“ಮುಸ್ಲಿಮರಿಗೆ ಅನುದಾನ ಅಥವಾ ಹಣ ಅವಶ್ಯಕತೆ ಬಂದರೆ ಕಾಂಗ್ರೆಸ್ ಸರ್ಕಾರ ಹಿಂದೂ ದೇವಸ್ಥಾನಗಳ ಜಮೀನು ಹರಾಜು ಹಾಕಿ ಮುಸ್ಲಿಮರ ರಕ್ಷಣೆ ಮಾಡಲಿದೆ” ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ ಎಂಬ ತೆಲುಗು ಸುದ್ದಿ ವಾಹಿನಿ ಎನ್‌ಟಿವಿಯ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ತೆಲಂಗಾಣ ಸಿಎಂ ರೇವಣ್ಣ ರೆಡ್ಡಿ ಆ ರೀತಿ ಹೇಳಿದ್ದಾರಾ? ಎಂದು ನಾವು ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ರೇವಂತ್ ರೆಡ್ಡಿ ಅಂತಹ ಯಾವುದೇ ಘೋಷಣೆ ಮಾಡಿರುವ ಬಗ್ಗೆ ವರದಿಗಳು ದೊರೆತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಎನ್‌ಟಿವಿ ಸ್ಕ್ರೀನ್ ಶಾಟ್ ಹಂಚಿಕೊಂಡಿರುವುದರಿಂದ, ನಾವು ಎನ್‌ಟಿವಿ ಅಂತಹ ಸುದ್ದಿ ಪ್ರಕಟಿಸಿದೆಯಾ? ಎಂದು ಪರಿಶೀಲಿಸಿದ್ದೇವೆ. ನಮಗೆ ಯಾವುದೇ ಸುದ್ದಿ ಲಭ್ಯವಾಗಿಲ್ಲ.
ಗಮನಾರ್ಹವಾಗಿ, ಸಿಎಂ ಅಂತಹ ಘೋಷಣೆ ಮಾಡಿದ್ದರೆ, ಅದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಹಾಗಾಗಿ, ಎನ್‌ಟಿವಿ ಹೆಸರಿನಲ್ಲಿ ಹಂಚಿಕೊಳ್ಳಲಾದ ಸುದ್ದಿಯ ಸ್ಕ್ರೀನ್ ಶಾಟ್ ನಕಲಿ ಎಂದು ಗೊತ್ತಾಗಿದೆ.
ಇನ್ನು, ಈ ಕುರಿತು ಎನ್‌ಟಿವಿ ಡಿಜಿಟಲ್ ಮ್ಯಾನೇಜರ್ ಚಿಲುಕುರಿ ಶ್ರೀನಿವಾಸ್ ರಾವ್ 14 ನವೆಂಬರ್ 2023ರಂದೇ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದ್ದರು.”ಈ ಸುದ್ದಿಗೂ ಎನ್‌ಟಿವಿಗೂ ಯಾವುದೇ ಸಂಬಂಧವಿಲ್ಲ, ಇದು ಫೇಕ್ ನ್ಯೂಸ್. ಎನ್‌ಟಿವಿ ಹೆಸರಿನಲ್ಲಿ ಇಂತಹ ಸುಳ್ಳು ಸುದ್ದಿ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದಿದ್ದರು.

ವೇ2 ನ್ಯೂಸ್ ಹೆಸರಿನಲ್ಲೂ ಕೆಲವರು ಈ ಹಿಂದೆ ಇದೇ ಸುದ್ದಿಯನ್ನು ಹಂಚಿಕೊಂಡಿದ್ದರು. ಆಗ ವೇ2 ನ್ಯೂಸ್ ಕೂಡ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿತ್ತು. “ಈ ಸುದ್ದಿ ನಮ್ಮದಲ್ಲ. ನಮ್ಮ ಲೋಗೋ ಬಳಸಿ ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡಿದ್ದಾರೆ” ಎಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ರೇವಂತ್ ರೆಡ್ಡಿಯ ಕುರಿತು ಸುಳ್ಳು ಸುದ್ದಿ ಸೃಷ್ಟಿಸಿದ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರ ತಂಡವೊಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ ಎಂದು ನವೆಂಬರ್ 15, 2023ರಂದು ‘ದಿ ಹಿಂದೂ’ ಪತ್ರಿಕೆ ಸುದ್ದಿ ಪ್ರಕಟಿಸಿತ್ತು.

ನಾವು ನಡೆಸಿದ ಪರಿಶೀಲನೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸುದ್ದಿ ನಕಲಿ ಎಂದು ಖಚಿತವಾಗಿದೆ.
ಇದನ್ನೂ ಓದಿ : FACT CHECK : ಹಿಂದೂ ದೇವಸ್ಥಾನದ ರಥೋತ್ಸವ ಸಮಿತಿಗೆ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ವ್ಯಕ್ತಿಯನ್ನು ಆಯ್ಕೆ ಮಾಡಿದೆಯಾ?


