ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ಆಗಸ್ಟ್ 14-15 ರ ರಾತ್ರಿ ಕೋಲ್ಕತ್ತಾ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಿಂದ ಮನೆಗೆ ಹಿಂದಿರುಗುವಾಗ ಪಶ್ಚಿಮ ಬಂಗಾಳದ ಬುರ್ದ್ವಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅಂಕಿತಾ ಬೌರಿ ಎಂಬಾಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು.
ರಿದಿಮಾ (@ridhima_z) ಎಂಬ ಎಕ್ಸ್ ಬಳಕೆದಾರರು ಆಗಸ್ಟ್ 16ರಂದು ಹಾಕಿದ ಪೋಸ್ಟ್‌ನಲ್ಲಿ “ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ನಡೆದ ಪ್ರತಿಭಟನೆಯಿಂದ ಹಿಂದಿರುಗುತ್ತಿದ್ದ ಬುರ್ದ್ವಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅಂಕಿತಾ ಬೌರಿ ಎಂಬಾಕೆಯನ್ನು ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಲಾಗಿದೆ. ಬಳಿಕ ಯಾರೂ ಗುರುತು ಹಿಡಿಯಬಾರದು ಎಂದು ಆಕೆಯ ಮುಖದ ಮೇಲೆ ಕಲ್ಲು ಎತ್ತಿಹಾಕಿ ವಿರೂಪಗೊಳಿಸಲಾಗಿದೆ” ಎಂದು ಬರೆದುಕೊಂಡಿದ್ದರು.

ಅಯಾನ್ (@syedayan24) ಎಂಬ ಮತ್ತೊಬ್ಬರು ಎಕ್ಸ್ ಬಳಕೆದಾರರು ಆಗಸ್ಟ್ 16ರಂದು ಹಾಕಿದ ಪೋಸ್ಟ್‌ನಲ್ಲಿ ಮೇಲೆ ನಾವು ಉಲ್ಲೇಖಿಸಿದ ಅದೇ ವಿಷಯವನ್ನು ಬರೆದುಕೊಂಡಿದ್ದರು.

ಅದೇ ರೀತಿ ಒಂದೇ ವಿಷಯವನ್ನು ಅನೇಕ ಎಕ್ಸ್ ಬಳಕೆದಾರರು ಆಗಸ್ಟ್ 16ರಂದು ಪೋಸ್ಟ್ ಮಾಡಿದ್ದರು. ಎಕ್ಸ್ ಮಾತ್ರವಲ್ಲದೆ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲೂ ಈ ವಿಷಯ ಹರಿದಾಡಿತ್ತು.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿಯ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ದಿ ಸ್ಟೇಟಸ್‌ಮ್ಯಾನ್ ಸುದ್ದಿ ವೆಬ್‌ಸೈಟ್ ಆಗಸ್ಟ್ 16ರಂದು ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಆ ವರದಿಯಲ್ಲಿ “ಬುರ್ದ್ವಾನ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ಪ್ರಿಯಾಂಕಾ ಹನ್ಸ್ದಾ ಎಂಬ 25 ವರ್ಷದ ಬುಡಕಟ್ಟು ಯುವತಿಯನ್ನು ಬುರ್ದ್ವಾನ್‌ನ ನಂದೂರ್ ಗ್ರಾಮದಲ್ಲಿ ಕೊಲೆ ಮಾಡಲಾಗಿದೆ. ಆಗಸ್ಟ್ 14 ಮತ್ತು 15ರ ಮಧ್ಯರಾತ್ರಿ ಮನೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಕೃಷಿ ಭೂಮಿಯಲ್ಲಿ ಆಕೆ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ” ಎಂದು ಹೇಳಲಾಗಿದೆ.

“ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ಈ ಕುರಿತು ಸುದ್ದಿ ಹಬ್ಬಿದಾಗ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ, ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪೂರ್ವ ಬುರ್ದ್ವಾನ್‌ನ ಎಸ್‌ಪಿ ಅಮನ್‌ದೀಪ್ ಸಿಂಗ್ ಸ್ಪಷ್ಟಪಡಿಸಿದ್ದಾರೆ” ಎಂದು ಸ್ಟೇಟಸ್‌ಮ್ಯಾನ್ ವರದಿ ಉಲ್ಲೇಖಿಸಿದೆ.
ದಿ ಟೆಲಿಗ್ರಾಫ್‌ನ ಮತ್ತೊಂದು ವರದಿಯೂ ನಮಗೆ ಲಭ್ಯವಾಗಿದ್ದು ಅದರಲ್ಲೂ “ಪೂರ್ವ ಬುರ್ದ್ವಾನ್ ಪೊಲೀಸರು ಸುದ್ದಿಗೋಷ್ಠಿ ನಡೆಸಿ 22 ವರ್ಷದ ಬುಡಕಟ್ಟು ಯುವತಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ” ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದಂತೆ ಅಂಕಿತಾ ಬೌರಿ ಎಂಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಯಾವುದೇ ವರದಿಗಳನ್ನು ನಮಗೆ ಕಂಡು ಬಂದಿಲ್ಲ.
ಆಗಸ್ಟ್ 17ರಂದು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದ ಪುರ್ಬಾ ಬರ್ಧಮಾನ್ (ಪೂರ್ವ ಬುರ್ದ್ವಾನ್) ಪೊಲೀಸರು, ಸಾಮಾಜಿಕ ಜಾಲತಾಣದ ಸುದ್ದಿ ‘ವದಂತಿ’ ಎಂದು ತಿಳಿಸಿದ್ದು, ಅಂಕಿತಾ ಬೌರಿ ಎಂಬ ಯುವತಿಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಯಾವುದೇ ಘಟನೆ ಬುರ್ದ್ವಾನ್‌ನಲ್ಲಿ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ವದಂತಿಗಳನ್ನು ಹರಡದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದರು.
Some people are spreading rumours that a girl named Ankita Bauri has been raped and murdered on 14th August when she was returning home after taking part in a march connected with RG Kar incident.
…(1/2)— Purba Bardhaman Police (@BurdwanPolice) August 17, 2024
ಪೂರ್ವ ಬುರ್ದ್ವಾನ್ ಜಿಲ್ಲಾ ಪೊಲೀಸ್‌ನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲೂ ಸಾಮಾಜಿಕ ಜಾಲತಾಣದ ಸುದ್ದಿಯ ಕುರಿತು ಬಂಗಾಳಿ ಭಾಷೆಯಲ್ಲಿ ಸ್ಪಷ್ಟನೆ ಕೊಡಲಾಗಿತ್ತು. ಅದರಲ್ಲೂ” ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ಖಂಡಿಸಿ ನಡೆದ ಪ್ರತಿಭಟನೆಯಿಂದ ಹಿಂದಿರುಗುತ್ತಿದ್ದ ಅಂಕಿತಾ ಬೌರಿ ಎಂಬ ಯುವತಿಯನ್ನು ಅತ್ಯಾವಾರವೆಸಗಿ ಕೊಲೆ ಮಾಡಿರುವ ಯಾವುದೇ ಘಟನೆ ಬುರ್ದ್ವಾನ್‌ನಲ್ಲಿ ನಡೆದಿಲ್ಲ. ಇಂತಹ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪುರ್ಬಾ ಬುರ್ದ್ವಾನ್ ಪೊಲೀಸರು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಬದ್ಧರಾಗಿದ್ದಾರೆ” ಎಂದು ಹೇಳಲಾಗಿತ್ತು.

ಒಟ್ಟಿನಲ್ಲಿ, ಆಗಸ್ಟ್ 15ರ ರಾತ್ರಿ ಪ್ರತಿಭಟನಾ ಸ್ಥಳದಿಂದ ಹಿಂದಿರುಗುತ್ತಿದ್ದ ಅಂಕಿತಾ ಬೌರಿ ಎಂಬ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ ವೈರಲ್ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಕಟ್ಟುಕಥೆಯಾಗಿದೆ.
ಆಗಸ್ಟ್ 15 ರಂದು ಬೆಳಗ್ಗೆ ಬುರ್ದ್ವಾನ್ ನಂದೂರ್‌ನ ಕೃಷಿ ಭೂಮಿಯಲ್ಲಿ ಪ್ರಿಯಾಂಕಾ ಹನ್ಸ್ದಾ ಎಂಬ ಆದಿವಾಸಿ ಯುವತಿಯ ಶವ ಪತ್ತೆಯಾಗಿತ್ತು. ಆದರೆ, ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಅಂಕಿತಾ ಬೌರಿ ಎಂಬ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸರೇ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : FACT CHECK : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಪೊಲೀಸರೇ ಮನೆಗೆ ಬಿಡ್ತಾರೆ ಎನ್ನುವುದು ಸುಳ್ಳು


