಬಿಜೆಪಿ ಸರ್ಕಾರವು “2ಬಿ” ಹಿಂದುಳಿದ ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾದ 4% ಮೀಸಲಾತಿಯನ್ನು ರದ್ದುಗೊಳಿಸಿತ್ತು ಮತ್ತು ಸಮುದಾಯವನ್ನು ಸಾಮಾನ್ಯ ವರ್ಗದ EWSನ 10% ಕೋಟಾದಡಿ ತಂದಿತ್ತು.

ಮುಸ್ಲಿಮರಿಗೆ ನೀಡಲಾಗಿದ್ದ 4% ಮೀಸಲಾತಿಯನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಲು ಸರ್ಕಾರ ಮುಂದಾಗಿತ್ತು. ಒಕ್ಕಗಲಿಗರು 3ಎ ಅಡಿ 4 % ಮತ್ತು ಲಿಂಗಾಯತರು 3ಬಿ ಅಡಿ 5% ಮೀಸಲಾತಿ ಹೊಂದಿದ್ದರು. ಸರ್ಕಾರ ಒಕ್ಕಲಿಗರಿಗೆ 2 (ಸಿ) ಅಡಿಯಲ್ಲಿ 6% ಮತ್ತು ಲಿಂಗಾಯತರಿಗೆ 2 (ಡಿ) ಅಡಿಯಲ್ಲಿ 7% ಮೀಸಲಾತಿ ನೀಡಲು ನಿರ್ಧರಿಸಿತ್ತು. ಆದರೆ, ಇದು ಇನ್ನೂ ಜಾರಿಗೆ ಬಂದಿಲ್ಲ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಹಾಗಾಗಿ, ಪ್ರಕರಣ ಈಗ ನ್ಯಾಯಾಲಯದಲ್ಲಿದೆ.

ಇನ್ನು, ‘2ಬಿ’ ಹಿಂದುಳಿದ ವರ್ಗದ ಅಡಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡಿದ್ದು, 1994 ರಲ್ಲಿ ಹೆಚ್ ಡಿ ದೇವೇಗೌಡ ನೇತೃತ್ವದ ಸರ್ಕಾರ. ಇದು, 1918 ರಲ್ಲಿ ಅಂದಿನ ಮೈಸೂರು ರಾಜಪ್ರಭುತ್ವದ ಆಳ್ವಿಕೆಯಲ್ಲಿ ಪ್ರಾರಂಭಿಸಿದ ಕ್ರಮದ ಮುಂದುವರಿದ ಭಾಗವಾಗಿತ್ತು ಎಂದು ತಿಳಿದು ಬಂದಿದೆ.

ಸದ್ಯಕ್ಕೆ, ರಾಜ್ಯದಲ್ಲಿ ಮುಸ್ಲಿಮರಿಗೆ ಒಬಿಸಿಯ 2ಬಿ ಅಡಿಯಲ್ಲಿ ನೀಡಲಾಗಿದ್ದ 4% ಮೀಸಲಾತಿ ರದ್ದಾಗಿಲ್ಲ. ಮುಸ್ಲಿಮರನ್ನು 10% ಮೀಸಲಾತಿ ಇರುವ ಇಡಬ್ಯುಎಸ್‌ ಅಡಿ ತರುವ ಪ್ರಯತ್ನವೂ ಸಫಲಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಎಸ್‌ಸಿ, ಎಸ್‌ಟಿ ವಿಚಾರಕ್ಕೆ ಬಂದರೆ, ಅವರ ಮೀಸಲಾತಿ ಈ ಹಿಂದಿನಿಂದಲೂ ಯಥಾ ಸ್ಥಿತಿಯಲ್ಲಿ ಇದೆ. ಎಸ್‌ಸಿಗಳಿಗೆ 15% ಮತ್ತು ಎಸ್‌ಟಿಗಳಿಗೆ 3% ಮೀಸಲಾತಿ ನೀಡಲಾಗಿದೆ. ಮುಸ್ಲಿಮರಿಗೆ ಒಬಿಸಿಯ 2ಬಿ ಅಡಿ ಪ್ರತ್ಯೇಕವಾಗಿ 4% ನೀಡಲಾಗಿತ್ತೇ ಹೊರತು, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಕೊಟ್ಟಿರಲಿಲ್ಲ. ಹಾಗಾಗಿ,ಎಸ್‌ಸಿ, ಎಸ್‌ಟಿಗಳಿಂದ ಕಿತ್ತು ಮುಸ್ಲಿಮರಿಗೆ ನೀಡಲಾಗಿದ್ದ 4% ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಸುಳ್ಳು.

ಪ್ರಧಾನಿ ಮಾತನಾಡುವಾಗ, ಮುಸ್ಲಿಮರ 4% ಮೀಸಲಾತಿ ರದ್ದುಪಡಿಸಿ ಎಸ್‌ಸಿ, ಎಸ್‌ಟಿಗಳಿಗೆ ಅವರ ಹಕ್ಕು ಕೊಟ್ಟಿದ್ದೇವೆ ಎಂದಿದ್ದಾರೆ. ಇದರರ್ಥ, ಮುಸ್ಲಿಮರಿಂದ ಕಿತ್ತುಕೊಂಡ 4% ಎಸ್‌ಸಿ, ಎಸ್‌ಟಿಗಳಿಗೆ ಮರಳಿಸಿದ್ದೇವೆ ಎಂದು. ಇದು ಸುಳ್ಳು ಹೇಳಿಕೆಯಾಗಿದೆ. ಮುಸ್ಲಿಮರಿಗೆ ನೀಡಲಾಗಿದ್ದ 4% ಮೀಸಲಾತಿ ರದ್ದುಪಡಿಸಿ ಎಸ್‌ಸಿ, ಎಸ್‌ಟಿಗಳಿಗೆ ನೀಡಿಲ್ಲ.

ಪ್ರಧಾನಿ ನೀಡಿರುವ ಮತ್ತೊಂದು ಹೇಳಿಕೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ಮೊದಲು ಮಾಡಿದ ಕೆಲಸ ಮುಸ್ಲಿಮರ 4% ಮೀಸಲಾತಿ ರದ್ದುಪಡಿಸಿದ್ದು ಎಂಬುವುದು. ಆದರೆ, ಇದೂ ಸುಳ್ಳು ಹೇಳಿಕೆಯಾಗಿದೆ. ಬಿಜೆಪಿ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಪಡಿಸಿದ್ದು, ತಮ್ಮ ಅಧಿಕಾರವದಿಯ ಅಂತ್ಯದಲ್ಲಿ. ಅಂದರೆ, ಮಾರ್ಚ್‌ 2023ರಲ್ಲಿ.

ಗಮನಾರ್ಹ ಸಂಗತಿಯೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡಲಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ. ಆದರೆ, ಈ ಮೀಸಲಾತಿ ಮುಸ್ಲಿಮರಿಗೆ ನೀಡಿದ್ದು, ಹೆಚ್‌.ಡಿ ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರ. ಇದೇ ದೇವೇಗೌಡರ ಪಕ್ಷ ಜೆಡಿಎಸ್‌ ಈಗ ಕರ್ನಾಟಕದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿದೆ. ದೇವೇಗೌಡರು ಮತ್ತು ಮೋದಿ ಇತ್ತೀಚೆಗೆ ಪರಸ್ಪರ ಹೊಗಳಿಕೆಯ ಮಾತುಗಳನ್ನಾಡಿದ್ದರು.

ಇದನ್ನೂ ಓದಿ : FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...