“ಅಸ್ಸಾಂನಲ್ಲಿ ಕಾಜಲ್ ಎಂಬ ಹುಡುಗಿಯೊಬ್ಬಳು ಶಮ್ಮೀ ಅಲಿಯಾಸ್ ಶಬೀರ್ ಮಿಯಾನ್ ಎಂಬ ಮುಸ್ಲಿಂ ಹುಡುಗನ ಜೊತೆ ಲೀವ್ ಇನ್ ಸಂಬಂಧದಲ್ಲಿದ್ದಳು. ಶಬೀರ್ ಆಕೆಯನ್ನು ಅತ್ಯಾಚಾರವೆಸಗಿದ್ದ, ನಂತರ ಪ್ರಜ್ಞಾ ಹೀನಾಳಾಗಿದ್ದ ಹುಡುಗಿಯನ್ನು ಆತ ಜೀವಂತವಾಗಿ ಫ್ರಿಜ್ಡ್‌ನಲ್ಲಿಟ್ಟಿದ್ದ. ಇದರಿಂದ ಆಕೆ ಸಾವನ್ನಪ್ಪಿದ್ದಳು. ಬಳಿಕ ಫ್ರಿಡ್ಜ್‌ನಿಂದ ಮೃತದೇಹ ಹೊರ ತೆಗೆದು ಸುಮಾರು 8 ದಿನಗಳ ಕಾಲ ಶಬೀರ್ ಮತ್ತು ಆತನ ಗೆಳೆಯರು ಹುಡುಗಿಯ ಶವದ ಮೇಲೆ ಅತ್ಯಾಚಾರವೆಸಗಿದ್ದಾರೆ” ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋವೊಂದನ್ನು ಹಂಚಿಕೊಳ್ಳಲಾಗಿದೆ.

ಅನೇಕರು ಒಂದೇ ರೀತಿಯ ಫೋಟೋ ಮತ್ತು ಸಂದೇಶವನ್ನು ಸಾಮಾಜಿಕ ಜಾತಾಣಗಳಾದ ಫೇಸ್‌ಬುಕ್, ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಕೋಮು ಆಯಾಮ ಪಡೆದಿರುವುದರಿಂದ ನಾವು ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದ್ದೇವೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ಹಾಗೂ ಸಂದೇಶದ ಕುರಿತು ನಾವು ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದೇವೆ. ಇದಕ್ಕಾಗಿ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ಘಟನೆ ಕುರಿತು ಯಾವುದೇ ರೀತಿಯ ವರದಿಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ಇಂತಹ ಘಟನೆ ನಡೆದಿರುವುದು ನಿಜವೇ ಆಗಿದ್ದರೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು, ಆದರೆ ಅಂತಹ ವರದಿಗಳು ಕಂಡು ಬಂದಿಲ್ಲ.
ವೈರಲ್ ಫೋಟೋವನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ 2010 ರಲ್ಲಿ ‘ಡಾಕ್ಯುಮೆಂಟಿಂಗ್ ರಿಯಾಲಿಟಿ’ ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯೊಂದು ಕಂಡು ಬಂದಿದೆ. ಆ ವರದಿಯಲ್ಲಿನ ಅಂಶಕ್ಕೂ ವೈರಲ್ ಪೋಸ್ಟ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುವುದನ್ನು ನಮಗೆ ಸ್ಪಷ್ಟವಾಗಿದೆ. “ಈ ವರದಿಯ ಪ್ರಕಾರ ಬ್ರೆಜಿಲ್‌ನ ಗ್ರೇಟರ್ ಸಾವೊ ಪಾಲೊ ಪ್ರದೇಶದಲ್ಲಿ, ಒಸಾಸ್ಕೊದ 45 ವರ್ಷದ ವ್ಯಕ್ತಿ ಆತನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದಾನೆ. ಈ ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.

ಇನ್ನು ವೈರಲ್ ಫೋಟೋ ಮತ್ತು ಸಂದೇಶ ಈ ಹಿಂದೆ 2022ರಲ್ಲೂ ಹರಿದಾಡಿತ್ತು. ಆಗ ಅಸ್ಸಾಂ ಪೊಲೀಸರು ತಮ್ಮಅಧಿಕೃತ ಎಕ್ಸ್ ಖಾತೆಯಲ್ಲಿ 8 ಡಿಸೆಂಬರ್ 2022 ರಂದು “ಈ ಫೋಟೋ ಪೋರ್ಚುಗೀಸ್ ಬ್ಲಾಗ್‌ನಲ್ಲಿ 2010 ರಲ್ಲಿ ಪ್ರಕಟಿಸಿದ್ದರು. ಈಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುಳ್ಳು ಪೋಸ್ಟ್‌ಗಳನ್ನು ಶೇರ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದರು.

ಒಟ್ಟಿನಲ್ಲಿ, ಹಳೆಯ ಮತ್ತು ಸಂಬಂಧವಿಲ್ಲದ ಫೋಟೋವನ್ನು ಸುಳ್ಳು, ಕೋಮು ದ್ವೇಷಪೂರಿತ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


