ಇಸ್ರೇಲ್-ಹೆಜ್ಬುಲ್ಲಾ ಸಂಘರ್ಷದ ನಡುವೆ ಲೆಬನಾನ್ ರಾಜಧಾನಿ ಬೈರುತ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಸಾವನ್ನಪ್ಪಿದ್ದಾರೆ ಎಂದು ಸೆಪ್ಟೆಂಬರ್ 27, 2024ರಂದು ಹೆಜ್ಬುಲ್ಲಾ ಖಚಿತಪಡಿಸಿದೆ.
ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ವಿಡಿಯೋದಲ್ಲಿ ಬೈಕ್ ಮತ್ತು ಕಾರುಗಳಲ್ಲಿ ಬರುವ ಒಂದಷ್ಟು ಜನರು ಬೀದಿ ಜಗಳದಲ್ಲಿ ತೊಡಗಿರುವುದು ಇದೆ. ಈ ವಿಡಿಯೋ ಹಂಚಿಕೊಂಡಿರುವ ಕೆಲವರು ಹಸನ್ ನಸ್ರಲ್ಲಾ ಹತ್ಯೆಯ ಬಳಿಕ ಲೆಬನಾನ್‌ನಲ್ಲಿ ಸುನ್ನೀ-ಶಿಯಾಗಳ ನಡುವೆ ಆಂತರಿಕ ಕಚ್ಚಾಟ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್ 30ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಭಾಸ್ಕರ್ ಮಿಶ್ರಾ ಎಂಬ ಬಳಕೆದಾರ (@Bhaskar_m11) ಲೆಬನಾನ್‌ನಲ್ಲಿ ಶಿಯಾ-ಸುನ್ನೀ ಸಂಘರ್ಷ ಶುರುವಾಗಿದೆ. ಹೆಜ್ಬುಲ್ಲಾ ಬೆಂಬಲಿತ ಶಿಯಾ ಮುಸ್ಲಿಮರ ಮೇಲೆ ಈಗ ಸುನ್ನೀ ಮುಸ್ಲಿಮರು ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್ ದಾಳಿಯ ಬಳಿಕ ತುಂಬಾ ಪ್ರಶ್ನೆಗಳು ಬದಲಾಗಿವೆ” ಎಂದು ಬರೆದುಕೊಂಡಿದ್ದರು.

“ಲೆಬನಾನ್‌ನಲ್ಲಿ ಸುನ್ನೀ-ಶಿಯಾ ಸಂಘರ್ಷ ರಕ್ತಪಾತ” ಎಂದು ಸೆಪ್ಟೆಂಬರ್ 30ರಂದು ಕನ್ನಡ ಸುದ್ದಿ ವೆಬ್‌ಸೈಟ್ ಈ ಸಂಜೆ ವರದಿ ಮಾಡಿತ್ತು. ವರದಿಯಲ್ಲಿ “ಸುನ್ನೀ ಮುಸ್ಲಿಂ ಸಮುದಾಯ ಈಗ ಹಿಜ್ಬುಲ್ ಬೆಂಬಲಿಗರನ್ನು ನಡು ರಸ್ತೆಯಲ್ಲೇ ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುತ್ತಿದ್ದಾರೆ. ದೇಶದಲ್ಲಿ ಹರಾಜುಕತೆ ಸೃಷ್ಟಿಯಾಗಿದ್ದು, ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ” ಎಂದು ವಿವರಿಸಿತ್ತು. ಈ ಸಂಜೆ ಯಾವ ಮೂಲದಿಂದ ಈ ಮಾಹಿತಿ ಪಡೆದಿದೆ ಎಂದು ಗೊತ್ತಿಲ್ಲ.

ಫ್ಯಾಕ್ಟ್‌ಚೆಕ್ : ಹೆಜ್ಬುಲ್ಲಾ ನಾಯಕನ ಹತ್ಯೆ ಬಳಿಕ ಲೆಬನಾನ್‌ನಲ್ಲಿ ಸುನ್ನೀ-ಶಿಯಾಗಳ ನಡುವೆ ಸಂಘರ್ಷ ಏರ್ಪಟ್ಟಿರುವ ಬಗ್ಗೆ ಮಾಧ್ಯಮ ವರದಿಗಳನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಯಾವುದೇ ಪ್ರಮುಖ, ವಿಶ್ವಾಸಾರ್ಹ ಮಾಧ್ಯಮಗಳಲ್ಲಿ ಆ ಕುರಿತು ವರದಿಯಾಗಿರುವುದು ನಮಗೆ ಕಂಡು ಬಂದಿಲ್ಲ.
ಎಕ್ಸ್ ಬಳಕೆದಾರ ಭಾಸ್ಕರ್ ಮಿಶ್ರಾ ಹಂಚಿಕೊಂಡಿರುವ ವಿಡಿಯೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಮೇ 8, 2018ರಲ್ಲಿ ವಿಡಿಯೋ ಕುರಿತು ಪ್ರಕಟಗೊಂಡ ಅರೆಬಿಕ್ ವರದಿಯೊಂದು ಲಭ್ಯವಾಗಿದೆ.
skynewsarabia.com ಪ್ರಕಟಿಸಿದ ವರದಿಯಲ್ಲಿ 2018ರಲ್ಲಿ ಲೆಬನಾನ್ ಸಂಸತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜಧಾನಿ ಬೈರುತ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಹೆಜ್ಬುಲ್ಲಾ ಬೆಂಬಲಿಗರು ಮತ್ತು ಸಂಘಟನೆಯ ಸದಸ್ಯರು ಸುನ್ನೀ ಮತ್ತು ಕ್ರೈಸ್ತ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಾರೆ. ಇದು ಅಲ್ಲಿನ ನಿವಾಸಿಗಳು ಮತ್ತು ಸಂಘಟನೆಯ ಸದಸ್ಯರ ನಡುವೆ ಗಲಾಟೆಗೆ ಕಾರಣವಾಗಿದೆ. ಬೀದಿ ಜಗಳ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದಿದೆ. 2008ರಲ್ಲಿ ಹೆಜ್ಬುಲ್ಲಾ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿ ರಾಜಕೀಯ ಪ್ರಾಬಲ್ಯ ಪಡೆದಾಗಲೂ ಈ ರೀತಿಯ ಸಂಘರ್ಷ ನಡೆದಿದೆ” ಎಂದು ತಿಳಿಸಲಾಗಿದೆ.
ಮತ್ತೊಂದು ಅರೆಬಿಕ್ ಸುದ್ದಿ ವೆಬ್‌ಸೈಟ್ yafa.newsನಲ್ಲೂ “ಮೇ 8, 2018ರಲ್ಲಿ ಪ್ರಕಟಗೊಂದ ವರದಿಯಲ್ಲಿ ಸಂಸತ್ ಚುನಾವಣೆಯಲ್ಲಿ ಹೆಜ್ಬುಲ್ಲಾ ಮುನ್ನಡೆ ಸಾಧಿಸಿದ ಬಳಿಕ ಹೆಜ್ಬುಲ್ಲಾ ಮತ್ತು ಅಮಲ್ ಇಸ್ಲಾಮಿಕ್ ವಿವಿದೆಡೆ ಪ್ರಚೋದನಕಾರಿ ಘೋಷಣೆ ಕೂಗುತ್ತಾ ಜಾಥಾ ನಡೆಸಿದ್ದು, ಇದರಿಂದ ಬೈರುತ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ” ಎಂದು ಹೇಳಲಾಗಿದೆ.
dd-sunnah.net ಎಂಬ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ವರದಿಯಲ್ಲೂ ಅದನ್ನೇ ತಿಳಿಸಲಾಗಿದೆ.
ಒಟ್ಟಿನಲ್ಲಿ ನಾವು ಈ ಸುದ್ದಿಯಲ್ಲಿ ಉಲ್ಲೇಖಿಸಿದ ವೈರಲ್ ವಿಡಿಯೋ ಲೆಬನಾನ್‌ನಲ್ಲಿ 2018ರಲ್ಲಿ ಸಂಸತ್ ಚುನಾವಣೆ ನಡೆದಾಗ ಸಂಭವಿಸಿದ ರಾಜಕೀಯ ಸಂಘರ್ಷದ್ದಾಗಿದೆ. ಹೆಜ್ವುಲ್ಲಾ ನಾಯಕನ ಹತ್ಯೆ ಬಳಿಕ ಉಂಟಾದ ಸುನ್ನೀ-ಶಿಯಾ ಸಂಘರ್ಷದಲ್ಲ.
ಇನ್ನು ಈ ಸಂಜೆ ಪ್ರಕಟಿಸಿರುವ ವರದಿಯ ಮಾಹಿತಿಗಳನ್ನು ಯಾವ ಮೂಲದಿಂದ ಪಡೆಯಲಾಗಿದೆ ಎಂಬುವುದು ಗೊತ್ತಾಗಿಲ್ಲ. ಒಟ್ಟಿನಲ್ಲಿ ಹೆಜ್ಬುಲ್ಲಾ ನಾಯಕನ ಹತ್ಯೆ ಬಳಿಕ ಲೆಬನಾನ್‌ನಲ್ಲಿ ಸುನ್ನೀ-ಶಿಯಾ ಸಂಘರ್ಷ ಏರ್ಪಟ್ಟ ಬಗ್ಗೆ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ವರದಿ ಮಾಡಿರುವುದು ನಮಗೆ ಲಭ್ಯವಾಗಿಲ್ಲ.
ಇದನ್ನೂ ಓದಿ : FACT CHECK : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ‘ವೀಟೋ ಅಧಿಕಾರ’ ದೊರೆತಿದೆ ಎಂಬುವುದು ಸುಳ್ಳು


